ಖಾರ್ಟೂಮ್ (ಸುಡಾನ್): ಸುಡಾನ್ ರಾಜಧಾನಿ ಖಾರ್ಟೂನ್ನಲ್ಲಿ ಭಾನುವಾರ ನಡೆದ ಹಿಂಸಾಚಾರದಲ್ಲಿ ಕನಿಷ್ಠ 56 ಜನ ಮೃತಪಟ್ಟಿದ್ದಾರೆ ಮತ್ತು 600 ಜನ ಗಾಯಗೊಂಡಿದ್ದಾರೆ.
ಭೀಕರ ಘರ್ಷಣೆಯು ಎರಡನೇ ದಿನಕ್ಕೆ ಕಾಲಿಟ್ಟಿದೆ. ಅಧ್ಯಕ್ಷರ ನಿವಾಸ, ಖಾರ್ಟೂಮ್ ವಿಮಾನ ನಿಲ್ದಾಣ ಮತ್ತು ಇತರ ಪ್ರಮುಖ ನೆಲೆಗಳ ಮೇಲೆ ನಿಯಂತ್ರಣ ಸಾಧಿಸಿದ್ದೇವೆ ಎಂದು ಅರೆಸೇನಾಪಡೆಗಳು ಹೇಳಿವೆ. ಖಾರ್ಟೂಮ್‌ನ ನಿರ್ಜನ ಬೀದಿಗಳಲ್ಲಿ ಸ್ಫೋಟಗಳು ಸಂಭವಿಸಿದ್ದು, ಭಾರಿ ಗುಂಡಿನ ಸದ್ದು ಮೊಳಗಿದವು.
ರಾಜಧಾನಿ ನಗರಕ್ಕೆ ಹೊಂದಿಕೊಂಡಿರುವ ಓಮ್‌ಡುರ್‌ಮನ್ ನಗರದಲ್ಲಿನ ಸರ್ಕಾರದ ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳಿಗೆ (RSF) ಸೇರಿದ ನೆಲೆಯನ್ನು ಧ್ವಂಸಗೊಳಿಸಿದೆ. ಘರ್ಷಣೆಯಲ್ಲಿ ಮೃತಪಟ್ಟ ಒಟ್ಟು ನಾಗರಿಕರ ಸಂಖ್ಯೆ 56 ಕ್ಕೆ ತಲುಪಿದೆ ಎಂದು ಸುಡಾನ್ ವೈದ್ಯರ ಕೇಂದ್ರ ಸಮಿತಿ ಹೇಳಿದೆ.
ಹಿಂಸಾತ್ಮಕ ಘರ್ಷಣೆಯಿಂದ ಸುಡಾನ್‌ನಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಪ್ರಜೆ ಗುಂಡೇಟಿಗೆ ಬಲಿಯಾಗಿದ್ದಾರೆ. ಭಾರತೀಯ ಪ್ರಜೆ ಆಲ್ಬರ್ಟ್ ಆಗಸ್ಟಿನ್ ದಿಕ್ಕು ತಪ್ಪಿ ಬಂದ ಗುಂಡಿನಿಂದ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಸುಡಾನ್‌ನಿಂದ ಸೌದಿ ಅರೇಬಿಯಾಕ್ಕೆ ಟೇಕ್ ಆಫ್ ಮಾಡಲು ತಯಾರಿ ನಡೆಸುತ್ತಿದ್ದ ಪ್ರಯಾಣಿಕ ವಿಮಾನವು ಶನಿವಾರದಂದು ಘರ್ಷಣೆಯ ಸಮಯ ದಲ್ಲಿ ಗುಂಡಿನ ದಾಳಿಗೆ ಒಳಗಾಗಿದೆ. ಸೌದಿ ಅರೇಬಿಯಾಕ್ಕೆ ತೆರಳುವ ಏರ್‌ಬಸ್ A330 ರಿಯಾದ್‌ಗೆ ಹೊರಡುವ ಮುನ್ನ ಗುಂಡಿನ ದಾಳಿಗೆ ಒಳಗಾಗಿತ್ತು. ಆದಾಗ್ಯೂ ವಿಮಾನದ ಕ್ಯಾಬಿನ್ ಸಿಬ್ಬಂದಿಯು ಹೇಗೋ ಪಾರಾಗಿ ಸುಡಾನ್ನಲ್ಲಿರುವ ಸೌದಿ ರಾಯಭಾರ ಕಚೇರಿ ತಲುಪಿದ್ದಾರೆ ಎಂದು ವರದಿಗಳು ತಿಳಿಸಿವೆ.