Saturday, 23rd November 2024

ಮೋಟಾರ್ ಬೈಕ್ ನಲ್ಲಿ ಆತ್ಮಾಹುತಿ ಬಾಂಬರ್ ಸ್ಫೋಟ: ಮೂವರ ಸಾವು

ಇಸ್ಲಮಾಬಾದ್: ಕ್ವೆಟ್ಟಾದಲ್ಲಿ ಆತ್ಮಾಹುತಿ ಬಾಂಬರ್ ಮೋಟಾರ್ ಬೈಕ್ ನಲ್ಲಿ ಬಂದು ಸ್ಫೋಟಿಸಿಕೊಂಡಿದ್ದರಿಂದ ಕನಿಷ್ಠ ಮೂರು ಜನರು ಮೃತಪಟ್ಟಿದ್ದಾರೆ. ಘಟನೆಯಲ್ಲಿ 20 ಜನರು ಗಾಯಗೊಂಡಿದ್ದಾರೆ.

ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ ದಾಳಿಯ ಹೊಣೆ ಹೊತ್ತಿದೆ. ಬಲೂಚಿಸ್ತಾನ್ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾ ದಿಂದ 25 ಕಿ.ಮೀ ದೂರದಲ್ಲಿರುವ ಕ್ವೆಟ್ಟಾ-ಮಸ್ತುಂಗ್ ರಸ್ತೆಯಲ್ಲಿರುವ ಅರೆಸೈನಿಕ ಗಡಿನಾಡು ದಳದ ಸಿಬ್ಬಂದಿ ಯಿರುವ ಚೆಕ್‌ ಪೋಸ್ಟ್‌ನಲ್ಲಿ ಸ್ಫೋಟ ಸಂಭವಿಸಿದೆ. ಆತ್ಮಹತ್ಯಾ ಬಾಂಬರ್ ತನ್ನ ಬೈಕ್ ಅನ್ನು ಚೆಕ್‌ಪೋಸ್ಟ್‌ನ ಭದ್ರತಾ ಪಡೆಗಳ ವಾಹನಕ್ಕೆ ಢಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯಲ್ಲಿ ಮೂವರು ಅರೆಸೇನಾಪಡೆ ಸಿಬ್ಬಂದಿ ಮೃತ ಪಟ್ಟಿದ್ದಾರೆ.

ಘಟನೆ ಖಂಡಿಸಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಹುತಾತ್ಮರ ಕುಟುಂಬಗಳಿಗೆ ನನ್ನ ಸಂತಾಪಗಳು ಮತ್ತು ಗಾಯಗೊಂಡವರ ಚೇತರಿಕೆಗೆ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಹುತಾತ್ಮರಿಗೆ ಇಡೀ ರಾಷ್ಟ್ರ ಋಣಿಯಾಗಿದೆ. ನಾವು ನಮ್ಮ ಸಂಪೂರ್ಣ ಶಕ್ತಿಯಿಂದ ಭಯೋತ್ಪಾದಕರ ವಿರುದ್ಧ ಹೋರಾಡುತ್ತಿದ್ದೇವೆ ಮತ್ತು ಅದನ್ನು ಇನ್ನೂ ಮುಂದುವರಿಸುತ್ತೇವೆ. ಈ ಹಿಂಸಾತ್ಮಕ ದಾಳಿಗಳು ಭದ್ರತಾ ಪಡೆಗಳ ಮನೋಬಲವನ್ನು ಕಡಿಮೆ ಮಾಡುವುದಿಲ್ಲ ಎಂದು ಬಲೂಚಿಸ್ಥಾನದ ಗೃಹ ಸಚಿವ ಮಿರ್ ಜಿಯಾವುಲ್ಲಾ ಹೇಳಿಕೆ ನೀಡಿದ್ದಾರೆ.