Wednesday, 18th December 2024

Sunita Williams: ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಭೂಮಿಗೆ ಮರಳುವ ದಿನಾಂಕ ಮತ್ತೆ ಮುಂದೂಡಿಕೆ; ನಾಸಾ ಹೇಳಿದ್ದಿಷ್ಟು

Sunita Williams

ವಾಷಿಂಗ್ಟನ್‌: ನಾಸಾ (NASA) ಗಗನಯಾತ್ರಿಗಳಾದ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್‌ (Sunita Williams) ಹಾಗೂ ಬಚ್‌ ವಿಲ್ಮೋರ್‌ (Butch Wilmore) ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (International Space Station-ISS)ದಲ್ಲೇ ಬಾಕಿಯಾಗಿದ್ದು, ಭೂಮಿಗೆ ಮರಳುವುದು ಇನ್ನಷ್ಟು ತಡವಾಗಲಿದೆ. ಕನಿಷ್ಠ 2025ರ ಮಾರ್ಚ್ ತನಕ ಅವರು ಅಲ್ಲಿಯೇ ಉಳಿಯಬೇಕಾಗುತ್ತದೆ ಎಂದು ನಾಸಾ ತಿಳಿಸಿದೆ. ಈ ಹಿಂದೆ ಅವರು 2025ರ ಫೆಬ್ರವರಿಯಲ್ಲಿ ಭೂಮಿಗೆ ಹಿಂದಿರುಗಲಿದ್ದಾರೆ ಎನ್ನಲಾಗಿತ್ತು.

4 ಸದಸ್ಯರ ಕ್ರೂ -10 ಮಿಷನ್ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ ನಂತರ ಸುನೀತಾ ವಿಲಿಯಮ್ಸ್ ಮತ್ತು ಬಚ್‌ ವಿಲ್ಮೋರ್‌ ಅವರು ಗಗನಯಾತ್ರಿ ನಿಕ್ ಹೇಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೊರ್ಬುನೊವ್ ಅವರೊಂದಿಗೆ ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ತಿಳಿಸಿದೆ. ಈ ಮಿಷನ್ 2025ರ ಮಾರ್ಚ್‌ ಕೊನೆಯಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಇದನ್ನು ಈ ಹಿಂದೆ ಫೆಬ್ರವರಿಯಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿತ್ತು.

ವಿಳಂಬ ಏಕೆ?

ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿನ ತಾಂತ್ರಿಕ ದೋಷದಿಂದಾಗಿ ಇಬ್ಬರು ಗಗನಯಾತ್ರಿಗಳನ್ನು ಹಿಂದಿರುಗಿಸುವ ಕಾರ್ಯಾಚರಣೆಯನ್ನು ಹಲವು ಬಾರಿ ಮುಂದೂಡಬೇಕಾಯ್ತು. 2024ರ ಆ. 24ರಂದು ನಾಸಾ ಸುನೀತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಕ್ರ್ಯೂ 9 ಮಿಷನ್‌ನ ಭಾಗವಾಗಲಿದ್ದಾರೆ ಎಂದು ಘೋಷಿಸಿತ್ತು. ಅದರಂತೆ 2025ರ ಫೆಬ್ರವರಿಯಲ್ಲಿ ಸ್ಪೇಸ್‌ಎಕ್ಸ್‌ನ ಕೆ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಮೂಲಕ 8 ತಿಂಗಳ ನಂತರ ಇವರು ಹಿಂತಿರುಗಲಿದ್ದಾರೆ ಎಂದು ಹೇಳಿತ್ತು. ಇದೀಗ ಕ್ರ್ಯೂ-9 ಬದಲು ಕ್ರ್ಯೂ-10 ಮಿಷನ್‌ ಮೂಲಕ ಸುನೀತಾ ವಿಲಿಯಮ್ಸ್ ಮತ್ತು ಬಚ್‌ ವಿಲ್ಮೋರ್ ಅವರನ್ನು ಮರಳಿ ಕರೆತರಲು ನಿರ್ಧರಿಸಿರುವುದರಿಂದ ಈ ಕಾರ್ಯಾಚರಣೆ ಮಾರ್ಚ್‌ಗೆ ಮುಂದೂಡಲಾಗಿದೆ ಎಂದು ನಾಸಾ ಹೇಳಿದೆ. ಅದಾಗ್ಯೂ ಖಚಿತ ದಿನಾಂಕವನ್ನೂ ಪ್ರಕಟಿಸಿಲ್ಲ.

ಹೊಸ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯನ್ನು ತಯಾರಿಸಲು ಸ್ಪೇಸ್‌ಎಕ್ಸ್‌ಗೆ ಹೆಚ್ಚಿನ ಸಮಯ ಬೇಕಾಗಿರುವುದರಿಂದ ಈ ವಿಳಂಬ ಕಂಡು ಬಂದಿದೆ ಎನ್ನಲಾಗಿದೆ.

8 ದಿನದ ಬದಲು 9 ತಿಂಗಳು

ಜೂನ್‌ನಲ್ಲಿ ಸುನೀತಾ ವಿಲಿಯಮ್ಸ್‌ ಮತ್ತು ಬಚ್‌ ವಿಲ್ಮೋರ್‌ 8 ದಿನಗಳಿಗಾಗಿ ಬಾಹ್ಯಾಕಾಶಕ್ಕೆ ತೆರಳಿದ್ದರು. ಅದಾದ ನಂತರ ಅವರು ಅಲ್ಲಿಂದ ಇನ್ನೂ ಮರಳಿ ಬಂದಿಲ್ಲ. ಅವರು ಬರೋಬ್ಬರಿ 9 ತಿಂಗಳ ಬಳಿಕ ಭೂಮಿಗೆ ಹಿಂದಿರುಗಲಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (International Space Station-ISS)ದಲ್ಲೇ ಬಾಕಿಯಾಗಿರುವ ಅವರು ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಲ್ಲಿಂದಲೇ ಮತ ಚಲಾಯಿಸಿದ್ದರು. ಸುನೀತಾ ವಿಲಿಯಮ್ಸ್‌ ಹಾಗೂ ಬುಚ್‌ ವಿಲ್ಮೋರ್‌ ಅವರನ್ನು ಬಾಹ್ಯಾಕಾಶಕ್ಕೆ ಕರೆದೊಯ್ದಿದ್ದ ಬಾಹ್ಯಾಕಾಶ ನೌಕೆ ಸ್ಟಾರ್‌ಲೈನರ್‌ (Starliner)ನಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಅವರನ್ನು ಅಲ್ಲೇ ಸೆಪ್ಟೆಂಬರ್‌ನಲ್ಲಿ ಬಿಟ್ಟು ಮರಳಿತ್ತು.

ಐಎಸ್‌ಎಸ್‌ ಸುಮಾರು 250 ಮೈಲುಗಳ ದೂರದಲ್ಲಿರುವ ಫುಟ್‌ಬಾಲ್ ಮೈದಾನದ ಗಾತ್ರದ ವಿಜ್ಞಾನ ಪ್ರಯೋಗಾಲಯ. ರಷ್ಯಾದ ಸೋಯುಜ್ ಕ್ಯಾಪ್ಸುಲ್ ಸೇರಿದಂತೆ ಇತರ ಬಾಹ್ಯಾಕಾಶ ನೌಕೆಗಳಲ್ಲಿ ವಿವಿಧ ಸಮಯಗಳಲ್ಲಿ ಆಗಮಿಸಿದ ಇತರ ಏಳು ಗಗನಯಾತ್ರಿಗಳು ಈಗಾಗಲೇ ಅಲ್ಲಿದ್ದಾರೆ. ವಿಲ್ಮೋರ್ ಮತ್ತು ವಿಲಿಯಮ್ಸ್ ಇತರರೊಂದಿಗೆ ಸೇರಿ ವಿಜ್ಞಾನ ಪ್ರಯೋಗಗಳನ್ನು ಮುಂದುವರಿಸುವ ನಿರೀಕ್ಷೆಯಿದೆ.

ಈ ಸುದ್ದಿಯನ್ನೂ ಓದಿ: Sunita Williams: ನಾನು ಇಲ್ಲಿರುವುದನ್ನು ಇಷ್ಟಪಡುತ್ತೇನೆ; ಬಾಹ್ಯಾಕಾಶದಿಂದ ಸುನೀತಾ ವಿಲಿಯಮ್ಸ್‌ ಪ್ರತಿಕ್ರಿಯೆ