Monday, 16th December 2024

Syria Unrest: ಮಧ್ಯ ಪ್ರಾಚ್ಯದ‍ಲ್ಲಿ ರಾಜಕೀಯ ಲೆಕ್ಕಾಚಾರ ಬದಲಿಸಲಿದೆಯೇ ಸಿರಿಯಾದ ಬಷರ್ ಅಲ್-ಅಸ್ಸಾದ್ ಆಡಳಿತ ಪತನ?

ನವದೆಹಲಿ: ಭಯೋತ್ಪಾದಕರ ಕಾಕ ದೃಷ್ಟಿಗೆ ಸಿಲುಕಿ ಈಗಾಗಲೇ ನಲುಗಿ ಹೋಗಿರುವ ಸಿರಿಯಾದಲ್ಲಿ (Syria) ಕಳೆದ 24 ವರ್ಷಗಳಿಂದ ಅಧಿಕಾರದಲ್ಲಿದ್ದ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ (Bashar Al-Assad) ಆಡಳಿತ ಹಠಾತ್ ನಾಗರಿಕ ದಂಗೆಯಲ್ಲಿ ಅಂತ್ಯವಾಗುವುದರೊಂದಿಗೆ ಮಧ್ಯ ಪ್ರಾಚ್ಯದ ಗಲಭೆಗ್ರಸ್ತ ದೇಶದಲ್ಲಿ ಮತ್ತೆ ರಾಜಕೀಯ ಅಸ್ಥಿರತೆ (Syria Unrest) ಉಂಟಾಗಿದೆ. ಅಸ್ಸಾದ್ ಅವರ ಈ ಕಾಲು ಶತಮಾನಗಳ ಸಮೀಪದ ಆಡಳಿತ ಹಯಾತ್ ತಹ್ರಿರ್ ಅಲ್-ಶಾಮ್ (HTS) ಎಂಬ ಕೂಟ ನಡೆಸಿದ ಕ್ಷಿಪ್ರ ರಾಜಕೀಯ ದಂಗೆಯಲ್ಲಿ ಬಿದ್ದುಹೋಗಿದೆ. ಈ HTS ಹಿಂದೆ ಅಲ್-ನುಸ್ರಾ ಕೂಟ (Al-Nusra Front) ಎಂದು ಕರೆಯಲ್ಪಡುತ್ತಿತ್ತು ಮತ್ತು ಇದು ಅಪಾಯಕಾರಿ ಭಯೋತ್ಪಾದಕ ಸಂಘಟನೆ ಅಲ್-ಖೈದಾ (Al-Qaeda) ಹಾಗೂ ಇದರ ಸಹ ಸಂಘಟನೆಗಳ ಜತೆ ನಿಕಟ ಸಂಬಂಧವನ್ನು ಹೊಂದಿದೆ.

ಬಷರ್ ಅಲ್-ಅಸ್ಸಾದ್ 2000ನೇ ಇಸವಿಯಲ್ಲಿ ಸಿರಿಯಾದ ಅಧ್ಯಕ್ಷರಾಗಿ ಅಧಿಕಾರಿಕ್ಕೇರಿದರು. ಈ ದೇಶವನ್ನು ಬರೋಬ್ಬರಿ ಮೂರು ದಶಕಗಳ ಕಾಲ ತನ್ನ ಕಪಿ ಮುಷ್ಠಿಯಲ್ಲಿ ನಡೆಸಿದ ಹಫೀಝ್ ಅಲ್-ಅಸ್ಸಾದ್‌ನ (Hafez al-Assad) ಮಗನೇ ಈ ಬಷರ್ ಅಲ್-ಅಸ್ಸಾದ್. ಪ್ರಾರಂಭದಲ್ಲಿ ಬಷರ್ ಮೇಲೆ ಅಲ್ಲಿನ ಜನ ಭಾರೀ ಭರವಸೆಯನ್ನು ಇಟ್ಟಿದ್ದರು. ಈತನಿಂದ ಒಂದು ಸುಧಾರಣಾ ಮಾದರಿಯ ಆಡಳಿತವನ್ನು ನಿರೀಕ್ಷಿಸಿದ್ದರು. ಆದರೆ ಬಷರ್ ತನ್ನ ತಂದೆಯಂತೆಯೇ ಧಮನಕಾರಿ ಆಡಳಿತವನ್ನು ನಿಡಲು ಪ್ರಾರಂಭಿಸುವುದರೊಂದಿಗೆ ಸಿರಿಯಾ ಜನತೆಯ ನಿರೀಕ್ಷೆಗಳೆಲ್ಲ ತಲೆಕೆಳಗಾಗಿದ್ದವು.

2011ರಲ್ಲಿ ಸಿರಿಯಾದಲ್ಲಿ ನಡೆದ ನಾಗರಿಕ ದಂಗೆಯನ್ನು ಬಷರ್ ಹತ್ತಿಕ್ಕಿದ ರೀತಿಯೇ ಅವರ ಕ್ರೂರ ಆಡಳಿತ ವ್ಯವಸ್ಥೆಗೆ ಸಾಕ್ಷಿಯಾಗಿತ್ತು. ಈ ನಾಗರಿಕ ದಂಗೆಯಲ್ಲಿ 5 ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಸುಮಾರು 60 ಲಕ್ಷ ಜನರು ನಿರಾಶ್ರಿತರಾಗಿದ್ದರು. ಇಷ್ಟು ಮಾತ್ರವಲ್ಲದೇ ದೇಶದೊಳಗೆ ನಾಪತ್ತೆಯಾದವರಿಗೆ ಲೆಕ್ಕವೇ ಇರಲಿಲ್ಲ! ರಷ್ಯಾ ಮತ್ತು ಇರಾನ್‌ನಿಂದ ಮಿಲಿಟರಿ ಸಹಾಯವನ್ನು ಪಡೆದುಕೊಂಡ ಬಷರ್ ಈ ನಾಗರಿಕ ದಂಗೆಯನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದರು. ಇಲ್ಲಿ ಬಷರ್‌ಗೆ ರಷ್ಯಾದಿಂದ ವಾಯುಪಡೆಯ ಬಲ ಲಭಿಸಿದ್ದರೆ, ಇರಾನ್‌ನಿಂದ ಹೆಜ್ಬುಲ್ಲಾದಂತಹ ಭಯೋತ್ಪಾದನಾ ಸಂಘಟನೆಯ ನೆರವು ಲಭಿಸಿತ್ತು.

ಆದರೆ ಇದೀಗ ಈ ಚಿತ್ರಣ ಬದಲಾಗಿದೆ. ರಷ್ಯಾ ತನ್ನ ಮಿಲಿಟರಿ ಸಾಮರ್ಥ್ಯವನ್ನೆಲ್ಲಾ ಉಕ್ರೇನ್ ಮೇಲಿನ ಯುದ್ಧಕ್ಕೆ ವಿನಿಯೋಗಿಸಿದ್ದರೆ, ಇತ್ತ ಇರಾನ್ ತನ್ನದೇ ಆದ ಪ್ರಾದೇಶಿಕ ಸಮಸ್ಯೆಗಳಿಂದ ನಲುಗುತ್ತಿದೆ. ಹಾಗಾಗಿ ಈ ಬಾರಿ ಅಸ್ಸಾದ್ ನೆರವಿಗೆ ಈ ಕಟ್ಟರ್ ಮಿತ್ರ ದೇಶಗಳು ಗಮನಾರ್ಹ ರೀತಿಯಲ್ಲಿ ಆಗಮಿಸಲಿಲ್ಲ ಎಂಬುದು ಪ್ರಮುಖವಾದ ಅಂಶ.

ಈಗಾಗಲೇ ಸಿರಿಯಾದಲ್ಲಿ ಬಂಡುಕೋರರು ಪ್ರಮುಖ ಪಟ್ಟಣಗಳಾದ ಅಲೆಪ್ಪೋ, ಹಮಾ, ಹೋಮ್ಸ್ ಮತ್ತು ಡಮಾಸ್ಕಸ್‌ ಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಇದೀಗ ಬಂಡಾಯ ನಾಯಕ ಮಹಮ್ಮದ್ ಅಲ್-ಗೊಲಾನಿ ಅಧಿಕಾರ ಹಸ್ತಾಂತರದ ಪ್ರಸ್ತಾವವನ್ನು ಇಟ್ಟಿದ್ದು, ಸಿರಿಯಾದ ಪ್ರದಾನಿ ಮಹಮ್ಮದ್ ಅಲ್-ಜಲಾಲಿಯನ್ನು ಹಂಗಾಮಿ ಆಡಳಿತ ಯಂತ್ರದ ಪ್ರಮುಖರನ್ನಾಗಿ ನೇಮಿಸಲಾಗಿದೆ.

ಈ ಕುರಿತಾಗಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅಲ್-ಜಲಾಲಿ, ಸಿರಿಯಾದ ಜನತೆ ಆಯ್ಕೆ ಮಾಡುವ ಯಾವುದೇ ನಾಯಕನಿಗೆ ತಾವು ಸಹಕಾರ ನಿಡುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಎಚ್‌ಟಿಎಸ್‌ ಸಂಘಟನೆಯ ಇತಿಹಾಸ ಭಯೋತ್ಪಾದನಾ ಸಂಘಟನೆ ಅಲ್-ಖೈದಾ ಜತೆ ಕೂಡಿಕೊಂಡಿರುವುದರಿಂದ ಅಲ್-ಜಲಾಲಿಯ ಈ ಹೇಳಿಕೆ ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ಬರಲಿದೆ ಮತ್ತು ಮುಂದಕ್ಕೆ ಸಿರಿಯಾದಲ್ಲಿ ಆಡಳಿತಕ್ಕೆ ಬರಲಿರುವ ಸರ್ಕಾರ ಮತ್ತು ನಾಯಕರು ಈ ಭಯೋತ್ಪಾದಕ ಸಂಘಟನೆಗಳ ಕಪಿಮುಷ್ಠಿಗೆ ಒಳಗಾಗದೆ ಹೇಗೆ ಕಾರ್ಯನಿರ್ವಹಿಸಲಿದ್ದಾರೆ ಎಂಬುದನ್ನು ಜಗತ್ತು ಕುತೂಹಲದಿಂದ ಗಮನಿಸುತ್ತಿದೆ.

ಬಷರ್‌ನ ಆಡಳಿತ ಪತನವಾಗಿರುವುದರಿಂದ ಸಿರಿಯಾದಲ್ಲಿ ತತ್ ಕ್ಷಣಕ್ಕೇನೂ ಶಾಂತಿ ನೆಲೆಸಲಾರದು. ಈಗಾಗಲೇ ಹೇಳಿರುವಂತೆ ಬಂಡಾಯದ ನಾಯಕತ್ವ ವಹಿಸಿಕೊಂಡಿರುವ ಎಚ್‌ಟಿಎಸ್‌ ಭಯೋತ್ಪಾದಕ ಸಂಘಟನೆಗಳೊಂದಿಗೆ ಈ ಹಿಂದೆ ಹೊಂದಿದ್ದ ಸಂಬಂಧ ಮತ್ತೆ ಸಿರಿಯಾ ಜನತೆಯಲ್ಲಿ ಭಯೋತ್ಪಾದಕ ಶಕ್ತಿಗಳ ಉಗಮದ ಭೀತಿಯನ್ನು ತಂದೊಡ್ಡಿದೆ.

ಸಿರಿಯಾದಲ್ಲಿ ಬಷರ್ ಆಡಳಿತ ಪತನಗೊಳ‍್ಳುವದರೊಂದಿಗೆ ಮಧ್ಯ ಪ್ರಾಚ್ಯ ಭಾಗದಲ್ಲಿ ರಷ್ಯಾದ ಹಿಡಿತ ಸಡಿಲಗೊಂಡಂತಾಗಿದೆ. 2015ರಿಂದ ರಷ್ಯಾ ಇಲ್ಲಿ ತನ್ನ ಪ್ರಾಬಲ್ಯವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿತ್ತು. ಮೆಡಿಟರೇನಿಯನ್ ಹಾಗೂ ಆಫ್ರಿಕಾ ದೇಶಗಳ ಮೇಲೆ ಪ್ರಾಬಲ್ಯವನ್ನು ಸ್ಥಾಪಿಸಲು ಟಾರ್ಟೊಸ್ ನೌಕಾನೆಲೆ ಮತ್ತು ಲಟಾಕಿಯಾದಲ್ಲಿರುವ ಹೆಮಿಮಿಮ್ ವಾಯುನೆಲೆಗಳ ಮೇಲೆ ಪ್ರಾಬಲ್ಯ ಹೊಂದಿರುವುದು ಯಾವುದೇ ಬಲಿಷ್ಠ ರಾಷ್ಟ್ರಕ್ಕಾದರೂ ಅಗತ್ಯವಿತ್ತು.

ಇನ್ನೊಂದೆಡೆ, ಬಷರ್ ಆಡಳಿತ ಪತನ ನೆರೆ ರಾಷ್ಟ್ರ ಇರಾನ್ ಮೇಲೂ ರಾಜತಾಂತ್ರಿಕವಾಗಿ ಭಾರೀ ಪರಿಣಾವನ್ನೇ ಬಿರಲಿದೆ. ಇದು ‘ಪ್ರತಿರೋಧಕ ಪರಿಧಿ’ಗೆ ಧಕ್ಕೆ ತರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಲೆಬನಾನ್‌ನಲ್ಲಿರುವ ಹೆಜ್ಬುಲ್ಲಾ ಮತ್ತು ಟೆಹ್ರಾನ್ ನಡುವೆ ಸಿರಿಯಾ ಮೂಲಕ ಸಂಪರ್ಕ ಸಾಧಿಸಲು ಸಾಧ್ಯವಿತ್ತು. ಆದರೆ ಇದೀಗ ಈ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಕಾರಣದಿಂದ, ಮಾರಕಾಸ್ತ್ರಗಳ ಸಾಗಾಟ ಮತ್ತು ಈ ಭಾಗದಲ್ಲಿ ಭಯೋತ್ಪಾದನಾ ಹಿಡಿತಕ್ಕೆ ಭಾರಿ ಅಡ್ಡಿಯಾಗುವ ಸಾಧ್ಯತೆಗಳಿವೆ. ಈಗಾಗಲೇ ಇಸ್ರೇಲ್ ಜೊತೆಗಿನ ಕದನದಲ್ಲಿ ಹೆಜ್ಬುಲ್ಲಾ ಸಂಘಟನೆ ಕಳೆಗುಂದಿದ್ದರೆ, ಯೆಮನ್ ಮತ್ತು ಇರಾಕ್ ಜೊತೆಗಿನ ಛಾಯಾ ಸಮರದಲ್ಲಿ ಇರಾನ್ ಸಹ ನಲುಗಿ ಹೋಗಿದೆ. ಈ ನಡುವೆ ಈ ಬೆಳವಣಿಗೆ ಇರಾನ್‌ನ ಯುದ್ಧನೀತಿಯನ್ನು ಬದಲಾಯಿಸಿಕೊಳ್ಳಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದೆ ಎಂದು ಹೇಳಲಾಗುತ್ತಿದೆ.

ಟರ್ಕಿ ಕೈವಾಡ?

ಇನ್ನು, ಬಷರ್ ಆಡಳಿತ ಪತನದ ಹಿಂದೆ ಟರ್ಕಿ ಕೈವಾಡವನ್ನು ಶಂಕಿಸಲಾಗುತ್ತಿದೆ. ಟರ್ಕಿ ಅಧ್ಯಕ್ಷ ಟಯ್ಯಿಪ್ ಎರ್ಡೊಗನ್ ಸಿರಿಯಾ ಗಲಭೆಗೆ ರಾಜತಾಂತ್ರಿಕ ಪರಿಹಾರಕ್ಕೆ ಪ್ರಯತ್ನಿಸಿದ್ದರು. ಟರ್ಕಿ ಈಗಾಗಲೇ 30 ಲಕ್ಷಕ್ಕೂ ಅಧಿಕ ಸಿರಿಯಾ ನಿರಾಶ್ರಿತರಿಗೆ ಆಶ್ರಯ ಒದಗಿಸಿದೆ. ಆದರೆ ಈ ನಾಗರಿಕ ದಂಗೆಯಲ್ಲಿ ತನ್ನ ನೇರ ಪಾತ್ರವನ್ನು ಟರ್ಕಿ ಈಗಾಗಲೇ ನಿರಾಕರಿಸಿದೆ. ಆದರೆ ಎಚ್‌ಟಿಎಸ್‌ಗೆ ಟರ್ಕಿ ಪರೋಕ್ಷ ಬೆಂಬಲ ನೀಡಿರುವುದನ್ನು ಅಲ್ಲಗಳೆಯುವಂತಿಲ್ಲ.

ಈಗಾಗಲೇ ತನ್ನ ಸುತ್ತಲಿನ ವೈರಿಗಳ ವಿರುದ್ಧ ಬಡಿದಾಡುತ್ತಿರುವ ಇಸ್ರೇಲ್‌ಗೆ ಅಸ್ಸಾದ್ ಆಡಳಿತ ಪತನ ಹೊಸ ಅವಕಾಶವನ್ನು ಹಾಗೂ ಅಪಾಯಗಳೆರಡನ್ನೂ ಏಕಕಾಲದಲ್ಲಿ ತಂದೊಡ್ಡಿದೆ. ಇರಾನ್‌ನ ಸಂಬಂಧ ಸಿರಿಯಾದೊಂದಿಗೆ ಕಟ್ ಆಗಿರುವುದು ಹೆಜ್ಬುಲ್ಲಾ ಉಗ್ರರ ಪೂರೈಕೆ ಮಾರ್ಗಕ್ಕೆ ಕುತ್ತು ತಂದಿದೆ. ಆದರೆ ಸಿರಿಯಾದಲ್ಲಿ ಎಚ್‌ಟಿಎಸ್ ಸಂಘಟನೆ ಪ್ರಾಬಲ್ಯ ಸಾಧಿಸಿರುವುದು ಇಸ್ರೇಲ್‌ಗೆ ಹೊಸ ತಲೆನೋವು ತಂದೊಡ್ಡುವ ಸಾಧ್ಯತೆಗಳು ಇಲ್ಲದಿಲ್ಲ.

ಒಟ್ಟಿನಲ್ಲಿ 24 ವರ್ಷಗಳ ಅಸ್ಸಾದ್ ಆಡಳಿತ ಸಿರಿಯಾದಲ್ಲಿ ಪತನಗೊಳ್ಳುವುದರೊಂದಿಗೆ ಈಗಾಗಲೇ ಯುದ್ಧಗ್ರಸ್ತ ಮಧ್ಯ ಪ್ರಾಚ್ಯದಲ್ಲಿ ಪ್ರಕ್ಷುಬ್ಧ ವಾತಾವರಣವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಗಳಿದ್ದು ಈ ಭಾಗದಲ್ಲಿ ರಾಜಕೀಯ ಚದುರಂಗದಾಟವನ್ನು ಇನ್ನಷ್ಟು ಕುತೂಹಲದ ಘಟ್ಟಕ್ಕೇರಿಸಿದೆ.

ಈ ಸುದ್ದಿಯನ್ನೂ ಓದಿ: Syria Crisis: ಸಿರಿಯಾ ರಾಜಧಾನಿ ಡಮಾಸ್ಕಸ್ ಬಂಡುಕೋರರ ವಶಕ್ಕೆ; ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಪಲಾಯನ