ಡೆಮಾಸ್ಕಸ್: ಸಿರಿಯಾದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದಿದ್ದು, ಕಳೆದ 24 ವರ್ಷಗಳಿಂದ ಅಧಿಕಾರದಲ್ಲಿದ್ದ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ (Bashar Al-Assad) ಆಡಳಿತ ಅಂತ್ಯಗೊಂಡಿದ್ದು, ಅವರು ದೇಶ ಬಿಟ್ಟು ಪಲಾಯನ ಮಾಡಿದ್ದಾರೆ. 42 ವರ್ಷದ ಅಬು ಮೊಹಮ್ಮದ್ ಅಲ್-ಗೊಲಾನಿ (Abu Mohammed al-Golani) ನೇತೃತ್ವದ ಹಯಾತ್ ತಹ್ರಿರ್ ಅಲ್-ಶಾಮ್ (HTS) ಬಂಡುಕೋರ ಪಡೆಗಳು ನಡೆಸಿದ ದಂಗೆಯಿಂದ ಬಷರ್ ಅವರ ಈ ಕಾಲು ಶತಮಾನಗಳ ಸಮೀಪದ ಆಡಳಿತ ಬಿದ್ದು ಹೋಗಿದೆ. ಹಾಗಾದರೆ ಯಾರು ಈ ಅಬು ಮೊಹಮ್ಮದ್ ಅಲ್-ಗೊಲಾನಿ? ಅವರ ಹಿನ್ನೆಲೆ ಏನು? ಇಲ್ಲಿದೆ ವಿವರ (Syria Unrest).
ಸಿರಿಯಾದ ನಾಗರಿಕ ದಂಗೆಯ ಮುಖ್ಯ ಸೂತ್ರಧಾರ ಅಬು ಮೊಹಮ್ಮದ್ ಅಲ್-ಗೊಲಾನಿ ಅವರ ಎಚ್ಟಿಎಸ್ ಸಂಘಟನೆ ಈ ಹಿಂದೆ ಅಪಾಯಕಾರಿ ಭಯೋತ್ಪಾದಕ ಗುಂಪು ಅಲ್-ಖೈದಾ (Al-Qaeda)ದೊಂದಿಗೆ ಗುರುತಿಸಿಕೊಂಡಿತ್ತು. ಜಿಹಾದಿಯಾಗಿದ್ದ ಅಬು ಮೊಹಮ್ಮದ್ ಅಲ್-ಗೊಲಾನಿ ಇದೀಗ ರಾಷ್ಟ್ರ ನಿರ್ಮಾಣವನ್ನು ಪ್ರತಿಪಾದಿಸುವ ನಾಯಕನಾಗಿ ರೂಪಾಂತರಗೊಂಡಿದ್ದಾರೆ.
From Zero to Hero!!
— Christina Themelis (@tinathemelis) December 8, 2024
Leader of Syrian rebels, Al #Golani
born in Saudi Arabia became a jihadist in #Iraq after US invasion.
Returned to Syria in 2011 established al-Qaeda branch.
He stated that youth justifies irrational action , aka atrocities..#CriminalsInCommand#Syria#ISIS pic.twitter.com/HGFEUvBOAK
ಎಚ್ಟಿಎಸ್ ಸಂಘಟನೆಯ ಹಿನ್ನೆಲೆ
ಮೂಲತಃ ಅಲ್-ಖೈದಾದ ನುಸ್ರಾ ಫ್ರಂಟ್ನ ಭಾಗವಾಗಿದ್ದ ಎಚ್ಟಿಎಸ್ ಸಿರಿಯಾದ ವಾಯುವ್ಯ ಇಡ್ಲಿಬ್ ಪ್ರಾಂತ್ಯದಲ್ಲಿ ನಿಯಂತ್ರಣವನ್ನು ಬಲಪಡಿಸುವ ಇತ್ತೀಚಿನ ವರ್ಷಗಳಲ್ಲಿ ಶಕ್ತವಾಗಿ ಬೆಳೆದು ನಿಂತಿದೆ. ಅಲ್ಲಿ ಈ ಸಂಘಟನೆ ಸ್ಥಳೀಯ ಬುಡಕಟ್ಟುಗಳು ಮತ್ತು ಸಮುದಾಯಗಳ ಬೆಂಬಲವನ್ನು ಪಡೆದಿದ್ದು, ಹಿಂದಿನ ಉಗ್ರಗಾಮಿ ಗುಂಪು ಎನ್ನುವ ನೆರಳಿಂದ ಈಚೆ ಬಂದಿದೆ.
ಇತ್ತೀಚಿನ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅಲ್-ಗೊಲಾನಿ ಸಿರಿಯಾವನ್ನು ಪುನರ್ನಿರ್ಮಿಸುವ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ್ದರು. ಬಷರ್ ಆಡಳಿತ ಪತನದ ನಂತರ ಅವರು ಈ ಸಂಘಟನೆಯನ್ನು ವಿಸರ್ಜಿಸುವುದಾಗಿ ತಿಳಿಸಿದ್ದರು. ಸಿರಿಯಾದಲ್ಲಿನ ಏಕ ವ್ಯಕ್ತಿ ನಾಯಕತ್ವ ಕೊನೆಯಾಗಬೇಕು ಎಂದು ಅವರು ಪ್ರತಿಪಾದಿಸಿದ್ದರು.
ದೇಶ ಕಟ್ಟುವ ಮಹತ್ವಾಕಾಂಕ್ಷೆ
2016ರಲ್ಲಿ ಅಲ್-ಖೈದಾದೊಂದಿಗಿನ ಸಂಬಂಧವನ್ನು ಕಡಿದುಕೊಂಡ ಅಲ್-ಗೊಲಾನಿ ತಮ್ಮ ಗುಂಪಿಗೆ ಜಬತ್ ಫತೇಹ್ ಅಲ್-ಶಾಮ್ ಮತ್ತು ನಂತರ ಹಯಾತ್ ತಹ್ರಿರ್ ಅಲ್-ಶಾಮ್ ಎಂದು ಮರುನಾಮಕರಣ ಮಾಡಿದ್ದರು. ಈ ಬದಲಾವಣೆಯು ಅಧಿಕಾರವನ್ನು ಕ್ರೋಢೀಕರಿಸಲು ಮತ್ತು ವಿವಿಧ ಜನಾಂಗೀಯ ಮತ್ತು ಧಾರ್ಮಿಕ ಗುಂಪುಗಳೊಂದಿಗೆ ಮೈತ್ರಿಗಳನ್ನು ರೂಪಿಸಲು ಸಹಾಯ ಮಾಡಿತು. ಅಲ್-ಗೊಲಾನಿ ಅವರ ಆರಂಭಿಕ ದಿನವು ವಿವಾದಾಸ್ಪದವಾಗಿದ್ದರೂ ಪ್ರಸ್ತುತ ಸಿರಿಯಾವನ್ನು ಹೊಸ ದಿಸೆಯಲ್ಲಿ ಸಾಗಿಸುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಅವರು ಹಿಂದಿನ ಹಿಂಸಾತ್ಮಕ ಸಿದ್ಧಾಂತಗಳಿಂದ ದೂರವಿದ್ದಾರೆ. ಆದರೂ ಸಿರಿಯಾ ಇನ್ನೂ ಛಿದ್ರವಾಗಿರುವುದರಿಂದ ಮತ್ತು ಅಂತಾರಾಷ್ಟ್ರೀಯ ಶಕ್ತಿಗಳು ಅದರ ಮೇಲೆ ಪ್ರಭಾವ ಬೀರಲು ಸ್ಪರ್ಧಿಸುತ್ತಿರುವುದರಿಂದ ದೇಶದ ಭವಿಷ್ಯ ಅನಿಶ್ಚಿತವಾಗಿ ಉಳಿದಿದೆ.
ಬಷರ್ ಪಲಾಯನ ಮಾಡಿದ್ದೆಲ್ಲಿಗೆ?
ಅಸ್ಸಾದ್ ಕುಟುಂಬದ 50 ವರ್ಷಗಳ ಉಕ್ಕಿನ ಆಡಳಿತ ಕೊನೆಗೂ ಡಿ. 8ರಂದು ಅಂತ್ಯವಾಗಿದ್ದು, ಬಂಡುಕೋರರು ಜೈಲಿನಲ್ಲಿರುವ ಎಲ್ಲ ಕೈದಿಗಳನ್ನು ಬಿಡುಗಡೆ ಮಾಡಿದ್ದಾರೆ. ಇನ್ನು ತಲೆಮರೆಸಿಕೊಂಡಿರುವ ಬಷರ್ ರಷ್ಯಾದಲ್ಲಿ ಆಶ್ರಯ ಪಡೆದಿದ್ದಾರೆ ಎನ್ನಲಾಗಿದ್ದು, ಅಧಿಕೃತ ಮಾಹಿತಿ ಇನ್ನೂ ಹೊರ ಬಂದಿಲ್ಲ.
ಈ ಸುದ್ದಿಯನ್ನೂ ಓದಿ: Syria Unrest: ಮಧ್ಯ ಪ್ರಾಚ್ಯದಲ್ಲಿ ರಾಜಕೀಯ ಲೆಕ್ಕಾಚಾರ ಬದಲಿಸಲಿದೆಯೇ ಸಿರಿಯಾದ ಬಷರ್ ಅಲ್-ಅಸ್ಸಾದ್ ಆಡಳಿತ ಪತನ?