Friday, 22nd November 2024

THAAD Anti Missile System: ಹೆಜ್ಬುಲ್ಲಾ ದಾಳಿಯ ತಡೆಗೆ ಯುಎಸ್‌ನಿಂದ ಇಸ್ರೇಲ್‌ಗೆ ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆ

THAAD Anti Missile System

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಇಸ್ರೇಲ್ ನ (Israel) ಸಂರಕ್ಷಣೆಗೆ ಅಮೆರಿಕ (United States) ಕ್ಷಿಪಣಿ ರಕ್ಷಣಾ ವ್ಯವಸ್ಥೆ (THAAD Anti Missile System) ನೀಡಿದೆ. ಇದನ್ನು ಯುಎಸ್ ರಕ್ಷಣಾ ಇಲಾಖೆಯ (US Department of Defense) ಪ್ರಧಾನ ಕಚೇರಿ ಪೆಂಟಗನ್ (Pentagon ) ನಿರ್ವಹಿಸಲಿದೆ. ಇರಾನ್‌ನಿಂದ ಹೆಚ್ಚುತ್ತಿರುವ ಆತಂಕದ ಹಿನ್ನೆಲೆಯಲ್ಲಿ ಇಸ್ರೇಲ್ ಮತ್ತು ಹೆಜ್ಬುಲ್ಲಾ ನಡುವಿನ ಸಂಘರ್ಷಕ್ಕೆ ಪ್ರತಿಯಾಗಿ ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ (THAAD) ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಇಸ್ರೇಲ್‌ಗೆ ನೀಡುವುದಾಗಿ ಅಮೆರಿಕ ಘೋಷಿಸಿದೆ. ಇದರೊಂದಿಗೆ ಇಸ್ರೇಲ್‌ನ ವಾಯು ರಕ್ಷಣೆ ಬಲಪಡಿಸುವ ಗುರಿ ಹೊಂದಲಾಗಿದೆ.

ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ ವ್ಯವಸ್ಥೆಯನ್ನು ನಿರ್ವಹಿಸಲು ಬ್ಯಾಟರಿ ಜೊತೆಗೆ ಸರಿಸುಮಾರು 100 ಯುಎಸ್ ಸೈನಿಕರ ಪಡೆಯನ್ನು ನಿಯೋಜಿಸಲಾಗುತ್ತಿದೆ. ಏಪ್ರಿಲ್ 13 ಮತ್ತು ಅಕ್ಟೋಬರ್ 1ರಂದು ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿಯ ಹಿನ್ನೆಲೆಯಲ್ಲಿ ಅಮೆರಿಕ ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ ವ್ಯವಸ್ಥೆಯನ್ನು ನೀಡಲು ನಿರ್ಧರಿಸಿದೆ. ಇದು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಎದುರಿಸಲು ಸಮರ್ಥವಾಗಿದ್ದು ಇಸ್ರೇಲ್ ನ ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲ ಪಡಿಸಲಿದೆ. ಮಾತ್ರವಲ್ಲದೆ ಇದು ಭವಿಷ್ಯದಲ್ಲಿ ಕ್ಷಿಪಣಿ ಆತಂಕವನ್ನು ಕಡಿಮೆ ಮಾಡಲಿದೆ.

ಇರಾನ್ ಅಥವಾ ಅದರ ಮಿತ್ರ ರಾಷ್ಟ್ರಗಳಿಂದ ಎದುರಾಗುವ ಸಣ್ಣ, ಮಧ್ಯಮ ಮತ್ತು ಮಧ್ಯಂತರ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಬೆದರಿಕೆಗಳನ್ನು ಎದುರಿಸಲು ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇರಾನ್ ವಿರುದ್ಧ ಪ್ರತಿಕಾರಕ್ಕೆ ಯೋಜನೆ ರೂಪಿಸುತ್ತಿರುವ ಇಸ್ರೇಲ್‌ಗೆ ಯುಎಸ್ ಸೈನ್ಯ ಬಲ ಸಾಕಷ್ಟು ಪ್ರಯೋಜನವನ್ನು ಒದಗಿಸಲಿದೆ.

ಇಸ್ರೇಲ್‌ನ ರಕ್ಷಣೆಗೆ ಬದ್ಧವಾಗಿರುವ ಅಮೆರಿಕ ಅನಿರ್ದಿಷ್ಟ ಪರಿಸ್ಥಿತಿ ನಿಯಂತ್ರಿಸಲು ಇಸ್ರೇಲ್ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಮಾಲೋಚನೆ ನಡೆಸುತ್ತಿದೆ ಎನ್ನಲಾಗಿದೆ. ಇಸ್ರೇಲ್ ಮೇಲೆ ಹಮಾಸ್ 2023ರ ಅಕ್ಟೋಬರ್ 7ರಂದು ನಡೆಸಿದ ಅನಿರೀಕ್ಷಿತ ದಾಳಿಯಿಂದ 1,200ಕ್ಕೂ ಹೆಚ್ಚು ಮಂದಿ ಇಸ್ರೇಲಿಗರು ಮೃತಪಟ್ಟಿದ್ದರು. ಬಳಿಕ ಅಮೆರಿಕ ತನ್ನ ಮಿಲಿಟರಿ ಸಾಮರ್ಥ್ಯವನ್ನು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಗಮನಾರ್ಹವಾಗಿ ಹೆಚ್ಚಿಸಿದೆ.

THAAD Anti Missile System

ವಿಮಾನವಾಹಕ ನೌಕೆಗಳು, ಯುದ್ಧನೌಕೆಗಳನ್ನು ಪೂರ್ವ ಮೆಡಿಟರೇನಿಯನ್, ಕೆಂಪು ಸಮುದ್ರ ಮತ್ತು ಅರೇಬಿಯನ್ ಸಮುದ್ರದಲ್ಲಿ ನಿಯೋಜಿಸಲಾಗಿದೆ. ಇಸ್ರೇಲ್‌ನ ನ ರಕ್ಷಣೆಯನ್ನು ಯುಎಸ್ ಬಲಪಡಿಸುತ್ತಿದ್ದಂತೆ ಸಂಘರ್ಷದ ವಾತಾವರಣ ಮತ್ತಷ್ಟು ಹೆಚ್ಚಾಗಿದೆ. ಭಾನುವಾರ ಹೈಫಾ ಸಮೀಪದ ಬಿನ್ಯಾಮಿನಾದಲ್ಲಿ ಸೇನಾ ನೆಲೆಯ ಮೇಲೆ ಹೆಜ್ಬುಲ್ಲಾ ನಡೆಸಿದ ಡ್ರೋನ್ ದಾಳಿಯಲ್ಲಿ ನಾಲ್ಕು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ದೃಢಪಡಿಸಿದೆ. ಈ ದಾಳಿಯಲ್ಲಿ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ತುರ್ತು ಸೇವೆ ವರದಿ ತಿಳಿಸಿದೆ.

ಇರಾನ್ ದಾಳಿಗೆ ಪ್ರತಿಯಾಗಿ ಬೈರುತ್‌ನಲ್ಲಿ ವಿನಾಶಕಾರಿ ದಾಳಿ ಸೇರಿದಂತೆ ಲೆಬನಾನ್‌ನಲ್ಲಿ ಹೆಜ್ಬುಲ್ಲಾದ ವಿವಿಧ ಸ್ಥಾನಗಳ ಮೇಲೆ ಇಸ್ರೇಲ್ ಇತ್ತೀಚೆಗೆ ನೇರವಾಗಿ ಡ್ರೋನ್ ದಾಳಿಯನ್ನು ನಡೆಸಿತ್ತು. ಒಂದು ವರ್ಷದಿಂದ ಇಸ್ರೇಲ್‌ಗೆ ರಾಕೆಟ್ ಮತ್ತು ಡ್ರೋನ್ ದಾಳಿಗಳನ್ನು ನಡೆಸುತ್ತಿರುವ ಹೆಜ್ಬುಲ್ಲಾ ಇತ್ತೀಚೆಗೆ ತನ್ನ ಕಾರ್ಯಾಚರಣೆಯನ್ನು ಹೆಚ್ಚಿಸಿದೆ.

Georgia Meloni: ಉಗ್ರರ ಗುಂಪು ಹಮಾಸ್‌ಗೆ ಜೈ ಅಂದ ಪಾಕಿಸ್ತಾನ ಇಮಾಮ್ ಗಡಿಪಾರಿಗೆ ಇಟಲಿ ಪ್ರಧಾನಿ ಮೆಲೋನಿ ಆದೇಶ

ಬಿನ್ಯಾಮಿನಾ ಮೇಲಿನ ದಾಳಿಯು ಕೇವಲ ಪ್ರಾರಂಭ ಎಂದು ಹೆಜ್ಬುಲ್ಲಾ ಘೋಷಿಸಿದ್ದು, ಇಸ್ರೇಲ್ ತನ್ನ ಆಕ್ರಮಣವನ್ನು ಮುಂದುವರೆಸಿದರೆ ಇನ್ನು ಹೆಚ್ಚು ಕೆಟ್ಟದ್ದನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.