Thursday, 12th December 2024

ತಮಿಳು ಕೈದಿಗಳಿಗೆ ಬೆದರಿಕೆ: ಶ್ರೀಲಂಕಾ ಸಚಿವರ ರಾಜೀನಾಮೆ

ಕೋಲಂಬೋ: ತಮಿಳು ಕೈದಿಗಳಿಗೆ ಮಂಡಿಯೂರುವಂತೆ ಹಾಗೂ ಗನ್​ ಪಾಯಿಂಟ್​ನಿಂದ ಬೆದರಿಕೆ ಹಾಕಿದ ಆರೋಪದ ಅಡಿಯಲ್ಲಿ ಶ್ರೀಲಂಕಾದ ಕಾರಾಗೃಹ ಸಚಿವ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕಾರಾಗೃಹ ನಿರ್ವಹಣೆ ಹಾಗೂ ಕೈದಿಗಳ ಪುನರ್ವಸತಿ ರಾಜ್ಯ ಸಚಿವ ಲೋಹನ್​​ ರತ್ವಟ್ಟೆ ಘಟನೆಗೆ ನಿಷ್ಕಾಳಜಿಯೇ ಕಾರಣ ಎಂಬುದನ್ನು ಒಪ್ಪಿಕೊಂಡಿದ್ದಾರೆ ಹಾಗೂ ರಾಜೀನಾಮೆಯನ್ನೂ ನೀಡಿದ್ದಾರೆ ಎಂದು ಶ್ರೀಲಂಕಾ ಅಧ್ಯಕ್ಷೀಯ ಕಚೇರಿ ಮಾಹಿತಿ ನೀಡಿದೆ. ಶ್ರೀಲಂಕಾ ರಾಷ್ಟ್ರಪತಿ ಗೋಟಬಯ ರಾಜಪಕ್ಸೆ ರತ್ವಟ್ಟೆ ರಾಜೀನಾಮೆ ಅಂಗೀಕರಿಸಿದ್ದಾರೆ.

ಇಟಲಿ ಪ್ರವಾಸದಲ್ಲಿರುವ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ಕೂಡಲೇ ಸಚಿವ ರತ್ವಟ್ಟೆಗೆ ದೂರವಾಣಿ ಕರೆ ಮಾಡಿ ರಾಜೀನಾಮೆ ನೀಡಿ ಎಂದು ಸೂಚನೆ ನೀಡಿದ್ದರು ಎನ್ನಲಾಗಿದೆ. ಈ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಸಹ ರತ್ವಟ್ಟೆ ಬಳಿ ಕೈಗಾರಿಕಾ ಖಾತೆಯಿದೆ. ಹೀಗಾಗಿ ಅವರು ಮಂತ್ರಿಯಾಗಿ ಮುಂದುವರಿ ಯಲಿದ್ದಾರೆ ಎನ್ನಲಾಗಿದೆ.