Wednesday, 23rd October 2024

Turkey Terror Attack: ಟರ್ಕಿ ರಾಜಧಾನಿಯಲ್ಲಿ ಭಯೋತ್ಪಾದಕ ದಾಳಿ; 4 ಮಂದಿ ಸಾವು

Turkey Terror Attack

ಅಂಕಾರಾ: ಭಯೋತ್ಪಾದಕರ ದಾಳಿಗೆ ಟರ್ಕಿ ಬೆಚ್ಚಿ ಬಿದ್ದಿದೆ. ಟರ್ಕಿ ರಾಜಧಾನಿ ಅಂಕಾರಾ (Ankara) ಬಳಿಯ ಟರ್ಕಿಶ್ ಏರೋಸ್ಪೇಸ್ ಇಂಡಸ್ಟ್ರೀಸ್ (Turkish Aerospace Industries) ಪ್ರಧಾನ ಕಚೇರಿಯ ಹೊರಗೆ ಭಾರಿ ಸ್ಫೋಟ ಸಂಭವಿಸಿದ್ದು, 4 ಮಂದಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೊಂದು ಭಯೋತ್ಪಾದಕರ ದಾಳಿ ಎಂದು ಅಧಿಕಾರಿಗಳು ಹೇಳಿದ್ದಾರೆ (Turkey Terror Attack).

“ಟರ್ಕಿಯ ಏರೋಸ್ಪೇಸ್ ಇಂಡಸ್ಟ್ರೀಸ್ ಮೇಲೆ ಭಯೋತ್ಪಾದಕರ ದಾಳಿ ನಡೆದಿದೆ. ಈ ದಾಳಿಯಿಂದ ಕೆಲವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ” ಎಂದು ಸಚಿವ ಅಲಿ ಯೆರ್ಲಿಕಾಯಾ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಪ್ರಾಥಮಿಕ ವರದಿಯ ಪ್ರಕಾರ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಅಂಕಾರಾದಿಂದ 40 ಕಿ.ಮೀ. ದೂರದಲ್ಲಿರುವ ಕಹ್ರಮನ್ಕಜಾನ್ ಪಟ್ಟಣದಲ್ಲಿ ಸ್ಫೋಟ ನಡೆದಿದೆ. ಸ್ಥಳದಲ್ಲಿ ದಟ್ಟೈಸಿದ್ದ ಹೊಗೆ ಮತ್ತು ಬೆಂಕಿ ಉರಿಯುತ್ತಿರುವುದನ್ನು ತೋರಿಸುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಹೆಚ್ಚಿನ ವಿವರಗಳನ್ನು ಕಲೆ ಹಾಕಲಾಗುತ್ತಿದೆ. ಇದುವರೆಗೆ ಯಾವುದೇ ಉಗ್ರ ಸಂಘಟನೆ ದಾಳಿಗೆ ಹೊಣೆ ಹೊತ್ತುಕೊಂಡಿಲ್ಲ.

ಮಾಧ್ಯಮಗಳು ಹೇಳಿದ್ದೇನು?

ಇದನ್ನು ಆತ್ಮಾಹುತಿ ದಾಳಿ ಎಂದು ಕರೆದಿರುವ ಎನ್‌ಟಿವಿ, ʼʼಭಯೋತ್ಪಾದಕರ ಗುಂಪು ಟರ್ಕಿಶ್ ಏರೋಸ್ಪೇಸ್ ಇಂಡಸ್ಟ್ರೀಸ್ (TAI) ಪ್ರಧಾನ ಕಚೇರಿಗೆ ನುಗ್ಗಿದೆ ಮತ್ತು ಅವರಲ್ಲಿ ಒಬ್ಬಾತ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆʼʼ ಎಂದು ವರದಿ ಮಾಡಿದೆ. ದಾಳಿಕೋರರಲ್ಲಿ ಮಹಿಳೆಯೂ ಇದ್ದಳು ಎನ್ನಲಾಗಿದೆ. ʼʼಅಂಕಾರಾ ಹೊರವಲಯದಲ್ಲಿರುವ ಕಂಪೆನಿಯ ಉದ್ಯೋಗಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ಯಲಾಗಿದೆ. ಭದ್ರತಾ ಪಡೆಗಳು, ಆಂಬ್ಯುಲೆನ್ಸ್‌ಗಳು ಮತ್ತು ಅಗ್ನಿಶಾಮಕ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಲಾಗಿದೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಖಂಡನೆ

ಈ ದಾಳಿಯನ್ನು ಸಾರಿಗೆ ಸಚಿವ ಅಬ್ದುಲ್ಕಾದಿರ್ ಉರಾಲೊಗ್ಲು ಮತ್ತು ವಿರೋಧ ಪಕ್ಷದ ನಾಯಕ ಓಜ್ಗುರ್ ಓಜೆಲ್ ಖಂಡಿಸಿದ್ದಾರೆ. “ಕಹ್ರಮನ್ಕಜಾನ್‌ ಟಿಎಐ ಮೇಲೆ ನಡೆದ ಭಯೋತ್ಪಾದಕ ದಾಳಿ ಕಳವಳಕಾರಿ. ಭಯೋತ್ಪಾದನೆ ಯಾರಿಂದ ಅಥವಾ ಎಲ್ಲಿಂದ ಬಂದರೂ ಅದನ್ನು ಖಂಡಿಸುತ್ತೇನೆ” ಎಂದು ಓಜೆಲ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಸರ್ಕಾರಿ ಸ್ವಾಮ್ಯದ ಟಿಎಐ ಪ್ರಮುಖ ಶಸ್ತ್ರಾಸ್ತ್ರ ಉತ್ಪಾದಕ ಕಂಪೆನಿಯಾಗಿದ್ದು, 15,500 ಉದ್ಯೋಗಿಗಳನ್ನು ಹೊಂದಿದೆ. 5 ಮಿಲಿಯನ್ ಚದರ ಮೀಟರ್ ಪ್ರದೇಶದಲ್ಲಿ ಕಾರ್ಖಾನೆ ಹರಡಿಕೊಂಡಿದೆ. ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಟರ್ಕಿ ಅಧ್ಯಕ್ಷ ರಿಜೆಪ್ ತಾಯಿಪ್ ಎರ್ಡೊವನ್ ರಷ್ಯಾಕ್ಕೆ ತೆರಳಿರುವ ಮಧ್ಯೆಯೇ ಈ ಸ್ಫೋಟ ಸಂಭವಿಸಿದೆ.

ಟರ್ಕಿ ಸಂಸತ್ ಬಳಿ ಆತ್ಮಹತ್ಯಾ ಬಾಂಬ್ ದಾಳಿ ನಡೆದಿತ್ತು

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಟರ್ಕಿಯ ಸಂಸತ್ ಮುಂದೆ ಆತ್ಮಹತ್ಯಾ ಬಾಂಬ್ ದಾಳಿ ನಡೆದು, ಇಬ್ಬರು ಪೊಲೀಸರು ಗಾಯಗೊಂಡಿದ್ದರು. ಅಂಕಾರಾ ನಗರದಲ್ಲಿರುವ ಟರ್ಕಿ ಸಂಸತ್‌ ಗೇಟ್ ಎದುರು ಉಗ್ರನೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದ. ಆತ್ಮಹತ್ಯಾ ಬಾಂಬ್ ದಾಳಿ ನಡೆದಿದ್ದ ಪ್ರದೇಶವು ಅನೇಕ ಸಚಿವಾಲಯಗಳ ನೆಲೆಯಾಗಿದೆ. ಇನ್ನು 2022ರ ನವೆಂಬರ್‌ನಲ್ಲಿ ಟರ್ಕಿಯ ಇಸ್ತಾನ್‌ಬುಲ್‌ನ ಶಾಪಿಂಗ್ ಸ್ಟ್ರೀಟ್‌ನಲ್ಲಿ ಸಂಭವಿಸಿದ ಬಾಂಬ್ ದಾಳಿಯಲ್ಲಿ 6 ಮಂದಿ ಸಾವನ್ನಪ್ಪಿದ್ದರು.

ಈ ಸುದ್ದಿಯನ್ನೂ ಓದಿ: Israel–Hamas war : ಹಮಾಸ್‌ ಉಗ್ರರ ದಾಳಿಯಲ್ಲಿ ಬದುಕುಳಿದವಳು ಜನ್ಮದಿನದಂದೇ ಆತ್ಮಹತ್ಯೆ ಮಾಡಿಕೊಂಡಳು!