Thursday, 21st November 2024

UK Diwali Party Row: ದೀಪಾವಳಿ ಪಾರ್ಟಿಯಲ್ಲಿ ಮಾಂಸ, ಮದ್ಯ! ಹಿಂದೂಗಳ ಭಾವನೆಗೆ ಧಕ್ಕೆ ತಂದ್ರಾ ಬ್ರಿಟನ್‌ ಪ್ರಧಾನಿ?

UK PM

ಲಂಡನ್‌: ಬ್ರಿಟನ್‌ ಪ್ರಧಾನಿ (UK PM) ಕೀರ್ ಸ್ಟಾರ್ಮರ್ (Keir Starmer) 10 ಡೌನಿಂಗ್ ಸ್ಟ್ರೀಟ್‌ನಲ್ಲಿ ಆಯೋಜಿಸಿದ್ದ ದೀಪಾವಳಿ (UK Diwali Party Row) ಆಚರಣೆ ಕಾರ್ಯಕ್ರಮದಲ್ಲಿ ಭಾರತೀಯರ ಆಚರಣೆಗೆ ಧಕ್ಕೆಯಾಗಿದೆ ಎಂದು ಕೆಲ ಬ್ರಿಟಿಷ್‌ ಹಿಂದೂಗಳು ದೂರಿದ್ದಾರೆ. ಸಮುದಾಯದ ಮುಖಂಡರು ಮತ್ತು ಪ್ರಮುಖ ರಾಜಕಾರಣಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕವಾಗಿ ದೀಪಾಲಂಕಾರ, ಕೂಚಿಪುಡಿ ನೃತ್ಯ ಪ್ರದರ್ಶನ ಏರ್ಪಡಿಸಲಾಗಿತ್ತು. ಆದಾಗ್ಯೂ, ಮಾಂಸಹಾರ ಹಾಗೂ ಮದ್ಯಗಳನ್ನು ಬಡಿಸಲಾಗಿತ್ತು ಎಂದು ಭಾಗವಹಿಸಿದ್ದ ಹಿಂದೂಗಳು ಹೇಳಿದ್ದಾರೆ.

ಹಿಂದೂಗಳ ಹಬ್ಬದ ದಿನ ಮಾಂಸಹಾರ ಹಾಗೂ ಮದ್ಯವನ್ನು ಇರಿಸಿದ್ದು ನೋಡಿ ಬಂದವರು ಆಶ್ಚರ್ಯ ಚಕಿತರಾಗಿದ್ದಾರೆ.  ಬ್ರಿಟಿಷ್ ಹಿಂದೂ ನಾಯಕ ಸತೀಶ್ ಕೆ ಶರ್ಮಾ ಅವರು ಬ್ರಿಟನ್‌ ಪ್ರಧಾನ ಮಂತ್ರಿ ಕಚೇರಿಯನ್ನು ಟೀಕಿಸಿದ್ದು, ಹಿಂದೂಗಳ ಹಬ್ಬದಂದು ಮಾಂಸಾಹಾರ ಮಾಡಿದ್ದು ಸರಿ ಅಲ್ಲ. ಇದು ಮಾಹಿತಿಯ ಕೊರತೆ ಎಂದರು. ಪ್ರಧಾನಿ ಕಚೇರಿ ಆಕಸ್ಮಿಕವಾಗಿ ಅಥವಾ ಉದ್ದೇಶಪೂರ್ವಕವಾಗಿ-ಹಿಂದೂ ಸಮುದಾಯದ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಿದೆ ಎಂದು ಹೇಳಿದ್ದಾರೆ.

ಈ ಹಿಂದೆ ರಿಷಿ ಸುನಕ್‌ ಬ್ರಿಟನ್‌ ಪ್ರಧಾನಿಯಾದ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ದೀಪಾವಳಿಯಲ್ಲಿ ಮಾಂಸಹಾರ ಮತ್ತು ಮದ್ಯ ಬಿಟ್ಟು ಎಲ್ಲಾ ತರನಾದ ಭಾರತೀಯ ಆಹಾರ ಪದಾರ್ಥಗಳನ್ನು ತಯಾರಿಸಲಾಗಿತ್ತು. ಪ್ರಧಾನಿ ಕಚೇರಿಯಲ್ಲಿ ಮಾಂಸಹಾರ ಹಾಗೂ ಮದ್ಯ ಇರಿಸಿದ್ದಕ್ಕೆ ಆಕ್ಷೇಪಣೆ ಮಾಡಿದ ಸಾಮಾಜಿಕ ಆಂದೋಲನವಾದ ಇನ್‌ಸೈಟ್‌ ಯುಕೆ ಕೂಡ ಆಕ್ರೋಶ ವ್ಯಕ್ತಪಡಿಸಿದೆ. ಹಿಂದೂಗಳ ಧಾರ್ಮಿಕ ಆಚರಣೆಯಲ್ಲಿ ಮಾಂಸ ಹಾಗೂ ಮದ್ಯ ನಿಷಿದ್ಧ ಎಂದು ಬ್ರಿಟನ್‌ ಪ್ರಧಾನಿ ಕಚೇರಿಗೆ ತಿಳಿ ಹೇಳಿದೆ.

ಜಗತ್ತಿನ ಎಲ್ಲೆಡೆ ದೀಪಾವಳಿಯನ್ನು ಅದ್ಧೂರಿಯಾಗಿ ಆಚರಿಸಲಾಗಿದೆ. ಇತ್ತೀಚೆಗೆ ಅಮೆರಿಕದ ಶ್ವೇತ ಭವನದಲ್ಲಿ ಹಿಂದೂಗಳ ಪದ್ಧತಿಯಂತೆ ದೀಪಾವಳಿ ಆಚರಿಸಲಾಗಿದೆ. ಕೆನಡಾದಲ್ಲೂ ದೀಪಾವಳಿ ಆಚರಣೆ ಮಾಡಲಾಗಿದ್ದು, ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ದೀಪಾವಳಿ ಆಚರಣೆ ಮಾಡಿದ್ದರು.

ಇದನ್ನೂ ಓದಿ : Joe Biden: ಶ್ವೇತ ಭವನದಲ್ಲಿ ದೀಪಾವಳಿ ಆಚರಣೆ; ದೀಪ ಬೆಳಗಿ ಬೈಡೆನ್‌ ಭಾವುಕ ನುಡಿ