Friday, 20th September 2024

ವಿಶ್ವಸಂಸ್ಥೆಯ ಭದ್ರತಾ ಮಂಡಳಿ: ಭಾರತಕ್ಕೆ ಎಂಟನೇ ಬಾರಿಗೆ ತಾತ್ಕಾಲಿಕ ಸದಸ್ಯತ್ವ

ವಾಷಿಂಗ್ಟನ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಎಂಟನೇ ಬಾರಿಗೆ ತಾತ್ಕಾಲಿಕ ಸದಸ್ಯತ್ವ ಪಡೆದುಕೊಳ್ಳುತ್ತಿದ್ದು, 2021-22ನೇ ಅವಧಿಗೆ ಸದಸ್ಯ ದೇಶವಾಗಿ ಕಾರ್ಯ ನಿರ್ವಹಿಸಲಿದೆ. ಭಾರತದ ಧ್ವಜವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಯಲ್ಲಿ ಸ್ಥಾಪಿಸಲಾಗುತ್ತದೆ ಎಂದು ವಿಶ್ವಸಂಸ್ಥೆಯ ಭಾರತದ ಪ್ರತಿನಿಧಿ ಟಿ.ಎಸ್ ತಿರುಮೂರ್ತಿ ಹೇಳಿದರು.

ಶಾಂತಿಯುತ ಮತ್ತು ಸುರಕ್ಷಿತ ಇಂಡೋ-ಫೆಸಿಫಿಕ್ ಪ್ರದೇಶ ಸ್ಥಾಪನೆಯ ಸಮಾನ ಹಿತಾಸಕ್ತಿಯ ನಿಟ್ಟಿನಲ್ಲಿ ಜತೆಯಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದು ಅಮೆರಿಕ ಅಧಿಕೃತ ಹೇಳಿಕೆ ಟ್ವೀಟ್ ಮೂಲಕ ತಿಳಿಸಿದೆ. ಆರ್ಥಿಕ ಮತ್ತು ಸಾಮಾಜಿಕ ಸಮಿತಿಯ (ಇಸಿಒಎಸ್‌ಒಸಿ) ಪ್ರತಿಷ್ಠಿತ ಭಾಗವಾಗಿರುವ ಸಿಎಸ್‌ಡಬ್ಲ್ಯೂದಲ್ಲಿ ಭಾರತವು 2021ರಿಂದ 2025ರವರೆಗೆ ನಾಲ್ಕು ವರ್ಷ ಸದಸ್ಯ ರಾಷ್ಟ್ರವಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

ಭಾರತ ಅಲ್ಲದೆ, ಮೆಕ್ಸಿಕೋ ಹಾಗೂ ಕೀನ್ಯಾ ದೇಶಗಳಿಗೆ ಈ ಬಾರಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತಾತ್ಕಾಲಿಕ ಸದಸ್ಯತ್ವ ಲಭಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಬ್ರಿಟನ್, ಚೀನಾ, ಫ್ರಾನ್ಸ್, ರಷ್ಯಾ ಹಾಗೂ ಅಮೆರಿಕ ಶಾಶ್ವತ ಸದಸ್ಯ ರಾಷ್ಟ್ರ ಗಳಾಗಿದ್ದು, 10 ತಾತ್ಕಾಲಿಕ ಸದಸ್ಯ ರಾಷ್ಟ್ರಗಳಿರಲಿವೆ. ಬೆಲ್ಜಿಯಂ, ಐವರಿ ಕೋಸ್ಟ್, ಜರ್ಮನಿ, ಇಂಡೋನೇಷ್ಯಾ, ಕುವೈತ್, ಪೆರು, ಪೋಲೆಂಡ್, ದಕ್ಷಿಣ ಆಫ್ರಿಕಾ, ಡೊಮೊನಿಕ್ ರಿಪಬ್ಲಿಕ್, ಈಕ್ವೆಟೋರಿಯಲ್ ಗಿನಿ ತಾತ್ಕಾಲಿಕ ಸದಸ್ಯ ರಾಷ್ಟ್ರಗಳಾಗಿವೆ.