Friday, 22nd November 2024

ಡ್ಯಾನಿಸ್ ಸಿದ್ಧಿಕಿ ಹತ್ಯೆಗೆ ಅಮೆರಿಕಾ ತೀವ್ರ ಸಂತಾಪ

ವಾಷಿಂಗ್ಟನ್: ಪುಲ್ಜಿಟರ್ ಪ್ರಶಸ್ತಿ ವಿಜೇತ ಭಾರತಿಯ ಫೋಟೋ ಜರ್ನಲಿಸ್ಟ್ ಡ್ಯಾನಿಸ್ ಸಿದ್ಧಿಕಿ ಹತ್ಯೆಗೆ ಅಮೆರಿಕಾ ಶುಕ್ರವಾರ ತೀವ್ರ ಸಂತಾಪ ವ್ಯಕ್ತ ಪಡಿಸಿದೆ.

ತಾಲಿಬಾನ್ ಮತ್ತು ಆಫ್ಘನ್ ಪಡೆಗಳ ನಡುವಿನ ಕದನವನ್ನು ವರದಿ ಮಾಡಲು ತೆರಳಿದ್ದ ಭಾರತೀಯ ಫೋಟೋ ಜರ್ನಲಿಸ್ಟ್ ಸಿದ್ಧಿಕಿಯನ್ನು ಕಂದಹಾರ್‍ನ ಸ್ಪೈನ್ ಬೋಲ್ಡಕ್ ಜಿಲ್ಲೆಯಲ್ಲಿ ಹತ್ಯೆ ಮಾಡಲಾಗಿತ್ತು. ಮುಂಬೈ ಮೂಲದ ಸಿದ್ಧಿಕಿ ರಾಯಿಟರ್ಸ್ ಸುದ್ದಿ ಸಂಸ್ಥೆಗಾಗಿ ಕೆಲಸ ಮಾಡುತ್ತಿದ್ದರು. 2018ರಲ್ಲಿ ಅವರಿಗೆ ಪ್ರತಿಷ್ಠಿತ ಪುಲ್ಜಿಟರ್ ಪ್ರಶಸ್ತಿ ಲಭಿಸಿತ್ತು. ಸಿದ್ಧಿಕಿ ಹತ್ಯೆಯನ್ನು ಅಮೆರಿಕಾದ ಅಧ್ಯಕ್ಷ ಜೋ ಬಿಡೇನ್ ಸೇರಿದಂತೆ ಸಂಸದರು ಖಂಡಿಸಿದ್ದಾರೆ.

ಅವರು ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದರು, ಪ್ರತಿಭಾವಂತ ಪತ್ರಕರ್ತನ ಹತ್ಯೆ ಖಂಡನೀಯ ಎಂದು ಹೇಳಿರುವ ಅಮೆರಿಕಾ ವಕ್ತಾರರು, ಆಫ್ಘನ್‍ನಲ್ಲಿ ಹಿಂಸೆಯನ್ನು ತ್ಯಜಿಸಿ ಶಾಂತಿ ಕಾಪಾಡಿಕೊಳ್ಳಬೇಕು, ಪತ್ರಕರ್ತರು ಅವರ ಕೆಲಸ ಮಾಡುವಾಗ ಕೊಲ್ಲುವುದು ಸರಿಯಲ್ಲ ಎಂದಿದೆ.

ಪತ್ರಕರ್ತರು ಕೆಲಸ ಮಾಡುವಾಗ ಅವರ ಪ್ರಾಣಕ್ಕೆ ಸವಾಲು ಉಂಟಾಗುತ್ತಿರುವ ಬಗ್ಗೆ ಅಮೆರಿಕಾ ಆತಂಕ ವ್ಯಕ್ತ ಪಡಿಸಿದೆ ಎಂದು ವಕ್ತಾರರಾದ ಜಲಿನಾ ಪೋಟರ್ ತಿಳಿಸಿದ್ದಾರೆ.