ವಾಷಿಂಗ್ಟನ್: ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ದೇಶಗಳಿಂದ ಲೂಟಿ ಮಾಡಿದ ಪುರಾತನ ಕಲಾ ಮೂರ್ತಿಗಳನ್ನು(antiques) ವಾಪಾಸು ಕಳುಹಿಸುವ ಮಹತ್ವದ ನಿರ್ಧಾರವನ್ನು ಅಮೆರಿಕ ಕೈಗೊಂಡಿದೆ. ಈ ಮೂಲಕ ಸುಮಾರು 83 ಕೋಟಿ ರೂ .ಮೌಲ್ಯದ (10 ಮಿಲಿಯನ್ ಡಾಲರ್) 1,400 ಕಲಾಕೃತಿಗಳನ್ನು ಭಾರತಕ್ಕೆ ಹಿಂದಿರುಗಿಸಲಾಗಿದೆ (US returns antiques) ಎಂದು ಅಮೆರಿಕ ಘೋಷಿಸಿದೆ. ಈ ವಸ್ತುಗಳು, ಕಳ್ಳಸಾಗಣೆ ಮತ್ತು ಕಾನೂನುಬಾಹಿರವಾಗಿ ಮಾರಾಟವಾಗಿದ್ದು, ಇದೀಗ ಮತ್ತೆ ಸ್ವದೇಶಕ್ಕೆ ಮರಳುತ್ತಿವೆ.
ಹಿಂದಿರುಗಿಸಿದ ವಸ್ತುಗಳನ್ನು ಈ ಮೊದಲು ನ್ಯೂಯಾರ್ಕ್ನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಭಾರತದಿಂದ ಹಲವು ಕಲಾಕೃತಿಗಳನ್ನು ಕಳವು ಮಾಡಿ ಅಕ್ರಮವಾಗಿ ಮಾರಾಟ ಮಾಡಲಾಗಿತ್ತು. ಮ್ಯಾನ್ಹ್ಯಾಟನ್ ಜಿಲ್ಲಾ ಅಟಾರ್ನಿ ಕಚೇರಿಯು ನಡೆಸಿದ ಪತ್ರಿಕಾ ಪ್ರಕಟಣೆಯಲ್ಲಿ ಜಾಗತಿಕ ಲೂಟಿಯ ಕುರಿತು ನಡೆಸಿದ ತನಿಖೆಯಿಂದ ಈ ಕಲಾಕೃತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.
ತನಿಖೆಯಲ್ಲಿ ದರೋಡೆಕೋರರಾದ ನ್ಯಾನ್ಸಿ ವೀನರ್ ಮತ್ತು ಪ್ರಾಚೀನ ವಸ್ತುಗಳ ವ್ಯಾಪಾರಿ ಸುಭಾಷ್ ಕಪೂರ್ ಸೇರಿದಂತೆ ಹಲವರ ಹೆಸರು ಕೇಳಿ ಬಂದಿದೆ. ಕಪೂರ್ ಒಬ್ಬ ಅಮೇರಿಕನ್ ಪುರಾತನ ವಸ್ತುಗಳ ವ್ಯಾಪಾರಿಯಾಗಿದ್ದು, ನ್ಯೂಯಾರ್ಕ್ ಗ್ಯಾಲರಿಯಲ್ಲಿ ಬಹು-ಮಿಲಿಯನ್ ಡಾಲರ್ ಲೂಟಿ ಜಾಲವನ್ನು ನಡೆಸಿದ ಕಾರಣಕ್ಕಾಗಿ 10 ವರ್ಷಗಳ ಶಿಕ್ಷೆಗೆ ಒಳಗಾಗಿದ್ದ ಎಂದು ತಿಳಿದು ಬಂದಿದೆ. ನಂತರ ಹೆಚ್ಚಿನ ವಿಚಾರಣೆಗಾಗಿ ಆತನನ್ನು ಭಾರತದ ವಶಕ್ಕೆ ನೀಡಲಾಗಿತ್ತು. ಸದ್ಯ ಆತ ಭಾರತದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಇತ್ತೀಚೆಗೆ ನಡೆದ 46ನೇ ವಿಶ್ವ ಪರಂಪರೆ ಸಮಿತಿಯ ಕಾರ್ಯಕ್ರಮದಲ್ಲಿ ಭಾರತ ಹಾಗೂ ಅಮೆರಿಕ ಸಾಂಸ್ಕೃತಿಕ ಆಸ್ತಿ ಒಪ್ಪಂದಕ್ಕೆ ಸಹಿ ಹಾಕಿದ್ದವು. ಭಾರತದಿಂದ ಅಮೆರಿಕಕ್ಕೆ ಪ್ರಾಚೀನ ವಸ್ತುಗಳ ಅಕ್ರಮ ಸಾಗಣೆಯನ್ನು ತಡೆಯಲು ಹಾಗೂ ಈಗಾಗಲೇ ಅಕ್ರಮವಾಗಿ ಸಾಗಾಟ ಮಾಡಿದ್ದ ಪುರಾತನ ವಸ್ತುಗಳನ್ನು ಮರಳಿ ಪಡೆಯುವ ಒಪ್ಪಂದ ಇದಾಗಿತ್ತು. ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ಸಮ್ಮುಖದಲ್ಲಿ ಸಂಸ್ಕೃತಿ ಕಾರ್ಯದರ್ಶಿ ಗೋವಿಂದ್ ಮೋಹನ್ ಮತ್ತು ಭಾರತದಲ್ಲಿನ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ಒಪ್ಪಂದಕ್ಕೆ ಸಹಿ ಹಾಕಿದ್ದರು.
ಇದನ್ನೂ ಓದಿ : US imposes sanction: 15 ಭಾರತೀಯ ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ; ಕಾರಣ ಏನು?
1970ರ ಯುನೆಸ್ಕೋ ಕನ್ವೆನ್ಶನ್ ಅನ್ನು ಅಂಗೀಕರಿಸುವ ಮೊದಲು ಭಾರತದಿಂದ ಹೆಚ್ಚಿನ ಸಂಖ್ಯೆಯ ಪ್ರಾಚೀನ ವಸ್ತುಗಳನ್ನು ಕಳ್ಳಸಾಗಣೆ ಮಾಡಲಾಗಿದೆ. ಇವುಗಳನ್ನು ಈಗ ವಿಶ್ವದಾದ್ಯಂತ ವಿವಿಧ ವಸ್ತುಸಂಗ್ರಹಾಲಯಗಳು, ಸಂಸ್ಥೆಗಳು ಮತ್ತು ಖಾಸಗಿ ಸಂಗ್ರಹಣೆಗಳಲ್ಲಿ ಇರಿಸಲಾಗಿದೆ. ಇದೀಗ ಅಮೆರಿಕದಿಂದ 1,400 ಪ್ರಾಚೀನ ಕಲಾ ಕೃತಿಗಳು ಸ್ವದೇಶಕ್ಕೆ ಮರಳಲಿವೆ.