Sunday, 15th December 2024

ಚುನಾವಣೆ ಗೆಲುವು: ಮೋದಿಗೆ ಅಮೆರಿಕದ ಗಾಯಕಿ ಮಿಲ್ಬೆನ್ ಅಭಿನಂದನೆ

ವಾಷಿಂಗ್ಟನ್: ನಾಲ್ಕು ರಾಜ್ಯಗಳ ಪೈಕಿ 3 ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿ ಅಧಿಕಾರ ವಹಿಸಿಕೊಳ್ಳಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ  ಎಕ್ಸ್‌​ನಲ್ಲಿ ಅಮೆರಿಕದ ಗಾಯಕಿ, ನಟಿ ಮೇರಿ ಮಿಲ್ಬೆನ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದ್ದಾರೆ.

“ಭಾರತದ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶಗಳು ಹೊರಬಿದ್ದಿದ್ದು, ಬಿಜೆಪಿ ದೇಶದ ಹೃದಯ ಭಾಗದ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢಗಳಲ್ಲಿ ಗೆಲುವು ಸಾಧಿಸಿದೆ. ಇದು ಪ್ರಧಾನಿ ಮೋದಿಯವರ 2024ರ ಭರ್ಜರಿ ಗೆಲುವಿನ ಮುನ್ಸೂಚನೆ. ಮೋದಿ ಭಾರತ ಮೊದಲು ಎನ್ನುವ ನಾಯಕ ಮತ್ತು ಅಮೆರಿಕ-ಭಾರತದ ಸಂಬಂಧಕ್ಕೂ ಅತ್ಯುತ್ತಮ ನಾಯಕ” ಎಂದು ಹೊಗಳಿದ್ದಾರೆ.

ಈ ಹಿಂದೆಯೂ ಕೂಡ ಮೇರಿ ಮಿಲ್ಬೆನ್ ಅವರು ಬಿಹಾರದ ಸಿಎಂ ನಿತೀಶ್ ಕುಮಾರ್ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾಗ ಅದನ್ನು ಖಂಡಿಸಿದ್ದರು. ಇದೇ ವೇಳೆ ಮಹಿಳೆಯರ ಪರವಾದ ಪ್ರಧಾನಿ ಮೋದಿ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದ್ದರು.

“ನಾನು ಭಾರತವನ್ನು ಪ್ರೀತಿಸುತ್ತೇನೆ. ಪ್ರಧಾನಿ ಮೋದಿ ಭಾರತೀಯ ನಾಗರಿಕರ ಅತ್ಯುತ್ತಮ ನಾಯಕ. ಅವರು ಯುಎಸ್‌ ಜೊತೆಗಿನ ಉತ್ತಮ ಸಂಬಂಧಕ್ಕೂ ನಾಯಕರು. ಮೋದಿ ಮಹಿಳೆಯರ ಪರವಾಗಿದ್ದಾರೆ” ಎಂದಿದ್ದರು.

ಕಳೆದ ಜೂನ್​ ತಿಂಗಳಲ್ಲಿ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದ ವೇಳೆ ರೊನಾಲ್ಡ್ ರೀಗನ್ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಫ್ರಿಕನ್-ಅಮೆರಿಕನ್ ಹಾಲಿವುಡ್ ಗಾಯಕಿ ಮಿಲ್ಬೆನ್ ಅವರು ಭಾರತ ರಾಷ್ಟ್ರೀಯ ಗೀತೆ ಜನಗಣ ಮನ ಮತ್ತು ಓಂ ಜೈ ಜಗದೀಶ್ ಹರೇ ಹಾಡುಗಳನ್ನು ಹಾಡಿ, ನಂತರ ಮೋದಿಯವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದರು. ಈ ವೇಳೆ ಪ್ರಧಾನಿ ಮೋದಿ ಕೂಡಲೇ ಅವರನ್ನು ತಡೆದು, ಹಸ್ತಲಾಘವ ಮಾಡಿದ್ದರು.