ವಾಷಿಂಗ್ಟನ್ : ಭಾರತೀಯ ಮೂಲದ ಅಮೆರಿಕನ್ ಪ್ರಜೆ ವಿನಯ್ ರೆಡ್ಡಿ ಅವರನ್ನು ತಮ್ಮ ಭಾಷಣ ಬರಹಗಾರ ಮತ್ತು ಗೌತಮ್ ರಾಘವನ್ ಅವರನ್ನು ಅಧ್ಯಕ್ಷೀಯ ಸಿಬ್ಬಂದಿ ಕಚೇರಿಯ ಉಪ ನಿರ್ದೇಶಕರನ್ನಾಗಿ ಜೋ ಬೈಡನ್ ಆಯ್ಕೆ ಮಾಡಿದ್ದಾರೆ.
ಅಧ್ಯಕ್ಷರಾಗಿ ಚುನಾಯಿತರಾಗಿರುವ ಬೈಡನ್ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಕಮಲಾ ಹ್ಯಾರಿಸ್ ಅವರು ರೆಡ್ಡಿ ಹಾಗೂ ರಾಘವನ್ ಜತೆ ಇತರ ನಾಲ್ಕು ಮಂದಿ ಹಿರಿಯ ಅಧಿಕಾರಿಗಳನ್ನೂ ನೇಮಕ ಮಾಡಿಕೊಂಡಿದ್ದಾರೆ.
ವ್ಯವಸ್ಥಾಪನೆ ಮತ್ತು ಆಡಳಿತ ವಿಭಾಗದ ನಿರ್ದೇಶಕರಾಗಿ ಆಯನ್ ಫಿಲಿಪಿಕ್, ಶೆಡ್ಯೂಲಿಂಗ್ ಮತ್ತು ಅಡ್ವಾಸ್ ವಿಭಾಗದ ನಿರ್ದೇಶಕರಾಗಿ ರಯಾನ್ ಮೊಂಟೊಯಾ, ಬ್ರೂಸ್ ರೀಡ್ ಅವರನ್ನು ಸಿಬ್ಬಂದಿ ವಿಭಾಗದ ಉಪ ಮುಖ್ಯಸ್ಥರಾಗಿ ಮತ್ತು ಎಲಿಜ ಬೆತ್ ವಿಲ್ಕಿನ್ಸ್ ಅವರನ್ನು ಸಿಬ್ಬಂದಿ ವಿಭಾಗದ ಮುಖ್ಯಸ್ಥರ ಹಿರಿಯ ಸಲಹೆಗಾರರಾಗಿ ನೇಮಕ ಮಾಡಲಾಗಿದೆ.
ವಿನಯ್ ರೆಡ್ಡಿ ಅವರು ಬೈಡೆನ್-ಹ್ಯಾರಿಸ್ ವರ್ಗಾಂತರ ಅವಧಿಯಲ್ಲಿ ಭಾಷಣ ಬರಹಗಾರರಾಗಿ ಸೇವೆ ಸಲ್ಲಿಸುತ್ತಿದ್ದು, ಚುನಾ ವಣಾ ಪ್ರಚಾರ ವೇಳೆ ಹಿರಿಯ ಸಲಹೆಗಾರ ಮತ್ತು ಭಾಷಣ ಬರಹಗಾರರಾಗಿದ್ದರು. ಎರಡನೇ ಬಾರಿಗೆ ಒಬಾಮಾ ಅಧ್ಯಕ್ಷರಾಗಿದ್ದಾಗ ಅಂದಿನ ಉಪಾಧ್ಯಕ್ಷ ಬೈಡನ್ ಅವರಿಗೆ ಮುಖ್ಯ ಭಾಷಣ ಬರಹಗಾರರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಆ ಬಳಿಕ ಅವರು ಪ್ರಮುಖ ಸಂವಹನ ವಿಭಾಗದ ಉಪಾಧ್ಯಕ್ಷರಾಗಿ ನ್ಯಾಷನಲ್ ಬ್ಯಾಸ್ಕೆಟ್‌ಬಾಲ್ ಅಸೋಸಿಯೇಶನ್‌ನಲ್ಲಿ ಕರ್ತವ್ಯದಲ್ಲಿದ್ದರು.