Saturday, 14th December 2024

ಬಾಂಗ್ಲಾದೇಶದಲ್ಲಿ ಹಿಂಸಾಚಾರ: ಮಾಜಿ ಗೃಹ ಸಚಿವನ ಬಂಧನ

ಢಾಕಾ: ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್​ಪಿ) ಕರೆ ನೀಡಿರುವ 48 ಗಂಟೆಗಳ ರಾಷ್ಟ್ರವ್ಯಾಪಿ ಬಂದ್​ ಆರಂಭವಾಗುವುದಕ್ಕೂ ಮುಂಚೆ ಢಾಕಾ ಮತ್ತು ದೇಶದ ಇತರ ಭಾಗಗಳಲ್ಲಿ 10ಕ್ಕೂ ಹೆಚ್ಚು ಬಸ್‌ಗಳಿಗೆ ಬೆಂಕಿ ಹಚ್ಚಲಾಗಿದೆ.

ಢಾಕಾದಲ್ಲಿ ನಡೆದ ವಿಧ್ವಂಸಕ ಕೃತ್ಯ, ಹಿಂಸಾಚಾರ ಮತ್ತು ಪೊಲೀಸರ ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಮಾಜಿ ಗೃಹ ಸಚಿವ ಮತ್ತು ಪ್ರಸ್ತುತ ಬಿಎನ್‌ಪಿ ಉಪಾಧ್ಯಕ್ಷ, ಏರ್ ವೈಸ್ ಮಾರ್ಷಲ್ (ನಿವೃತ್ತ) ಅಲ್ತಾಫ್ ಹುಸೇನ್ ಚೌಧರಿ ಅವರನ್ನು ಬಂಧಿಸಲಾಗಿದೆ.

ಪೊಲೀಸ್ ಕಾನ್​ಸ್ಟೆಬಲ್ ಅಮಿರುಲ್ ಇಸ್ಲಾಂ ಪರ್ವೇಜ್ ಹತ್ಯೆ ಪ್ರಕರಣದಲ್ಲಿ ಬಿಎನ್​ಪಿ ಸ್ಥಾಯಿ ಸಮಿತಿ ಸದಸ್ಯ ಮತ್ತು ಮಾಜಿ ವಾಣಿಜ್ಯ ಸಚಿವ ಅಮೀರ್ ಖೋಸ್ರು ಮಹಮೂದ್ ಚೌಧರಿ ಮತ್ತು ಬಿಎನ್​ಪಿ ಮಾಧ್ಯಮ ಘಟಕದ ಸಂಚಾಲಕ ಜಹೀರ್ ಉದ್ದೀನ್ ಸ್ವಪನ್ ಅವರನ್ನು ಢಾಕಾ ನ್ಯಾಯಾಲಯ ಆರು ದಿನಗಳ ಪೊಲೀಸ್​ ಕಸ್ಟಡಿಗೆ ನೀಡಿದೆ.

ಗಲಭೆಕೋರರು ನ್ಯೂಮಾರ್ಕೆಟ್ ಪ್ರದೇಶದ ಗೌಚಿಯಾ ಮಾರುಕಟ್ಟೆಯ ಬಳಿ ಮಿರ್​ಪುರ್ ಲಿಂಕ್ ಬಸ್ ಗೆ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ.

ಮುಂದಿನ ವರ್ಷದ ಜನವರಿಯಲ್ಲಿ ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿದ್ದು, ಅದಕ್ಕೂ ಮುನ್ನ ರಾಜಕೀಯ ಪ್ರೇರಿತ ಗಲಭೆಗಳು ಹಾಗೂ ಹಿಂಸಾಚಾರದಿಂದ ಬಾಂಗ್ಲಾದೇಶ ತತ್ತರಿಸಿದೆ. ಪ್ರಧಾನಿ ಶೇಖ್ ಹಸೀನಾ ರಾಜೀನಾಮೆಗೆ ಆಗ್ರಹಿಸಿ ಪ್ರಮುಖ ವಿರೋಧ ಪಕ್ಷ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಪ್ರತಿಭಟನೆ ತೀವ್ರಗೊಳಿಸಿದೆ.