ವಿಯೆನ್ನಾ: ಹಿಂದಿನ ಕಾಲದಲ್ಲಿ, ಮದುವೆಯನ್ನು ಆಜೀವ ಸಂಬಂಧವೆಂದು ಪರಿಗಣಿಸಲಾಗಿತ್ತು. ಆದರೆ ಕಾಲಾನಂತರದಲ್ಲಿ ಇದು ಕೂಡ ಬದಲಾಗಿದೆ. ಈಗ ಜನರು ತಮ್ಮ ಮದುವೆಯನ್ನು ಎಷ್ಟು ಸಂಭ್ರಮದಿಂದ ಆಚರಿಸುತ್ತಾರೋ ಅಷ್ಟೇ ಸಲೀಸಾಗಿ ವಿಚ್ಛೇದನವನ್ನೂ ಘೋಷಿಸುತ್ತಾರೆ. ಇದೀಗ ಆಸ್ಟ್ರಿಯಾದಲ್ಲಿನ ಒಂದು ಜೋಡಿಯ (Austrian Couple) ವಿಚ್ಛೇದನದ (Divorce) ವಿಷಯ ಎಲ್ಲೆಡೆ ವೈರಲ್ ಆಗಿದ್ದು, 40 ವರ್ಷಗಳಲ್ಲಿ 12 ಬಾರಿ ಪರಸ್ಪರ ಮದುವೆಯಾಗಿ ವಿಚ್ಛೇದನ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ (Viral News).
ಒಂದು ವರದಿಯ ಪ್ರಕಾರ, 1981ರಲ್ಲಿ ಮಹಿಳೆಯ ಮೊದಲ ಪತಿ ನಿಧನರಾದ ನಂತರ, ಅವರು ತಮ್ಮ ಪಕ್ಕದ ಮನೆಯ ವ್ಯಕ್ತಿಯೊಡನೆ ವಿವಾಹವಾಗಿದ್ದರು. ಮದುವೆಯ ನಂತರ ಇಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಮತ್ತು ಅವರು ಪರಿಪೂರ್ಣ ದಂಪತಿಗಳಂತೆ ಒಟ್ಟಿಗೆ ವಾಸಿಸುತ್ತಿದ್ದರು. ಆದರೆ ಪ್ರತಿ ಮೂರು ವರ್ಷಗಳಿಗೊಮ್ಮೆ ಆ ಮಹಿಳೆ ವಿಚ್ಛೇದನ ನೀಡಿ ಅದೇ ವ್ಯಕ್ತಿಯನ್ನು ಮತ್ತೆ ವಿವಾಹವಾಗುತ್ತಿದ್ದರು. ಆದರೆ ಈ ರೀತಿ ಮದುವೆಯಾಗಿ ವಿಚ್ಛೇದನ ಪಡೆಯುತ್ತಿರುವುದಕ್ಕೆ ಸರ್ಕಾರದ ಯೋಜನೆಯೇ ಕಾರಣ. ಆಸ್ಟ್ರಿಯಾ ಕಾನೂನಿನ ಪ್ರಕಾರ ಒಬ್ಬ ಮಹಿಳೆ ವಿಧವೆಯಾದ ನಂತರ ಒಂಟಿಯಾಗಿ ಬದುಕಿದರೆ ಆಕೆಗೆ ಸರ್ಕಾರದಿಂದ 28,300 ಡಾಲರ್ (ಸುಮಾರು 24 ಲಕ್ಷ ರೂ.) ಭತ್ಯೆ ನೀಡುತ್ತದೆ. ಇದರ ಪ್ರಯೋಜನ ಪಡೆದು ಕಳ್ಳಾಟ ಆಡುತ್ತಿದ್ದ ಜೋಡಿ ಇದೀಗ ಪೊಲೀಸರ ಬಲೆಗೆ ಬಿದ್ದಿದೆ.
ಸಿಕ್ಕಿ ಬಿದ್ದಿದ್ದು ಹೇಗೆ?
ಪ್ರತಿ ಮೂರು ವರ್ಷಕ್ಕೊಮ್ಮೆ ವಿಚ್ಛೇದನ ನೀಡಿ ಮತ್ತೆ ಮದುವೆಯಾಗುತ್ತಿದ್ದ ಈ ಜೋಡಿ 2022ರ ಮೇಯಲ್ಲಿ 12ನೇ ಬಾರಿಗೆ ಡಿವೋರ್ಸ್ ಪಡೆದಿತ್ತು. ನಂತರ ಮಹಿಳೆ ಪಿಂಚಣಿ ವಿಮಾ ಸಂಸ್ಥೆಗೆ ಅರ್ಜಿ ಸಲ್ಲಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ನಂತರ ತನಿಖೆ ನಡೆಸಿದ ಪೊಲೀಸರಿಗೆ ಶಾಕ್ ಕಾದಿತ್ತು, ವಿಚ್ಛೇದನದ ನಂತರವೂ ದಂಪತಿ ಒಟ್ಟಿಗೆ ವಾಸ ಮಾಡುತ್ತಿದ್ದರು ಎಂದು ನೆರೆಹೊರೆಯವರು ಹೇಳಿದ್ದಾರೆ. ಆಕೆಯ ಪತಿ ಟ್ರಕ್ ಡ್ರೈವರ್ ಆಗಿದ್ದು ಆಗಾಗ ಮನೆಗೆ ಬರುತ್ತಿದ್ದ ಎಂದು ಅವರು ಹೇಳಿಕೆ ನೀಡಿದ್ದಾರೆ. ಇದೀಗ ದಂಪತಿ ವಂಚನೆ ಪ್ರಕರಣ ಎದುರಿಸುತ್ತಿದ್ದು, ಅವರ ಮೇಲೆ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ.
ಪ್ರತ್ಯೇಕ ಪ್ರಕರಣದಲ್ಲಿ ಗಂಡ ತನಗಿಂತ ಮನೆಯಲ್ಲಿ ಸಾಕಿದ ಬೆಕ್ಕನ್ನೇ ಹೆಚ್ಚು ಇಷ್ಟ ಪಡ್ತಾನೆ. ಅದರೆ ಬಗ್ಗೆಯೇ ಹೆಚ್ಚು ಕಾಳಜಿ ವಹಿಸ್ತಾನೆ ಎಂದು ಪತ್ನಿ ಡಿವೋರ್ಸ್‌ಗಾಗಿ ಹೈಕೋರ್ಟ್ ಮೆಟ್ಟಿಲೇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೌದು, ಬೆಂಗಳೂರಿನ ಮಹಿಳೆ ಗಂಡ ತನಗಿಂತ ಮನೆಯಲ್ಲಿರುವ ಸಾಕು ಬೆಕ್ಕನ್ನೇ ಹೆಚ್ಚು ಪ್ರೀತಿಸ್ತಾನೆ. ಯಾವಾಗ ನೋಡಿದ್ರೂ ಆ ಬೆಕ್ಕಿನ ಬಗ್ಗೆಯೇ ಹೆಚ್ಚು ಕಾಳಜಿ ವಹಿಸುತ್ತಾನೆ ಎಂದು ಪತಿ ಹಾಗೂ ಅತ್ತೆ ಮಾವನ ವಿರುದ್ಧ ಐಪಿಸಿ ಸೆಕ್ಷನ್ 498 A ಅಡಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದು, ಇದೀಗ ಕರ್ನಾಟಕ ಹೈಕೋರ್ಟ್ ಆ ಮಹಿಳೆ ಪತಿ ವಿರುದ್ಧ ದಾಖಲಿಸಿದ್ದ ದೌರ್ಜನ್ಯ ಆರೋಪದ ಪ್ರಕರಣದ ತನಿಖೆಗೆ ಮಧ್ಯಂತರ ತಡೆ ನೀಡಿದೆ.
ಇದೊಂದು ಕ್ಷುಲ್ಲಕ ಪ್ರಕರಣವಾಗಿದ್ದು, ಇಂತಹ ಪ್ರಕರಣಗಳು ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ಅಡ್ಡಿಯುಂಟು ಮಾಡುತ್ತಿವೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ ಪ್ರಕರಣದ ತನಿಖೆಗೆ ಮಧ್ಯಂತರ ತಡೆ ನೀಡಿ ಆದೇಶಿಸಿದೆ.
ಈ ಸುದ್ದಿಯನ್ನೂ ಓದಿ : Viral News: ಇದು ನಿಜವಾಗ್ಲೂ ಶಾಕಿಂಗ್ ಸುದ್ದಿ! ಭವಿಷ್ಯದಲ್ಲಿ ದ.ಕೊರಿಯಾ ಭೂಪಟದಿಂದಲೇ ಮಾಯವಾಗಬಹುದಂತೆ – ಇಲ್ಲಿದೆ ಕಾರಣ