ಬೀಜಿಂಗ್: ಸರಿ ಸುಮಾರು 26 ವರ್ಷಗಳ ಹಿಂದೆ ಅಪಹರಣವಾಗಿದ್ದ(Kidnapped) ಚೀನಾ ದೇಶದ ಯುವಕನೊಬ್ಬ ಇದೀಗ ತನ್ನ ಪೋಷಕರಿಗೆ ಸಿಕ್ಕಿದ್ದು, ಕಾನೂನಿನ ಪ್ರಕಾರ ತನಗೆ ಸೇರಬೇಕಾದ ಕೋಟ್ಯಂತರ ರುಪಾಯಿ ಆಸ್ತಿ ಮತ್ತು ಅಂತಸ್ತನ್ನು ನಿರಾಕರಿಸಿದ್ದಾನೆ ಎಂದು ತಿಳಿದು ಬಂದಿದೆ. (Viral News) ಹಣ, ಶ್ರೀಮಂತಿಕೆ ಮತ್ತು ಆಡಂಬರದ ಬದುಕಿಗೆ ಹಾತೊರೆಯುವ ಜನಗಳ ಮಧ್ಯೆ ಇಲ್ಲೊಬ್ಬ ಯುವಕ ತನಗೆ ಸೇರಬೇಕಾದ ದುಬಾರಿ ಆಸ್ತಿಯನ್ನು ನಿರಾಕರಿಸಿ ಸಾಧಾರಣವಾಗಿ ಬದುಕಲು ನಿರ್ಧರಿಸಿದ್ದಾನೆ. ಹಲವರಿಗೆ ಇದು ಸಿನಿಮಾವೊಂದರ ಕಾಲ್ಪನಿಕ ಕತೆ ಅನ್ನಿಸಬಹುದು. ನಂಬಲು ಸಾಧ್ಯವಾಗದೆ ಇರಬಹುದು. ಆದರೆ ಇದು ಚೀನಾ ದೇಶದಲ್ಲಿ ನಡೆದಿರುವ ಸತ್ಯ ಘಟನೆ.(Chinese Millionaire)
ವರದಿಯೊಂದರ ಪ್ರಕಾರ, 26 ವರ್ಷದ ಶಿ ಕ್ವಿನ್‌ಶುವಾಯ್(Shi Qinshuai) ಎಂಬ ಯುವಕ ತಾನು ಮೂರು ತಿಂಗಳ ಮಗುವಾಗಿದ್ದಾಗ ಅಪಹರಣಕ್ಕೊಳಗಾಗಿದ್ದನು. ಮಗನನ್ನು ಕಳೆದುಕೊಂಡ ದುಃಖದಲ್ಲಿ ಅವನ ತಂದೆ-ತಾಯಿ ಸಾಕಷ್ಟು ವರ್ಷಗಳು ಅವನನ್ನು ಹುಡುಕಿದರು. ಮಗನನ್ನು ಪತ್ತೆ ಮಾಡಲು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿದ್ದರು. ಸಾಕಷ್ಟು ನೋವು ಅನುಭವಿಸಿದ್ದ ಪೋಷಕರು ಕೊನೆಗೆ ತಮ್ಮ ಮಗನನ್ನು ಪತ್ತೆ ಮಾಡುವ ಪ್ರಯತ್ನದಲ್ಲಿ ಗೆದ್ದಿದ್ದಾರೆ. 26 ವರ್ಷಗಳ ಸುದೀರ್ಘ ಹುಡುಕಾಟದ ನಂತರ ಡಿಸೆಂಬರ್ 1 ರಂದು ಕ್ವಿನ್‌ಶುವಾಯ್ ಸಿಕ್ಕಿದ್ದಾನೆ.
ಅನಾಥನಾಗಿದ್ದವನು ಈಗ ಕೋಟ್ಯಂತರ ರೂಪಾಯಿ ಆಸ್ತಿಯ ಒಡೆಯ
ಶ್ರೀಮಂತರ ಮನೆಯಲ್ಲಿ ಜನಿಸಿದ್ದ ಶಿ ಕ್ವಿನ್‌ಶುವಾಯ್ ಮೂರು ತಿಂಗಳ ಮಗುವಿದ್ದಾಗ ಅಪಹರಣವಾಗಿದ್ದನು. ತಂದೆ-ತಾಯಿಯ ಪ್ರೀತಿ ಮತ್ತು ವಾತ್ಸಲ್ಯದಿಂದ ವಂಚಿತನಾದನು. ಬಾಯಲ್ಲಿ ಬೆಳ್ಳಿ ಚಮಚ ಇಟ್ಟುಕೊಂಡು ಬೆಳೆಯಬೇಕಿದ್ದವನು ಅನಾಥನಾಗಿ ಬೀದಿ ಬೀದಿ ಅಲೆದನು. ಮಗನನ್ನು ಕಳೆದುಕೊಂಡ ದುಃಖದಲ್ಲಿ ಪೋಷಕರು ಅವನನ್ನು ಸಾಕಷ್ಟು ಹುಡುಕಿದರು. ತನ್ನ ಕುಟುಂಬದ ಮೂಲದ ಬಗ್ಗೆ ಕ್ವಿನ್‌ಶುವಾಯ್‌ಗೆ ಏನೇನೂ ತಿಳಿದಿರಲಿಲ್ಲ. ತನ್ನ ಪಾಡಿಗೆ ತಾನು ಬದುಕನ್ನು ಕಟ್ಟಿಕೊಂಡ. ಸಾಮಾನ್ಯರಂತೆ ಜೀವನ ಸಾಗಿಸುತ್ತಾ ಬಂದ. ಮಗನ ಮೇಲಿನ ಅತೀವ ಆಸೆಯಿಂದ ಪೋಷಕರು 26 ವರ್ಷಗಳ ನಂತರ ಅವನನ್ನು ಪತ್ತೆ ಮಾಡಿದರು. ಮಗ ಸಿಕ್ಕ ಖುಷಿಗೆ ಸಂಭ್ರಮಪಟ್ಟರು.
ತನ್ನ ಕುಟುಂಬದ ಮೂಲ ತಿಳಿದು ಯುವಕ ಒಂದು ಕ್ಷಣ ದಂಗಾದ. ಮರಳಿ ಬಂದ ಮಗನಿಗಾಗಿ ಪೋಷಕರು ಸಂತೋಷ ಕೂಟವನ್ನು ಏರ್ಪಡಿಸಿದರು. ಮಗನಿಗೆ ಸೇರಬೇಕಾದ ಫ್ಲಾಟ್‌ಗಳ ಕೀ, ಐಷಾರಾಮಿ ಕಾರು ಮತ್ತು ಅದ್ದೂರಿ ಉಡುಗೊರೆಗಳನ್ನು ನೀಡಲು ಪೋಷಕರು ಮುಂದಾದರು. ಆದರೆ ಶಿ ಕ್ವಿನ್‌ಶುವಾಯ್ ಎಲ್ಲವನ್ನು ನಿರಾಕರಿಸಿದ್ದಾನೆ. ಆಡಂಬರದ ಬದುಕಿನ ಬದಲು ಸರಳತೆಯ ಬದುಕನ್ನು ಆರಿಸಿಕೊಂಡಿದ್ದಾನೆ. ಪೋಷಕರು ಎಷ್ಟೇ ವಿನಂತಿಸಿದರೂ ಯುವಕ ಸುತಾರಾಂ ಒಪ್ಪಿಲ್ಲ.ಕಡೆಗೆ ತಾನು ಮತ್ತು ತನ್ನ ಪತ್ನಿ ವಾಸಿಸಲು ಒಂದು ಫ್ಲಾಟ್ ಅನ್ನು ತೆಗೆದುಕೊಂಡಿದ್ದಾನೆ. ಯುವಕನ ನಡೆ ಹಲವರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. “ಆಸ್ತಿ-ಹಣಕ್ಕಾಗಿ ಕುಟುಂಬದ ಮೌಲ್ಯವನ್ನು ಹಾಳು ಮಾಡಲು ನನಗೆ ಇಷ್ಟವಿಲ್ಲ” ಎಂದಿದ್ದಾನೆ.
ಈ ಕುರಿತಾದ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ನೆಟ್ಟಿಗರು ಯುವಕನನ್ನು ಭೇಷ್ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ:Vikrant Massey: ನಟನೆಯಿಂದ ಬ್ರೇಕ್… ದಿಢೀರ್ ನಿರ್ಧಾರಕ್ಕೆ ಕಾರಣ ಬಿಚ್ಚಿಟ್ಟ ನಟ ವಿಕ್ರಾಂತ್ ಮಾಸ್ಸೆ