Sunday, 15th December 2024

Viral News: ಈ ಪ್ರಾಣಿಗಳೂ ಮನುಷ್ಯರಂತೆಯೇ ಹೆಸರಿಡುತ್ತವೆ!

marmoset monkey viral news

ವಾಷಿಂಗ್ಟನ್: ಮನುಷ್ಯರು (Human) ಮಾತ್ರ ತಮ್ಮ ಮಕ್ಕಳಿಗೆ, ಇತರರಿಗೆ ಹೆಸರಿಡುವ ಜೀವಿಗಳು ಎಂದು ನೀವು ಅಂದುಕೊಂಡಿದ್ದರೆ, ಆ ಅನಿಸಿಕೆಯನ್ನು ನೀವು ತಿದ್ದಿಕೊಳ್ಳಬೇಕಾದೀತು! ಸಾಮಾಜಿಕ ಜೀವನ (Social Life) ಹೊಂದಿರುವ ಜೀವಿಗಳ ಹೆಚ್ಚು ಸುಧಾರಿತ ಅರಿವಿನ ಗುರುತು ಹೆಸರಿಡುವುದು. ಆದರೆ ಇದು ಇನ್ನೂ ಕೆಲವು ಪ್ರಾಣಿಗಳಲ್ಲಿ ಕಂಡುಬಂದಿದೆ! ಈ ಸಂಶೋಧನೆಯ (research) ಫಲಿತಾಂಶ ಈಗ ವೈರಲ್‌ (Viral News) ಆಗುತ್ತಿದೆ.

ಸೈನ್ಸ್‌ (Science) ಪತ್ರಿಕೆಯಲ್ಲಿ ಪ್ರಕಟವಾದ ಹೊಸ ಅಧ್ಯಯನ ಪ್ರಬಂಧದ ಪ್ರಕಾರ, ಮಾರ್ಮೊಸೆಟ್ ಕೋತಿಗಳು ಈಗ ಈ ವಿಶೇಷ ಗುಣ ಹೊಂದಿರುವ ಗುಂಪಿಗೆ ಸೇರಿಕೊಂಡಿವೆ. ಈ ಹಿಂದೆ ಬಾಟಲ್‌ನೋಸ್ ಡಾಲ್ಫಿನ್‌ಗಳು ಮತ್ತು ಆಫ್ರಿಕನ್ ಆನೆಗಳಲ್ಲಿ ಕೂಡ ಈ ಗುಣವನ್ನು ಗಮನಿಸಲಾಗಿತ್ತು. ಇದೀಗ ಜೆರುಸಲೆಮ್‌ನ ಹೀಬ್ರೂ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ತಂಡ ನಡೆಸಿದ ಸಂಶೋಧನೆಯಲ್ಲಿ ತೋರಿಸಿರುವಂತೆ, ಈ ಕೋತಿಗಳು ಪರಸ್ಪರ ಕರೆಯಲು ಗಾಯನದ ಮಾದರಿಯಲ್ಲಿ ಎತ್ತರದ ಸ್ವರದ ಕರೆಗಳನ್ನು ಬೇರೆ ಬೇರೆಯಾಗಿ ಬಳಸುತ್ತವೆ.

“ನಾವು ಸಾಮಾಜಿಕ ನಡವಳಿಕೆಯಲ್ಲಿ ಬಹಳ ಆಸಕ್ತಿ ಹೊಂದಿದ್ದೇವೆ. ಏಕೆಂದರೆ ಇತರ ಪ್ರಾಣಿಗಳಿಗೆ ಹೋಲಿಸಿದರೆ ಮಾನವರಲ್ಲಿ ಸುಧಾರಿತ ಸಾಮಾಜಿಕ ನಡವಳಿಕೆಯಿದೆ. ಇದು ಮೂಲಭೂತವಾಗಿ ನಮ್ಮನ್ನು ತುಂಬಾ ವಿಶೇಷವಾಗಿಸಿದೆ. ನಾವು ವೇಗವಾಗಿ ಓಡುವುದಿಲ್ಲ, ಹಾರುವುದಿಲ್ಲ. ನಾವು ಸಾಮಾಜಿಕವಾಗಿರುವುದರ ಹೊರತು ಬೇರೆ ಯಾವುದರಲ್ಲೂ ಮಿಂಚುವುದಿಲ್ಲ. ಸಮಾಜವಾಗಿ ನಮ್ಮ ಎಲ್ಲಾ ಸಾಧನೆಗಳು ನಮ್ಮ ಸಾಮಾಜಿಕ ಸಾಧನೆಗಳು. ಅವುಗಳಲ್ಲಿ ಭಾಷೆ ಒಂದು” ಎಂದು ಈ ಪ್ರಬಂಧಕಾರರಲ್ಲಿ ಒಬ್ಬರಾದ ಹಿರಿಯ ಲೇಖಕ ಡೇವಿಡ್ ಓಮರ್ ಹೇಳಿದ್ದಾರೆ.

ಮಾನವರಲ್ಲಿರುವ ಸಾಮಾಜಿಕ ನಡವಳಿಕೆ ಮತ್ತು ಭಾಷೆಯ ವಿಕಸನವನ್ನು ಅಧ್ಯಯನ ಮಾಡಲು ಮಾರ್ಮೊಸೆಟ್‌ ಕೋತಿಗಳು ಸೂಕ್ತ ಮಾದರಿಗಳಾಗಿವೆ ಎಂದು ಅವರು ಹೇಳಿದ್ದಾರೆ. ಏಕೆಂದರೆ ಅವುಗಳು ಸಹ ಮಾನವರಂತೆ ಅದೇ ರೀತಿಯ ಲಕ್ಷಣಗಳನ್ನು ಪ್ರದರ್ಶಿಸುತ್ತವೆ. ಅವು ಕೂಡ ಆರರಿಂದ ಎಂಟು ವ್ಯಕ್ತಿಗಳ ಕುಟುಂಬಗಳಾಗಿ, ಏಕಪತ್ನಿ ಕುಟುಂಬ ಗುಂಪುಗಳಲ್ಲಿ ವಾಸಿಸುತ್ತವೆ ಮತ್ತು ತಮ್ಮ ಮರಿಗಳನ್ನು ಸಹಕಾರಪೂರ್ವಕ ಬೆಳೆಸುತ್ತವೆ.

ಸಂಶೋಧಕರು ಜೋಡಿ ಮಾರ್ಮೊಸೆಟ್‌ಗಳ ನಡುವಿನ ನೈಸರ್ಗಿಕ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿದ್ದಾರೆ. ಜೊತೆಗೆ ಕೋತಿಗಳು ಮತ್ತು ಮೊದಲೇ ರೆಕಾರ್ಡ್ ಮಾಡಿದ ಕರೆಗಳನ್ನು ಪ್ಲೇ ಮಾಡುವ ಕಂಪ್ಯೂಟರ್ ಸಿಸ್ಟಮ್ ನಡುವಿನ ಪರಸ್ಪರ ಕರೆಯಗಳನ್ನು ದಾಖಲಿಸಿದ್ದಾರೆ. ಮಾರ್ಮೊಸೆಟ್‌ಗಳು ಅತಿ ಹೆಚ್ಚು ಧ್ವನಿತರಂಗ ಹೊಂದಿರುವ ಧ್ವನಿಗಳನ್ನು ಜೋರಾಗಿ, ಪರಸ್ಪರ ಸಂಬೋಧಿಸಲು ಬಳಸುತ್ತವೆ. ಕೋತಿಗಳು ಅಂತಹ ನಿರ್ದಿಷ್ಟ ಕರೆಗಳನ್ನು ಗುರುತಿಸಬಲ್ಲವು ಮತ್ತು ತಮ್ಮ ಹೆಸರಿನಿಂದ ಸಂಬೋಧಿಸಿದಾಗ ಪ್ರತಿಕ್ರಿಯಿಸುವ ಸಾಧ್ಯತೆ ಹೆಚ್ಚು ಎಂದು ಸಂಶೋಧಕರು ಕಂಡುಕೊಂಡರು.

ಅವರು ಪರೀಕ್ಷಿಸಿದ ಹತ್ತು ಮಾರ್ಮೊಸೆಟ್‌ಗಳು ಮೂರು ಪ್ರತ್ಯೇಕ ಕುಟುಂಬಗಳಿಂದ ಬಂದವು. ಕುಟುಂಬದ ಗುಂಪಿನಲ್ಲಿರುವ ಸದಸ್ಯರು ವಿಭಿನ್ನ ಹೆಸರುಗಳನ್ನು ಕರೆಯಲು ಒಂದೇ ರೀತಿಯ ಧ್ವನಿ ವೈಶಿಷ್ಟ್ಯಗಳನ್ನು ಬಳಸಿದ್ದಾರೆ ಎಂದು ಸಂಶೋಧನೆ ಬಹಿರಂಗಪಡಿಸಿತು. ಇದು ಮಾನವರಲ್ಲಿನ ಉಪಭಾಷೆಗಳು ಅಥವಾ ಉಚ್ಚಾರಣೆಗಳಿಗೆ ಹೋಲುತ್ತದೆ. ರಕ್ತ ಸಂಬಂಧವಿಲ್ಲದ ವಯಸ್ಕ ಮರ್ಮೋಸೆಟ್‌ಗಳೂ ಗುಂಪಿನಲ್ಲಿರುವ ಇತರರಿಂದ ಇದನ್ನು ಕಲಿತಿವೆ.

ಮಾರ್ಮೊಸೆಟ್‌ಗಳು ಮಾನವರ ದೂರದ ಸಂಬಂಧಿಗಳು. ಮಾರ್ಮೊಸೆಟ್‌ಗಳು ಹಾಗೂ ಮಾನವರ ಸಾಮಾನ್ಯ ಪೂರ್ವಜರು 35 ಮಿಲಿಯನ್ ವರ್ಷಗಳ ಹಿಂದಿನವರು. ನಮ್ಮ ಮತ್ತು ಚಿಂಪಾಂಜಿಗಳ ನಡುವಿನ ಕವಲು 5-7 ದಶಲಕ್ಷ ವರ್ಷಗಳ ಹಿಂದೆ ಸಂಭವಿಸಿರಬಹುದು.

ಆನುವಂಶಿಕ ಸಾಮೀಪ್ಯಕ್ಕಿಂತ ಹೆಚ್ಚಾಗಿ, ಪರಿಸರ ಸವಾಲುಗಳಿಗೆ ಪ್ರತಿಕ್ರಿಯೆಯಾಗಿ ಈ ಗುಣವನ್ನು ಕೋತಿಗಳು ಅಳವಡಿಸಿಕೊಂಡಿರಬಹುದು ಎಂದು ಹೇಳುತ್ತಾರೆ. ಮಾರ್ಮೊಸೆಟ್‌ಗಳು ಸಾಮಾನ್ಯವಾಗಿ ದಕ್ಷಿಣ ಅಮೆರಿಕಾದ ದಟ್ಟವಾದ ಮಳೆಕಾಡುಗಳಲ್ಲಿ ಕಂಡುಬರುತ್ತವೆ. ಇಲ್ಲಿ ಸಾಮಾಜಿಕ ಬಂಧಗಳು ಮತ್ತು ಗುಂಪು ಒಗ್ಗಟ್ಟನ್ನು ಕಾಪಾಡಿಕೊಳ್ಳಲು ಈ ಕರೆಯುವಿಕೆ ಇವುಗಳಿಗೆ ನಿರ್ಣಾಯಕವಾಗಿದೆ.

ಮಾನವರು ಮೊದಲು ಹೇಗೆ ಮತ್ತು ಯಾವಾಗ ಮಾತನಾಡಲು ಪ್ರಾರಂಭಿಸಿದರು ಎಂಬುದು ಚರ್ಚೆಯ ವಿಷಯ. ಇತ್ತೀಚಿನವರೆಗೂ ಅನೇಕ ವಿಜ್ಞಾನಿಗಳು ಇದರ ಕುರಿತ ಸುಳಿವುಗಳಿಗಾಗಿ ನಾವು ಇತರ ವಾನರಗಳನ್ನು ಗಮನಿಸಬಹುದು ಎಂದು ಒಪ್ಪಿರಲಿಲ್ಲ. ಇತ್ತೀಚಿನ ಸಂಶೋಧನೆ ಆ ಅಭಿಪ್ರಾಯವನ್ನು ಅಲುಗಿಸುವಂತಿದೆ.