ವಾಷಿಂಗ್ಟನ್: ತಮ್ಮ ಮಗು ಕೋಣೆಯೊಂದರಲ್ಲಿ ವಿಡಿಯೋ ಗೇಮ್ ಆಡುವುದರಲ್ಲಿ ಬ್ಯುಸಿ ಇದ್ದಾಗಲೇ ದಂಪತಿ ಕಿತ್ತಾಡಿಕೊಂಡು, ಪರಸ್ಪರ ಬಡಿದಾಡುಕೊಂಡು ದಾರುಣವಾಗಿ ಸಾವನ್ನಪ್ಪಿರುವ ಘಟನೆ (US Couple Violent Fight) ಕಳೆದ ವಾರ ಅಮೆರಿಕಾದ (United States) ವಾಷಿಂಗ್ಟನ್ ನಲ್ಲಿ (Washington State) ನಡೆದಿದೆ. ಅಡುಗೆಮನೆಯಲ್ಲಿ ತನ್ನ ತಂದೆ ತಾಯಿ ಭೀಕರವಾಗಿ ಕಿತ್ತಾಡುತ್ತಿದ್ದರೂ, ಇಯರ್ ಬಡ್ಸ್ ಹಾಕಿಕೊಂಡು ವಿಡಿಯೋ ಗೇಮ್ (Video Game) ಆಡುವುದರಲ್ಲಿ ತಲ್ಲೀನನಾಗಿದ್ದ ಬಾಲಕನಿಗೆ ಇದ್ಯಾವುದರ ಪರಿವೆಯೇ ಇರಲಿಲ್ಲ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ(Viral News).
ಅಕ್ಟೋಬರ್ 31ರಂದು ವಾಷಿಂಗ್ಟನ್ ನ ಲಾಂಗ್ ವ್ಯೂ (Longview) ಎಂಬಲ್ಲಿ ಈ ದುರ್ಘಟನೆ ನಡೆದಿದ್ದು, ಇದು ಓರಿಗಾನ್ ನ (Oregon) ಪೋರ್ಟ್ ಲ್ಯಾಂಡ್ ನಿಂದ (Portland) 50 ಮೈಲುಗಳಷ್ಟು ದೂರದಲ್ಲಿದೆ. ಇಬ್ಬರಲ್ಲಿ ಮೊದಲಿಗೆ ಯಾರು ಜಗಳ ಪ್ರಾರಂಭಿಸಿ ದಾಳಿ ನಡೆಸಿದ್ದಾರೆಂಬುದನ್ನು ಪತ್ತೆಹಚ್ಚುವುದಕ್ಕೆ ಸಾಧ್ಯವಾಗಿಲ್ಲ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ತಿಳಿಸಿದ್ದಾರೆ.
ದಂಪತಿಯನ್ನು, 38 ವರ್ಷದ ಜುವಾನೋ ಆಂಡಾನಿಯೋ ಸಾನ್ಜೆ ಮತ್ತು 39 ವರ್ಷದ ಸೆಸಿಲಿಯಾ ರೊಬೆಲ್ಸ್ ಓಖಾ ಎಂದು ಗುರುತಿಸಲಾಗಿದೆ. ಯಾವುದೋ ಕಾರಣಕ್ಕೆ ಇವರಿಬ್ಬರಲ್ಲಿ ಗಲಾಟೆ ಶುರುವಾಗಿದೆ. ಮಾತಿಗೆ ಮಾರು ಬೆಳೆದು ಇಬ್ಬರು ಜೋರಾಗಿ ಕಿರುಚಾಟ ನಡೆಸಿದ್ದರು. ಕೊನೆಗೆ ಕೋಪ ವಿಕೋಪಕ್ಕೆ ತಿರುಗಿದ್ದು, ಇಬ್ಬರೂ ಚಾಕುವಿನಿಂದ ಪರಸ್ಪರ ಇರಿದುಕೊಂಡಿದ್ದಾರೆ. ಸಾಲದೆನ್ನುವಂತೆ ಪಿಸ್ತೂಲ್ನಿಂದ ಶೂಟ್ ಮಾಡಿಕೊಂಡಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ತೀವ್ರ ರಕ್ತಸ್ರಾವದಿಂದಾಗಿ ಇಬ್ಬರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊನೆಯಿಸಿರೆಳೆದಿದ್ದಾರೆ.
ಪರಸ್ಪರ ಕಿತ್ತಾಡಿಕೊಂಡು ಗಂಭೀರವಾಗಿ ಗಾಯಗೊಂಡು ಬಿದ್ದಿದ್ದ ತನ್ನ ಹೆತ್ತವರನ್ನು ನೋಡಿದ ಬಾಲಕ ಕೂಡಲೇ 911ಗೆ ಕರೆ ಮಾಡಿದ್ದಾನೆ. ತಕ್ಷಣವೇ ತುರ್ತು ಪಡೆಯ ರಕ್ಷಣಾ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದರೂ ದಂಪತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಘಟನೆ ನಡೆಯುವ ಸಂದರ್ಭದಲ್ಲಿ ಮನೆಯಲ್ಲಿ ದಂಪತಿ ಮತ್ತು ಅವರ ಮಗ ಮಾತ್ರ ಇದ್ದುದಾಗಿ ಅಧಿಕಾರಿಗಳು ಖಚಿತಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: Aryan to Anaya: ಲಿಂಗ ಪರಿವರ್ತನೆ ಮಾಡಿಕೊಂಡ ಟೀಮ್ ಇಂಡಿಯಾ ಕ್ರಿಕೆಟಿಗನ ಪುತ್ರ
ಅಲ್ವಾರ್ಡೋ ಮತ್ತು ರೊಬೆಲ್ಸ್ ನಡುವಿನ ದಾಂಪತ್ಯದಲ್ಲಿ ಕೆಲವು ಸಮಯಗಳಿಂದ ಗಂಭೀರ ಸಮಸ್ಯೆಗಳಿದ್ದವು ಮತ್ತು ಅವರು ವಿಚ್ಛೇದನ ಪಡೆದುಕೊಳ್ಳಲೂ ಸಹ ತೀರ್ಮಾನಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳದಲ್ಲಿ ಒಂದು ಚೂರಿ ಮತ್ತು ಒಂದು ಗನ್ ದೊರೆತಿದು. ಈ ಗನ್ ಅಲ್ವಾರ್ಡೋ ಕೆಲಸ ಮಾಡುತ್ತಿದ್ದ ಕಂಪೆನಿಯ ಮಾಲಕನದ್ದಾಗಿದ್ದು, ತನ್ನ ಗನ್ ಕಳವಾಗಿರುವ ಕುರಿತು ಆ ವ್ಯಕ್ತಿ ದೂರನ್ನೂ ಸಹ ಕೊಟ್ಟಿರಲಿಲ್ಲ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.
ಒಟ್ಟಿನಲ್ಲಿ ದಾಂಪತ್ಯದಲ್ಲಿನ ಬಿರುಕು ಮತ್ತು ಸಂಬಂಧಗಳಲ್ಲಿನ ಸಂಶಯ ಮನೋಭಾವ, ಪತಿ-ಪತ್ನಿ ಕಚ್ಚಾಡಿಕೊಳ್ಳುವಂತೆ ಮಾಡಿ ಕೊನೆಯಲ್ಲಿ ಅವರಿಬ್ಬರ ಪ್ರಾಣಕ್ಕೆ ಎರವಾಗಿದ್ದು ಮಾತ್ರವಲ್ಲದೇ ಅವರ ಮಗು ಅನಾಥವಾಗುವಂತೆ ಮಾಡಿರುವುದು ದುರಂತವೇ ಸರಿ!