Sunday, 6th October 2024

Viral Video: ಇರಾನ್‌ ಕ್ಷಿಪಣಿ ದಾಳಿಗೆ ಡೋಂಟ್‌ ಕೇರ್‌; ಬಂಕರ್‌ನಲ್ಲಿ ನವ ದಂಪತಿಯ ಡ್ಯಾನ್ಸ್‌!

Viral Video

ಇಸ್ರೇಲ್ (Israel) ಮೇಲೆ ಮಂಗಳವಾರ ರಾತ್ರಿ ಇರಾನ್ (Iran) ಕ್ಷಿಪಣಿ ದಾಳಿ (ballistic missile attack) ನಡೆಸುತ್ತಿದ್ದಾಗ ಇಸ್ರೇಲ್ ರಾಜಧಾನಿ ಜೆರುಸಲೆಮ್‌ನಲ್ಲಿ (Jerusalem) ನವವಿವಾಹಿತ ದಂಪತಿ ಭೂಗತ ಬಂಕರ್‌ನಲ್ಲಿ (underground bunker) ನೃತ್ಯ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

ಇರಾನ್ ಸುಮಾರು 200 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಮಂಗಳವಾರ ರಾತ್ರಿ ಇಸ್ರೇಲ್‌ ಮೇಲೆ ಉಡಾಯಿಸಿತ್ತು. ಇದರ ನಡುವೆ ಜೆರುಸಲೆಮ್‌ನ ಭೂಗತ ಬಂಕರ್‌ನಲ್ಲಿ ನವವಿವಾಹಿತ ದಂಪತಿ ತಮ್ಮ ಮೊದಲ ನೃತ್ಯವನ್ನು ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮ ವೇದಿಕೆಯಾದ ಎಕ್ಸ್‌ನಲ್ಲಿ ವೈರಲ್ ಆಗಿತ್ತು.

ಅಮೆರಿಕದ ಕೊಲೊರಾಡೋದಿಂದ ಜೆರುಸಲೇಮ್‌ಗೆ ಬಂದಿದ್ದ ಕ್ರಿಸ್ಟಿರೇ ಮತ್ತು ಶಾನ್ ಗಿಬ್ಸನ್ ಅವರ ಮದುವೆ ಸಮಾರಂಭ ಹೊಟೇಲ್‌ನಲ್ಲಿ ಆಯೋಜಿಸಲಾಗಿತ್ತು. ಈ ನಡುವೆ ಅವರು ಭೂಗತ ಬಂಕರ್‌ಗೆ ಸ್ಥಳಾಂತರಿಸಲ್ಪಟ್ಟರು. ನವ ದಂಪತಿ ಇಂತಹ ಸಂದರ್ಭದ ನಿರೀಕ್ಷೆ ಮಾಡಿರಲಿಲ್ಲ. ತಮ್ಮ ಪ್ರೀತಿ ಮತ್ತು ಪರಸ್ಪರ ವಿಶ್ವಾಸವನ್ನು ವಿಶೇಷವಾಗಿ ಆಚರಿಸಲು ಕ್ರಿಶ್ಚಿಯನ್ನರ ಪವಿತ್ರ ನಗರವಾದ ಜೆರುಸಲೆಮ್ ಅನ್ನು ಅವರು ಆಯ್ಕೆ ಮಾಡಿಕೊಂಡಿದ್ದರು. ಅತಿಥಿಗಳಾಗಿ ಬಂದ ಅವರು ಅಲ್ಲಿ ರಕ್ಷಣಾ ಸಿಬ್ಬಂದಿಯ ಕೈಯಲ್ಲಿ ಸಿಕ್ಕಿಕೊಂಡರು.

ವರ್ಷದ ಹಿಂದೆಯೇ ಇಲ್ಲಿಗೆ ಬರಲು ಬಯಸಿದ್ದೆವು. ಆದರೆ ಸಾಧ್ಯವಾಗಲಿಲ್ಲ. ಕ್ಷಿಪಣಿಗಳ ಶಬ್ದಗಳು ನಮ್ಮ ಮೇಲೆ ಪ್ರತಿಧ್ವನಿಸಿದವು. ಇದು ಮರೆಯಲಾಗದ ಕ್ಷಣ ಎಂದು ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಬಂಕರ್‌ನಲ್ಲಿ ಮದುವೆಯ ಉಡುಪು ಧರಿಸಿದ್ದ ದಂಪತಿ ನಿಧಾನವಾಗಿ ನೃತ್ಯ ಮಾಡುವುದನ್ನು ಸೆರೆ ಹಿಡಿಯಲಾಗಿದೆ. ಇದರ ವಿಡಿಯೋ ಕ್ಷಣ ಮಾತ್ರದಲ್ಲಿ ವೈರಲ್ ಆಗಿದೆ. ಇದನ್ನು ಸುಮಾರು 2.1 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ.

ಎಕ್ಸ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋವನ್ನು ಲೇಖಕರಾದ ಸೌಲ್ ಸಡ್ಕಾ ಅವರು ಹೃದಯದ ಎಮೋಜಿಯ ಜೊತೆಗೆ ಜೆರುಸಲೆಮ್‌ನಲ್ಲಿ ನಡೆದ ಮದುವೆ ಸಂತೋಷವನ್ನು ಇರಾನ್‌ನಿಂದ ಒಂದು ಕ್ಷಣವೂ ನಿಲ್ಲಿಸಲು ಸಾಧ್ಯವಾಗಲಿಲ್ಲ ಎಂದು ಬರೆದಿದ್ದಾರೆ.

ಅನೇಕ ಬಳಕೆದಾರರು ದಂಪತಿಗಳಿಗೆ ತಮ್ಮ ಶುಭಾಶಯಗಳನ್ನು ಹೇಳಿದ್ದಾರೆ. ಸಂಘರ್ಷದ ನಡುವೆ ನೃತ್ಯವನ್ನು ಮುಂದುವರಿಸಿದ್ದಕ್ಕಾಗಿ ಅವರನ್ನು ಶ್ಲಾಘಿಸಿದರು. ಇರಾನ್‌ನಿಂದ ಮಂಗಳವಾರ ನಡೆದ ದಾಳಿಯಲ್ಲಿ ಯಾವುದೇ ಹಾನಿಯಾಗಿಲ್ಲ ಎಂದು ಇಸ್ರೇಲ್ ಮಿಲಿಟರಿ ಬುಧವಾರ ಹೇಳಿದೆ. ನಗರದ ಗವರ್ನರ್ ಹುಸೇನ್ ಹಮಾಯೆಲ್ ಪ್ರಕಾರ, ಆಕ್ರಮಿತ ಪಶ್ಚಿಮ ದಂಡೆಯಲ್ಲಿ ರಾಕೆಟ್‌ನ ಅವಶೇಷಗಳು ಬಿದ್ದಿದೆ. ಜೆರಿಕೊದಲ್ಲಿ ಒಬ್ಬ ಪ್ಯಾಲೆಸ್ಟೀನಿಯನ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇರಾನ್ ದೊಡ್ಡ ತಪ್ಪು ಮಾಡಿದೆ ಮತ್ತು ಅದಕ್ಕೆ ತಕ್ಕ ಶಿಕ್ಷೆ ಪಡೆಯುತ್ತದೆ ಎಂದು ಹೇಳಿದ್ದು, ಯುನೈಟೆಡ್ ಸ್ಟೇಟ್ಸ್ ಕೂಡ ಇರಾನ್ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ. ಇರಾನ್‌ನ ಪರಮಾಣು ಸೌಲಭ್ಯಗಳನ್ನು ನಾಶಮಾಡಲು ಇಸ್ರೇಲ್‌ನ ಮಾಜಿ ಪ್ರಧಾನಿ ನಫ್ತಾಲಿ ಬೆನೆಟ್ ಅವರು ಈ ನಡುವೆ ಕರೆ ನೀಡಿದ್ದಾರೆ.

Iran Attacks Israel: ಅಬ್ಬಾ ಎಂಥಾ ದೃಶ್ಯ! ಇರಾನ್‌ ಕ್ಷಿಪಣಿ ದಾಳಿಯ ಭೀಕರತೆ ವಿಮಾನ ಪ್ರಯಾಣಿಕನ ಮೊಬೈಲ್‌ನಲ್ಲಿ ಸೆರೆ

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಇದಕ್ಕೆ ಪ್ರತಿಕ್ರಿಯಿಸಿದ್ದು, ಇಸ್ರೇಲ್‌ಗೆ ಬೆಂಬಲವಾಗಿ ಯಾವುದೇ ಮಿಲಿಟರಿ ಹಸ್ತಕ್ಷೇಪ ನಡೆಸಿದರೆ ಸಂಪೂರ್ಣ ನಾಶವಾಗುವಂತೆ ದಾಳಿ ನಡೆಸುವುದಾಗಿ ಬೆದರಿಕೆ ಒಡ್ಡಿದೆ.