ನಾವು ನೋಡಿರುವ ಹಾಗೆ ಸಾಮಾನ್ಯವಾಗಿ ಹೆದ್ದಾರಿಗಳಲ್ಲಿ ಟ್ರಾಫಿಕ್ ಜಾಮ್ ಆಗದಂತೆ ಟ್ರಾಫಿಕ್ ಸಿಗ್ನಲ್ಗಳನ್ನು ಅಳವಡಿಸಿರುತ್ತಾರೆ. ಆ ಟ್ರಾಫಿಕ್ ಸಿಗ್ನಲ್ನ ನಿಯಮದಂತೆ ವಾಹನಗಳು ರಸ್ತೆಯಲ್ಲಿ ಚಲಿಸಬೇಕಾಗುತ್ತದೆ. ಆದರೆ ಇಲ್ಲೊಂದು ಕಡೆ ಪಾದಚಾರಿಗಳು ನಡೆಯುವ ಕಿರಿದಾದ ರಸ್ತೆಯಲ್ಲಿ ಕೂಡ ಟ್ರಾಫಿಕ್ ಸಿಗ್ನಲ್ ಅಳವಡಿಸಿದ್ದಾರೆ. ಇದನ್ನು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಆದರೂ ಇದು ನಿಜ. ವಿಶ್ವದ ಕಿರಿದಾದ ರಸ್ತೆಗಳಲ್ಲಿ ಒಂದಾದ ಈ ರಸ್ತೆಯನ್ನು ಪ್ರದರ್ಶಿಸುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral video)ಆಗಿದೆ. ರಸ್ತೆಯ ಪ್ರವೇಶದ್ವಾರದಲ್ಲಿ ಟ್ರಾಫಿಕ್ ಸಿಗ್ನಲ್ ಇದೆ. ಈ ಸಿಗ್ನಲ್ ಅನ್ನು ಅದರಲ್ಲಿ ನಡೆಯುವ ಪಾದಚಾರಿಗಳು ಬಳಸುತ್ತಾರೆ.
ರೋಹಿತ್ ಸಿಂಗ್ ಎಂಬ ವ್ಯಕ್ತಿ ಈ ವಿಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. “ವಿಶ್ವದ ಅತ್ಯಂತ ಕಿರಿದಾದ ರಸ್ತೆ” ಎಂದು ಈ ಪೋಸ್ಟ್ಗೆ ಶೀರ್ಷಿಕೆ ನೀಡಿದ್ದಾರೆ. ವೈರಲ್ ವಿಡಿಯೊದಲ್ಲಿ , ಒಬ್ಬ ವ್ಯಕ್ತಿ ಆ ಕಿರಿದಾದ ರಸ್ತೆಯ ಪ್ರವೇಶದ್ವಾರದಲ್ಲಿ ನಿಂತಿರುವುದನ್ನು ಕಾಣಬಹುದು. ನಂತರ ಇನ್ನೊಂದು ಬದಿಯಲ್ಲಿ ಮಹಿಳೆ ನಿಂತಿದ್ದಾರೆ. ರಸ್ತೆಯ ಆರಂಭದಲ್ಲಿ ಟ್ರಾಫಿಕ್ ಸಿಗ್ನಲ್ ಇದೆ. ಅಂದರೆ ಈ ರಸ್ತೆಯನ್ನು ಪ್ರವೇಶಿಸುವ ಮೊದಲು ನೀವು ಸಿಗ್ನಲ್ ಅನ್ನು ಆನ್ ಮಾಡಬೇಕು. ಇದರಿಂದ ಬೇರೆ ಯಾರೂ ಇನ್ನೊಂದು ಬದಿಯಿಂದ ಬರುವುದಿಲ್ಲ. ಏಕೆಂದರೆ ಈ ಮಾರ್ಗ ತುಂಬಾ ಕಿರಿದಾಗಿದೆ. ಇಬ್ಬರು ಜನರು ವಿರುದ್ಧ ದಿಕ್ಕಿನಲ್ಲಿ ಒಟ್ಟಿಗೆ ಹಾದುಹೋಗಲು ಇಲ್ಲಿ ಸಾಧ್ಯವಿಲ್ಲ.
ಈ ರಸ್ತೆ ಜೆಕ್ ಗಣರಾಜ್ಯದ ಪ್ರಮುಖ ನಗರ ಪ್ರಾಗ್ನ ಅತ್ಯಂತ ಹಳೆಯ ಪ್ರದೇಶವಾದ ಮಾಲಾ ಸ್ಟ್ರಾನಾದಲ್ಲಿದೆ. ಈ ರಸ್ತೆಯ ಉದ್ದ 32 ಅಡಿ ಹಾಗೂ ಅಗಲವು ಕೇವಲ 19 ಇಂಚುಗಳು. ಪ್ರಯಾಣಿಕರು ರಸ್ತೆಯ ಮಧ್ಯದಲ್ಲಿ ಸಿಲುಕಿಕೊಳ್ಳದಂತೆ ನೋಡಿಕೊಳ್ಳಲು, ಪ್ರವೇಶದ್ವಾರದಲ್ಲಿ ಎರಡೂ ಬದಿಗಳಲ್ಲಿ ಎರಡು ಟ್ರಾಫಿಕ್ ಲೈಟ್ಗಳನ್ನು ಅಳವಡಿಸಲಾಗಿದೆ.
ಈ ಟ್ರಾಫಿಕ್ ಲೈಟ್ಗಳು ದಾರಿಯಲ್ಲಿ ಯಾರೋ ಬರುತ್ತಿದ್ದಾರೆ ಎಂದು ಸಿಗ್ನಲ್ ಮೂಲಕ ತಿಳಿಸುತ್ತವೆ. ಅದಕ್ಕಾಗಿ ಈ ರಸ್ತೆಯ ಮೂಲಕ ಹಾದುಹೋಗುವವರು ಅಲ್ಲಿರುವ ಬಟನ್ ಅನ್ನು ಒತ್ತಿ ಸಿಗ್ನಲ್ ಆನ್ ಮಾಡಬೇಕು ಮತ್ತು ಹಸಿರು ಸಿಗ್ನಲ್ ಇದ್ದಾಗ ಮಾತ್ರ ಹಾದುಹೋಗಬೇಕು. ಯಾರಾದರೂ ಸಿಗ್ನಲ್ ಅನ್ನು ಅನುಸರಿಸದಿದ್ದರೆ, ಅವರು ದಾರಿಯ ಮಧ್ಯದಲ್ಲಿ ಸಿಲುಕಿಕೊಳ್ಳುತ್ತಾರೆ. ಮತ್ತು ಹಿಂದಿರುಗುವುದು ಸಹ ಕಷ್ಟಕರವಾಗಿರುತ್ತದೆ. ಜನರ ಅನುಕೂಲಕ್ಕಾಗಿ ಈ ಸಿಗ್ನಲ್ ಅನ್ನು ಸ್ಥಾಪಿಸಲಾಗಿದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ:ಪತ್ನಿಯ ಸುರಕ್ಷತೆಗಾಗಿ ಮನೆಯಲ್ಲಿ ಹಿಡನ್ ಕ್ಯಾಮೆರಾ ಇಟ್ಟ ಪತಿ; ಕಂಡಿದ್ದು ನೋಡಬಾರದ ದೃಶ್ಯ!
ಈ ವೀಡಿಯೊ ವೈರಲ್ ಆಗುತ್ತಿದ್ದಂತೆ ಬಳಕೆದಾರರಿಂದ ಹಲವಾರು ಲೈಕ್ಗಳು ಮತ್ತು ಕಾಮೆಂಟ್ಗಳು ಬಂದಿವೆ. ಹೆಚ್ಚಿನ ಕಾಮೆಂಟ್ಗಳಲ್ಲಿ, ಜನರು ಭಾರತದ ರಸ್ತೆಗಳು ಇದಕ್ಕಿಂತ ಕಿರಿದಾಗಿದೆ ಎಂದು ತಮಾಷೆ ಮಾಡಿದ್ದಾರೆ.