Saturday, 23rd November 2024

ಉಕ್ರೇನ್ ತಟಸ್ಥ ನಿಲುವು: ಸಂಧಾನ ಸಭೆ ಯಶಸ್ವಿ !

ಕೀವ್: ರಷ್ಯಾ ಆಕ್ರಮಣಕ್ಕೆ ಬೆದರಿ ತಟಸ್ಥ ನಿಲುವು ತಾಳುವ ಮೂಲಕ ಉಕ್ರೇನ್, ನ್ಯಾಟೋ ಸದಸ್ಯತ್ವ ಪಡೆದುಕೊಳ್ಳುವ ತನ್ನ ಉದ್ದೇಶದಿಂದ ಹಿಂದೆ ಸರಿದಿದೆ.

ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆದ ಚರ್ಚೆಯ ನಂತರ ಉಕ್ರೇನ್ ರಾಜಧಾನಿ ಕೀವ್ ಮತ್ತು ಚೆರ್ನಿಹಿವ್ ಬಳಿ ಮಿಲಿಟರಿ ಚಟುವಟಿಕೆ ಯನ್ನು ಕಡಿಮೆ ಮಾಡುವುದಾಗಿ ಮಾಸ್ಕೋ ಹೇಳಿದೆ. ಆ ಮೂಲಕ ಮಂಗಳವಾರ ನಡೆದ ಸಂಧಾನ ಮಾತುಕತೆಯು ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ.

ಉಕ್ರೇನ್‌ನ ಕೀವ್ ಮತ್ತು ಚೆರ್ನಿಹಿವ್ ಸುತ್ತಮುತ್ತಲಿನ ಮಿಲಿಟರಿ ಚಟುವಟಿಕೆಯನ್ನು ತೀವ್ರವಾಗಿ ಕಡಿತಗೊಳಿಸಲು ರಷ್ಯಾ ನಿರ್ಧರಿಸಿದೆ ಎಂದು ಇಸ್ತಾನ್‌ಬುಲ್‌ನಲ್ಲಿ ರಷ್ಯಾ ಮತ್ತು ಉಕ್ರೇನಿಯನ್ ನಿಯೋಗಗಳ ನಡುವಿನ ಮಾತುಕತೆಯ ನಂತರ ರಕ್ಷಣಾ ಸಚಿವರು ಹೇಳಿ ದ್ದಾರೆ.

ರಷ್ಯಾದೊಂದಿಗಿನ ಸಂಧಾನ ಮಾತುಕತೆಗಳಲ್ಲಿ ಭದ್ರತಾ ಒಕ್ಕೂಟವನ್ನು ಸೇರುವುದರ ಬದಲಿಗೆ ತಟಸ್ಥ ನಿಲುವು ತಾಳುವುದಾಗಿ ಕೀವ್ ನಿಯೋಗವು ಪ್ರಸ್ತಾಪಿಸಿದೆ.

ಇಸ್ತಾನ್‌ಬುಲ್‌ನಲ್ಲಿ ಹಲವು ಗಂಟೆಗಳ ಕಾಲ ನಡೆದ ಸಭೆಯ ನಂತರ ರಷ್ಯಾದ ಮುಖ್ಯ ಸಮಾಲೋಚಕ ವ್ಲಾಡಿಮಿರ್ ಮೆಡಿಸ್ಕಿ ಇದೊಂದು “ರಚನಾತ್ಮಕ” ಮಾತುಕತೆ ಎಂದು ಹೇಳಿದರು.

ಸಭೆಯಲ್ಲಿ ಉಕ್ರೇನಿಯನ್ ಸಮಾಲೋಚಕರು ಮಂಡಿಸಿರುವ ಎಲ್ಲ ಪ್ರಸ್ತಾಪಗಳನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎದುರಿಗೆ ಇಡಲಾಗುತ್ತದೆ. ಯುದ್ಧ ಅಂತ್ಯಗೊಳಿಸಲು ರಷ್ಯಾ ಮತ್ತು ಉಕ್ರೇನಿಯನ್ ವಿದೇಶಾಂಗ ಸಚಿವಾಲಯಗಳು ಒಪ್ಪಂದಕ್ಕೆ ಸಮ್ಮತಿಸಿದರೆ, ನಂತರದ ಸಂದರ್ಭದಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ವೊಲೊಡಿಮಿರ್ ಝೆಲೆನ್ಸ್ಕಿ ನಡುವೆ ಮತ್ತೊಂದು ಸುತ್ತಿನ ಸಂಧಾನ ಮಾತುಕತೆ ನಡೆಸುವ ಸಾಧ್ಯತೆಯಿದೆ,” ಎಂದು ಮೆಡಿಸ್ಕಿ ಹೇಳಿದರು.

ರಷ್ಯಾ ಆಕ್ರಮಣವನ್ನು ಶುರು ಮಾಡಿದ 34 ದಿನಗಳಲ್ಲಿ ಮರಿಯುಪೋಲ್ ನಗರ ವೊಂದರಲ್ಲಿಯೇ ಕನಿಷ್ಠ 5000 ಸಾವಿರ ಜನರು ಸಾವಿನ ಮನೆ ಸೇರಿದ್ದಾರೆ ಎಂದು ಉಕ್ರೇನಿಯನ್ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ರಷ್ಯಾ ನಡೆಸಿರುವ ಆಕ್ರಮಣದಿಂದಾಗಿ ಕೀವ್ ನಗರದ 80,000ಕ್ಕೂ ಹೆಚ್ಚು ಮನೆ ಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕಳೆದ ಫೆಬ್ರವರಿ 24ರಂದು ರಷ್ಯಾ ಪಡೆಗಳು ಆಕ್ರಮಣ ಶುರು ಮಾಡಿದವು. ಅಂದಿನಿಂದ ಇಂದಿನವರೆಗೂ ಸುಮಾರು 35 ಲಕ್ಷ ಸ್ವದೇಶಿಗಳು ಹಾಗೂ ವಿದೇಶಿಯರು ಉಕ್ರೇನ್ ನಗರಗಳನ್ನು ತೊರೆದು ಹೋಗಿದ್ದಾರೆ.