Thursday, 12th December 2024

ಭಾರತದ ಧ್ವಜ ನಮ್ಮ ಪ್ರಾಣ ಕಾಪಾಡಿದೆ, ಭಾರತೀಯರೆನ್ನಲು ಹೆಮ್ಮೆ ಆಗುತ್ತಿದೆ

ಕೀವ್‌: ಭಾರತಕ್ಕಿಂತ ಕಡಿಮೆ ಖರ್ಚಿನಲ್ಲಿ ವಿದ್ಯಾಭ್ಯಾಸ ಮಾಡಬಹುದು ಎಂದು ಎಂಬಿಬಿಎಸ್‌, ಇಂಜಿನಿಯರಿಂಗ್‌ ಸೇರಿದಂತೆ ಕೆಲವು ಕೋರ್ಸ್‌ಗಳನ್ನು ಮಾಡಲು ಉಕ್ರೇನ್‌ಗೆ ಹೋಗಿರುವ ವಿದ್ಯಾರ್ಥಿಗಳು ತಾಯ್ನಾಡಿಗೆ ವಾಪಸಾಗುವ ತರಾತುರಿಯಲ್ಲಿದ್ದಾರೆ.

ಉಕ್ರೇ‌ನ್‌ನಲ್ಲಿರುವ ಭಾರತದ ವಿದ್ಯಾರ್ಥಿಗಳನ್ನು ಭಾರತದ ಧ್ವಜವೇ ಕಾಪಾಡಿದೆ. ಭಾರತದ ಧ್ವಜವನ್ನು ಹಿಡಿದು ಕೊಂಡು ಬಂದ ವಿದ್ಯಾರ್ಥಿಗಳಿಗೆ ಯಾವುದೇ ಚೆಕ್‌ ಮಾಡದೇ ಗಡಿಯಿಂದ ಬಿಟ್ಟಿರುವ ಘಟನೆಯೂ ನಡೆದಿದೆ.

ಭಾರತದ ಧ್ವಜ ಇದ್ದ ಕಾರಣ, ನಾವು ಎಲ್ಲೂ ನಿಲ್ಲದೇ ಸುಲಭವಾಗಿ ಗಡಿ ತಲುಪಿ ಸ್ವದೇಶ ತಲುಪಿದ್ದೇವೆ. ಧ್ವಜ ನಮ್ಮ ಪ್ರಾಣ ಕಾಪಾಡಿದೆ. ಭಾರತೀಯರು ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತಿದೆ ಎಂದಿದ್ದಾರೆ.

ರೋಮೇನಿಯಾದಿಂದ ದೆಹಲಿಗೆ ಏರ್‌ ಇಂಡಿಯಾ ವಿಮಾನದ ಮೂಲಕ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಈ ವೇಳೆ ಬಿಹಾರ ವಿದ್ಯಾರ್ಥಿಗಳು ತಮಗಾಗಿರುವ ಅನುಭವವನ್ನು ಹೇಳಿಕೊಂಡಿದ್ದಾರೆ. ರಾಷ್ಟ್ರಧ್ವಜ ನೋಡಿ ಉಕ್ರೇನ್‌ ಮತ್ತು ರಷ್ಯಾದವರು ಯಾರೂ ನಮ್ಮನ್ನು ತಡೆಯಲಿಲ್ಲ ನಡೆಯಲಿಲ್ಲ. ಸುಲಭವಾಗಿ ಗಡಿಯನ್ನು ತಲುಪಿದ್ದೇವೆ ಎಂದು ವಿದ್ಯಾರ್ಥಿಯೊಬ್ಬ ಹೇಳಿದ್ದು, ಅದರ ವಿಡಿಯೋ ವೈರಲ್‌ ಆಗಿದೆ.

ಗಡಿಯಲ್ಲಿ ಸೈನಿಕರು ಪೊಲೀಸರು ಎಲ್ಲರೂ ಇದ್ದರು. ಆದರೆ ನಮ್ಮ ರಾಷ್ಟ್ರಧ್ವಜವನ್ನು ನೋಡಿ ತಪಾಸಣೆ ಮಾಡದೇ ಬಿಟ್ಟರು. ರಾಷ್ಟ್ರಧ್ವಜದೊಂದಿಗೆ ಬರುವಂತೆ ರಾಯಭಾರ ಕಚೇರಿ ಸೂಚಿಸಿತ್ತು. ಅದರಂತೆ ರಾಷ್ಟ್ರಧ್ವಜವನ್ನು ಬ್ಯಾಗಿನ ಮುಂಭಾಗ ಸಿಕ್ಕಿಸಿಕೊಂಡು ಗಡಿಯನ್ನು ದಾಟಿ ಏರ್‌ ಇಂಡಿಯಾ ವಿಮಾನವನ್ನು ಹತ್ತಿದೆವು’ ಎಂದಿದ್ದಾನೆ ವಿದ್ಯಾರ್ಥಿ.

ಉಕ್ರೇನ್‌ ಮತ್ತು ರಷ್ಯಾದ ಮಧ್ಯೆ ಭಾರತದ ಸಂಬಂಧ ಉತ್ತಮವಾಗಿದೆ. ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ಪುತಿನ್‌ ಮತ್ತು ವೊಲೊಡಿಮಿರ್ ಝೆಲೆನ್ಸ್ಕಿ ಜತೆ ಇದಾಗಲೇ ದೂರವಾಣಿ ಕರೆ ಮಾಡಿ ವಿದ್ಯಾರ್ಥಿಗಳ ಕುರಿತು ಮಾತನಾಡಿದ್ದರು.