Friday, 22nd November 2024

Yahya Sinwar: ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್‌ನನ್ನು ಹೊಡೆದುರುಳಿಸಿದ ವಿಡಿಯೊ ರಿಲೀಸ್‌ ಮಾಡಿದ ಇಸ್ರೇಲ್‌ ಸೇನೆ

Yahya Sinwar

ಜೆರುಸಲೇಂ: ಹಮಾಸ್‌ ನಾಯಕ ಯಾಹ್ಯಾ ಸಿನ್ವರ್‌ (Yahya Sinwar) ಹೊಡೆದುರಳಿಸಿದ ಇಸ್ರೇಲ್‌ ಸೇನೆ (Isreal Forces) ಆತನ ಕೊನೆಯ ಕ್ಷಣಗಳನ್ನು ಸೆರೆ ಹಿಡಿದಿರುವ ಡ್ರೋನ್‌ ವಿಡಿಯೊವನ್ನು ರಿಲೀಸ್‌ ಮಾಡಿದೆ. ಯಾಹ್ಯಾ ಸಿನ್ವರ್ 2023ರಲ್ಲಿ ಇಸ್ರೇಲ್ ಮೇಲೆ ನಡೆದ ಭಯಾನಕ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ. ಯಾಹ್ಯಾ ಸಿನ್ವರ್ ಅಂದಿನಿಂದ ಇಸ್ರೇಲ್‌ನ ವಾಂಟೆಡ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ. ಗಾಜಾ ಅಡಿಯಲ್ಲಿ ಹಮಾಸ್ ನಿರ್ಮಿಸಿದ ಸುರಂಗಗಳ ಅಡಿಯಲ್ಲಿ ಅಡಗಿಕೊಂಡಿದ್ದ ಆತನನ್ನು ಹತ್ಯೆಗೈದು ಇಸ್ರೇಲ್‌ ಇದೀಗ ಸೇಡು ತೀರಿಸಿಕೊಂಡಿದೆ.

ಶೆಲ್ ದಾಳಿಯಿಂದ ಗೋಡೆಗಳು ಹಾರಿಹೋಗಿರುವ ಪಾಳುಬಿದ್ದ ಗಾಜಾದ ಅಪಾರ್ಟ್‌ಮೆಂಟ್‌ ಒಂದರಲ್ಲಿ ಯಾಹ್ಯಾ ಸಿನ್ವರ್‌ ಕುಳಿತಿರುವುದು ವಿಡಿಯೊದಲ್ಲಿ ಕಂಡುಬಂದಿದೆ. ಗಾಯಗೊಂಡ ಸಿನ್ವರ್ ಸೋಫಾದ ಮೇಲೆ ಕುಳಿತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಅವರ ಬಲಗೈ ತೀವ್ರವಾಗಿ ಗಾಯಗೊಂಡಿರುವುದು ಕಂಡುಬಂದಿದೆ. ಡ್ರೋನ್ ಸಮೀಪಿಸುತ್ತಿದ್ದಂತೆ ಯಾಹ್ಯಾ ಸಿನ್ವರ್‌ ಅದರತ್ತ ಕೋಲೊಂದನ್ನು ಎಸೆಯುವುದು ಸೆರೆಯಾಗಿದೆ.

ʼʼಡಿಎನ್ಎ ಪರೀಕ್ಷೆಯ ಪ್ರಕಾರ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್‌ನನ್ನು ಹತ್ಯೆ ಮಾಡಲಾಗಿದೆʼʼ ಎಂದು ಇಸ್ರೇಲ್ ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್ ದೃಢಪಡಿಸಿದ್ದಾರೆ. ʼʼಇಸ್ರೇಲ್‌ ಸೇನೆಯು ಯಾಹ್ಯಾ ಸಿನ್ವರ್‌ ಇದ್ದ ಕಟ್ಟಡದ ಮೇಲೆ ಹೆಚ್ಚುವರಿ ಶೆಲ್ ಹಾರಿಸಿತು. ಇದರಿಂದಾಗಿ ಕಟ್ಟಡವೇ ಕುಸಿದು ಬಿತ್ತು. ಬಳಿಕ ಆತನನ್ನು ಹತ್ಯೆ ಮಾಡಲಾಯಿತು. ಸಿನ್ವರ್ ಮೃತದೇಹದ ಸಮೀಪ ಬುಲೆಟ್ ಪ್ರೂಫ್ ಅಂಗಿ ಮತ್ತು ಗ್ರೆನೇಡ್ ಪತ್ತೆಯಾಗಿದೆʼʼ ಎಂದು ಇಸ್ರೇಲ್ ಮಿಲಿಟರಿ ವಕ್ತಾರ ಡೇನಿಯಲ್ ಹಗರಿ ತಿಳಿಸಿದ್ದಾರೆ.

ಹತ್ಯೆ ಮಾಡಿದ್ದು ಹೇಗೆ?

ʼʼಗುಂಡಿನ ದಾಳಿಯಿಂದ ಗಾಯಗೊಂಡ ಸಿನ್ವರ್ ಒಂಟಿಯಾಗಿ ಕಟ್ಟಡದಿಂದ ಓಡಿ ಹೋಗಲು ಯತ್ನಿಸಿದನು. ನಮ್ಮ ಪಡೆಗಳು ಆತನ ಚಲನವಲನ ನಿರೀಕ್ಷಿಸಲು, ಈ ಪ್ರದೇಶವನ್ನು ಸ್ಕ್ಯಾನ್ ಮಾಡಲು ಡ್ರೋನ್ ಬಳಸಿದೆ. ಅದನ್ನು ಈ ವಿಡಿಯೊದಲ್ಲಿ ನೋಡಬಹುದುʼʼ ಎಂದು ಡೇನಿಯಲ್ ಹಗರಿ ವಿವರಿಸಿದ್ದಾರೆ. “ಗುಂಡಿನ ದಾಳಿಯಿಂದ ಗಾಯಗೊಂಡ ಸಿನ್ವರ್, ಮುಖವನ್ನು ಮುಚ್ಚಿಕೊಂಡು, ತನ್ನ ಅಂತಿಮ ಕ್ಷಣಗಳಲ್ಲಿ ಡ್ರೋನ್ ಮೇಲೆ ಮರದ ಹಲಗೆಯನ್ನು ಎಸೆದು ತಪ್ಪಿಸಿಕೊಳ್ಳಲು ಯತ್ನಿಸಿದನು. ಆದರೆ ಇಸ್ರೇಲ್‌ ಪಡೆ ಆತನನನು ಹೊಡೆದುರುಳಿಸಿದೆʼʼ ಎಂದು ಅವರು ತಿಳಿಸಿದ್ದಾರೆ. ಸಿನ್ವರ್ ಹತ್ಯೆಯ ಬಗ್ಗೆ ಹಮಾಸ್ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ಸುದ್ದಿಯನ್ನೂ ಓದಿ: Yahya Sinwar : ಇಸ್ರೇಲ್ ದಾಳಿಯಲ್ಲಿ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್ ಸಾವು?

ಸಿನ್ವರ್ ಹತ್ಯೆ ಬಗ್ಗೆ ನೆತನ್ಯಾಹು ಹೇಳಿದ್ದೇನು?

ಹಮಾಸ್‌ ನಾಯಕ ಸಿನ್ವರ್ ಹತ್ಯೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಮರ್ಥಿಸಿಕೊಂಡಿದ್ದಾರೆ. “ಇದು ಗಾಜಾದಲ್ಲಿನ ಯುದ್ಧದ ಅಂತ್ಯವಲ್ಲ, ಇದು ಅಂತ್ಯದ ಪ್ರಾರಂಭʼʼ ಎಂದು ಅವರು ಬಣ್ಣಿಸಿದ್ದಾರೆ.

2023ರ ಅಕ್ಟೋಬರ್ 7ರಂದು ಹಮಾಸ್ ನೇತೃತ್ವದ ಬಂದೂಕುಧಾರಿಗಳು ಇಸ್ರೇಲ್ ಮೇಲೆ ದಾಳಿ ನಡೆಸಿ ಸುಮಾರು 1,200 ಜನರನ್ನು ಕೊಂದಿದ್ದರು. 250ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಗಾಜಾಕ್ಕೆ ಕರೆದೊಯ್ದಿದ್ದರು. ಪ್ರತಿಕ್ರಿಯೆಯಾಗಿ ಇಸ್ರೇಲ್ 42,000ಕ್ಕೂ ಹೆಚ್ಚು ಜನರನ್ನು ಕೊಂದಿದೆ. ಗಾಜಾದ ಹೆಚ್ಚಿನ ಭಾಗವನ್ನು ನೆಲಸಮಗೊಳಿಸಿದೆ.