Friday, 15th November 2024

Zhuhai Horror: ಭೀಕರ ಅಪಘಾತ; ಕಾರು ಪಾದಚಾರಿಗಳ ಮೇಲೆ ಹರಿದು 35 ಮಂದಿ ಸಾವು

Zhuhai Horror

ಬೀಜಿಂಗ್‌: ದಕ್ಷಿಣ ಚೀನಾದ ಝುಹೈ (Zhuhai) ನಗರದಲ್ಲಿ ಸೋಮವಾರ (ನ. 11) ಸಂಜೆ ಕಾರು ಪಾದಚಾರಿಗಳ ಮೇಲೆ ಹರಿದ ಪರಿಣಾಮ 35 ಜನರು ಸಾವನ್ನಪ್ಪಿದ್ದಾರೆ ಮತ್ತು 43 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಕಾರಣನಾದ 62 ವರ್ಷದ ಕಾರು ಚಾಲಕನನ್ನು ಗುರುತಿಸಲಾಗಿದೆ ಎಂದು ಮೂಲಗಳು ವರದಿ ಮಾಡಿವೆ (Zhuhai Horror).

ಸೋಮವಾರ ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದ ಪೊಲೀಸರು ಹಲವರು ಗಾಯಗೊಂಡಿದ್ದಾರೆ ಎಂದಷ್ಟೆ ತಿಳಿಸಿದ್ದರು. ಮಂಗಳವಾರ ಪೊಲೀಸರು ಸಾವಿನ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ʼʼಝುಹೈ ಸ್ಪೋರ್ಟ್ಸ್ ಸೆಂಟರ್‌ ಬಳಿ ಗಂಭೀರ ಅವಘಡ ಸಂಭವಿಸಿದೆʼʼ ಎಂದ ಅವರು ಮೃತರ ಸಂಖ್ಯೆ 35ಕ್ಕೆ ತಲುಪಿದೆ ಎಂದು ಮಾಹಿತಿ ನೀಡಿದ್ದಾರೆ.

ಘಟನೆಯ ಹಿನ್ನೆಲೆ

ಫ್ಯಾನ್‌ ಹೆಸರಿನ ಕಾರಿನ ಚಾಲಕ ಈ ಅಪಘಾತ ಎಸಗಿದ್ದಾನೆ ಎಂದು ಗುರುತಿಸಲಾಗಿದೆ. ʼʼಆತ ಚಲಾಯಿಸಿಕೊಂಡು ಬಂದ ಕಾರು ಸ್ಪೋರ್ಟ್‌ ಸೆಂಟರ್‌ನ ಗೇಟ್‌ಗೆ ಗುದ್ದಿ ಒಳ ನುಗ್ಗಿದೆ. ಸೆಂಟರ್‌ನ ಆಂತರಿಕ ರಸ್ತೆಯಲ್ಲಿ ವ್ಯಾಯಾಮ, ವಾಕಿಂಗ್‌ ಮಾಡುತ್ತಿದ್ದ ಜನರ ಮೇಲೆ ವೇಗವಾಗಿ ಕಾರು ಚಲಿಸಿ ಅವಘಡ ಸಂಭವಿಸಿದೆʼʼ ಎಂದು ಪೊಲೀಸರು ವಿವರಿಸಿದ್ದಾರೆ.

ಅಪಘಾತ ನಡೆದ ಬಳಿಕ ಶಾಕ್‌ಗೆ ಒಳಗಾಗಿದ್ದ ಫ್ಯಾನ್‌ ಚಾಕು ತೆಗೆದುಕೊಂಡು ತನ್ನನ್ನು ತಾನು ಚುಚ್ಚಿಕೊಳ್ಳಲು ಮುಂದಾಗಿದ್ದ. ಕೂಡಲೇ ಪೊಲೀಸರು ಆತನನ್ನು ತಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ಕುತ್ತಿಗೆ ಸೇರಿದಂತೆ ದೇಹದ ಇತರ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ಸದ್ಯ ಕೋಮಾಕ್ಕೆ ಜಾರಿದ್ದಾನೆ. ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಅಧ್ಯಕ್ಷರ ಖಂಡನೆ

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ಘಟನೆಯನ್ನು ಖಂಡಿಸಿದ್ದಾರೆ. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಮತ್ತು ಅಪರಾಧಿಯನ್ನು ಕಾನೂನಿನ ಪ್ರಕಾರ ಶಿಕ್ಷಿಸಬೇಕೆಂದು ಆದೇಶ ಹೊರಡಿಸಿದ್ದಾರೆ. ಅಪಘಾತವನ್ನು ಉದ್ದೇಶಪೂರ್ವಕವಾಗಿ ನಡೆಸಲಾಗಿದೆಯೋ ಅಥವಾ ಆಕಸ್ಮಿಕವಾಗಿ ನಡೆದಿದೆಯೋ ಎನ್ನುವ ಬಗ್ಗೆ ತಿಳಿದುಕೊಳ್ಳಲು ತನಿಖೆ ಆರಂಭಿಸಲಾಗಿದೆ.

ವಿಡಿಯೊ ವೈರಲ್‌

ಸದ್ಯ ಘಟನೆಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅನೇಕರು ರಸ್ತೆ ಬದಿ ಬಿದ್ದುಕೊಂಡಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಆಂಬ್ಯುಲೆನ್ಸ್‌ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವುದನ್ನೂ ವಿಡಿಯೊದಲ್ಲಿ ನೋಡಬಹುದು. ಚೀನಾದ ಮಾಧ್ಯಮ ಸಂಸ್ಥೆ ಕೈಕ್ಸಿನ್ ಈ ಎಸ್‌ಯುವಿ ವಾಕಿಂಗ್ ಮಾಡುತ್ತಿದ್ದ ಜನರ ಗುಂಪಿಗೆ ಡಿಕ್ಕಿ ಹೊಡೆದಿದೆ ಎಂದು ವರದಿ ಮಾಡಿದೆ. ಗಾಯಗೊಂಡವರಲ್ಲಿ ಹೆಚ್ಚಿನವರು ಮಧ್ಯವಯಸ್ಕರು ಮತ್ತು ವಯಸ್ಸಾದವರು. ಜತೆಗೆ ಹದಿಹರೆಯದವರು ಮತ್ತು ಮಕ್ಕಳು ಸಹ ಸೇರಿದ್ದಾರೆ ಎಂದು ತಿಳಿಸಿದೆ. “ಕಾರು ಗೇಟಿಗೆ ಡಿಕ್ಕಿ ಹೊಡೆದು ಪೂರ್ವ, ದಕ್ಷಿಣ, ಪಶ್ಚಿಮ ಮತ್ತು ಉತ್ತರ ದಿಕ್ಕಿನಲ್ಲಿ ಅಡ್ಡಾದಿಡ್ಡಿಯಾಗಿ ಚಲಿಸಿ ಕ್ರೀಡಾ ಮೈದಾನದಲ್ಲಿದ್ದ ಹಲವರ ಮೇಲೆ ಹರಿದಿದೆ” ಎಂದು ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದ್ದಾರೆ.

ಝುಹೈನಲ್ಲಿ ಪ್ರಮುಖ ಏರ್ ಶೋ ಪ್ರಾರಂಭವಾಗುವ ಒಂದು ದಿನ ಮೊದಲು ಈ ಅಪಘಾತ ಸಂಭವಿಸಿದೆ. ಝುಹೈನಲ್ಲಿ ಈ ವಾರ ಚೀನಾದ ಅತಿದೊಡ್ಡ ವಾರ್ಷಿಕ ವಾಯು ಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ: Hezbollah Rocket Attack: ಇಸ್ರೇಲ್‌ ಮೇಲೆ ಹೆಜ್ಬೊಲ್ಲಾ ಉಗ್ರರಿಂದ ಡೆಡ್ಲಿ ಅಟ್ಯಾಕ್‌; ಅನೇಕರಿಗೆ ಗಾಯ; ವಾಹನ, ಕಟ್ಟಡಗಳು ಧ್ವಂಸ