Sunday, 15th December 2024

ಜನೆರಿಕ್: ವಿವಾದದ ಅಡ್ಡ ಪರಿಣಾಮ ಮುಕ್ತವಾಗಲಿ

ನ್ಯಾಷನಲ್ ಮೆಡಿಕಲ್ ಕೌನ್ಸಿಲ್ (ಎನ್‌ಎಮ್‌ಸಿ) ಇತ್ತೀಚೆಗೆ ವೈದ್ಯರಿಗೆ ಹೊಸ ನಿಯಮಾವಳಿ ಸೂಚಿಸಿ, ರೋಗಿಗಳಿಗೆ ಔಷಧ  ಬರೆಯುವಾಗ ಯೋಗ್ಯ ಜನೆರಿಕ್ ಔಷಧಗಳನ್ನೇ ಉಲ್ಲೇಖಿಸು ವುದನ್ನು ಕಡ್ಡಾಯ ಮಾಡಿದೆ. ಈ ಮೊದಲೂ ಅಂದರೆ 2002ರ ಸೂಚಿಯಲ್ಲಿಯೂ ಜನೆರಿಕ್ ಔಷಧ  ಉಲ್ಲೇಖಿಸುವ ಪ್ರಸ್ತಾಪವಿತ್ತು. ಆದರೆ, ಕಡ್ಡಾಯವಿರಲಿಲ್ಲ. ಇತ್ತೀಚೆಗೆ ಎನ್‌ಎಮ್‌ಸಿ ಮತ್ತೆೆ ಅದನ್ನು ಉಲ್ಲೇಖಿಸಿದ್ದು, ನಿಯಮ ಪಾಲಿಸದ ವೈದ್ಯರ ಪರವಾನಗಿ ರದ್ದು ಪಡಿಸುವ ಮತ್ತು ದಂಡ ವಿಧಿಸುವ ಎಚ್ಚರಿಕೆಯನ್ನು ನೀಡಿದೆ. ಈ ಸೂಚನೆಯ ನಂತರ ವೈದ್ಯ ಮತ್ತು ಔಷಧ ಜಗತ್ತಿನಲ್ಲಿ ಸಾಕಷ್ಟು ಗೊಂದಲ ನಿರ್ಮಾಣವಾಗಿದೆ. ಈ ಕುರಿತು ಔಷಧದ ನಿಯಮಾವಳಿಗೆ ಒಳಪಡುವ ಜಗತ್ತಲ್ಲಷ್ಟೇ ಅಲ್ಲದೆ ಜನಸಾಮಾನ್ಯರಲ್ಲೂ ಹಲವು ಪ್ರಶ್ನೆಗಳು ಉದ್ಭವಿಸಿವೆ. ಈ ಸಂಬಂಧ ಹೆಚ್ಚಿನ ಅರಿವಿನ ಮತ್ತು ಕ್ರಮದ ಅಗತ್ಯವಿದೆ.

ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ಸೂಚನೆಯ ಹಿಂದೆ ಘನ ಉದ್ದೇಶವಿಲ್ಲದಿಲ್ಲ. ಮುಖ್ಯವಾಗಿ ಜನೆರಿಕ್ ಔಷಧಗಳು ಬ್ರಾಂಡೆಡ್ ಔಷಧಗಳಿಗಿಂತ ಕಡಿಮೆ ದರದಲ್ಲಿ ಲಭ್ಯ. ಕಡಿಮೆ ದರದಲ್ಲಿ ಸಿಗುವ ಔಷಧವನ್ನೇ ಶಿಫಾರ ಸು ಮಾಡುವುದರಿಂದ ಮಾರುಕಟ್ಟೆೆಯ ಬೆಲೆಯಲ್ಲಿ ತನ್ನಷ್ಟಕ್ಕೇ ನಿಯಂತ್ರಣವುಂಟಾಗಿ ಇನ್‍ಫ್ಲೇಶನ್ ಹಿಡಿತದಲ್ಲಿರುತ್ತದೆ. ಬಡ ಗ್ರಾಹಕರಿಗೂ ಆರೋಗ್ಯ ಸೇವೆ ಲಭ್ಯವಾಗುತ್ತದೆ.  ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ  “ಜನೌಷಧಿ ಕೇಂದ್ರ”ಗಳ ವ್ಯವಹಾರ ಮತ್ತು ಪ್ರಾಮುಖ್ಯ ಹೆಚ್ಚುತ್ತದೆ. ಮುಂಬರು 2024ರ ಲೋಕಸಭೆ ಚುನಾವಣೆ ಹಿನ್ನೆೆಲೆಯಲ್ಲಿ ಜನಪ್ರಿಯ ಯೋಜನೆಯೊಂದರ ಪ್ರಯೋಜನ ಇನ್ನೂ ಹೆಚ್ಚಿನ ಮಟ್ಟದಲ್ಲಿ ಆಡಳಿತ ಪಕ್ಷದ ಕಡೆ ಮತದ ರೂಪದಲ್ಲಿ ಜಾರಲಿದೆ ಎಂಬುದು ಇದರ ಹಿಂದಿನ ಉದ್ದೇಶವೆಂಬುದನ್ನು ಮತ್ತೆೆ ಹೇಳಬೇಕಾಗಿಲ್ಲ. ಒಟ್ಟಾರೆ ಯೋಗ್ಯ ಔಷಧಗಳನ್ನು ಸಾಮಾನ್ಯ ಜನತೆಗೆ ಕಡಿಮೆ ದರದಲ್ಲಿ ಒದಗಿಸುವ ಉದ್ದೇಶ ಒಳಿತೇ.

ಜನಸಾಮಾನರ ದೃಷ್ಟಿಯಲ್ಲಿ ಔಷಧ ವೆಂದರೆ ರೋಗ ಬಂದಾಗ ವೈದ್ಯರು ನೀಡುವ ಪರಿಹಾರ ರೂಪದ ಪದಾರ್ಥಗಳಷ್ಟೇ. ಅವು ಗುಳಿಗೆ, ಸಿರಪ್, ಕ್ಯಾಪ್ಸುಲ್, ಮುಲಾಮು ಅಥವಾ ಇಂಜೆಕ್ಷನ್ ಹೀಗೆ ಯಾವುದೇ ರೂಪದಲ್ಲಿರಬಹುದು. ಅವು ಬೇರೆ ಬೇರೆ ಪ್ರಮಾಣ(ಡೋಸ್)ದಲ್ಲಿರುತ್ತವೆ. ಅಲ್ಲದೆ ಬೇರೆ ಬೇರೆ ರೋಗಕ್ಕೆೆ ಪ್ರತ್ಯೇಕವಾಗಿರುತ್ತವೆ ಎಂಬುದು ಸಾಮಾನ್ಯ ತಿಳಿವಳಿಕೆ. ಇದಕ್ಕೂ ಹೆಚ್ಚಿನ ಕಲ್ಪನೆಯಿರುವುದು ಕಡಿಮೆ. ಉದಾಹರಣೆಗೆ ಜ್ವರ ಬಂದಾಗ ಬಳಸುವ ಕ್ರೋಸಿನ್, ಗುಳಿಗೆ ಅಥವಾ ಸಿರಪ್‌ನ ರೂಪದಲ್ಲಿರುತ್ತದೆ. ಅದೇ ರೋಗಕ್ಕೆೆ ನೀಡುವ ಅದೇ ಪರಿಣಾಮ ಬೀರುವ, ಅದೇ ಕಾಂಬಿನೇಷನ್‌ನ ಇನ್ನೂ ಅನೇಕ ಹೆಸರಿನ ಔಷಧಗಳಿರುತ್ತವೆ. ಅವುಗಳಲ್ಲಿ ಯವುದನ್ನಾದರೂ ವೈದ್ಯರು ನೀಡಿರುತ್ತಾರೆ. ಆದರೆ, ನಿಜವಾದ ಒಳ ತಥ್ಯವು ಅವು ಹೊಂದಿದ ಮೂಲ ಔಷಧಾತ್ಮಕ ಗುಣವಿರುವ ದ್ರವ್ಯ(ಕಾಂಬಿನೇಷನ್)ಗಳು. ಅವು ರೋಗವನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿರುತ್ತವೆ. ಅಂದರೆ ವೈದ್ಯರು ನೀಡಿರುವ ಔಷಧಗಳಲ್ಲ, ಅದರೊಳಗಿರುವ ರಾಸಾಯನಿಕ ಧಾತುಗಳು ಒಟ್ಟಾರೆ ಪರಿಣಾಮಕ್ಕೆೆ ಕಾರಣಕರ್ತವಾಗಿರುತ್ತದೆ. ಅಂತಹ ಮೂಲ ದ್ರವ್ಯವನ್ನು ಔಷಧಾತ್ಮಕ ಪರಿಭಾಷೆಯಲ್ಲಿ ಬೇಸಿಕ್ ಡ್ರಗ್‌ಸ್‌  ಅಥವಾ ಬಲ್ಕ್ ಡ್ರಗ್‌ಸ್‌  ಅನ್ನುವದು. ಇನ್ನೂ ಹೊಸತಾದ ಪರಿಗಣನೆಯಲ್ಲಿ ಅದನ್ನೇ ‘ಆಕ್ಟಿವ್ ಫಾರ್ಮಾ ಇನ್‌ಗ್ರೀಡಿಯಂಟ್’ ಅನ್ನುವುದು. ಇದನ್ನು ಹೇಳುವ ಕಾರಣವೆಂದರೆ ಅಲ್ಲಿಂದಲೇ ಜನೆರಿಕ್ ಅಥವಾ ಬ್ರಾಂಡೆಡ್ ಔಷಧಗಳನ್ನು ಅರ್ಥಮಾಡಿಕೊಳ್ಳಬಹುದು.

ವೈದ್ಯರು ನೀಡುವ ಔಷಧ, ಅಂದರೆ ಮಾರುಕಟ್ಟೆೆಯಲ್ಲಿ ಸಿಗುವ ಔಷಧ  ಮತ್ತು ಮೂಲ ಔಷಧ  ದ್ರವ್ಯಗಳನ್ನು ತಯಾರಿಸುವ ವಿಧಾನ ಮತ್ತು ಕಾರ್ಖಾನೆಗಳ ರೂಪುರೇಷೆ ಭಿನ್ನವಾಗಿರುತ್ತವೆ. ತಯಾರಿಕೆಯ ವಿಧಾನವೂ ಪೂರ್ತಿಯಾಗಿ ಬೇರೆ ಬೇರೆ. ಎರಡೂ ಬಗೆಯ ಔಷಧ ತಯಾರಿಕೆ ಮತ್ತು ವಿಂಗಡಣೆಗೆ ಲೈಸನ್‌ಸ್‌ ನೀಡುವ, ನಿಯಂತ್ರಣ ಹೊಂದಿರುವ ಆಹಾರ ಮತ್ತು ಔಷಧ ಪ್ರಾಧಿಕಾರವು ಒಂದೇ ಆದರೂ ಲೈಸನ್ಸ್ ನೀಡುವ ಪರಿಕ್ರಮ ಬೇರೆಯದೇ. ತಯಾರಿಕೆಯ ಸೂತ್ರ ಮತ್ತು ಕ್ರಮ, ಕ್ವಾಲಿಟಿ ಆಧಾರಿತವಾದ ಪರವಾನಗಿ ಪ್ರಕ್ರಿಯೆಯನ್ನು ಅವು ಹೊಂದಿರುತ್ತವೆ. ಅವೆರಡನ್ನೂ ಒಂದೇ ಕಾರ್ಖಾನೆಯಲ್ಲಿ ಅದದೇ ಉಪಕರಣಗಳಲ್ಲಿ ತಯಾರಿಸುವಂತಿರುವುದಿಲ್ಲ. ಎರಡೂ ಬಗೆಗೂ ತನ್ನದೇ ವಿಧಾನಗಳಿವೆ. ಎರಡೂ ಪ್ರಕಾರಗಳಲ್ಲಿ  ಬ್ರಾಂಡ್ ಸೂತ್ರವನ್ನು ಮೂಲ ಸೂತ್ರವಾಗಿ ತಯಾರಕರು ಪಡೆದುಕೊಂಡಿರುತ್ತಾರೆ. ಮೂಲ ದ್ರವ್ಯ ಅಥವಾ ಆಕ್ಟಿವ್ ಫಾರ್ಮಾ ಇನ್‌ಗ್ರೀಡಿಯಂಟ್ ಬಳಸಿ, ಅದು ದೇಹದಲ್ಲಿ ರೋಗಕ್ಕೆೆ ಪರಿಣಾಮಕಾರಿಯಾಗಿ ವರ್ತಿಸುವ ನಿಟ್ಟಿನಲ್ಲಿ ಅಂತಿಮ ಔಷಧ ಗಳನ್ನು ತಯಾರಿಸಲಾಗುತ್ತದೆ. ವೈದ್ಯರು ಉಲ್ಲೇಖಿಸುವುದು ಅದನ್ನೇ. ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ಸೂಚಿಸಿದ ನಿಯಮಾವಳಿ ಅನ್ವಯಿಸುವುದು ಇಲ್ಲಿಯೇ.

ಇದು ಅರ್ಥವಾಗಬೇಕಾದರೆ, ಔಷಧದಲ್ಲಿ ‘ಬ್ರಾಂಡ್’ ಅಂದರೇನೆಂದು ತಿಳಿಯಬೇಕು. ಸಾಮಾನ್ಯ ಅರ್ಥದಲ್ಲಿ ವ್ಯಾಪಾರೀ ಹೆಸರನ್ನೇ ನಾವು ಬ್ರಾಂಡ್ ಅಂದುಕೊಂಡಿರುತ್ತೇವೆ. ಮಾರುಕಟ್ಟೆೆಯಲ್ಲಿ ಸಿಗುವ ಎಲ್ಲ ಸಾಮಾನುಗಳಿಗೆ ಅವುಗಳದೇ ಆದ ವ್ಯಾಪಾರೀ ಹೆಸರುಗಳಿತ್ತವೆ. ಅವುಗಳನ್ನು ನೋಂದಾಯಿಸಿಕೊಳ್ಳುವ ವಿಧಾನವಿದೆ. ಆದರೆ ಔಷಧದ ವಿಚಾರದಲ್ಲಿ ಬ್ರಾಂಡೆಡ್ ಅಂದರೆ ವಿಶೇಷ ಅರ್ಥವಿದೆ, ಇತಿಹಾಸವಿದೆ. ಸಂಶೋಧನೆಯ ಸಾಧನೆಯಿದೆ. ದೀರ್ಘ ಔಷಧ ಪರೀಕ್ಷಾ ಪರಿಕ್ರಮ ಮತ್ತು ಔಷಧ ವೆಂದು ಪ್ರಮಾಣೀಕರಿಸಿಕೊಳ್ಳುವ ರೀತಿಯಿದೆ. ಔಷಧವನ್ನು ಪ್ರಯೋಗಿಸಿ ಪರಿಣಾಮ  ಸಾಬೀತುಪಡಿಸಿರುವ ಶ್ರಮವಿದೆ. ಇಂತಹ ಅಧ್ಯಯನವನ್ನು ‘ಕ್ಲಿನಿಕಲ್ ಸ್ಟಡೀಸ್’ ಎನ್ನಲಾಗುತ್ತದೆ. ಅಧ್ಯಯನದ ಪ್ರಕ್ರಿಯೆಯಲ್ಲಿ ಪರಿಣಾಮವನ್ನು ಸಾಬೀತುಪಡಿಸಿ, ಅಪಾಯಕಾರಿಯಲ್ಲವೆಂದು ದೃಢಪಟ್ಟು ತೇರ್ಗಡೆಯಬೇಕಾಗಿರುತ್ತದೆ. ಅಂತಹ ಪರಿಶ್ರಮ ಮತ್ತು ಸಾಧನೆಯನ್ನು ಪೇಟೆಂಟ್ ರೂಪದಲ್ಲಿ ಮೂಲ ಸಂಶೋಧಕರು ದಾಖಲಿಸುತ್ತಾರೆ. ಪೇಟೆಂಟ್ ಅನ್ವಯವಿರುವ ಸಮಯದಲ್ಲಿ ಬೇರೆ ಯಾರೂ ಅದೇ ಔಷಧವನ್ನು ತಯಾರಿಕೆ ಅಥವಾ ಮಾರಾಟ ಮಾಡುವಂತಿಲ್ಲ. ಹಾಗೆ ನಿಯಮ ಉಲ್ಲಂಸಿದ ವಿಚಾರದಲ್ಲಿ ಅನೇಕ ಬೃಹತ್ ಉದ್ಯಮಗಳು ಪರಸ್ಪರ ನ್ಯಾಯಾಲಯಗಳಲ್ಲಿ ಸಾವಿರಗಟ್ಟಲೆ ಕೋಟಿ ಮೊತ್ತವನ್ನು ಪರಿಹಾರ ರೂಪದಲ್ಲಿ ಕೋರಿ, ದಾವೆಗಿಳಿದಿದ್ದಿದೆ. ಆದರೆ ಒಮ್ಮೆ ಪೇಟೆಂಟ್ ಅವಧಿಯ ನಂತರ ಮುಕ್ತವಾಗಿ ಯಾವುದೇ ಸಂಸ್ಥೆೆಗಳು ತಮ್ಮದೇ ವಿಧಾನದಲ್ಲಿ ಅದೇ ಔಷಧವನ್ನು ನಿಯಮದಡಿಯಲ್ಲಿ  ತಯಾರಿಸಬಹುದು. ಹಾಗೆ ಅನೇಕ ಸಂಸ್ಥೆೆಗಳು ತಯಾರಿಸಿದ ಅದೇ ಔಷಧ ವನ್ನೇ “ಜನೆರಿಕ್ ಔಷಧ “ವೆಂದು ಹೇಳಲಾಗುತ್ತದೆ. ಅದರ ಮೂಲ ಅಧ್ಯಯನ ಒಳಗೊಂಡ ತಯಾರಿಕರ ಔಷಧವನ್ನು ಬ್ರಾಂಡೆಡ್ ಎಂದು ಹೇಳಲಾಗುತ್ತದೆ.

ಈ ಹಿನ್ನೆೆಲೆಯಲ್ಲಿ ಬ್ರಾಂಡೆಡ್ ಮತ್ತು ಜೆನೆರಿಕ್ ಔಷಧಗಳಲ್ಲಿನ ವ್ಯತ್ಯಾಸ ಮತ್ತು ಪರಿಣಾಮ ಮಹತ್ವ ಪಡೆಯುವುದು. ಬ್ರಾಂಡೆಡ್ ಔಷಧಗಳಲ್ಲಿ ಒಳಗೊಂಡ ಅಧ್ಯಯನ, ಖರ್ಚು ಮತ್ತು ಪ್ರತಿಷ್ಠೆಗೆ ತನ್ನದೇ ಬೆಲೆಯಿರುವುದು ಸ್ವಾಭಾವಿಕ. ಮೂಲ ಅಧ್ಯಯನದ ತಳಹದಿಯಲ್ಲಿ ಉತ್ಪನ್ನವಾದ ಅಂತಹ ಔಷಧಗಳ ಕುರಿತಂತೆ ವಿಶ್ವಾಸ ಮತ್ತು ಸಿದ್ಧ ಪರಿಣಾಮದ ಕಾರಣದಿಂದ ವೈದ್ಯರು ಅವನ್ನು ಉಲ್ಲೇಖಿಸಲು ಇಚ್ಛಿಸುತ್ತಾರೆ. ಹಾಗೆ ಸೂಚಿಸುವುದರಲ್ಲಿ ವಿಶ್ವಾಸ ಮತ್ತು ಸುರಕ್ಷತೆಯ ಭಾವ ಇರುತ್ತದೆ. ವೈದ್ಯಕೀಯ ತಪ್ಪುಗಳು ಅಥವಾ ಅನಾಹುತಗಳು ವಿಮರ್ಶೆ ಮತ್ತು ಕ್ರಮಕ್ಕೆೆ ಕಾರಣವಾಗುತ್ತಿರುವ ಸೂಕ್ಷ್ಮತೆ ಪಡೆದಿರುವಾಗ ವೈದ್ಯರೂ ಸ್ವಾಭಾವಿಕವಾಗಿ ಯಾವುದೇ ರಿಸ್ಕ್ ತೆಗೆದುಕೊಳ್ಳುವ ಮನಃಸ್ಥಿತಿಯಲ್ಲಿರುವುದಿಲ್ಲ. ಜೆನೆರಿಕ್ ಔಷಧಗಳೂ ಔಷಧಾತ್ಮಕವಾಗಿ ಮತ್ತು ಗುಣ ಮಟ್ಟದಲ್ಲಿ ಬ್ರಾಂಡೆಡ್ ಔಷಧದ ಮಟ್ಟವನ್ನೇ ಹೊಂದಿರಬೇಕಿದೆ. ಆದರೂ ವೈದ್ಯಕೀಯ ಮನಃಸ್ಥಿತಿಯಲ್ಲಿ ಹಿಂಜರಿಕೆಯನ್ನು ಹೊಂದಿರುತ್ತವೆ ಎಂಬುದು ಗಮನಾರ್ಹ.

ಬ್ರಾಂಡೆಡ್ ಔಷಧಗಳ ಸಾಲಿನಲ್ಲಿ ಹೆಚ್ಚಿನವು ಅಂತಾರಾಷ್ಟ್ರೀಯ ಕಂಪನಿಗಳು. ನೂರಾರು ವರ್ಷಗಳಿಂದ ಸಂಶೋಧನೆ ಮತ್ತು ವ್ಯಾಪಾರದಲ್ಲಿರುವ ಕಂಪನಿಗಳು. ಅವುಗಳಿಗೆ ತನ್ನದೇ ಆದ ವ್ಯವಸ್ಥಾಪಕ ಖರ್ಚುಗಳಿವೆ. ಷೇರು ಮಾರುಕಟ್ಟೆೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಾಭದ ನಿರೀಕ್ಷೆಯಿದೆ. ಜನೆರಿಕ್ ಔಷಧಗಳನ್ನು ತಯಾರಿಸುವ ಬಹುತೇಕ ಕಂಪನಿಗಳು ದೇಶೀ ಸಂಸ್ಥೆೆಗಳು. ಔಷಧ ತಯಾರಿಕೆ, ಮಾರಾಟ ಮತ್ತು ಲಾಭದ ದೃಷ್ಟಿಯಲ್ಲಿ ಅವುಗಳು ಖರ್ಚಿನ ಮಟ್ಟವನ್ನು ಸಾಕಷ್ಟು ನಿಯಂತ್ರಣದಲ್ಲಿ ಇಟ್ಟಿರುವುದರಿಂದ ಕಡಿಮೆ ದರದಲ್ಲಿ ಮಾರುಕಟ್ಟೆೆಯಲ್ಲಿ ವಿತರಿಸಬಹುದಾಗಿದೆ.

ಅಂತಹ ಮೂಲಭೂತ ಕಾರಣಗಳ ಹಿನ್ನೆೆಲೆಯಲ್ಲಿ ಜನೆರಿಕ್ ಔಷಧವನ್ನೇ ಸೂಚಿಸಬೇಕೆಂಬ ಇತ್ತೀಚಿನ  ಆದೇಶವು ವೈದ್ಯಕೀಯ ಮತ್ತು ಔಷಧದ ಜಗತ್ತಿನಲ್ಲಿ ಗೊಂದಲವನ್ನುಂಟುಮಾಡಿದೆ. ಈ ಕುರಿತು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ತನ್ನ ಕಳವಳ ವ್ಯಕ್ತಪಡಿಸಿದೆ. ಜೆನೆರಿಕ್ ಔಷಧದ ಗುಣಮಟ್ಟವು ಬ್ರಾಂಡೆಡ್ ಔಷಧಕ್ಕೆೆ ಸರಿ ಸಮಾನವಾಗಿರುವ ನಿಶ್ಚಿತ ಪರಿಣಾಮದ  ಭರವಸೆ ಕೇಳಿದೆ. ಜೆನೆರಿಕ್ ಔಷಧಗಳ ಗುಣ ಮಟ್ಟದ ನಿಯಂತ್ರಣವು ಪೂರ್ತಿ ಸಶಕ್ತವೆನ್ನುವ ಕುರಿತೂ ಶಂಕೆ ವ್ಯಕ್ತಪಡಿಸಲಾಗಿದೆ. ರಕ್ತದಲ್ಲಿ ಔಷಧಗಳು ಉಂಟುಮಾಡುವ ಬಯೋ ಅವೈಲಬಿಲಿಟಿ ವಿಚಾರದಲ್ಲಿ ಎರಡೂ ಬಗೆಯಲ್ಲಿರುವ ಸಾಮರಸ್ಯದ ಕುರಿತೂ ಪ್ರಶ್ನೆೆ ಎದ್ದಿದೆ. ಜೆನೆರಿಕ್ ಔಷಧವು ಗುಣ ಮಟ್ಟದಲ್ಲಿ ಬ್ರಾಂಡೆಡ್ ಔಷಧಗಳಷ್ಟೇ ಸಶಕ್ತವಿದ್ದು. ಬೆಲೆಯಲ್ಲಿ  ಸುಮಾರು ಮೂವತ್ತರಿಂದ ನೂರು ಪ್ರತಿಶತಕ್ಕೂ ಹೆಚ್ಚು ಅಗ್ಗವಾಗಿರುತ್ತದೆ. ಬ್ರಾಂಡೆಡ್ ಔಷಧದಿಂದ ಜನರ ಮೇಲೆ ಹೆಚ್ಚಿನ ಹೊರೆ ಬಿದ್ದಂತಾಗುವುದೆಂದೂ, ನಮ್ಮ ದೇಶದಲ್ಲಿ  ಔಷಧ ಬಳಕೆ ಅತೀವವಾದ್ದರಿಂದ ಅರೋಗ್ಯ ಕಾಳಜಿ ವ್ಯವಸ್ಥೆೆಯಲ್ಲಿ ಹಣದುಬ್ಬರಕ್ಕೆೆ ಕಾರಣವಾಗುತ್ತದೆಂಬುದು ಎನ್‌ಎಮ್‌ಸಿ ಕಡೆಯ ವಾದ. ಇಂತಹ ಮಹತ್ವದ ನಿರ್ದೇಶನ ನೀಡುವ ಮೊದಲು ಸಾಧಕ ಬಾಧಕದ ಕುರಿತು ಚರ್ಚಿಸಿ ನಿರ್ಧಾರಕ್ಕೆ ಬರಬೇಕಿತ್ತೆೆಂಬುದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಪರ ನಿಲುವು.

ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ನೀಡಿದ ಆದೇಶದಲ್ಲಿ ವೈದ್ಯರು ಔಷಧ ಉಲ್ಲೇಖ ಮಾಡುವಾಗ ಜೆನೆರಿಕ್ ಹೆಸರು ಮತ್ತು ಅದರಲ್ಲಿನ ಮೂಲ ಔಷಧದ ಹೆಸರನ್ನು ಸೂಚಿಸುವ ನಿರ್ದೇಶನವಿದೆಯೆಂದೂ ತಿಳಿಯಲಾಗಿದೆ. ಅಂತಹ ಉಲ್ಲೇಖದಿಂದ ಔಷಧ ಮಾರುವ ಅಂಗಡಿಯಿಂದ ಸರಿಯಾದ ಔಷಧ ಪಡೆಯುವ ಕುರಿತೂ ಸವಾಲು ಎದ್ದಿದೆ. ಏಕೆಂದರೆ ಹಲವು ಔಷಧ ಅಂಗಡಿಗಳಲ್ಲಿ ಕೆಲವೊಮ್ಮೆ ಫಾರ್ಮಸಿಸ್ಟ್ ಇಲ್ಲದಿರುವ ಸಂದರ್ಭರ್ವೂ ಇದೆ. ಮೂಲ ದ್ರವ್ಯವನ್ನು ಉಲ್ಲೇಖಿಸುವ ಪರಿಜ್ಞಾನವು ನಮ್ಮ ವೈದ್ಯಕೀಯ ಸಮಾಜಕ್ಕಿದೆಯೇ ಎಂಬುದು ಇನ್ನೊಂದು ಪ್ರಶ್ನೆಯಾಗಿದೆ.

ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ ಆರ್‌ಟಿಐ ಕಾರ್ಯಕರ್ತರೊಬ್ಬರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಇಂಡಿಯನ್ ಮೆಡಿಕಲ್ ಕೌನ್ಸಿಲ್ ಹೊರಡಿಸಿದ್ದ 2002ರ ಅಧಿನಿಯಮವನ್ನು ವೈದ್ಯರು ಪಾಲಿಸುತ್ತಿಲ್ಲವೆಂದು ಮತ್ತು ಜನೆರಿಕ್ ಔಷಧಿಯನ್ನು ಸೂಚಿಸಿದ ನಿಟ್ಟಿನಲ್ಲಿ ಉಲ್ಲೇಖಿಸುತ್ತಿಲ್ಲವೆಂದು ವಾದಿಸಿದ್ದಾರೆ. ಸರಿಯಾಗಿ ನಿಯಮ ಪಾಲಿಸದ ವೈದ್ಯರ ವಿರುದ್ಧ ಯೋಗ್ಯ ಕ್ರಮ ಜರುಗಿಸಬೇಕೆಂದು ಕೇಳಿದ್ದಾರೆ. ವೈದ್ಯರು ರೋಗಿಗಳಿಗೆ ನೀಡುವ ಔಷಧ ಸೂಚಿ ಚೀಟಿಯನ್ನು ‘SURPRISE CHECK’ಗೆ ಒಳಪಡಿಸುವಂತೆ ಕೇಳಿಕೊಂಡಿದ್ದಾರೆ. ನ್ಯಾಯಾಲಯವು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗಲ್ಲದೇ ಎಮ್‌ಎಮ್‌ಸಿಯ ಎಥಿಕ್ಸ್ ಮತ್ತು ವೈದ್ಯಕೀಯ ನೋಂದಣಿ ಮಂಡಳಿಗೆ ಈ ಕುರಿತು ನೋಟಿಸ್ ನೀಡಿರುವುದು ಗಮನಾರ್ಹ. ಇದಿನ್ನೂ ವಿಚಾರಣೆಯ ಹಂತದಲ್ಲಿದೆ.

ಎಲ್ಲ ಗೊಂದಲಗಳ ನಡುವೆ ಎಲ್ಲರೂ ಒಪ್ಪುವ ವಿಚಾರವೆಂದರೆ ರೋಗಿಗಳಿಗೆ ಔಷಧ  ಸೌಲಭ್ಯವು ಸುಲಭ ದರದಲ್ಲಿ ಸಿಗಬೇಕು. ಉಲ್ಲೇಖಿಸುವ ಔಷಧಗಳ ಗುಣಮಟ್ಟ ಮತ್ತು ಪರಿಣಾಮ ಪ್ರಶ್ನಾತೀತವಾಗಿರಬೇಕು. ಸಂಶಯಾತೀತ ವಾಗಿರಬೇಕು. ಜನೆರಿಕ್ ಔಷಧಗಳನ್ನು ಸೂಚಿಸುವುದಾದಲ್ಲಿ ಬ್ರಾಂಡ್ ಔಷಧಕ್ಕೆೆ ಸರಿಸಾಟಿಯಾದ ಜನೆರಿಕ್ ಔಷಧದ ಪಟ್ಟಿಯನ್ನು ಲಭ್ಯವಾಗಿಸಬೇಕು. ಈ ಕುರಿತು ಎರಡೂ ಬಗೆಯ ವಿಚಾರವನ್ನು ನಿಭಾಯಿಸಬಲ್ಲ, ಸಮರ್ಥಿಸುವ  ಸರಿಯಾದ ಮಾರ್ಗವನ್ನು ಆಡಳಿತಾಂಗ, ವೈದ್ಯಕೀಯ ಮತ್ತು  ಔಷಧ ಜಗತ್ತು ಸೇರಿ ಸಮರ್ಪಕವಾಗಿ ನಿರ್ಧರಿಸಬೇಕು. ಸಾಮಾನ್ಯ ಜನರ ಒಳಿತೇ ಈ ನಿಟ್ಟಿನಲ್ಲಿ ಅಂತಿಮ ಮಾರ್ಗದರ್ಶಿಯಾಗಬೇಕು.

-ಎಸ್.ಜಿ.ಹೆಗಡೆ
(ಲೇಖಕರು ಮುಂಬೈನ ಔಷಧ ಕಂಪನಿಯ ನಿರ್ದೇಶಕರು)