Friday, 20th September 2024

Cancer Risk: ಮೊಬೈಲ್ ಫೋನ್‌ ಬಳಕೆಯಿಂದ ಕ್ಯಾನ್ಸರ್ ಅಪಾಯ? ಹೊಸ ಅಧ್ಯಯನ ಹೇಳಿದ್ದೇನು?

Cancer risk

ಸ್ಮಾರ್ಟ್ ಫೋನ್ (smart phone) ಸೇರಿ ವಿವಿಧ ಗ್ಯಾಜೆಟ್ಸ್ ಬಳಸುವ ಎಲ್ಲರಿಗೂ ಒಂದು ನೆಮ್ಮದಿ ಕೊಡುವ ಸುದ್ದಿ ಇದು. ಮೊಬೈಲ್ ಫೋನ್, ವೈರ್ ಲೆಸ್ ತಂತ್ರಜ್ಞಾನಗಳಿಂದ ಹೊರಸೂಸುವ ವಿದ್ಯುತ್ಕಾಂತೀಯ ವಿಕಿರಣದಿಂದ (electromagnetic radiation) ಕ್ಯಾನ್ಸರ್ (Cancer Risk) ಬರುವುದಿಲ್ಲ ಎಂದು ಹೊಸ ಅಧ್ಯಯನವೊಂದು (New Study) ಹೇಳಿದ್ದು, ಇದನ್ನು ವಿಶ್ವ ಆರೋಗ್ಯ ಸಂಸ್ಥೆ (World Health Organization) ಎನ್ವಿರಾನ್‌ಮೆಂಟ್ ಇಂಟರ್‌ನ್ಯಾಷನಲ್‌ನಲ್ಲಿ ಪ್ರಕಟಿಸಿದೆ.

ಹೊಸ ಅಧ್ಯಯನವು ಮೊಬೈಲ್ ಫೋನ್‌ಗಳು ಮತ್ತು ವೈರ್‌ಲೆಸ್ ತಂತ್ರಜ್ಞಾನಗಳಿಂದ ಬರುವ ವಿದ್ಯುತ್ಕಾಂತೀಯ ವಿಕಿರಣವು ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂಬ ಆರೋಪವನ್ನು ತಳ್ಳಿಹಾಕಿದೆ. ಈ ವಿದ್ಯುತ್ಕಾಂತೀಯ ವಿಕಿರಣಗಳು ತುಂಬಾ ದುರ್ಬಲವಾಗಿದೆ. ಇದು ಡಿಎನ್‌ಎಗೆ ಹಾನಿ ಮಾಡುವಷ್ಟು ಶಕ್ತಿ ಹೊಂದಿಲ್ಲ. ಹೀಗಾಗಿ ಇದರಿಂದ ಕ್ಯಾನ್ಸರ್ ಬರುವ ಸಾಧ್ಯತೆಯೂ ಇಲ್ಲ ಎಂದು ಅಧ್ಯಯನ ಹೇಳಿದೆ.

ಅಧ್ಯಯನದ ಸಹ ಲೇಖಕರಾದ ನ್ಯೂಜಿಲೆಂಡ್‌ನ ಆಕ್ಲೆಂಡ್ ವಿಶ್ವವಿದ್ಯಾಲಯದಲ್ಲಿ ಮಾರ್ಕ್ ಎಲ್ವುಡ್ ಈ ಕುರಿತು ಪ್ರತಿಕ್ರಿಯಿಸಿದ್ದು, ಮೊಬೈಲ್ ಫೋನ್‌ಗಳು ಮತ್ತು ಮೆದುಳಿನ ಕ್ಯಾನ್ಸರ್‌ಗಳಿಗೆ ಸಂಬಂಧಿಸಿ 10ಕ್ಕಿಂತ ಹೆಚ್ಚು ವರ್ಷಗಳ ಮತ್ತು ಗರಿಷ್ಠ ಕರೆ ಸಮಯದ ಕುರಿತು ಅಧ್ಯಯನ ನಡೆಸಿದ್ದು ಯಾವುದೇ ಹೆಚ್ಚಿನ ಅಪಾಯವನ್ನು ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ.

Cancer risk

ಕ್ಯಾನ್ಸರ್ ಪ್ರಮಾಣ ಸ್ಥಿರವಾಗಿದೆ

ಮೊಬೈಲ್ ಫೋನ್‌ಗಳಿಂದ ಮೆದುಳು, ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್‌ಗಳ ನಡುವೆ ಯಾವುದೇ ಸಂಬಂಧ ಇಲ್ಲ. ಮೊಬೈಲ್ ಫೋನ್ ಬಳಕೆ ಗಗನಕ್ಕೇರಿದ್ದರೂ ಬ್ರೈನ್ ಟ್ಯೂಮರ್ ಪ್ರಮಾಣ ಸ್ಥಿರವಾಗಿಯೇ ಉಳಿದಿದೆ ಎಂದು ಪ್ರಮುಖ ಲೇಖಕ ಕೆನ್ ಕರಿಪಿಡಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಸ್ಟ್ರೇಲಿಯನ್ ರೇಡಿಯೇಶನ್ ಪ್ರೊಟೆಕ್ಷನ್ ಮತ್ತು ನ್ಯೂಕ್ಲಿಯರ್ ಸೇಫ್ಟಿ ಏಜೆನ್ಸಿ (ಅರ್ಪಾನ್ಸ) ನೇತೃತ್ವದ ತಂಡವು ಈ ವಿಷಯದ ಬಗ್ಗೆ 5,000ಕ್ಕೂ ಹೆಚ್ಚು ಅಧ್ಯಯನಗಳನ್ನು ಪರಿಶೀಲಿಸಿದೆ. ಮೊಬೈಲ್ ಫೋನ್‌, ವೈರ್‌ಲೆಸ್ ತಂತ್ರಜ್ಞಾನದಿಂದ ಹೊರಸೂಸುವ ರೇಡಿಯೊ ತರಂಗಗಳು ದೇಹಕ್ಕೆ ನೇರವಾಗಿ ಹಾನಿ ಮಾಡುವಷ್ಟು ಶಕ್ತಿಯನ್ನು ಹೊಂದಿಲ್ಲ ಎಂಬುದಕ್ಕೆ ಈ ಅಧ್ಯಯನದಿಂದ ಪುರಾವೆಗಳು ದೊರೆತಿವೆ.

Cancer risk

ಮೊಬೈಲ್ ಫೋನ್‌ಗಳು ಹೇಗೆ ಕೆಲಸ ಮಾಡುತ್ತವೆ?

ಮೊಬೈಲ್ ಫೋನ್‌ಗಳು ರೇಡಿಯೊಫ್ರೀಕ್ವೆನ್ಸಿ (RF) ತರಂಗಗಳನ್ನು ಬಳಸಿಕೊಂಡು ಸಂಕೇತಗಳನ್ನು ವಿನಿಮಯ ಮಾಡಿಕೊಳ್ಳುತ್ತವೆ. ಇದು ವಿದ್ಯುತ್ಕಾಂತೀಯ ವರ್ಣಪಟಲದಲ್ಲಿನ ಶಕ್ತಿಯ ಒಂದು ರೂಪವಾಗಿದೆ. ಇದಕ್ಕಾಗಿಯೇ ಮೊಬೈಲ್ ಫೋನ್‌ಗಳು ವಿದ್ಯುತ್ಕಾಂತೀಯ ವಿಕಿರಣವನ್ನು ನೀಡುತ್ತದೆ.

ಮೊಬೈಲ್ ಫೋನ್ ನೆಟ್‌ವರ್ಕ್‌ಗಳು ಬಳಸುವ ರೇಡಿಯೊಫ್ರೀಕ್ವೆನ್ಸಿ ತರಂಗಗಳು ಅಯಾನೀಕರಿಸದ (non ionising radiation) ಅಂದರೆ ಕಡಿಮೆ ಶಕ್ತಿಯ ವಿಕಿರಣದ ಒಂದು ರೂಪವಾಗಿದೆ. ಅಯಾನೀಕರಿಸದ ವಿಕಿರಣವು ದತ್ತಾಂಶವನ್ನು ರವಾನಿಸಲು ಸಣ್ಣ ಪ್ರಮಾಣದ ಶಕ್ತಿಯನ್ನು ಬಳಸುತ್ತದೆ. ಮಾನವ ದೇಹ ಅಥವಾ ಡಿಎನ್‌ಎಗೆ (ಜೀನ್‌ಗಳು) ಇದು ಹಾನಿ ಮಾಡುವಷ್ಟು ಶಕ್ತಿಯನ್ನು ಹೊಂದಿಲ್ಲ.

ಎಲ್ಲಾ 4ಜಿ, 5ಜಿ, ವೈಫೈ ಮತ್ತು ಬ್ಲೂಟೂತ್ ದತ್ತಾಂಶವನ್ನು ರವಾನಿಸಲು ರೇಡಿಯೊ ತರಂಗಗಳ ಮೇಲೆ ಅವಲಂಬಿತವಾಗಿದೆ. ಆದರೆ ಯಾವುದೂ ದೇಹದ ಅಂಗಾಂಶಗಳನ್ನು ಬಿಸಿ ಮಾಡಲು, ಜೀವಕೋಶ ಅಥವಾ ಡಿಎನ್‌ಎಗೆ ಹಾನಿ ಮಾಡುವಷ್ಟು ಶಕ್ತಿಯನ್ನು ಹೊಂದಿಲ್ಲ.

ರೇಡಿಯೊಫ್ರೀಕ್ವೆನ್ಸಿ ತರಂಗಗಳು ಎಕ್ಸ್-ಕಿರಣಗಳು, ಗಾಮಾ ಕಿರಣಗಳು ಮತ್ತು ನೇರಳಾತೀತ ಕಿರಣಗಳಿಗಿಂತ ಭಿನ್ನವಾಗಿರುತ್ತವೆ ಎಂದು ಅಧ್ಯಯನವು ತಿಳಿಸಿದೆ.

Cancer risk

ಈ ಅಧ್ಯಯನವು ಏಕೆ ಮಹತ್ವದ್ದಾಗಿದೆ?

ವಿಶ್ವ ಆರೋಗ್ಯ ಸಂಸ್ಥೆಯ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (IARC) 2011ರಲ್ಲಿ ಅಧ್ಯಯನ ಪ್ರಾರಂಭಿಸಿದೆ. ಈ ಅಧ್ಯಯನದಲ್ಲಿ ಮೊಬೈಲ್ ಫೋನ್ ಬಳಕೆ ಮತ್ತು ಕ್ಯಾನ್ಸರ್ ನಡುವಿನ ಸಂಬಂಧವನ್ನು ಕಂಡುಹಿಡಿಯಲಿಲ್ಲ. ದೀರ್ಘಾವಧಿಯ ಬಳಕೆಯಿಂದಾಗುವ ಯಾವುದೇ ಅಪಾಯವನ್ನು ತಳ್ಳಿಹಾಕಿದೆ.

ತಲೆಯ ಸಮೀಪ ಫೋನ್ ಇಡುವುದರಿಂದ ಇದರ ತರಂಗಗಳನ್ನು ಮೆದುಳಿಗೆ ಹಾನಿ ಮಾಡುತ್ತದೆ ಎಂಬ ಆತಂಕದಿಂದಾಗಿ ಈ ಅಧ್ಯಯನವನ್ನು ನಡೆಸಲಾಗಿದೆ. 5,000ಕ್ಕೂ ಹೆಚ್ಚು ಮಂದಿಯ ಮೇಲೆ ಈ ಅಧ್ಯಯನವನ್ನು ನಡೆಸಲಾಗಿದೆ. 22 ದೇಶಗಳ 63 ಪ್ರದೇಶಗಳಲ್ಲಿ ಅಧ್ಯಯನ ನಡೆಸಲಾಗಿದೆ. ಈ ಅಧ್ಯಯನಕ್ಕಾಗಿ ಮೆದುಳಿನ ಕ್ಯಾನ್ಸರ್ ಗಳಿಗೆ ಕಾರಣವಾಗುವ ಪಿಟ್ಯುಟರಿ ಗ್ರಂಥಿ, ಲಾಲಾರಸ ಗ್ರಂಥಿಗಳು ಮತ್ತು ಲ್ಯುಕೇಮಿಯಾಗಳ ಪರಿಶೀಲನೆ ನಡೆಸಲಾಗಿದೆ ಎಲ್ವುಡ್ ತಿಳಿಸಿದ್ದಾರೆ.

ತಜ್ಞರು ಏನು ಹೇಳುತ್ತಾರೆ?

ಏಮ್ಸ್ ಆಂಕೊಲಾಜಿಸ್ಟ್ ಡಾ. ಅಭಿಷೇಕ್ ಶಂಕರ್ ಮಾತನಾಡಿ, ಸೆಲ್ ಫೋನ್‌ಗಳ ವಿಕಿರಣವು ಅಯಾನೀಕರಿಸುವುದಿಲ್ಲ. ಹೀಗಾಗಿ ಇದು ಕ್ಯಾನ್ಸರ್ ಗೆ ಕಾರಣವಾಗುವುದಿಲ್ಲ. ಎಕ್ಸ್-ರೇ ಯಂತ್ರದ ವಿಕಿರಣವು ಅಯಾನೀಕರಿಸುತ್ತದೆ. ಹೀಗಾಗಿ ಇದು ಕ್ಯಾನ್ಸರ್ ಗೆ ಕಾರಣವಾಗಬಹುದು. ಅಯಾನೀಕರಿಸುವ ವಿಕಿರಣವು ಸಾಕಷ್ಟು ಶಕ್ತಿಯನ್ನು ಹೊಂದಿದೆ. ಪರಮಾಣು ವಿದ್ಯುತ್ ಸ್ಥಾವರಗಳಂತೆ ಪರಮಾಣುಗಳಿಂದ ಎಲೆಕ್ಟ್ರಾನ್‌ಗಳನ್ನು ತೆಗೆದುಹಾಕುತ್ತದೆ ಮತ್ತು ಸಾವಯವ ಪದಾರ್ಥಗಳಲ್ಲಿನ ಕೋಶಗಳನ್ನು ಹಾನಿಗೊಳಿಸುತ್ತದೆ ಎಂದು ಹೇಳಿದ್ದಾರೆ.

ಹೀಗಾಗಿ ಸ್ಕ್ರೀನಿಂಗ್ ಮತ್ತು ಧೂಮಪಾನದಂತಹ ಅಪಾಯಕಾರಿ ಅಂಶಗಳನ್ನು ಆದಷ್ಟು ಕಡಿಮೆಗೊಳಿಸಲು ಶಿಫಾರಸು ಮಾಡಿದ್ದಾರೆ. ಅಲ್ಲದೇ ಅಪಾಯವಿಲ್ಲವೆಂದು ಮೊಬೈಲ್ ಫೋನ್‌ಗಳ ಬಳಕೆಯನ್ನು ಹೆಚ್ಚುಗೊಳಿಸುವುದು ಸರಿಯಲ್ಲ. ಆದಷ್ಟು ಮಿತಿಯಲ್ಲಿ ಇರಿಸಬೇಕು. ಇಲ್ಲವಾದರೆ ತಲೆನೋವು, ಆತಂಕ ಮತ್ತು ಶ್ರವಣ ನಷ್ಟಕ್ಕೆ ಕಾರಣವಾಗಬಹುದುಎನ್ನುತ್ತಾರೆ ಅವರು.

ಹಿಂದಿನ ಸಂಶೋಧನೆಯಲ್ಲಿ ಏನಿದೆ?

ಕಳೆದ ಮೂರು ದಶಕಗಳಲ್ಲಿ ಮೊಬೈಲ್ ಫೋನ್ ಬಳಕೆ ಮತ್ತು ಕ್ಯಾನ್ಸರ್ ಕುರಿತು ಹಲವು ಅಧ್ಯಯನಗಳು ನಡೆದಿವೆ. ಕಾಸ್ ಮೋಸ್ (COSMOS) ಅಧ್ಯಯನವು ಮೊಬೈಲ್ ಫೋನ್ ಬಳಕೆದಾರರಲ್ಲಿ ಮೆದುಳಿನ ಗೆಡ್ಡೆ ಅಭಿವೃದ್ಧಿಯಾಗುವ ಹೆಚ್ಚಿನ ಅಪಾಯವಿಲ್ಲ ಎಂದು ಹೇಳಿದೆ.

Apple iphone 16 : ಐಫೋನ್ 16 ಸೀರಿಸ್ ಬಿಡುಗಡೆ ವೇಳೆ ಆಪಲ್‌ನ ಯೂಟ್ಯೂಬ್ ಪೇಜ್ ಹ್ಯಾಕ್?

ಇಂಟರ್‌ಫೋನ್ ಅಧ್ಯಯನವು ಮೆದುಳಿನ ಗೆಡ್ಡೆಗಳು ಮತ್ತು ಮೊಬೈಲ್ ಫೋನ್‌ಗಳ ನಡುವೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ತಿಳಿಸಿದೆ. ಹೆಚ್ಚಾಗಿ ಸೆಲ್ ಫೋನ್‌ಗಳನ್ನು ಬಳಸಿದ ಶೇ. 10ರಷ್ಟು ಜನರು ಮೆದುಳಿನ ಗೆಡ್ಡೆಯ ಅಪಾಯ ಕಂಡು ಬಂದಿದೆ ಎಂದು ತಿಳಿಸಿದ್ದಾರೆ. 2019 ವಿಶ್ಲೇಷಣೆ ಪ್ರಕಾರ ಮೊಬೈಲ್ ಫೋನ್‌ಗಳನ್ನು ಬಳಸುವ ಮಕ್ಕಳಲ್ಲಿ ಟ್ಯೂಮರ್‌ ಅಪಾಯದ ಕುರಿತು ಯಾವುದೇ ಖಚಿತತೆ ಸಿಕ್ಕಿಲ್ಲ ಎನ್ನಲಾಗಿದೆ.