Monday, 7th October 2024

Healthy Brain: ದಿನಚರಿಯಲ್ಲಿ ಇರಲಿ ಈ ನಿಯಮ; ಆರೋಗ್ಯಕರವಾಗಿರಲಿ ಮೆದುಳು

Healthy Brain

ದೈಹಿಕ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿತ್ಯದ ದಿನಚರಿಯಲ್ಲಿ (Daily routine) ಕೆಲವೊಂದು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. ಅದರಲ್ಲೂ ಮೆದುಳು ಆರೋಗ್ಯವಾಗಿದ್ದರೆ (Healthy Brain) ದೇಹ, ಮನಸ್ಸು ಸ್ವಸ್ಥವಾಗಿರುತ್ತದೆ. ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಲು ಕೆಲವು ನಿಯಮಗಳನ್ನು ಪಾಲಿಸಲೇಬೇಕು.

ವಯಸ್ಸಾದಂತೆ ದೇಹ ಮತ್ತು ಮೆದುಳಿನಲ್ಲಿ ಬದಲಾವಣೆಗಳಾಗುವುದು ಸಹಜ. ಆದರೆ ಸ್ಮರಣ ಶಕ್ತಿಯಲ್ಲಿ ಯಾವುದೇ ಕುಸಿತವಾಗದೇ ಇರಲು ಮರೆಗುಳಿ ಕಾಯಿಲೆ ಅಥವಾ ಬುದ್ಧಿ ಮಾಂಧ್ಯತೆ ಅಪಾಯ ಕಡಿಮೆ ಮಾಡಲು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಇದಕ್ಕಾಗಿ ವೈದ್ಯೆ ರಾಜಲಕ್ಷ್ಮಿ ಇಡುಪುಗಂಟಿ ಅವರು ನೀಡಿರುವ ಆರು ಪ್ರಮುಖ ಸಲಹೆಗಳು ಇಂತಿವೆ.

ನಿಯಮಿತ ವ್ಯಾಯಾಮ

ವ್ಯಾಯಾಮವು ದೇಹ ಮತ್ತು ಮನಸ್ಸಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ನಿಯಮಿತವಾಗಿ ದೈಹಿಕ ಚಟುವಟಿಕೆ ನಡೆಸುವುದು ಮೆದುಳಿನ ಆರೋಗ್ಯಕ್ಕೂ ಒಳ್ಳೆಯದು. ದೈಹಿಕ ಚಟುವಟಿಕೆಯುಳ್ಳ ಜನರು ತಮ್ಮ ಮಾನಸಿಕ ಕಾರ್ಯದಲ್ಲಿ ಕುಸಿತವನ್ನು ಅನುಭವಿಸುವ ಸಾಧ್ಯತೆ ಕಡಿಮೆ ಹಾಗೂ ಮರೆಗುಳಿತನದ ಕಾಯಿಲೆ ಉಂಟಾಗುವ ಅಪಾಯ ಕಡಿಮೆ ಎನ್ನುತ್ತದೆ ಸಂಶೋಧನಾ ಅಧ್ಯಯನಗಳು.

ವ್ಯಾಯಾಮದ ಸಮಯದಲ್ಲಿ ಮೆದುಳಿಗೆ ಹೆಚ್ಚಿನ ರಕ್ತದ ಹರಿವಿನಿಂದ ವಯಸ್ಸಾದ ಸಮಯದಲ್ಲಿ ಸಂಭವಿಸುವ ಮೆದುಳಿನ ಸಂಪರ್ಕಗಳಲ್ಲಿನ ಕೆಲವು ನೈಸರ್ಗಿಕ ಕಡಿತವನ್ನು ಎದುರಿಸಲು ಇದು ಸಹಾಯ ಮಾಡುತ್ತದೆ.
ದಿನಕ್ಕೆ 30 ರಿಂದ 60 ನಿಮಿಷಗಳವರೆಗೆ ವ್ಯಾಯಾಮ ಮಾಡುವುದು ಒಳ್ಳೆಯದು. ಇದಕ್ಕಾಗಿ ಈಜಬಹುದು, ಟೆನ್ನಿಸ್ ಆಡಬಹುದು ಅಥವಾ ಹೃದಯ ಬಡಿತವನ್ನು ಹೆಚ್ಚಿಸುವ ಯಾವುದೇ ಮಧ್ಯಮ ಏರೋಬಿಕ್ ಚಟುವಟಿಕೆಯನ್ನು ನಡೆಸಬಹುದು.

ಸಾಕಷ್ಟು ನಿದ್ರೆ

ಮೆದುಳಿನ ಆರೋಗ್ಯದಲ್ಲಿ ನಿದ್ರೆ ಪ್ರಮುಖ ಪಾತ್ರ ವಹಿಸುತ್ತದೆ. ನಿದ್ರೆಯು ಮೆದುಳಿನಲ್ಲಿರುವ ಅಸಹಜ ಪ್ರೋಟೀನ್‌ಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ ಮತ್ತು ಸ್ಮರಣ ಸಾಮರ್ಥ್ಯ ಹೆಚ್ಚಿಸುತ್ತದೆ. ಪ್ರತಿ ರಾತ್ರಿಗೆ ಸತತ ಏಳರಿಂದ ಎಂಟು ಗಂಟೆಗಳ ನಿದ್ರೆ ಮಾಡುವುದು ಬಹುಮುಖ್ಯ.

Healthy Brain

ಉತ್ತಮ ಆಹಾರ

ಮೆದುಳಿನ ಆರೋಗ್ಯದಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಹಸಿರು ಸೊಪ್ಪು, ತರಕಾರಿ, ಧಾನ್ಯ, ಮೀನು ಮತ್ತು ಆಲಿವ್ ಎಣ್ಣೆಯಂತಹ ಆರೋಗ್ಯಕರ ಕೊಬ್ಬುಗಳನ್ನೂ ಹೊಂದಿರುವ ಆಹಾರ ಮೆದುಳಿನ ಆರೋಗ್ಯಕ್ಕೆ ಉತ್ತಮ.

ಆಲಿವ್ ಎಣ್ಣೆ ಮತ್ತು ಇತರ ಆರೋಗ್ಯಕರ ಕೊಬ್ಬುಗಳಿರುವ ಒಮೆಗಾ ಕೊಬ್ಬಿನಾಮ್ಲಗಳು ಜೀವಕೋಶಗಳು ಸರಿಯಾಗಿ ಕಾರ್ಯನಿರ್ವಹಿಸಲು ಅತ್ಯಗತ್ಯ. ಇದು ಮಾನಸಿಕ ಆರೋಗ್ಯವನ್ನು ವೃದ್ಧಿಗೊಳಿಸುತ್ತದೆ ಮತ್ತು ವಯಸ್ಸಾದವರಲ್ಲಿ ನೆನಪಿನ ಶಕ್ತಿಯನ್ನು ವೃದ್ಧಿಗೊಳಿಸುತ್ತದೆ.

ಮಾನಸಿಕವಾಗಿ ಸಕ್ರಿಯರಾಗಿರಿ

ಮೆದುಳು ಸ್ನಾಯುವಿನಂತೆಯೇ ಇರುತ್ತದೆ. ನೀವು ಅದನ್ನು ಬಳಸಬೇಕು. ಮೆದುಳನ್ನು ಆಕಾರದಲ್ಲಿಡಲು ಮಾಡಬಹುದಾದ ಹಲವು ವಿಷಯಗಳಿವೆ. ಉದಾಹರಣೆಗೆ ಕ್ರಾಸ್‌ವರ್ಡ್ ಪಜಲ್‌ಗಳು ಅಥವಾ ಸುಡೋಕು ಮಾಡುವುದು, ಓದುವುದು, ಕಾರ್ಡ್‌ಗಳನ್ನು ಆಡುವುದು ಅಥವಾ ಜಿಗ್ಸಾ ಪಜಲ್ ಅನ್ನು ಒಟ್ಟಿಗೆ ಸೇರಿಸುವುದು. ಇದು ಮೆದುಳಿಗೆ ತರಬೇತಿ ನೀಡುತ್ತದೆ. ಇದರಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.

ಓದುವ ಮೂಲಕ ಅಥವಾ ಒಗಟು ಸವಾಲು ಮಾಡುವ ಮೂಲಕ ಮೆದುಳಿಗೆ ಉತ್ತಮ ವ್ಯಾಯಾಮ ದೊರೆಯುತ್ತದೆ. ಹೆಚ್ಚು ಟಿವಿ ಇತರೆ ಸ್ಕ್ರೀನ್ ಗಳನ್ನು ನೋಡಬೇಡಿ. ಇದರಿಂದ ಮೆದುಳು ನಿಷ್ಕ್ರಿಯವಾಗುತ್ತದೆ.
ಸಾಮಾಜಿಕವಾಗಿ ತೊಡಗಿಸಿಕೊಳ್ಳಿ.

ಸಾಮಾಜಿಕ ಸಂವಹನ ಮಾಡದೇ ಇದ್ದರೆ ಖಿನ್ನತೆ ಮತ್ತು ಒತ್ತಡ ಉಂಟಾಗುತ್ತದೆ. ಇದು ನೆನಪಿನ ಶಕ್ತಿಯ ನಷ್ಟಕ್ಕೆ ಕಾರಣವಾಗಬಹುದು. ಪ್ರೀತಿಪಾತ್ರರು, ಸ್ನೇಹಿತರು ಮತ್ತು ಇತರರೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ಹುಡುಕಿ. ವಿಶೇಷವಾಗಿ ಏಕಾಂಗಿಯಾಗಿ ವಾಸಿಸುತ್ತಿದ್ದರೆ ಸಾಮಾಜಿಕವಾಗಿ ಸಕ್ರಿಯವಾಗಿರುವುದು ಹೆಚ್ಚು ಅಗತ್ಯ. ಇದು ಮೆದುಳಿನ ಆರೋಗ್ಯವನ್ನು ಬಲಪಡಿಸುತ್ತದೆ.

Healthy Brain

ರಕ್ತನಾಳಗಳನ್ನು ಆರೋಗ್ಯವಾಗಿರಿಸಿಕೊಳ್ಳಿ

ಅಪಧಮನಿಗಳು ಮತ್ತು ರಕ್ತನಾಳಗಳ ಆರೋಗ್ಯವು ಹೃದಯದ ಆರೋಗ್ಯಕ್ಕೆ ಮುಖ್ಯವಾಗಿದೆ. ಆದರೆ ಇದು ಮೆದುಳಿನ ಆರೋಗ್ಯಕ್ಕೆ ನಿರ್ಣಾಯಕವಾಗಿದೆ. ರಕ್ತದೊತ್ತಡ, ರಕ್ತದ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಮಿತವಾಗಿ ಪರೀಕ್ಷಿಸಿ. ಇದನ್ನು ಆರೋಗ್ಯಕರವಾಗಿರಿಸಲು ಕ್ರಮಗಳನ್ನು ತೆಗೆದುಕೊಳ್ಳಿ.

Water Drinking: ರಾತ್ರಿ ಮಲಗುವ ಮೊದಲು ಬಿಸಿ ನೀರು ಕುಡಿಯಬೇಕೇ? ತಣ್ಣೀರು ಕುಡಿಯಬೇಕೇ?

ತಂಬಾಕು, ಆಲ್ಕೋಹಾಲ್ ನಿಂದ ದೂರವಿರಿ

ತಂಬಾಕು ಮತ್ತು ಆಲ್ಕೋಹಾಲ್ ಬಳಕೆಯು ಮೆದುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಮಿತವಾಗಿ ಮಾತ್ರ ಮದ್ಯಪಾನ ಮಾಡಿ ಮತ್ತು ಧೂಮಪಾನ ಮಾಡಬೇಡಿ. ಮಧ್ಯಮ ಕುಡಿಯುವಿಕೆಯನ್ನು ಮಹಿಳೆಯರಿಗೆ ದಿನಕ್ಕೆ ಒಂದು ಪಾನೀಯ ಮತ್ತು ಪುರುಷರಿಗೆ ದಿನಕ್ಕೆ ಎರಡು ಪಾನೀಯಗಳು ಎನ್ನಲಾಗಿದೆ.