Thursday, 19th September 2024

Healthy Milk: ಹಾಲಿನ ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? ಇಲ್ಲಿದೆ ವಿಡಿಯೊ ಸಹಿತ ಟಿಪ್ಸ್‌

Healthy Milk

ಬೆಳ್ಳಗಿರುವುದೆಲ್ಲ ಹಾಲಲ್ಲ (Milk) ಎನ್ನುವ ಗಾದೆ ಮಾತೊಂದಿದೆ. ಅಂತೆಯೇ ಈಗ ಮನೆಗೆ ಪ್ಯಾಕೆಟ್ ಮೂಲಕ ತರುವುದೆಲ್ಲವೂ ಹಾಲಲ್ಲ (Healthy Milk) ಎನ್ನಬೇಕು. ಯಾಕೆಂದರೆ ಹಾಲಿನಲ್ಲೂ ಕಲಬೆರಕೆ (adulterated milk) ಈಗ ಜೋರಾಗಿದೆ. ಹೀಗಾಗಿ ಕುಟುಂಬದ ಆರೋಗ್ಯ, ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸರಿಯಾದ ಮತ್ತು ಗುಣಮಟ್ಟದ ಹಾಲನ್ನು ಆಯ್ಕೆ ಮಾಡಿಕೊಳ್ಳುವುದು ಬಹುಮುಖ್ಯ.

ಹಾಲಿನಲ್ಲಿ ಕಲಬೆರಕೆಯನ್ನು ಪತ್ತೆ ಹಚ್ಚುವುದು ತುಂಬಾ ಕಷ್ಟ. ಹೀಗಾಗಿ ಕಲಬೆರಕೆಯ ಬಗ್ಗೆ ಆತಂಕವೂ ಹೆಚ್ಚಾಗಿದೆ. ಆದರೆ ಇದೀಗ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI) ಹಾಲಿನಲ್ಲಿರುವ ವಿವಿಧ ರೀತಿಯ ಮಾಲಿನ್ಯಕಾರಕಗಳನ್ನು ಪತ್ತೆ ಹಚ್ಚುವುದು ಹೇಗೆ ಎನ್ನುವ ಕುರಿತು ಮಾಹಿತಿ ನೀಡಿದೆ.

ಹಾಲಿನಲ್ಲಿ ಸಾಮಾನ್ಯವಾಗಿ ಡಿಟರ್ಜೆಂಟ್, ಮಾಲ್ಟೋಡೆಕ್ಸ್ಟ್ರಿನ್ ಮತ್ತು ಹೆಚ್ಚಿನ ಆಮ್ಲ ಪ್ರಮಾಣವನ್ನು ಬೆರೆಸಲಾಗುತ್ತದೆ. ಇದನ್ನು ಸೇವಿಸಿದರೆ ದೇಹಾರೋಗ್ಯದ ಮೇಲೆ ಗಂಭೀರ ಪರಿಣಾಮಗಳಾಗುವ ಅಪಾಯವಿದೆ. ಇದನ್ನು ಪತ್ತೆ ಹಚ್ಚಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಗ್ರಾಹಕರಿಗೆ ಮಾರ್ಗದರ್ಶನ ನೀಡುವ ವಿಡಿಯೋವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದೆ.

ನಾಲ್ಕು ಪ್ರತ್ಯೇಕ ವಿಡಿಯೋಗಳಲ್ಲಿ ಹಾಲಿನ ಕಲಬೆರಕೆ ಬಗ್ಗೆ ಮನೆಯಲ್ಲೇ ಸರಳ ವಿಧಾನದ ಮೂಲಕ ಪರಿಶೀಲಿಸುವುದು ಹೇಗೆ ಎನ್ನುವ ಕುರಿತು ಮಾಹಿತಿ ಇದೆ.

ಹಾಲಿನಲ್ಲಿ ಡಿಟರ್ಜೆಂಟ್

ಹಾಲಿನಲ್ಲಿ ಡಿಟರ್ಜೆಂಟ್ ಸೇರಿದ್ದರೆ ಇದನ್ನು ಗುರುತಿಸುವುದು ಹೆಚ್ಚು ಸವಾಲಿನ ಕೆಲಸ. ಆದರೆ ಇದನ್ನು ಪತ್ತೆ ಹಚ್ಚಬಹುದು. ಇದಕ್ಕಾಗಿ ಒಂದು ಪಾತ್ರೆಗೆ ಸ್ವಲ್ಪ ಹಾಲನ್ನು ಹಾಕಿ. ಒಂದು ಚಮಚದಿಂದ ಅದನ್ನು ತಿರುವುತ್ತಾ ಇರಿ. ಹಾಲಿನ ಮೇಲ್ಭಾಗದಲ್ಲಿ ನೊರೆಗಳು ಕಂಡು ಬಂದರೆ ಹಾಲಿನಲ್ಲಿ ಡಿಟರ್ಜೆಂಟ್ ಬೆರಕೆಯಾಗಿದೆ ಎಂದರ್ಥ.

ಡಿಟರ್ಜೆಂಟ್ ನಿಂದ ಹಾಲಿನ ರುಚಿ ಮತ್ತು ವಾಸನೆಯಲ್ಲಿ ವ್ಯತ್ಯಾಸ ಕಾಣಬಹುದು. ಅಲ್ಲದೇ ಇದು ಸಾಮಾನ್ಯ ಹಾಲಿಗಿಂತ ತೆಳುವಾಗಿ ಅಥವಾ ಹೆಚ್ಚು ನೀರಿನಂಶದಿಂದ ಕೂಡಿರಬಹುದು.

ಹಾಲಿನಲ್ಲಿರುವ ಡಿಟರ್ಜೆಂಟ್ ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತದೆ. ಇದು ವಾಕರಿಕೆ, ವಾಂತಿ ಮತ್ತು ಅತಿಸಾರ ಸೇರಿದಂತೆ ಅನೇಕ ಜೀರ್ಣಕ್ರಿಯೆ ತೊಂದರೆಗಳಿಗೆ ಕಾರಣವಾಗುತ್ತದೆ. ಮೂತ್ರಪಿಂಡದ ಕಾರ್ಯಚಟುವಟಿಕೆಗೆ ಹಾನಿ ಮಾಡುತ್ತದೆ. ಡಿಟರ್ಜೆಂಟ್‌ಗಳು ಹಾಲಿನಲ್ಲಿರುವ ಪ್ರೊಟೀನ್ ಮತ್ತು ವಿಟಮಿನ್‌ಗಳನ್ನು ನಾಶಪಡಿಸುತ್ತವೆ.

ಹಾಲಿನಲ್ಲಿ ಮಾಲ್ಟೋಡೆಕ್ಸ್‌ಟ್ರಿನ್

ಹಾಲಿನಲ್ಲಿ ಮಾಲ್ಟೋಡೆಕ್ಸ್‌ಟ್ರಿನ್ ಅನ್ನು ಪತ್ತೆ ಮಾಡಲು ಆಯೋಡಿನ್ ಅನ್ನು ಬಳಸಬಹುದು. ಸ್ವಲ್ಪ ಹಾಲಿಗೆ ಆಯೋಡಿನ್ ಅನ್ನು ಬೆರೆಸಿದಾಗ ಬದಲಾಗುವ ಹಾಲಿನ ಬಣ್ಣವನ್ನು ಗಮನಿಸಿ. ಹಾಲು ಹಳದಿ ಮಿಶ್ರಿತ ಕಂದು ಬಣ್ಣದಲ್ಲಿದ್ದರೆ ಇದರಲ್ಲಿ ಮಾಲ್ಟೋಡೆಕ್ಸ್‌ಟ್ರಿನ್ ಇಲ್ಲ ಎಂದರ್ಥ. ಒಂದು ವೇಳೆ ಗಾಢವಾದ ಕಂದು ಬಣ್ಣಕ್ಕೆ ತಿರುಗಿದರೆ ಇದರಲ್ಲಿ ಮಾಲ್ಟೋಡೆಕ್ಸ್‌ಟ್ರಿನ್ ಇದೆ ಎಂಬುದನ್ನು ಅರ್ಥೈಸಿಕೊಳ್ಳಬಹುದು.

ಮಾಲ್ಟೋಡೆಕ್ಸ್‌ಟ್ರಿನ್ ಸಾಮಾನ್ಯವಾಗಿ ಬಳಕೆಗೆ ಸುರಕ್ಷಿತವೆಂದು ಪರಿಗಣಿಸಲಾಗಿದೆಯಾದರೂ ಹಾಲಿನಲ್ಲಿ ಕಲಬೆರಕೆಯಾದರೆ ಅದರ ಪೌಷ್ಟಿಕಾಂಶದ ಮೌಲ್ಯ ದುರ್ಬಲಗೊಳ್ಳುತ್ತದೆ. ಕ್ಯಾಲ್ಸಿಯಂ, ಪ್ರೊಟೀನ್ ಮತ್ತು ವಿಟಮಿನ್‌ಗಳಂತಹ ಅಗತ್ಯ ಪೋಷಕಾಂಶಗಳನ್ನು ನಷ್ಟ ಮಾಡುತ್ತದೆ.

ಹಾಲಿನಲ್ಲಿ ಹೆಚ್ಚಿನ ಆಮ್ಲೀಯತೆ

ಹಾಲಿನಲ್ಲಿ ನೈಸರ್ಗಿಕವಾದ ಲ್ಯಾಕ್ಟಿಕ್ ಆಮ್ಲವಿರುತ್ತದೆ. ಆದರೆ ಅತಿಯಾಗಿದ್ದರೆ ಅದು ಕಲಬೆರಕೆಯಾ ಪರಿಣಾಮವಾಗಿರುತ್ತದೆ. ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾಗಳು ಹಾಲಿನಲ್ಲಿರುವ ಲ್ಯಾಕ್ಟೋಸ್ ಅನ್ನು ಲ್ಯಾಕ್ಟಿಕ್ ಆಮ್ಲವಾಗಿ ಪರಿವರ್ತಿಸಿ ಹಾಲಿನಲ್ಲಿ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ. ಹೆಚ್ಚಿನ ತಾಪಮಾನ ಅಥವಾ ಬೆಳಕಿಗೆ ಒಡ್ಡಿಕೊಳ್ಳುವುದರಿಂದಲೂ ಹಾಲಿನಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆ ಮತ್ತು ಆಮ್ಲೀಯತೆ ಹೆಚ್ಚಾಗುತ್ತದೆ. ಅಲ್ಲದೇ ಯೂರಿಯಾ ಅಥವಾ ಸೋಡಾ ಬೂದಿಯಂತಹ ಕೆಲವು ಕಲಬೆರಕೆಗಳು ಹೆಚ್ಚಿನ ಆಮ್ಲೀಯತೆಗೆ ಕಾರಣವಾಗುತ್ತದೆ.

ಇದಕ್ಕಾಗಿ ಕುದಿಯುತ್ತಿರುವ ಬಿಸಿ ನೀರಿನೊಳಗೆ ಒಂದು ಸಣ್ಣ ಕಂಟೇನರ್ ನಲ್ಲಿ ಹಾಲು ಹಾಕಿ ಇಡಿ. ಕೆಲವು ನಿಮಿಷಗಳ ಬಳಿಕ ಹಾಲಿನ ಮೇಲ್ಭಾಗದಲ್ಲಿ ದಪ್ಪ ಕೆನೆಯ ರೀತಿ ಬಂದರೆ ಹಾಲಿನಲ್ಲಿ ಆಮ್ಲೀಯತೆ ಹೆಚ್ಚಾಗಿದೆ ಎಂದರ್ಥ. ಹುಳಿ ವಾಸನೆ ಅಥವಾ ರುಚಿಯಲ್ಲಿ ಬದಲಾವಣೆಯು ಹಾಲಿನಲ್ಲಿ ಹೆಚ್ಚಿರುವ ಆಮ್ಲೀಯತೆಯ ಸೂಚಕವಾಗಿದೆ.

AksharaDasoha: ಅಕ್ಷರ ದಾಸೋಹ ಯೋಜನೆಯ ಕ್ಷೀರ ಭಾಗ್ಯಕ್ಕೆ ಕನ್ನ.!

ಹಾಲಿನಲ್ಲಿ ಅಸಹಜ ಮೊಸರು

ಹಾಲು ಮೊಸರಾಗುವುದು ನೈಸರ್ಗಿಕ ಪ್ರಕ್ರಿಯೆ. ಆದರೆ ಅಸಹಜ ಮೊಸರು ಹಲವಾರು ಸಮಸ್ಯೆಗಳನ್ನು ಸೂಚಿಸುತ್ತದೆ: ಅತಿಯಾದ ಲ್ಯಾಕ್ಟಿಕ್ ಆಮ್ಲವು ಅಕಾಲಿಕ ಮೊಸರು ಉಂಟುಮಾಡಬಹುದು. ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳ ಮಾಲಿನ್ಯವು ಅಸಹಜ ಹೆಪ್ಪುಗಟ್ಟುವಿಕೆಗೆ ಕಾರಣವಾಗಬಹುದು. ತಪ್ಪಾದ ಪಾಶ್ಚರೀಕರಣ ಅಥವಾ ಕುದಿಯುವಿಕೆಯು ಹಾಲಿನ ಪ್ರೊಟೀನ್ ಗಳ ಮೇಲೆ ಪರಿಣಾಮ ಬೀರಬಹುದು. ಕೆಲವು ರಾಸಾಯನಿಕಗಳಿಂದ ಹಾಲಿನ ಹೆಪ್ಪುಗಟ್ಟುವಿಕೆಯಲ್ಲಿ ವ್ಯತ್ಯಾಸವಾಗಬಹುದು.