Friday, 22nd November 2024

Mood Swings: ಪದೇಪದೇ ಬದಲಾಗುತ್ತಿದೆಯೇ ಮನಸ್ಸು.. ? ಹಾಗಾದರೆ ಸೇವಿಸುವ ಕಾರ್ಬ್ ಬಗ್ಗೆ ಯೋಚಿಸಿ

Mood Swings

ಒಂದು ಕ್ಷಣ ತುಂಬಾ ಬೇಸರವಾದರೆ (sad), ಇನ್ನೊಂದು ಕ್ಷಣ ಅತ್ಯಧಿಕ ಖುಷಿ.. (happy) ಕಾರಣ ಏನು ಎಂಬುದೇ ಅರಿವಾಗೋದಿಲ್ಲ. ಮನಸ್ಸು (Mood Swings) ಒಂದು ಕ್ಷಣ ಇದ್ದ ಹಾಗೆ ಇನ್ನೊಂದು ಕ್ಷಣ ಇರಲ್ಲ ಎಂಬ ಭಾವನೆ (feeling) ಕೆಲವೊಮ್ಮೆ ನಮ್ಮನ್ನೂ ಕಾಡಬಹುದು. ಅದಕ್ಕೆ ಮೊದಲು ನಾವು ಗಮನ ಹರಿಸಬೇಕಿರುವುದು ನಾವೇನು ತಿನ್ನುತ್ತಿದ್ದೇವೆ ಎಂಬುದರ ಮೇಲೆ. ಯಾಕೆಂದರೆ ಪದೇಪದೇ ಮನಸ್ಥಿತಿ ಬದಲಾಗುವುದರ ಹಿಂದಿದೆ ನಮ್ಮ ಆಹಾರ.

ಆಹಾರದಲ್ಲಿರುವ ಕಾರ್ಬೋಹೈಡ್ರೇಟ್ ಗಳು (carbohydrates) ಮನಸ್ಸಿನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತವೆ. ಸರಳವಾದ ಕಾರ್ಬೋಹೈಡ್ರೇಟ್‌ಗಳಲ್ಲಿ ಹೆಚ್ಚಿನ ಆಹಾರವು ರಕ್ತದಲ್ಲಿನ ಗ್ಲೂಕೋಸ್ ಅನ್ನು ತ್ವರಿತವಾಗಿ ಹೆಚ್ಚಿಸುವುದು ಮಾತ್ರವಲ್ಲ, ತ್ವರಿತ ಕುಸಿತವನ್ನು ಉಂಟುಮಾಡುತ್ತದೆ. ಮೆದುಳಿನ ಶಕ್ತಿಯನ್ನು ಕಡಿಮೆಗೊಳಿಸುತ್ತದೆ.

ಕೆಲವೊಮ್ಮೆ ಯಾಕೆ ಎಂದೇ ತಿಳಿಯದೆ ಮನಸ್ಥಿತಿ ಹಾಳಾಗುತ್ತದೆ. ತುಂಬಾ ಕಿರಿಕಿರಿ, ದುಃಖ ಉಂಟಾಗುತ್ತದೆ. ಅದರಲ್ಲೂ ಮಹಿಳೆಯರಲ್ಲಿ ಇದು ಹೆಚ್ಚಾಗಿರುತ್ತದೆ. ಇದು ಋತು ಚಕ್ರದ ತೊಂದರೆ ಎಂದು ಅನಿಸಿದರೂ ಕೆಲವೊಮ್ಮೆ ಇದು ಹೆಚ್ಚು ಕಾಲದವರೆಗೆ ಮುಂದುವರೆಯಬಹುದು. ನಾವು ಸೇವಿಸುವ ಆಹಾರವು ಕೆಲವೊಮ್ಮೆ ಮನಸ್ಥಿತಿಯ ಬದಲಾವಣೆಗಳಿಗೆ ಕಾರಣವಾಗಬಹುದು.

ಸರಿಯಾದ ಆಹಾರ ಸೇವಿಸುವುದು ಮುಖ್ಯ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಇದು ಕೇವಲ ಭೌತಿಕ ಪ್ರಯೋಜನ ನೀಡುವುದು ಮಾತ್ರವಲ್ಲ ಮನಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ.

ಐಸ್ ಕ್ರೀಮ್ ಎಲ್ಲರಿಗೂ ಇಷ್ಟ. ಇದು ಮನಸ್ಸನ್ನು ಹಾಳು ಮಾಡುವುದಿಲ್ಲ. ಬದಲಾಗಿ ಮನಸ್ಸಿಗೆ ತಾತ್ಕಾಲಿಕ ಉತ್ತೇಜನ ನೀಡುತ್ತದೆ. ಆದರೆ ಅತಿಯಾದರೆ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ.

Mood Swings

ಕಾರ್ಬೋಹೈಡ್ರೇಟ್ ಏನು?

ಸಾಮಾನ್ಯವಾಗಿ ನಾವು ಸೇವಿಸುವ ಆಹಾರಗಳನ್ನು ಕ್ಯಾಲೋರಿಗಳಲ್ಲಿ ಅಳೆಯಲಾಗುತ್ತದೆ. ಇದರಲ್ಲಿರುವ ಕಾರ್ಬೋಹೈಡ್ರೇಟ್‌ಗಳು ದೇಹಕ್ಕೆ ಶಕ್ತಿ ಒದಗಿಸುವ ಮೂರು ಪ್ರಮುಖ ಮ್ಯಾಕ್ರೋನ್ಯೂಟ್ರಿಯೆಂಟ್‌ಗಳಲ್ಲಿ ಏನಂದ್ರೆ ಪ್ರೊಟೀನ್ ಮತ್ತು ಕೊಬ್ಬಿನಲ್ಲಿ ಒಂದಾಗಿದೆ ಎನ್ನುತ್ತಾರೆ ತಜ್ಞರಾದ ಡಾ. ಅಪರ್ಣಾ ಸಂತಾನಂ.

ಯಾವುದರಲ್ಲಿ ಇರುತ್ತದೆ?

ಕಾರ್ಬೋಹೈಡ್ರೇಟ್‌ಗಳು ಧಾನ್ಯ, ಹಣ್ಣು, ತರಕಾರಿ ಮತ್ತು ಡೈರಿ ಉತ್ಪನ್ನಗಳಲ್ಲಿ ಕಂಡು ಬರುತ್ತವೆ. ಅವುಗಳನ್ನು ಮೂರು ವಿಧಗಳಾಗಿ ವರ್ಗೀಕರಿಸಲಾಗಿದೆ.

ಸರಳ ಕಾರ್ಬೋಹೈಡ್ರೇಟ್‌ಗಳು

ಸಕ್ಕರೆ, ಕ್ಯಾಂಡಿ, ತಂಪು ಪಾನೀಯ ಮತ್ತು ಪೇಸ್ಟ್ರಿಗಳಂತಹ ಸಂಸ್ಕರಿಸಿದ ಆಹಾರಗಳಲ್ಲಿ ಸರಳ ಕಾರ್ಬೋ ಹೈಡ್ರೇಟ್‌ಗಳಿರುತ್ತವೆ. ಇದು ತ್ವರಿತವಾಗಿ ಜೀರ್ಣವಾಗುತ್ತವೆ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ಶೀಘ್ರವಾಗಿ ಹೆಚ್ಚಿಸಿ, ಕಡಿಮೆ ಮಾಡುತ್ತದೆ.

ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು

ಧಾನ್ಯ, ದ್ವಿದಳ ಧಾನ್ಯ ಮತ್ತು ಪಿಷ್ಟ ತರಕಾರಿಗಳಲ್ಲಿ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ಕಂಡುಬರುತ್ತದೆ. ಇದನ್ನು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗುತ್ತದೆ ಮತ್ತು ಶಕ್ತಿಯ ಹೆಚ್ಚು ಕಾಲ ನಿರಂತರ ಬಿಡುಗಡೆಗೆ ದೇಹವನ್ನು ಪ್ರಚೋದಿಸುತ್ತದೆ.

ಫೈಬರ್

ಫೈಬರ್ ಒಂದು ರೀತಿಯ ಕಾರ್ಬೋಹೈಡ್ರೇಟ್ ಆಗಿದ್ದು ಇದನ್ನು ದೇಹವು ಸಂಪೂರ್ಣವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಇದು ಜೀರ್ಣಾಂಗ ವ್ಯವಸ್ಥೆ ನಿಯಂತ್ರಿಸಲು ಸಹಾಯ ಮಾಡುತ್ತದೆ. ಸದಾ ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ. ಆರೋಗ್ಯಕರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಬೆಂಬಲಿಸುತ್ತದೆ. ಫೈಬರ್ ಹಣ್ಣು, ತರಕಾರಿ, ಧಾನ್ಯ ಮತ್ತು ದ್ವಿದಳ ಧಾನ್ಯಗಳಲ್ಲಿ ಇದು ಕಂಡುಬರುತ್ತದೆ.

ಈ ಮೂರರಲ್ಲಿ ನಮ್ಮ ದೇಹವು ಶಕ್ತಿಗಾಗಿ ಸರಳವಾದ ಕಾರ್ಬೋಹೈಡ್ರೇಟ್‌ಗಳನ್ನು ಬಯಸುತ್ತವೆ. ಯಾಕೆಂದರೆ ಅವು ಬೇಗನೆ ಒಡೆಯುತ್ತವೆ. ಆದರೆ ಈ ಸರಳ ಕಾರ್ಬೋಹೈಡ್ರೇಟ್‌ಗಳು ಮನಸ್ಥಿತಿ ಬದಲಾವಣೆಗೆ ಕಾರಣವಾಗುತ್ತದೆ.

Mood Swings

ಏನು ಪರಿಣಾಮ?

ಸರಳವಾದ ಕಾರ್ಬೋಹೈಡ್ರೇಟ್‌ ಮತ್ತು ಸಂಸ್ಕರಿಸಿದ ಆಹಾರವು ರಕ್ತದಲ್ಲಿನ ಗ್ಲೂಕೋಸ್ ಅನ್ನು ತಕ್ಷಣವೇ ಹೆಚ್ಚಿಸುತ್ತದೆ ಮತ್ತು ಗ್ಲೂಕೋಸ್ ಮಟ್ಟವನ್ನು ಅಷ್ಟೇ ವೇಗವಾಗಿ ಕಡಿಮೆ ಮಾಡುತ್ತದೆ. ಇದು ಮೆದುಳಿಗೆ ಇಂಧನ ಪೂರೈಕೆಯನ್ನು ಕಡಿತಗೊಳಿಸುವ ಪರಿಣಾಮವಾಗಿ ಸಾಕಷ್ಟು ಮಂದಿ ಅರೆನಿದ್ರಾವಸ್ಥೆಯನ್ನು ಅನುಭವಿಸುತ್ತಾರೆ ಎನ್ನುತ್ತಾರೆ ಬೆಂಗಳೂರಿನ ನ್ಯೂಟ್ರಿಷನ್ ಎಡ್ವಿನಾ ರಾಜ್.

ಕಾರ್ಬೋಹೈಡ್ರೇಟ್‌ಗಳು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುತ್ತವೆ. ದೊಡ್ಡ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸುವುದರಿಂದ ಅದರಲ್ಲೂ ವಿಶೇಷವಾಗಿ ಸಿಹಿತಿಂಡಿ ಮತ್ತು ಬಿಳಿ ಬ್ರೆಡ್‌ನಂತಹ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಿಸಲು ಮತ್ತು ಅನಂತರ ಕುಸಿಯಲು ಕಾರಣವಾಗಬಹುದು.

ಕಾರ್ಬೋಹೈಡ್ರೇಟ್‌ಗಳು ಅಧಿಕವಾಗಿರುವ ಆಹಾರವು ಇನ್ಸುಲಿನ್‌ನ ಅಧಿಕ ಉತ್ಪಾದನೆಗೆ ಕಾರಣವಾಗಬಹುದು. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ತ್ವರಿತ ಏರಿಳಿತಕ್ಕೆ ಕಾರಣವಾಗುತ್ತದೆ. ಇದು ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆ.

Mood Swings

ಮನಸ್ಥಿತಿ ನಿಯಂತ್ರಿಸಲು ಸಹಾಯ ಮಾಡುವ ಸಿರೊಟೋನಿನ್ ಎಂಬ ರಾಸಾಯನಿಕವು ಕಾರ್ಬೋಹೈಡ್ರೇಟ್‌ ಗಳನ್ನು ಸೇವಿಸಿದಾಗ ಉತ್ಪತ್ತಿಯಾಗುತ್ತದೆ. ಕಾರ್ಬೋಹೈಡ್ರೇಟ್‌ಗಳು ಟ್ರಿಪ್ಟೊಫಾನ್ ಅನ್ನು ಹೆಚ್ಚಿಸುತ್ತವೆ. ಇದು ಸಿರೊಟೋನಿನ್ ತಯಾರಿಸಲು ಸಹಾಯ ಮಾಡುತ್ತದೆ. ಆದರೆ ಹೆಚ್ಚು ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸುವು ದರಿಂದ ಈ ಸಮತೋಲನದಲ್ಲಿ ವ್ಯತ್ಯಾಸವಾಗಿ ಮನಸ್ಥಿತಿಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ.

ಅತ್ಯಧಿಕ ಕಾರ್ಬೋಹೈಡ್ರೇಟ್‌ಗಳ ಸೇವನೆಯು ದೇಹಕ್ಕೆ ಬೇಕಾಗುವ ಪೋಷಕಾಂಶಗಳ ಅಸಮತೋಲನಕ್ಕೆ ಕಾರಣವಾಗುತ್ತದೆ.

ಬಹಳಷ್ಟು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸುವುದರಿಂದ ಕರುಳಿಗೂ ಹಾನಿಯಾಗಬಹುದು. ಕರುಳಿನ ಸೂಕ್ಷ್ಮಜೀವಿಗಳಲ್ಲಿನ ಅಸಮತೋಲನವು ಮನಸ್ಥಿತಿ ಮತ್ತು ಭಾವನಾತ್ಮಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ.

ಪಿಸಿಓಎಸ್ ಹೊಂದಿರುವ ಮಹಿಳೆಯರು ನಿರ್ದಿಷ್ಟವಾಗಿ ಕಾರ್ಬೋಹೈಡ್ರೇಟ್ ಸೇವನೆಯ ಬಗ್ಗೆ ಜಾಗರೂಕ ರಾಗಿರಬೇಕು. ಯಾಕೆಂದರೆ ಅವರ ಆಹಾರದಲ್ಲಿನ ಸಣ್ಣ ಬದಲಾವಣೆಗಳು ಅವರ ವೈದ್ಯಕೀಯ ಸ್ಥಿತಿ ಮಾತ್ರವಲ್ಲದೆ ಮಾನಸಿಕ ಯೋಗಕ್ಷೇಮದ ಮೇಲೂ ಪರಿಣಾಮ ಬೀರುತ್ತದೆ.

ಉತ್ತಮ ಮನಸ್ಥಿತಿಗಾಗಿ ಏನು ತಿನ್ನಬೇಕು?

ಉತ್ತಮ ಮನಸ್ಥಿತಿಗಾಗಿ ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರಗೊಳಿಸುವ ಮತ್ತು ಮೆದುಳಿನ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವ ಆಹಾರಗಳತ್ತ ಗಮನ ಹರಿಸಬೇಕು.

Virus Attack : ಚೀನಾದಲ್ಲಿ ಪತ್ತೆಯಾಗಿದೆ ಮತ್ತೊಂದು ಡೆಡ್ಲಿ ವೈರಸ್‌, ಭಾರತಕ್ಕೂ ಬರಬಹುದು ಎಚ್ಚರಿಕೆ

ಇದರಲ್ಲಿ ಮುಖ್ಯವಾಗಿ ಧಾನ್ಯಗಳಲ್ಲಿ ಕಂದು ಅಕ್ಕಿ, ಓಟ್ಸ್, ಕ್ವಿನೋವಾ, ಕಾಳುಗಳು, ಒಮೆಗಾ -3 ಕೊಬ್ಬಿನಾಮ್ಲ ಗಳಿರುವ ಮೀನು, ಅಗಸೆ ಬೀಜ, ವಾಲ್‌ನಟ್‌, ಫೋಲೇಟ್ ಅಂಶ ಹೆಚ್ಚಿರುವ ಹಸಿರು ಸೊಪ್ಪು, ಬೆರ್ರಿ ಹಣ್ಣುಗಳು, ಮೊಸರು, ಹುದುಗಿಸಿದ ಆಹಾರಗಳು, ಬೀಜಗಳು, ಡಾರ್ಕ್ ಚಾಕೊಲೇಟ್ ಇತ್ಯಾದಿ.