ಹಾಲನ್ನು ಸಂಪೂರ್ಣ ಆಹಾರವೆಂದು ಕರೆಯುತ್ತಾರೆ. ಯಾಕೆಂದರೆ ಕೊಬ್ಬು ಸೇರಿದಂತೆ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿರುವ ಹಾಲು ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ತುಂಬಾ ಒಳ್ಳೆಯದು. ಆದರೆ ಹಾಲನ್ನು ಪ್ರತಿದಿನ ಕುಡಿಯುವುದರಿಂದ ತೂಕ ಹೆಚ್ಚಾಗುತ್ತದೆ ಎಂಬ ಭಯ ಹಲವರಲ್ಲಿದೆ. ಹಾಗಾದ್ರೆ ಹಾಲು ತೂಕವನ್ನು(Weight Gain) ಹೆಚ್ಚಿಸುತ್ತದೆಯೇ? ಇದರಿಂದ ಏನೆಲ್ಲಾ ಪ್ರಯೋಜನವಿದೆ ಎಂಬುದನ್ನು ತಿಳಿಯಿರಿ.
ಹಾಲನ್ನು ಮಿತವಾಗಿ ಸೇವಿಸುವುದರಿಂದ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಆದರೆ ಹಾಲನ್ನು ಅತಿಯಾದ ಸೇವನೆ ಮಾಡಿದರೆ, ಅದರ ಕ್ಯಾಲೊರಿ ಅಂಶದಿಂದಾಗಿ ತೂಕ ಹೆಚ್ಚಾಗಲು ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ. ಹಾಲು ದೇಹಕ್ಕೆ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಅನ್ನು ಒದಗಿಸುತ್ತದೆಯಾದರೂ, ಇದು ಎಲ್ಲರಿಗೂ ಸೂಕ್ತವಲ್ಲ. ಲ್ಯಾಕ್ಟೋಸ್ ಅಸಹಿಷ್ಣುತೆ ಹೊಂದಿರುವವರು, ತೂಕ ಇಳಿಸಿಕೊಳ್ಳಲು ಬಯಸುವವರು ಹಾಲಿನ ಸೇವನೆಯನ್ನು ತಪ್ಪಿಸಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ, ದೇಹದ ತೂಕ ಹೆಚ್ಚಾಗಲು ಬಯಸುವವರಿಗೆ ಹಾಲು ಪ್ರಯೋಜನಕಾರಿಯಾಗಬಹುದು, ಆದರೆ ನಿರ್ದಿಷ್ಟ ಅಲರ್ಜಿ ಹೊಂದಿರುವ ಜನರಿಗೆ ಮತ್ತು ಕ್ಯಾಲೊರಿಗಳನ್ನು ಕಡಿಮೆಮಾಡಲು ಬಯಸುವವರಿಗೆ ಇದು ಸೂಕ್ತವಲ್ಲ.
ಹಾಲು ಸೇವನೆಯ ಪ್ರಯೋಜನಗಳು :
ಪೋಷಕಾಂಶಗಳನ್ನು ಹೊಂದಿರುತ್ತದೆ
ಹಾಲು ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್ ಡಿ ಮತ್ತು ಇತರ ಅಗತ್ಯ ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ. ಈ ಪೋಷಕಾಂಶಗಳು ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ.
ಪ್ರೋಟೀನ್ ಸಮೃದ್ಧವಾಗಿದೆ
ಹಾಲಿನಲ್ಲಿರುವ ಪ್ರೋಟೀನ್ ನಿಮಗೆ ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ, ಇದರಿಂದ ಅತಿಯಾಗಿ ತಿನ್ನುವ ಬಯಕೆ ಕಡಿಮೆಯಾಗುತ್ತದೆ.
ಮೂಳೆಯ ಆರೋಗ್ಯ
ಹಾಲಿನಲ್ಲಿರುವ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಬಲವಾದ ಮೂಳೆಗಳು ಮತ್ತು ಹಲ್ಲುಗಳಿಗೆ ಅತ್ಯಗತ್ಯ. ಕ್ಯಾಲ್ಸಿಯಂ ಬಲವಾದ ಮೂಳೆಗಳನ್ನು ನಿರ್ಮಿಸಲು ಮತ್ತು ವಿಟಮಿನ್ ಡಿ ನಾವು ಸೇವಿಸುವ ಆಹಾರಗಳಿಂದ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ದೇಹಕ್ಕೆ ಸಹಾಯ ಮಾಡುತ್ತದೆ.
ಸ್ನಾಯು ಬೆಳವಣಿಗೆಗೆ ಸಹಾಯಕಾರಿ
ಹಾಲಿನಲ್ಲಿ ಹೆಚ್ಚು ಪ್ರೋಟೀನ್ ಇರುವ ಕಾರಣ ಹಾಲು ಸ್ನಾಯುಗಳ ಬೆಳವಣಿಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ:ನೀವು ನಿಮ್ಮ ತ್ವಚೆಗೆ ಯಾವ ವಿನೇಗರ್ ಬಳಸುತ್ತಿದ್ದೀರಿ? ಇದರ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ
ನಿದ್ರೆ
ಹಾಲಿನಲ್ಲಿ ಟ್ರಿಪ್ಟೋಫಾನ್ ಇದ್ದು, ಇದು ದೇಹದಲ್ಲಿ ಸಿರೊಟೋನಿನ್ ಮತ್ತು ಮೆಲಟೋನಿನ್ ಅನ್ನು ಉತ್ಪಾದಿಸುತ್ತದೆ. ಇದು ನಿಮ್ಮ ದೇಹಕ್ಕೆ ವಿಶ್ರಾಂತಿ ನೀಡಿ ಸರಿಯಾದ ನಿದ್ರೆ ಬರುವಂತೆ ಸಹಾಯ ಮಾಡುತ್ತದೆ.