Thursday, 19th September 2024

Weight Loss Tips: ದೇಹದ ತೂಕ ನಷ್ಟಕ್ಕೆ ಅನ್ನವನ್ನು ತ್ಯಜಿಸಬಹುದೇ?

Weight Loss Tips

ದೇಹದ ತೂಕ (Weight Loss Tips) ಇಳಿಸಿಕೊಳ್ಳಲು ಅನೇಕರು ಅನ್ನವನ್ನು (Rice) ತ್ಯಜಿಸಲು ಸಲಹೆ ಮಾಡುತ್ತಾರೆ. ಇದು ಸರಿಯೇ? ಒಂದು ತಿಂಗಳು ಅನ್ನ ತ್ಯಜಿಸಿದರೆ ಏನಾಗುತ್ತದೆ, ಅನ್ನ ನಮ್ಮ ದೇಹಕ್ಕೆ ಏಕೆ ಮುಖ್ಯ, ಎಷ್ಟು ಅನ್ನವನ್ನು ನಾವು ಸೇವಿಸಬೇಕು ಮೊದಲಾದ ಪ್ರಶ್ನೆಗಳು ನಮ್ಮ ಮನದಲ್ಲಿ ಮೂಡುವುದು ಸಹಜ.

ದಿನದ ಒಂದು ಹೊತ್ತಿನ ಊಟದಲ್ಲಿ ಅನ್ನ ಇಲ್ಲವೆಂದಾದರೆ ಹೆಚ್ಚಿನವರಿಗೆ ಅಸಮಾಧಾನದ ಭಾವನೆ ಉಂಟಾಗುತ್ತದೆ. ಯಾಕೆಂದರೆ ಅನ್ನ ನಮ್ಮ ಪ್ರಧಾನ ಆಹಾರ. ಅಕ್ಕಿ ಕೇವಲ ಭಾರತೀಯರಿಗೆ ಮಾತ್ರವಲ್ಲ ಏಷ್ಯಾ ಖಂಡದ ಎಲ್ಲ ರಾಷ್ಟ್ರಗಳ ಪ್ರಧಾನ ಆಹಾರವಾಗಿದೆ. ಭಾರತೀಯರಲ್ಲಿ ಅನೇಕರಿಗೆ ಅನ್ನವಿಲ್ಲದ ಊಟವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ.

ಅಕ್ಕಿಯು ಪಿಷ್ಟ, ಹಲವಾರು ಪೋಷಕಾಂಶಗಳು ಮತ್ತು ಕಾರ್ಬೋಹೈಡ್ರೇಟ್‌ಗಳ ಉತ್ತಮ ಮೂಲವಾಗಿದೆ. ಆದರೆ, ಹೆಚ್ಚಿನ ಪ್ರಮಾಣದ ಅನ್ನವನ್ನು ಸೇವಿಸುವುದು ದೇಹದ ತೂಕ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಲು ಕಾರಣವಾಗುತ್ತದೆ. ಅನ್ನವನ್ನು ಒಂದು ತಿಂಗಳು ಸೇವಿಸದೇ ಇದ್ದರೆ ದೇಹದ ತೂಕ ಇಳಿಕೆ ಮಾಡಿಕೊಳ್ಳಬಹುದು ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸ್ಥಿರಗೊಳಿಸಬಹುದು ಎನ್ನುತ್ತಾರೆ ಶ್ರೀ ಬಾಲಾಜಿ ಆಕ್ಷನ್ ಮೆಡಿಕಲ್ ಇನ್‌ಸ್ಟಿಟ್ಯೂಟ್‌ನ ಪೌಷ್ಟಿಕಾಂಶ ವಿಭಾಗದ ಮುಖ್ಯಸ್ಥೆ ಪ್ರಿಯಾ ಪರ್ಮಾ.

Weight Loss Tips

ವರ್ಕ್ ಹಾರ್ಟ್ ಹಾಸ್ಪಿಟಲ್‌ನ ತಜ್ಞರಾದ ರಿಯಾ ದೇಸಾಯಿ ಅವರು ಕೂಡ ಒಂದು ತಿಂಗಳ ಕಾಲ ಅನ್ನವನ್ನು ಸೇವಿಸದೇ ಇರುವುದರಿಂದ ದೇಹದ ತೂಕ ಇಳಿಸಿಕೊಳ್ಳಬಹುದು ಎನ್ನುತ್ತಾರೆ.

ಅಕ್ಕಿಗೆ ಬದಲಾಗಿ ಧಾನ್ಯ ಅಥವಾ ಕ್ಯಾಲೋರಿ ಸಮಾನವಾದ ಕಾರ್ಬೋಹೈಡ್ರೇಟ್ ಸಮೃದ್ಧ ಆಹಾರ ಸೇವಿಸಬಾರದು. ಅಕ್ಕಿ ಆಹಾರವನ್ನು ತಪ್ಪಿಸುವುದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸಮತೋಲನ ಗೊಳಿಸಲು ಸಹಾಯ ಮಾಡುತ್ತದೆ.

ಅನ್ನವನ್ನು ತಪ್ಪಿಸುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವು ತಾತ್ಕಾಲಿಕವಾಗಿ ಕಡಿಮೆಯಾಗುತ್ತದೆ. ಅನ್ನವನ್ನು ಸೇವಿಸದಿರುವವರೆಗೂ ಅದು ಹಾಗೆ ಮುಂದುವರಿಯುತ್ತದೆ. ಯಾರಾದರೂ ಸಾಕಷ್ಟು ಪ್ರಮಾಣದಲ್ಲಿ ಅನ್ನ ತಿನ್ನಲು ಪ್ರಾರಂಭಿಸಿದರೆ ದೇಹದಲ್ಲಿ ಗ್ಲೂಕೋಸ್ ಮಟ್ಟವು ಮತ್ತೊಮ್ಮೆ ಹೆಚ್ಚಾಗುತ್ತದೆ. ಕಡಿಮೆ ಪ್ರಮಾಣದಲ್ಲಿ ಅನ್ನ ತಿನ್ನುವುದರಿಂದ ದೇಹಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎನ್ನುತ್ತಾರೆ ರಿಯಾ ದೇಸಾಯಿ.

ಅನ್ನ ತಿನ್ನದೇ ಇರುವುದರಿಂದ ವಿಟಮಿನ್ ಬಿ ಸೇರಿ ಕಾರ್ಬೋಹೈಡ್ರೇಟ್‌ಗಳು ಒದಗಿಸುವ ಕೆಲವು ಖನಿಜಗಳು ದೇಹಕ್ಕೆ ಸಿಗುವುದಿಲ್ಲ. ಕಾರ್ಬೋಹೈಡ್ರೇಟ್‌ಗಳ ಪ್ರಮಾಣವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಲು ಸಾಮಾನ್ಯವಾಗಿ ಸಮತೋಲಿತ ಆಹಾರ ತೆಗೆದುಕೊಳ್ಳುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು.

ಪೌಷ್ಟಿಕಾಂಶಗಳಲ್ಲಿ ಸಮೃದ್ಧವಾಗಿರುವ ವಿವಿಧ ಆಹಾರಗಳನ್ನು ಇದು ಒಳಗೊಂಡಿರಬೇಕು. ಅನ್ನವನ್ನು ತಾತ್ಕಾಲಿಕವಾಗಿ ಮೆನುವಿನಿಂದ ತೆಗೆದುಹಾಕಬಹುದು. ಆದರೂ ಶಾಶ್ವತವಾಗಿ ತ್ಯಜಿಸುವುದು ಸೂಕ್ತವಲ್ಲ ಎನ್ನುವುದು ತಜ್ಞರ ಅಭಿಪ್ರಾಯ. ರಿಯಾ ದೇಸಾಯಿ ಅವರ ಪ್ರಕಾರ, ಅನ್ನ ತ್ಯಜಿಸುವುದು ಸ್ನಾಯು ಕ್ಷೀಣತೆಗೆ ಕಾರಣವಾಗಬಹುದು ಮತ್ತು ಹೆಚ್ಚಿನ ಮಟ್ಟದ ಪೋಷಕಾಂಶ, ಖನಿಜಗಳು ದೇಹಕ್ಕೆ ಸಿಗದೇ ಇರಬಹುದು. ದೇಹದ ಕೊಬ್ಬನ್ನು ಕಡಿಮೆ ಮಾಡುವುದು ಮಾತ್ರ ನಮ್ಮ ಗುರಿಯಾಗಬೇಕು ಎನ್ನುತ್ತಾರೆ.

Leave a Reply

Your email address will not be published. Required fields are marked *