Friday, 22nd November 2024

World Stroke Day : ಮೆದುಳಿನ ಸ್ಟ್ರೋಕ್ ಎಂದರೇನು? ಅದನ್ನು ಅರಿತುಕೊಳ್ಳುವುದು ಹೇಗೆ?

ಬೆಂಗಳೂರು: ಮೆದುಳು ಎಂಬುದು ಒಂದು ಸಂಕೀರ್ಣ ಅಂಗ. ಪ್ರಜ್ಞೆ, ಬುದ್ಧಿವಂತಿಕೆ ಮತ್ತು ಜಾಗೃತಾವಸ್ಥೆಯಾಚೆಗೆ ಹಲವಾರು ಕಾರ್ಯಗಳನ್ನು ನಿರ್ವಹಿಸುವಂಥ ಭಾಗ. ಯಾವಾಗ ನಾಳಗಳು ಬ್ಲಾಕ್ ಆಗಿ, ರಕ್ತದ ಹರಿವಿಗೆ ಅಡಚಣೆಯಾಗುತ್ತದೋ, ಆಗ ಗಂಭೀರವಾದ ಇಶೆಮಿಕ್ ಸ್ಟ್ರೋಕ್‌ (World Stroke Day) ಸಂಭವಿಸುತ್ತದೆ. ಪರಿಣಾಮವೆಂಬಂತೆ, ನರಕೋಶಗಳು ಮತ್ತು ನರದ ಅಂಗಾಂಶಗಳ ತ್ವರಿತ ನಷ್ಟಕ್ಕೆ ಕಾರಣವಾಗುತ್ತದೆ. ಇನ್ನು, ನಾಳಗಳು ಛಿದ್ರಗೊಂಡ ಕಾರಣ ಉಂಟಾಗುವ ರಕ್ತಸ್ರಾವದ ಪಾರ್ಶ್ವವಾಯು ಕೂಡ ಅಷ್ಟೇ ಅಪಾಯಕಾರಿ. ಇಲ್ಲಿ ಅಣೆಕಟ್ಟು ಸ್ಫೋಟಗೊಂಡರೆ ನೀರು ಹೇಗೆ ಧುಮ್ಮಿಕ್ಕಿ ಸಾಗುತ್ತದೋ, ಅದೇ ರೀತಿ ರಕ್ತವು ಮೆದುಳಿನತ್ತ ಪ್ರವಾಹದಂತೆ ಹರಿದು, ಸಮೀಪದ ಎಲ್ಲ ನರಕೋಶಗಳನ್ನು ಹಾನಿಗೊಳಿಸುತ್ತದೆ ಎಂದು ರಾಮಯ್ಯ ಇನ್ ಸ್ಟಿಟ್ಯೂಟ್ ಆಫ್ ನ್ಯೂರೋಸೈನ್ಸಸ್ ನ ನರಶಸ್ತ್ರಚಿಕಿತ್ಸಾ ವಿಭಾಗದ ಹಿರಿಯ ಸಲಹೆಗಾರ ಡಾ. ಸುನೀಲ್ ವಿ. ಫುರ್ಟಾಡೋ ಹೇಳಿದ್ದಾರೆ. ಅವರು ವಿಶ್ವ ಪಾರ್ಶ್ವವಾಯು ದಿನದ ಅಂಗವಾಗಿ ಅವರು ಸಮಸ್ಯೆಯ ಬಗ್ಗೆ ವಿವರಣೆ ನೀಡಿದ್ದಾರೆ.

ಏನಿದು ಪಾರ್ಶ್ವವಾಯು?

ಹೃದಯಾಘಾತದ ಮಾದರಿಯಲ್ಲೇ ಪಾರ್ಶ್ವವಾಯುವನ್ನು “ಮೆದುಳಿನ ಆಘಾತ” ಎಂದು ಕರೆಯಲಾಗುತ್ತದೆ. ಮೆದುಳಿರುವ ಪ್ರದೇಶವು ಆಮ್ಲಜನಕ ಮತ್ತು ಪೋಷಕಾಂಶಗಳಿಂದ ವಂಚಿತವಾದಾಗ ಇಶೆಮಿಕ್ ಪಾರ್ಶ್ವವಾಯು ಸಂಭವಿಸುತ್ತದೆ. ಪ್ರಮುಖ ಅಪಧಮನಿಯಲ್ಲಿ ಪ್ರತಿ 30 ಸೆಕೆಂಡುಗಳ ಕಾಲ ಬ್ಲಾಕೇಜ್ ಉಂಟಾದರೂ ಸಾಕು, ಅದು ಹತ್ತು ಲಕ್ಷದಷ್ಟು ನರಕೋಶಗಳನ್ನು ಕೊಲ್ಲುತ್ತದೆ ಮತ್ತು 6 ಕಿಲೋಮೀಟರ್ ನಷ್ಟು ನರ ಮಾರ್ಗಗಳನ್ನು ನಾಶಮಾಡುತ್ತದೆ. ಪಾರ್ಶ್ವವಾಯುಗೆ ಚಿಕಿತ್ಸೆ ನೀಡದೇ ಇದ್ದರೆ, ಲಕ್ವ, ವಾಕ್ ದೌರ್ಬಲ್ಯ, ಸ್ಮರಣಶಕ್ತಿ ನಷ್ಟ, ಪ್ರಜ್ಞೆಯಲ್ಲಿ ಬದಲಾವಣೆ ಮತ್ತು ನಡವಳಿಕೆಯಲ್ಲಿ ಸಮಸ್ಯೆಗೆ ಕಾರಣವಾಗುತ್ತದೆ. ಮೆದುಳಿನ ಅಂಗಾಂಶದ ಮೇಲೆ ಪರಿಣಾಮ ಬೀರುವಂಥ ಪಾರ್ಶ್ವವಾಯು ಮಾರಣಾಂತಿಕವಾಗಿ ಪರಿಣಮಿಸಬಹುದು. ಹೀಗಾಗಿ ಪಾರ್ಶ್ವವಾಯುವಿಗೆ ತುತ್ತಾದ ಮೊದಲ 6 ಗಂಟೆಗಳೊಳಗೆ ಚಿಕಿತ್ಸೆ ನೀಡುವುದು ಸೂಕ್ತ ವಿಧಾನವಾಗಿದೆ.

6-18 ಗಂಟೆಗಳ ಒಳಗೆ ಚಿಕಿತ್ಸೆಗೆ ಆಗಮಿಸಿದರೆ, ಸುಧಾರಿತ ಸಿಟಿ ಅಥವಾ ಎಂಆರ್‌ಐ ಸ್ಕ್ಯಾನ್ ಗಳ ಮೂಲಕ ಮೆದುಳಿನ ಪ್ರದೇಶದ ಸ್ಥಿತಿಗತಿಯನ್ನು ಪರಿಶೀಲಿಸಬಹುದು. ಹೀಗಾಗಿ, ಅಂಥವರು ಚಿಕಿತ್ಸೆಯಿಂದ ಅನುಕೂಲ ಪಡೆಯಬಹುದು. ಪಾರ್ಶ್ವವಾಯು ಚಿಕಿತ್ಸೆಯಲ್ಲಿ ದೊಡ್ಡಮಟ್ಟದ ಬದಲಾವಣೆ ಕಂಡಿದ್ದು 2015ರಲ್ಲಿ. ರಕ್ತದ ಹೆಪ್ಪುಗಟ್ಟುವಿಕೆಯನ್ನು ತೆಗೆದುಹಾಕಲು ಸ್ಟೆಂಟ್ ಗಳು ಅಥವಾ ಸಕ್ಷನ್ ಸಾಧನಗಳನ್ನು ಬಳಸಿಕೊಂಡು ಮಾಡುವ ಮೆಕ್ಯಾನಿಕಲ್ ಥ್ರಾಂಬೆಕ್ಟೊಮಿ ವಿಧಾನವು ಸಾಂಪ್ರದಾಯಿಕ ಔಷಧ ಆಧರಿತ ಚಿಕಿತ್ಸೆಗಿಂತ ಹೆಚ್ಚು ಪರಿಣಾಮಕಾರಿ ಎಂಬುದನ್ನು ಆಗ ಅಧ್ಯಯನಗಳು ಕಂಡುಕೊಂಡವು. ಪರಿಣಾಮವೆಂಬಂತೆ, ಇಂದು ಪಾರ್ಶ್ವವಾಯು ಉಂಟಾದ 24 ಗಂಟೆಗಳವರೆಗೆ ಮೆಕ್ಯಾನಿಕಲ್ ಥ್ರಾಂಬೆಕ್ಟೊಮಿಯನ್ನು ಮಾಡಬಹುದಾಗಿದೆ. ಅಷ್ಟೇ ಅಲ್ಲ, ವೈದ್ಯಕೀಯ ಲೋಕದಲ್ಲಾದ ಪ್ರಗತಿಯಿಂದಾಗಿ ಇದನ್ನು ಸಣ್ಣ ಅಪಧಮನಿಗಳಲ್ಲೂ ಮಾಡಬಹುದು.

ರಕ್ತಸ್ರಾವದ ಪಾರ್ಶ್ವವಾಯುವಿಗೆ ರಕ್ತಸ್ರಾವದ ಪ್ರಮಾಣ, ಸ್ಥಳ ಮತ್ತು ಸುಬರಖ್ನಾಯ್ಡ್ ರಕ್ತಸ್ರಾವದಂಥ ನಿರ್ದಿಷ್ಟ ಪ್ರಕಾರಗಳನ್ನು ಅವಲಂಬಿಸಿ ಚಿಕಿತ್ಸೆ ನೀಡಬೇಕಾಗುತ್ತದೆ. ಸುಬರಖ್ನಾಯ್ಡ್ ರಕ್ತಸ್ರಾವದಂಥ ಪ್ರಕಾರಗಳಿಗೆ ಅನೂರಿಸಂ ಕ್ಲಿಪಿಂಗ್ ಅಥವಾ ಕಾಯ್ಲಿಂಗ್ ಅವಶ್ಯಕತೆಯಿರುತ್ತದೆ.

ಜಾಗತಿಕ vs. ಭಾರತದ ಸ್ಥಿತಿ

ಜಗತ್ತಿನಾದ್ಯಂತ ಪ್ರತಿ 4 ಮಂದಿಯಲ್ಲಿ ಒಬ್ಬರು ಪಾರ್ಶ್ವವಾಯುವಿಗೆ ತುತ್ತಾಗುವ ಭೀತಿ ಎದುರಿಸುತ್ತಾರೆ. ವರ್ಷಕ್ಕೆ ವಿಶ್ವಾದ್ಯಂತ 12 ದಶಲಕ್ಷ ಪಾರ್ಶ್ವವಾಯು ಪ್ರಕರಣಗಳು ವರದಿಯಾಗುತ್ತವೆ. ಅಲ್ಲದೆ, ಪಾರ್ಶ್ವವಾಯು ಎನ್ನುವುದು ಸಾವಿಗೆ ಕಾರಣವಾಗುವ 3 ಪ್ರಮುಖ ರೋಗಗಳಲ್ಲಿ ಒಂದು. ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ, ಪಾರ್ಶ್ವವಾಯುವಿನಲ್ಲಿ ವಿಶೇಷವಾಗಿ ಪರಿಣತರಾದ ತಂಡಗಳು ರೋಗಿಯ ಆಗಮನದಿಂದ ಚಿಕಿತ್ಸೆಯವರೆಗಿನ ಅವಧಿಯನ್ನು ಒಂದು ಗಂಟೆಗೆ ಇಳಿಸಿ, ಹೆಪ್ಪುಗಟ್ಟುವಿಕೆಯನ್ನು ತೆಗೆದುಹಾಕುವಲ್ಲಿ ಶೇ.80ರಷ್ಟು ಯಶಸ್ವಿಯಾಗುತ್ತವೆ. ಈ ಮೂಲಕ ರೋಗಿಯು ಆಸ್ಪತ್ರೆಯಲ್ಲಿ ದಾಖಲಾಗಿ ಕಳೆಯುವ ಸಮಯ ಮತ್ತು ಪುನರ್ವಸತಿ ಅಗತ್ಯಗಳು ಗಣನೀಯವಾಗಿ ತಗ್ಗುತ್ತದೆ.

ಭಾರತದಲ್ಲಿ, ಪ್ರತಿ ವರ್ಷ 1,00,000 ಜನರಲ್ಲಿ 145 ಮಂದಿ ಪಾರ್ಶ್ವವಾಯುವಿಗೆ ತುತ್ತಾಗುತ್ತಾರೆ. ಅಂದರೆ, ಪ್ರತಿ 20 ಸೆಕೆಂಡುಗಳಿಗೆ ಒಂದು ಪಾರ್ಶ್ವವಾಯು ಪ್ರಕರಣ ಪತ್ತೆಯಾದಂತೆ. ದುರದೃಷ್ಟವಶಾತ್, ಕೇವಲ ಶೇ.1ರಷ್ಟು ರೋಗಿಗಳು ಮಾತ್ರವೇ ಸೂಕ್ತ ಚಿಕಿತ್ಸೆ ಮತ್ತು ಆರೈಕೆ ಪಡೆಯುವಲ್ಲಿ ಸಫಲರಾಗುತ್ತಾರೆ. ಇದಕ್ಕೆ ಕಾರಣ, ಜಾಗೃತಿಯ ಕೊರತೆ, ಅಗತ್ಯ ಮೂಲಸೌಕರ್ಯಗಳ ಅಲಭ್ಯತೆ ಮತ್ತು ರೋಗಿಗಳ ವರ್ಗಾವಣೆಯಲ್ಲಿನ ಅಸಮರ್ಪಕತೆ. ಉತ್ತಮ ಫಲಿತಾಂಶಕ್ಕೆ ಸೂಕ್ತ ಆಂಬುಲೆನ್ಸ್ ವ್ಯವಸ್ಥೆಗಳು ಮತ್ತು ಪ್ರಮಾಣೀಕೃತ ಪಾರ್ಶ್ವವಾಯು ಚಿಕಿತ್ಸಾ ಕೇಂದ್ರಗಳು ಅತ್ಯಂತ ಮುಖ್ಯ.

ಇದನ್ನೂ ಓದಿ: World Stroke Day : ಸಾಕ್ರ ವರ್ಲ್ಡ್ ಆಸ್ಪತ್ರೆಯಲ್ಲಿ ವಿಶ್ವ ಪಾರ್ಶ್ವವಾಯು ದಿನಾಚಣೆ ಅಂಗವಾಗಿ ವಾಕಥಾನ್

ಭಾರತದಲ್ಲಿ ಜೀವನಶೈಲಿಯಲ್ಲಿನ ಬದಲಾವಣೆ ಮತ್ತು ವಯೋಸಂಬಂಧಿ ಅಪಾಯಗಳಾದ ಹೃದ್ರೋಗ, ಮಧುಮೇಹ ಮತ್ತು ಹೈಪರ್ ಟೆನ್ಶನ್ ಹೆಚ್ಚಳವು ಈ ಅಪಾಯಗಳನ್ನು ನಿರ್ವಹಿಸುವ ಅಗತ್ಯತೆಯನ್ನು ಒತ್ತಿಹೇಳುತ್ತವೆ. ಏಕೆಂದರೆ, ಶೇ.90ರಷ್ಟು ಪಾರ್ಶ್ವವಾಯುವನ್ನು ನಮ್ಮ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ತಡೆಯಬಹುದು.

ಪಾರ್ಶ್ವವಾಯು ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದಿ ವರ್ಲ್ಡ್ ಸ್ಟ್ರೋಕ್ ಅಸೋಸಿಯೇಷನ್ ಪ್ರತಿ ವರ್ಷವೂ ಒಂದು ಥೀಮ್ ಅನ್ನು ಬಳಸುತ್ತದೆ. ಪ್ರಸಕ್ತ ವರ್ಷ ವಿಶ್ವ ಪಾರ್ಶ್ವವಾಯು ಅಭಿಯಾನವು ಪಾರ್ಶ್ವವಾಯು ಬಗ್ಗೆ ಜಾಗೃತಿ ಮೂಡಿಸಲು ಮತ್ತು ಈ ರೋಗದ ತಡೆಗಟ್ಟುವಿಕೆ ಹಾಗೂ ಪುನರ್ವಸತಿಯ ಕ್ರಮವನ್ನು ಉತ್ತೇಜಿಸಲು ಕ್ರೀಡೆ ಹಾಗೂ ಶಾರೀರಿಕ ಚಟುವಟಿಕೆಯ ಭಾವನಾತ್ಮಕ ಶಕ್ತಿಯನ್ನು ಬಳಸಿಕೊಳ್ಳಲಾಗುತ್ತಿದೆ. ಪಾರ್ಶ್ವವಾಯು ಯಾರಿಗಾದರೂ, ಯಾವುದೇ ಸಮಯ ಮತ್ತು ಯಾವುದೇ ಪ್ರದೇಶದಲ್ಲಿ ಉಂಟಾಗಬಹುದು. ಗಂಭೀರವಾದ ಪಾರ್ಶ್ವವಾಯು ಚಿಕಿತ್ಸೆ ನೀಡಬಹುದಾದ ನರಸಂಬಂಧಿ ತುರ್ತು ಸ್ಥಿತಿಯಾಗಿದೆ.