Actor Darshan: ನಟ ದರ್ಶನ್‌ಗೆ ಮತ್ತೊಂದು ಶಾಕ್; ಗನ್ ಸೀಜ್ ಮಾಡಿದ ಪೊಲೀಸರು
Actor Darshan: ಈ ಹಿಂದೆ ಪೊಲೀಸ್ ನೋಟಿಸ್‌ಗೆ ಉತ್ತರ ನೀಡಿದ್ದ ನಟ ದರ್ಶನ್ ಅವರು, ನನಗೆ ಗನ್ ಬೇಕೇ ಬೇಕು. ಆತ್ಮರಕ್ಷಣೆಗಾಗಿ ಗನ್ ಪರವಾನಗಿ ಅವಶ್ಯಕವಿದೆ ಎಂದು ತಿಳಿಸಿದ್ದರು. ಆದರೆ, ಇದೀಗ ಪೊಲೀಸರು ಗನ್ ಅನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರ ಬಂದಿರುವ ನಟ ದರ್ಶನ್‌ಗೆ ಮತ್ತೊಂದು ಆಘಾತ ಎದುರಾಗಿದೆ. ನಟ ದರ್ಶನ್ ಅವರ ಗನ್ ಅನ್ನು ಪೊಲೀಸರು ಸೀಜ್ ಮಾಡಿದ್ದು, ಸದ್ಯ ಲೈಸೆನ್ಸ್ ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ.
ಈ ಹಿಂದೆ ಪೊಲೀಸ್ ನೋಟಿಸ್‌ಗೆ ಉತ್ತರ ನೀಡಿದ್ದ ನಟ ದರ್ಶನ್ ಅವರು, ನನಗೆ ಗನ್ ಬೇಕೇ ಬೇಕು. ನಾನೊಬ್ಬ ಸೆಲೆಬ್ರಿಟಿ, ನಾನು ಹೋದ ಕಡೆ ಬಂದ ಕಡೆ ಸಾಕಷ್ಟು ಜನ ಸೇರ್ತಾರೆ. ಖಾಸಗಿ ಭದ್ರಯಾ ಸಿಬ್ಬಂದಿ ಇದ್ದರೂ, ಆತ್ಮರಕ್ಷಣೆಗಾಗಿ ಗನ್ ಪರವಾನಗಿ ಅವಶ್ಯಕವಿದೆ ಎಂದು ಕಾರಣ ಕೊಟ್ಟಿದ್ದರು.
ಆದರೆ, ಕಮಿಷನರ್ ದಯಾನಂದ್ ಅವರ ಆದೇಶದ ಬೆನ್ನಲ್ಲೇ ದರ್ಶನ್ ಗನ್ ವಶಕ್ಕೆ ಪಡೆಯಲಾಗಿದೆ. ಖುದ್ದು ಪೊಲೀಸರು ದರ್ಶನ್ ಮನೆಗೆ ತೆರಳಿ ಗನ್ ಸೀಜ್ ಮಾಡಿದ್ದಾರೆ. ಚೆನ್ನಮ್ಮನಕೆರೆಯ ವಿಜಯಲಕ್ಷ್ಮಿ ಫ್ಲ್ಯಾಟ್‌ನಲ್ಲಿದ್ದ ದರ್ಶನ್ ಗನ್ ಸೀಜ್ ಆಗಿದೆ ಎನ್ನಲಾಗಿದೆ.
ದರ್ಶನ್‌ಗೆ ರಾಜರಾಜೇಶ್ವರಿ ನಗರ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ನೋಟಿಸ್ ಜಾರಿ ಮಾಡಿದರೂ ಗನ್ ಪೊಲೀಸರಿಗೆ ನೀಡಲು ನಟ ದರ್ಶನ್ ಹಿಂದೇಟು ಹಾಕಿದ್ದರು. ಇದೀಗ ದರ್ಶನ್ ಅವರ ಗನ್ ವಶಕ್ಕೆ ಪಡೆಯಲಾಗಿದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಪ್ರಮುಖ ಆರೋಪಿಯಾಗಿದ್ದಾರೆ. ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ನಟನ ಗನ್ ಸೀಜ್ ಮಾಡಲಾಗಿದೆ.
ನಟ ದರ್ಶನ್ ಜರ್ಮನ್ ಮೇಡ್ ಗನ್ ಬಳಸುತ್ತಿದ್ದರು. ಕಾರ್ಲ್ ವಾಲ್ತೇರ್ ವಾಫೆನ್ ಫ್ಯಾಬ್ರಿಕ್ ಕಂಪನಿಯ ಗನ್ ಇದಾಗಿದ್ದು, ಜತೆಗೆ 5 ಸಜೀವ ಗುಂಡುಗಳು ಸೀಜ್ ಮಾಡಲಾಗಿದೆ.
ಮತ್ತೆ ಸಿನಿಮಾ ಚಟುವಟಿಕೆಯಲ್ಲಿ ನಿಧಾನಕ್ಕೆ ತೊಡಗಿಸಿಕೊಳ್ತಿರೋ ದರ್ಶನ್
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿ, ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟ ದರ್ಶನ್ ಅವರು ಮತ್ತೆ ನಿಧಾನವಾಗಿ ಸಿನಿಮಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ ದರ್ಶನ್ ಸಹೋದರ ದಿನಕರ್ ಆಕ್ಷನ್ ಕಟ್ ಹೇಳಿರುವ ರಾಯಲ್ ಸಿನಿಮಾದ ಸ್ಪೆಷಲ್ ಪ್ರೀಮಿಯರ್ ಅನ್ನು ದರ್ಶನ್ ಹಾಗೂ ತಾಯಿ ಮೀನಾ ತೂಗುದೀಪ್ ಅವರು ವೀಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ.
ಹೊಸವರ್ಷದ ದಿನವೇ ಡೆವಿಲ್ ಸಿನಿಮಾದ ಡಬ್ಬಿಂಗ್ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ನಟ ದರ್ಶನ್ ಬೆನ್ನು ನೋವಿನ ಕಾರಣದಿಂದ ಸಿನಿಮಾ ಚಿತ್ರೀಕರಣವನ್ನು ಮುಂದೂಡಿದ್ದರು. ದರ್ಶನ್, ದಿನಕರ್ ಹಾಗೂ ಮೀನಾ ತೂಗುದೀಪ್ ಒಟ್ಟಿಗೆ ನಿಂತು ಪೋಜ್ ಕೊಟ್ಟ ಪೋಟೊ ಸದ್ಯ ವೈರಲ್ ಆಗುತ್ತಿದೆ. ಒಟ್ಟಿನಲ್ಲಿ ಜೈಲಿನಿಂದ ಬಂದ ನಂತರ ಸಿನಿಮಾ ತಂಡಗಳ ಜತೆ ದರ್ಶನ್ ಬೆರೆಯುತ್ತಿದ್ದಾರೆ.