Lokesh Kaayarga Column: ಗುಟ್ಕಾ ನುಂಗಿದ ಅಡಕೆ ಮಾನ ಮರಳಿ ಬರುವುದೇ ?
ಇನ್ನು ಅಡಕೆ ನಿಷೇಧ ಭೀತಿ ಇಲ್ಲ , ಧಾರಣೆ ಕುಸಿಯುವ ಸಾಧ್ಯತೆಯೂ ಇಲ್ಲ ಎಂದು ಬೆಳೆಗಾರರು ಒಳಗೊಳಗೇ ಖುಷಿಪಡುತ್ತಿದ್ದಾರೆ. ಆದರೆ ಅಡಕೆ ಮೇಲಿನ ನಿಷೇಧದ ತೂಗುಗತ್ತಿ ಇನ್ನೂ ಹಾಗೆಯೇ ಇದೆ. ಗುಟ್ಕಾ ಜತೆಗಿನ ಸಹವಾಸದ ಕಾರಣಕ್ಕಾಗಿ ಕ್ಯಾನ್ಸರ್‌ಕಾರಕ ಎಂಬ ಕಳಂಕದ ಪಟ್ಟ ಹೊತ್ತು ಕೊಂಡ ಅಡಕೆ ಈ ಕಳಂಕದಿಂದ ಇನ್ನೂ ಮುಕ್ತವಾಗಿಲ್ಲ
Source : Vishwavani Daily News Paper
ಲೋಕಮತ
ಲೋಕೇಶ್ ಕಾಯರ್ಗ
kaayarga@gmail.com
ಅಡಕೆ ಕ್ಯಾನ್ಸರ್‌ಕಾರಕ ಅಲ್ಲ. ಅಡಕೆ ಬೆಳೆಗಾರರ ರಕ್ಷಣೆಗೆ ಕೇಂದ್ರ ಸರಕಾರ ಸಿದ್ಧವಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಸಾಗರದಲ್ಲಿ ನಡೆದ ಅಡಕೆ ಬೆಳೆಗಾರರ ಸಮಾವೇಶದಲ್ಲಿ ಹೇಳಿರುವುದು ಅಡಕೆ ಬೆಳೆಗಾರರಿಗೆ ಸಿಕ್ಕಾಪಟ್ಟೆ ಖುಷಿ ನೀಡಿದೆ.
ಇನ್ನು ಅಡಕೆ ನಿಷೇಧ ಭೀತಿ ಇಲ್ಲ , ಧಾರಣೆ ಕುಸಿಯುವ ಸಾಧ್ಯತೆಯೂ ಇಲ್ಲ ಎಂದು ಬೆಳೆಗಾರರು ಒಳಗೊಳಗೇ ಖುಷಿಪಡುತ್ತಿದ್ದಾರೆ. ಆದರೆ ಅಡಕೆ ಮೇಲಿನ ನಿಷೇಧದ ತೂಗುಗತ್ತಿ ಇನ್ನೂ ಹಾಗೆಯೇ ಇದೆ. ಗುಟ್ಕಾ ಜತೆಗಿನ ಸಹವಾಸದ ಕಾರಣಕ್ಕಾಗಿ ಕ್ಯಾನ್ಸರ್‌ಕಾರಕ ಎಂಬ ಕಳಂಕದ ಪಟ್ಟ ಹೊತ್ತು ಕೊಂಡ ಅಡಕೆ ಈ ಕಳಂಕದಿಂದ ಇನ್ನೂ ಮುಕ್ತವಾಗಿಲ್ಲ.
ಸುಪ್ರೀಂಕೋರ್ಟ್‌ನಲ್ಲಿ ಅಡಕೆ ಉತ್ಪನ್ನಗಳ ನಿಷೇಧ ಕೋರಿದ ಅರ್ಜಿಯ ವಿಚಾರಣೆ ಮುಂದು ವರಿದಿದೆ. ಕೇಂದ್ರ ಸಚಿವರೊಬ್ಬರು “ಅಡಕೆ ಕ್ಯಾನ್ಸರ್‌ಕಾರಕ ಅಲ್ಲ" ಎಂದು ಹೇಳಿದ ಮಾತ್ರಕ್ಕೆ ಒಕ್ಕಣ್ಣ ಆರೋಗ್ಯದಾಯಕನೆಂಬ ಪ್ರಮಾಣಪತ್ರ ಸಿಗುವುದಿಲ್ಲ. ಈ ನಿಟ್ಟಿನಲ್ಲಿ ಅಡಕೆ ಬೆಳೆಗಾರರ ಹೋರಾಟ ಸಾಕಷ್ಟು ಮುಂದೆ ಸಾಗಬೇಕಾಗಿದೆ.
“ನಾವು ಅಡಕೆ ಬೆಳೆಯುವುದಿಲ್ಲ ಆದರೆ, ಪ್ರತಿ ಮನೆಯಲ್ಲಿ ಬಳಕೆ ಮಾಡುತ್ತೇವೆ, ನಮ್ಮಲ್ಲಿ ಗಣೇಶ, ಗೌರಿಯನ್ನು ಅಡಕೆಯಲ್ಲಿಯೇ ಪೂಜಿಸುತ್ತೇವೆ" ಎಂಬ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಮಾತು ದಕ್ಷಿಣೋತ್ತರ ಭಾರತದಲ್ಲಿ ಅಡಕೆಗೆ ಇರುವ ಗೌರವ ಮತ್ತು ಪೂಜನೀಯ ಭಾವದ ಸಂಕೇತ. ಭಾರತೀಯರು ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಯಾವತ್ತೂ ಭಾವಿಸಿಲ್ಲ. ಆದರೆ ಕೇಂದ್ರ ಸರಕಾರ 2011ರ ಆಗಸ್ಟ್‌ನಲ್ಲಿ 1954ರ ಆಹಾರ ಕಲಬೆರಕೆ ತಡೆಕಾಯಿದೆಯ 42ನೇ ಸೆಕ್ಷನ್‌ಗೆ ತಿದ್ದು ಪಡಿ ಮಾಡಿ ಗುಟ್ಕಾ ಮತ್ತು ಪಾನ್ ಮಸಾಲದ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಿಸಿ ಹೊರಡಿಸಿದ ಆದೇಶದಲ್ಲಿ ಅಡಕೆಯ ಉಲ್ಲೇಖವೂ ಇದೆ. ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯ ಗಳು ಈ ಆದೇಶವನ್ನು ಜಾರಿಗೆ ತಂದಿವೆ. ಸದ್ಯದ ಕಾನೂನು ಪ್ರಕಾರ ಗುಟ್ಕಾ ಇಲ್ಲವೇ ಪಾನ್ ಮಸಾಲ ಪ್ಯಾಕೆಟ್‌ನಲ್ಲಿ ತಂಬಾಕು ಮತ್ತು ಅಡಕೆಯನ್ನು ಮಿಶ್ರ ಮಾಡಿ ಮಾರಾಟ ಮಾಡುವುದು ಕ್ರಿಮಿನಲ್ ಅಪರಾಧ.
ಅಡಕೆ ಕ್ಯಾನ್ಸರ್‌ಕಾರಕ ಎಂಬ ಈ ಕೂಗು ನಿನ್ನೆ ಮೊನ್ನೆಯದಲ್ಲ. 90ರ ದಶಕದಿಂದಲೂ ನಾನಾ ಸಂಶೋಧನೆಗಳು ಅಡಕೆಯ ಮೇಲೆ ಮುಗಿಬಿದ್ದಿವೆ. ಈ ಸಂಶೋಧನಾ ವರದಿಗಳನ್ನು ಉಲ್ಲೇಖಿಸಿ 2004ರಲ್ಲಿ ಅಂದಿನ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯಕ ಸಚಿವೆ ಪನಬಾಕ ಲಕ್ಷ್ಮಿ ಅಡಕೆ ಕ್ಯಾನ್ಸರ್‌ಕಾರಕ (ಕಾರ್ಸಿನೋಜೆನ್) ಎಂದು ಸಂಸತ್ತಿಗೆ ತಿಳಿಸಿದ್ದರು.
ಅಡಕೆಯಲ್ಲಿ ಸಹಜ ಸಾರಜನಕ ಅಂಶವಿದ್ದು ಇದರಿಂದ ಬಾಯಿ, ಗಂಟಲು ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂಬ ಸಂಶೋಧನಾ ವರದಿ ಸಾರಾಂಶವನ್ನು ಸಚಿವೆ ಉಲ್ಲೇಖಿಸಿದ್ದರು. ಈ ಕಾರಣ ದಿಂದಲೇ ಸುಪ್ರೀಂಕೋರ್ಟ್ ಗುಟ್ಕಾದ ಮೇಲೆ ನಿಷೇಧ ಹೇರಿದಾಗ ಅಡಕೆಯನ್ನೂ ಪಾಲುದಾರ ನನ್ನಾಗಿ ಸೇರಿಸಲಾಗಿತ್ತು.
ಆರೋಗ್ಯವರ್ಧಕವೇ, ಮಾರಕವೇ ?
ಅಡಕೆ ಬೆಳೆಗಾರರ ಸಂಘದ ಒತ್ತಡಕ್ಕೆ ಮಣಿದು ಕೇಂದ್ರ ಸರಕಾರವಾಗಲಿ, ರಾಜ್ಯ ಸರಕಾರವಾಗಲಿ ಅಡಕೆಯನ್ನು ನಿಷೇಧಿಸುವ, ನಿಯಂತ್ರಿಸುವ ಕೆಲಸಕ್ಕೆ ಇನ್ನೂ ಕೈ ಹಾಕಿಲ್ಲ. ಕಾನೂನಿನ ಹೊರತಾ ಗಿಯೂ ಗುಟ್ಕಾ ಮತ್ತು ಅಡಕೆ ಬೇರೆ, ಬೇರೆ ಸ್ವರೂಪದಲ್ಲಿ ಮಾರಾಟವಾಗುತ್ತಿದೆ. ಅಡಕೆಯ ಧಾರಣೆ ಯ ಮೇಲೂ ಈ ಆದೇಶ ಯಾವುದೇ ಪರಿಣಾಮ ಬೀರಿಲ್ಲ. ಇದು ಬೇರೆ ಮಾತು. ಆದರೆ ಅಡಕೆ ಆರೋಗ್ಯಕ್ಕೆ ಪೂರಕವೇ, ಹಾನಿಕಾರಕವೇ ಎಂಬ ವಾದ ಎಂದೋ ಇತ್ಯರ್ಥವಾಗಬೇಕಿತ್ತು.
ಸಾಂಪ್ರದಾಯಿಕವಾಗಿ ಅಡಕೆ ಬೆಳೆಯುವ ಜಿಲ್ಲೆಗಳಲ್ಲಿ ತೆಂಗಿನಕಾಯಿಯಂತೆ ಅಡಕೆ ಮತ್ತು ಹಿಂಗಾರಕ್ಕೆ ಪೂಜನೀಯ ಸ್ಥಾನವಿದೆ. ಮದುವೆ, ನಿಶ್ಚಿತಾರ್ಥದ ಸಮಾರಂಭಗಳಲ್ಲಿ ವೀಳ್ಯಶಾಸ್ತ್ರದ ಹೆಸರಿನಲ್ಲಿ ಗೌರವಪೂರ್ವಕವಾಗಿ ವೀಳ್ಯದೆಲೆ ಮತ್ತು ಅಡಕೆ ವಿನಿಮಯ ಮಾಡಿಕೊಳ್ಳುವುದು ವಾಡಿಕೆ.
ಎಲೆ ಅಡಕೆ ಜಗಿಯದವರು ಕೂಡ ಶುಭ ಸಮಾರಂಭಗಳಲ್ಲಿ ಅಡಕೆಯನ್ನು ಬಳಸುತ್ತಾರೆ. ಒಂದು ವೇಳೆ ಅಡಕೆ ಆರೋಗ್ಯಕ್ಕೆ ಹಾನಿಕಾರಕವಾಗಿದ್ದರೆ ಧಾರ್ಮಿಕ ಸಮಾರಂಭಗಳಲ್ಲೂ ಇದನ್ನು ಬಳಸುವುದರಲ್ಲಿ ಅರ್ಥವಿಲ್ಲ. ಆದರೆ ಈ ಸಂಶೋಧಕರ ನಡುವೆಯೇ ಈ ವಿಚಾರದಲ್ಲಿ ಭಿನ್ನಾಭಿ ಪ್ರಾಯಗಳಿವೆ. ದೇಶೀಯ ಸಂಶೋಧಕರ ಪ್ರಕಾರ ಅಡಕೆ ಆರೋಗ್ಯವರ್ಧಕ ಅತಿಶಯ ಗುಣ ವಿಶೇಷ ಗಳಿಂದ ಕೂಡಿದ್ದರೆ, ಅಂತಾರಾಷ್ಟ್ರೀಯ ಸಂಶೋಧಕರ ಪ್ರಕಾರ ಆರೋಗ್ಯಕ್ಕೆ ಮಾರಕ.
ದೀರ್ಘ ಕಾಲದ ಈ ವಾದ ವಿವಾದಕ್ಕೆ ಇನ್ನಾದರೂ ತೆರೆ ಹಾಕಬೇಕಿದೆ. ಅಡಕೆಯ ನಿಜ ಸ್ವರೂಪ ವನ್ನು ಜಗತ್ತಿನೆದುರು ನಿರೂಪಿಸಬೇಕಾಗಿದೆ. ಅಡಕೆಯನ್ನು ಕೇಂದ್ರೀಕರಿಸಿ ಭಾರತೀಯ ಸಂಶೋ ಧಕರು ಈವರೆಗೆ ನಡೆಸಿದ ಸಂಶೋಧನೆಗಳಲ್ಲಿ ಅಡಕೆಯ ಗುಣವಿಶೇಷಗಳನ್ನು ಹಾಡಿ ಹೊಗಳ ಲಾಗಿದೆ.
ಈ ವರದಿಗಳನ್ನು ಆಧರಿಸಿ ಕೆಲವರು ಅಡಕೆ ಚಹಾದಂತಹ ಮೌಲ್ಯವರ್ಧಿತ ಉತ್ಪನ್ನಗಳನ್ನು ಹೊರ ತಂದಿದ್ದಾರೆ. ಈ ಉತ್ಪನ್ನಗಳ ಮಾರಾಟವೂ ಚೆನ್ನಾಗಿ ನಡೆಯುತ್ತಿದೆ. ಆದರೆ ಪಾಶ್ಚಾತ್ಯ ರಾಷ್ಟ್ರಗಳ ತಜ್ಞರ ಪ್ರಕಾರ ಅಡಕೆ ಕ್ಯಾನ್ಸರ್ ಕಾರಕ. ಇದಕ್ಕೆ ಇತ್ತೀಚಿಗಿನ ಸೇರ್ಪಡೆ ವಿಶ್ವ ಆರೋಗ್ಯ ಸಂಸ್ಥೆಯ ವರದಿ. ಡಬ್ಲ್ಯುಎಚ್‌ಒ ಅಂಗಸಂಸ್ಥೆ ಇಂಟರ್ ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್(ಐಎಆರ್‌ಸಿ) 2024 ಅ.9ರಂದು ಬಿಡುಗಡೆ ಮಾಡಿದ ವರದಿಯಲ್ಲಿ ಅಡಕೆಯನ್ನು ಕ್ಯಾನ್ಸರ್ ಕಾರಕ ಎಂದು ತಿಳಿಸಲಾಗಿದೆ. ದಿ ಲ್ಯಾನ್ಸೆಟ್ ಅಂಕಾಲಜಿ ಎಂಬ ಅಂತಾರಾಷ್ಟ್ರೀಯ ಜರ್ನಲ್‌ನಲ್ಲಿ ಈ ವರದಿ ಪ್ರಕಟವಾಗಿದೆ.
ಸಂ‘ಶೋಧನೆ’ಯಲ್ಲೂ ಸಂಶಯ
ದೇಶದ ಯಾವುದೇ ಸಂಶೋಧನಾಲಯ ಈವರೆಗೆ ಅಡಕೆ ಕ್ಯಾನ್ಸರ್ ಕಾರಕ ಎಂದು ವರದಿ ನೀಡಿಲ್ಲ. ಕರ್ನಾಟಕ ಮತ್ತು ಕೇರಳದ ಅಡಕೆ ಸಂಶೋಧನಾ ಕೇಂದ್ರಗಳು ನಡೆಸಿದ ಅಧ್ಯಯನ, ಅಡಕೆ ಆರೋಗ್ಯಕ್ಕೆ ಪೂರಕ ಎಂಬುದನ್ನು ಎತ್ತಿ ತೋರಿಸಿವೆ. ಕಳೆದ 20 ವರ್ಷದಲ್ಲಿ ಹಲವು ಸಂಶೋಧ ಕರು ಮತ್ತು ಅಧಿಕೃತ ಸಂಶೋಧನಾ ಸಂಸ್ಥೆಗಳು ಅಡಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂಬು ದನ್ನು ವರದಿಗಳ ಮೂಲಕ ನಿರೂಪಿಸಿವೆ.
ಜೀವನಪೂರ್ತಿ ಅಡಕೆಯ ಬಗ್ಗೆ ಸಂಶೋಧನೆ ನಡೆಸಿ, ಅಡಕೆಯ ಹಲವು ಮೌಲ್ಯವರ್ಧಿತ ಉತ್ಪನ್ನ ಗಳನ್ನು ಹೊರತಂದ ಬದನಾಜೆ ಶಂಕರಭಟ್ಟರು ಅಡಕೆ ಆರೋಗ್ಯವರ್ಧಕ ಎಂದು ದೃಢಪಡಿಸಿದ ಮೊದಲಿಗರು. ಗುಟ್ಟಾ ವಿವಾದ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲೂ ಅವರು ತಮ್ಮ ಸಂಶೋಧನಾ ವರದಿಯನ್ನು ಸಲ್ಲಿಸಿದ್ದರು. ಉಡುಪಿಯ ಎಸ್ಡಿಎಂ ಆಯುರ್ವೇದ ಕಾಲೇಜಿನಲ್ಲಿ ನಡೆದ ಸಂಶೋ ಧನೆಯಲ್ಲೂ ಅಡಕೆಯ ಗುಣವಿಶೇಷಗಳನ್ನು ಎತ್ತಿ ತೋರಿಸಲಾಗಿದೆ.
ಬೆಂಗಳೂರಿನ ಎಂ.ಎಸ್.ರಾಮಯ್ಯ ವಿಶ್ವವಿದ್ಯಾಲಯದ ಆನ್ವಯಿಕ ವಿಜ್ಞಾನ ವಿಭಾಗದ ವಿಜ್ಞಾನಿ ಗಳು ಐಎಎಚ್‌ಆರ್, ಮೈಸೂರಿನ ಸಿಎಫ್ ಟಿಆರ್‌ಐ, ಕಾಸರಗೋಡಿನ ಸಿಪಿಸಿಆರ್‌ಐ, ಕೋಯಿ ಕ್ಕೋಡ್ ನಲ್ಲಿರುವ ಅಡಕೆ ನಿರ್ದೇಶನಾಲಯ, ವಾರಾಣಸಿ ಸಂಶೋಧನಾ ಪ್ರತಿಷ್ಠಾನ, ಬೆಂಗಳೂರು ಕೃಷಿ ವಿವಿ ಹಾಗೂ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿ ತಜ್ಞರ ಸಹಯೋಗ ದಲ್ಲಿ 2020ರಲ್ಲಿ ನಡೆಸಿದ ಸಂಶೋಧನೆಯಲ್ಲಿ ಅಡಕೆ ಆರೋಗ್ಯಕ್ಕೆ ಮಾರಕವಲ್ಲ ಎಂದು ವರದಿ ನೀಡಿದ್ದರು.
ಇತ್ತೀಚೆಗೆ ನಿಟ್ಟೆ ವಿ.ವಿ.ಯ ವಿಜ್ಞಾನಿ ಪ್ರೊ. ಇಡ್ಯಾ ಕರುಣಾಸಾಗರ್ ಮತ್ತವರ ತಂಡವು ನಡೆಸಿದ ಸಂಶೋಧನೆಯಲ್ಲಿ ಅಡಕೆಯಿಂದ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಇಲ್ಲ ಎಂದು ಕಂಡುಬಂದಿದೆ. ಮಾತ್ರವಲ್ಲ ಅಡಕೆಯ ಸಾರವನ್ನು ಪ್ರಯೋಗಿಸಿ ದಾಗ ಅದು ಕ್ಯಾನ್ಸರ್ ಕಣಗಳ ಬೆಳವಣಿಗೆಯನ್ನು ಪ್ರತಿಬಂಧಿಸುತ್ತದೆ ಎನ್ನುವುದನ್ನು ಈ ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ. ಅಡಕೆಯ ಮೇಲೆ ನಿಷೇಧದ ತೂಗುಗತ್ತಿ ಬಂದಾಗಲೆಲ್ಲಾ ರಾಜ್ಯಮಟ್ಟದಲ್ಲಿ ಈ ಸಂಬಂಧ ನಡೆದ ಸಂಶೋಧನೆಗಳನ್ನು ಉಲ್ಲೇಖಿಸಲಾಗುತ್ತದೆ.
ಈ ವರದಿಗಳನ್ನು ಸುಪ್ರೀಂಕೋರ್ಟ್ ಮುಂದೆಯೂ ಮಂಡಿಸಲಾಗಿದೆ. ಆದರೆ ಭಾರತದ ಸಂಶೋ ಧನೆಗಳು ಅಂತಾರಾಷ್ಟ್ರೀಯ ಜರ್ನಲ್ ಗಳಲ್ಲಿ ಪ್ರಕಟವಾಗಿದ್ದು ಕಡಿಮೆ. ಈ ಕಾರಣದಿಂದ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಇವು ಮಾನ್ಯತೆಗಳಿಸುವಲ್ಲೂ ವಿಫಲವಾಗಿವೆ. ಕೆಲವೊಂದು ಸಂಶೋಧನೆ ಗಳು ಕ್ಲಿನಿಕಲ್ ಟ್ರಯಲ್ಸ್ ಮತ್ತು ಅದರ ಮಾನದಂಡದ ಅನ್ವಯ ನಡೆಯದ ಕಾರಣ ಇವುಗಳನ್ನು ತಜ್ಞರು ಅಂಗೀಕರಿಸಿಲ್ಲ.
ಐಎಆರ್‌ಸಿ ಸಂಸ್ಥೆ ವಾದ
ಡಬ್ಲ್ಯುಎಚ್‌ಒ ಅಂಗಸಂಸ್ಥೆ ಐಎಆರ್‌ಸಿ ಸಂಸ್ಥೆ ಬಾಯಿ ಕ್ಯಾನ್ಸರ್ ಬಗ್ಗೆ ಸಂಶೋಧನೆ ನಡೆಸು ತ್ತಿದ್ದು, ಪ್ರತಿ ಐದು ವರ್ಷಕ್ಕೊಮ್ಮೆ ವಿಶ್ವ ಕ್ಯಾನ್ಸರ್ ವರದಿ ಪ್ರಕಟಿಸುತ್ತದೆ. ಈ ಹಿಂದಿನ ಐಎಆರ್‌ಸಿ ಯ ವರದಿಗಳಲ್ಲೂ ಅಡಕೆ ಕ್ಯಾನ್ಸರ್‌ಕಾರಕ ಎಂದೇ ಉಲ್ಲೇಖಿಸಲಾಗಿತ್ತು. ಆದರೆ ಅಡಕೆ ಬೆಳೆಯ ವ್ಯಾಪ್ತಿ ವ್ಯಾಪಕ ವಿಸ್ತರಣೆ ಕಂಡಿರುವ ಹಿನ್ನೆಲೆಯಲ್ಲಿ ಈಗಿನ ವರದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಜಾಗತಿಕವಾಗಿ ಸುಮಾರು 60 ಕೋಟಿ ಮಂದಿ ಅಡಕೆ ಬಳಸುತ್ತಾರೆ. ದಕ್ಷಿಣ ಮಧ್ಯ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ಇತರೆ ಹೆಚ್ಚಿನ ದೇಶಗಳಲ್ಲಿ ಅಡಕೆ ಬಳಕೆಯಲ್ಲಿದೆ. ಇದೇ ಮೊದಲ ಬಾರಿಗೆ ಐಎ ಆರ್‌ಸಿ ವರದಿಯಲ್ಲಿ ತಂಬಾಕು ಮಿಶ್ರಿತ ಅಡಕೆ ಮಾತ್ರವಲ್ಲ, ನೇರವಾಗಿ ಅಡಕೆ ಬೆಳೆಯನ್ನೇ ನಿಯಂತ್ರಿಸುವ ಪ್ರಸ್ತಾಪವಿದೆ. ಹೊಗೆರಹಿತ ತಂಬಾಕು (ತಿಂದು ಉಗುಳುವ) ಮತ್ತು ಅಡಕೆ ಬಳಕೆಗೆ ಕಡಿವಾಣ ಹಾಕುವ ಮೂಲಕ ವಿಶ್ವದ ಮೂರನೇ ಒಂದರಷ್ಟು ಬಾಯಿ ಕ್ಯಾನ್ಸರ್ ತಡೆಯಬಹುದು ಎಂಬ ವರದಿಯಲ್ಲಿ ಹೇಳಲಾಗಿದೆ.
ಜಾಗತಿಕವಾಗಿ ಹೊಗೆರಹಿತ ತಂಬಾಕಿನಿಂದ ಉಂಟಾಗಿರುವ 120200 ಬಾಯಿ ಕ್ಯಾನ್ಸರ್ ಪ್ರಕರಣ ಗಳಲ್ಲಿ 83400 ಪ್ರಕರಣ ಭಾರತದ ದಾಖಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ 2022ರಲ್ಲಿ ನಡೆದ ಈ ಅಧ್ಯಯನ ಬಹುತೇಕ ಉತ್ತರ ಭಾರತದ ನಡೆದಿರುವುದು ಗಮನಾರ್ಹ. ಇಲ್ಲಿ ನವರು ತಂಬಾಕು ಪುಡಿ ಇಲ್ಲದೆ ಅಡಕೆಯನ್ನಷ್ಟೇ ಜಗಿಯುವ ಅಭ್ಯಾಸ ವುಳ್ಳವರಲ್ಲ.
ಕರಾವಳಿ, ಮಲೆನಾಡು ಭಾಗಗಳಲ್ಲಿ ವೀಳ್ಯ, ಅಡಕೆ ಮತ್ತು ಸುಣ್ಣ ಎಲೆ ಅಡಕೆಯ ಪ್ರಧಾನ ಸಾಮಗ್ರಿ ಗಳು. ಹಿಂದೆ ಹೆಚ್ಚಿನವರು ಇದರೊಂದಿಗೆ ತಂಬಾಕು ಎಲೆ ಸೇರಿಸಿಕೊಳ್ಳುತ್ತಿದ್ದರು. ಈ ಪರಿಪಾಠ ಈಗ ಕಡಿಮೆಯಾಗಿದೆ. ಅಂದರೆ ಈ ವರದಿಯು ಅಡಕೆಯನ್ನಷ್ಟೇ ಕೇಂದ್ರೀಕರಿಸಿ ನಡೆದ ಅಧ್ಯಯನ ಅಲ್ಲ ಎನ್ನುವುದು ಸ್ಪಷ್ಟ.
ನಿಜಬಣ್ಣ ತಿಳಿಯಲಿ
ವಿಶ್ವ ಆರೋಗ್ಯ ಸಂಸ್ಥೆ ವರದಿಗೆ ಅಡಕೆ ಬೆಳೆಗಾರರ ಪ್ರದೇಶದಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಕ್ಯಾಂಪ್ಕೋದಂಥ ಸಂಸ್ಥೆಗಳು, ಅಡಕೆ ಬೆಳೆಗಾರರ ಸಂಘಟನೆಗಳು ಈ ವರದಿಗೆ ತೀವ್ರ ವಿರೋಧ ವ್ಯಕ್ತ ಪಡಿಸಿವೆ. ತಂಬಾಕಿನೊಂದಿಗೆ ಸೇರಿದರಷ್ಟೇ ಅಡಕೆ ಕ್ಯಾನ್ಸರ್‌ಕಾರಕ. ಅಡಕೆ ಪುಡಿ, ಸುಪಾರಿ ಸೇವನೆ ಯಿಂದ ಆರೋಗ್ಯದ ಮೇಲೆ ಯಾವುದೇ ಹಾನಿ ಇಲ್ಲ ಎನ್ನುವುದು ಈ ಸಂಘಟನೆಗಳ ವಾದ. ಇದೀಗ ತನ್ನ ಪಕ್ಷದ ಶಾಸಕರು, ಸಂಸದರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಪ್ರದೇಶಗಳ ಹಿತ ಕಾಯುವ ಉದ್ದೇಶದಿಂದ ಕೇಂದ್ರ ಸರಕಾರ ದೇಶದ ಅತಿ ಉನ್ನತ 16 ಸಂಶೋಧನಾ ಕೇಂದ್ರಗಳಲ್ಲಿ ಅಡಕೆ ಬಗ್ಗೆ ಸಂಶೋಧನೆ ಮಾಡಿಸಲು ಮುಂದಾಗಿದೆ. ಈ ವರದಿ ಬರುವ ಮುನ್ನವೇ ಕೇಂದ್ರ ಕೃಷಿ ಸಚಿವರ ಚೌಹಾಣ್, “ಅಡಕೆ ಕ್ಯಾನ್ಸರ್‌ಕಾರಕ ಅಲ್ಲ ಎನ್ನುವುದನ್ನು ನಾವು ಸಾಬೀತು ಮಾಡುತ್ತೇವೆ" ಎಂದು ಹೇಳಿದ್ದಾರೆ.
ಭಾರತದ ಈ ಸಂಶೋಧನೆಯಲ್ಲಿ ಅಡಕೆಯ ನಿಜಬಣ್ಣ ಬಹಿರಂಗವಾಗಬೇಕಿದೆ. ಒಂದು ವೇಳೆ ಅಡಕೆಯಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಿಲ್ಲದೇ ಹೋದರೆ ಇಡೀ ಜಗತ್ತಿಗೆ ಇದನ್ನು ಸಾರಿ ಹೇಳ ಬೇಕಿದೆ. ವಿಶ್ವಮಟ್ಟದಲ್ಲೂ ಭಾರತದ ವೀಳ್ಯಕ್ಕೆ ಅಂಗೀಕಾರ ದೊರೆಯಬೇಕಿದೆ. ವಿಶ್ವ ಆರೋಗ್ಯ ಸಂಸ್ಥೆ ತನ್ನ ವರದಿಯನ್ನು ಹಿಂಪಡೆದು ಭಾರತದ ವರದಿಗೆ ಮಾನ್ಯತೆ ನೀಡುವಂತೆ ಮಾಡಬೇಕಿದೆ. ಸಂಶೋಧನೆಯಲ್ಲಿ ಅಡಕೆ ಮೇಲಿನ ಅಪವಾದ ತೊಲಗಿದರೆ ಬೆಳೆಗಾರರಿಗೂ ಹಲವು ಪ್ರಯೋಜನ ಗಳಿವೆ. ನಿಷೇಧ, ನಿಯಂತ್ರಣದ ಹೆಸರಿನಲ್ಲಿ ಮಧ್ಯವರ್ತಿಗಳು ಧಾರಣೆ ಕುಸಿಯುವಂತೆ ಮಾಡಲು ಸಾಧ್ಯವಿಲ್ಲ.
ಅಡಕೆಯನ್ನು ಆಹಾರ ಉತ್ಪನ್ನವಾಗಿ ಪರಿಗಣಿಸಬೇಕೆಂಬ ಕೂಗಿಗೆ ಬಲ ಸಿಗಲಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ನಿಯಮದ ಪ್ರಕಾರ ಗುಟ್ಕಾ ಆಹಾರ ಉತ್ಪನ್ನ. ಆದರೆ ಅಡಕೆ ವಾಣಿಜ್ಯ ಉತ್ಪನ್ನ. ಈ ಕಾರಣದಿಂದ ಅಡಕೆಯ ಸಾಗಾಟದ ಮೇಲೂ ತೆರಿಗೆ ವಿಧಿಸಲಾಗುತ್ತದೆ. ಅಡಕೆ ಆರೋಗ್ಯವರ್ಧಕ ಎಂದು ಸಾಬೀತಾದರೆ ಆಹಾರ ಉತ್ಪನ್ನದ ಸಾಲಿಗೆ ಸೇರಿಸಲು ಬೆಳೆಗಾರರೂ ಒತ್ತಡ ಹೇರಬಹುದು. ಅಡಕೆಯ ಇನ್ನಷ್ಟೂ ಮೌಲ್ಯ ವರ್ದಿತ ಉತ್ಪನ್ನಗಳಿಗೆ ಸರಕಾರವೇ ಪ್ರೋತ್ಸಾಹ ನೀಡಬಹುದು.
ಇದನ್ನೂ ಓದಿ: Lokesh Kayarga Column: ರಕ್ಷಣೆಯ ಕಾನೂನೇ ಶೋಷಣೆಯ ಅಸ್ತ್ರ