Champions Trophy ಟೂರ್ನಿಗೆ ಭಾರತದ ಪ್ಲೇಯಿಂಗ್ XI ಆರಿಸಿದ ಆರ್ ಅಶ್ವಿನ್!
ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಭಾರತ ತಂಡದ ಪ್ಲೇಯಿಂಗ್ XI ಅನ್ನು ಸ್ಪಿನ್ ದಿಗ್ಗಜ ಆರ್ ಅಶ್ವಿನ್ ಆಯ್ಕೆ ಮಾಡಿದ್ದಾರೆ. ಫೆಬ್ರವರಿ 19 ರಂದು ಈ ಟೂರ್ನಿಯು ಆರಂಭವಾಗಲಿದೆ. ಭಾರತದ ಪಂದ್ಯಗಳು ದುಬೈನಲ್ಲಿ ನಡೆಯಲಿವೆ.
ನವದೆಹಲಿ: ಮುಂಬರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಭಾರತ ತಂಡದ ಪ್ಲೇಯಿಂಗ್ XI ಆಯ್ಕೆ ಮಾಡಿದ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್, ಯುವ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅವರನ್ನು ಕೈ ಬಿಟ್ಟಿದ್ದು ವಾಷಿಂಗ್ಟನ್ ಸುಂದರ್ ಅವರಿಗೆ ಅವಕಾಶ ನೀಡಿದ್ದಾರೆ.
ಫೆಬ್ರವರಿ 19 ರಂದು ಪಾಕಿಸ್ತಾನದ ಆತಿಥ್ಯದಲ್ಲಿ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆರಂಭವಾಗಲಿದೆ. ಭಾರತ ತಂಡದ ಪಂದ್ಯಗಳನ್ನು ದುಬೈನಲ್ಲಿ ಹೈಬ್ರಿಡ್ ಮಾಡೆಲ್‌ನಲ್ಲಿ ನಡೆಸಲಾಗುತ್ತದೆ. ಭಾರತ ಏಕದಿನ ತಂಡದಲ್ಲಿ ಇದೇ ಮೊದಲ ಬಾರಿ ಯಶಸ್ವಿ ಜೈಸ್ವಾಲ್ ಅವರಿಗೆ ಸ್ಥಾನವನ್ನು ನೀಡಲಾಗಿದೆ. ವಾಷಿಂಗ್ಟನ್ ಸುಂದರ್ ಕೂಡ ಐಸಿಸಿ ಟೂರ್ನಿಯಲ್ಲಿ ಆಡಲು ಎದುರು ನೋಡುತ್ತಿದ್ದಾರೆ. ಆದರೆ, ಭಾರತ ತಂಡದ ಪ್ಲೇಯಿಂಗ್ ಆಯ್ಕೆ ಮಾಡುವುದು ಟೀಮ್ ಮ್ಯಾನೇಜ್‌ಮೆಂಟ್ ದೊಡ್ಡ ತಲೆ ನೋವಾಗಿದೆ.
Champions Trophy: ರವೀಂದ್ರ ಜಡೇಜಾ 4ನೇ ಕ್ರಮಾಂಕದಲ್ಲಿ ಆಡಬೇಕೆಂದ ಆರ್ ಅಶ್ವಿನ್!
ವಾಷಿಂಗ್ಟನ್ ಸುಂದರ್‌ಗೆ ಗಂಭೀರ್ ಮೌಲ್ಯ ಕೊಟ್ಟಿದ್ದಾರೆ: ಅಶ್ವಿನ್
ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಆರ್ ಅಶ್ವಿನ್, ಬ್ಯಾಟಿಂಗ್ ಕೌಶಲದ ಆಧಾರದ ಮೇಲೆ ವಾಷಿಂಗ್ಟನ್ ಸುಂದರ್‌ಗೆ ಗೌತಮ್ ಗಂಭೀರ್ ಒಳ್ಳೆಯ ಮೌಲ್ಯವನ್ನು ನೀಡಿದ್ದಾರೆ. ಆರನೇ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ ಅಥವಾ ಅಕ್ಷರ್ ಪಟೇಲ್ ಆಡಬೇಕು, ಏಳನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಎಂಟನೇ ಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್ ಆಡಿಸಬೇಕು. ಇದರಿಂದ ಮೂವರು ಫಾಸ್ಟ್ ಬೌಲರ್‌ಗಳನ್ನು ಆಡಿಸಬಹುದು ಅಥವಾ ಇಬ್ಬರು ವೇಗಿಗಳ ಜೊತೆಗೆ ಕುಲ್ದೀಪ್ ಯಾದವ್‌ಗೆ ಅವಕಾಶ ನೀಡಬಹುದಾಗಿದೆ.
"ನಾನು ಪಕ್ಷಪಾತಿಯಲ್ಲ, ಆದರೆ ಬ್ಯಾಟಿಂಗ್ ಸಾಮರ್ಥ್ಯದ ಕಾರಣ ವಾಷಿಂಗ್ಟನ್ ಸುಂದರ್‌ಗೆ ಗೌತಮ್ ಗಂಭೀರ್ ಹೆಚ್ಚಿನ ಮೌಲ್ಯವನ್ನು ನೀಡಲಿದ್ದಾರೆ. ಅಲ್ಲದೆ ಅವರನ್ನು ಫ್ಲೋಟರ್ ಆಗಿಯೂ ಬಳಿಸಿಕೊಳ್ಳಬಹುದು," ಎಂದು ಆರ್ ಅಶ್ವಿನ್ ತಿಳಿಸಿದ್ದಾರೆ.
"ನೀವು ಏಕದಿನ ವಿಶ್ವಕಪ್ ಟೂರ್ನಿಯ ಪ್ಲೇಯಿಂಗ್ XI ಅನ್ನು ಹಿಂಬಾಲಿಸುವ ಹಾಗಿದ್ದರೆ ರವೀಂದ್ರ ಜಡೇಜಾ ಅಥವಾ ಅಕ್ಷರ್ ಪಟೇಲ್ ಅವರಲ್ಲಿ ಒಬ್ಬರನ್ನು ಆರನೇ ಕ್ರಮಾಂಕದಲ್ಲಿ ಆಡಿಸಬಹುದು. ಹಾರ್ದಿಕ್ ಪಾಂಡ್ಯ 7ನೇ ಕ್ರಮಾಂಕ ಮತ್ತು ವಾಷಿಂಗ್ಟನ್ ಸುಂದರ್ 8ನೇ ಕ್ರಮಾಂಕದಲ್ಲಿ ಆಡಿಸಬೇಕು. ಇದರಿಂದ ನಾವು ಮೂವರು ಫಾಸ್ಟ್ ಬೌಲರ್‌ಗಳನ್ನು ಆಡಿಸಲು ಅವಕಾಶ ಸಿಕ್ಕಂತಾಗುತ್ತದೆ ಅಥವಾ ಇಬ್ಬರು ವೇಗಿಗಳ ಜೊತೆಗೆ ಕುಲ್ದೀಪ್ ಯಾದವ್ ಅವರನ್ನು ಆಡಿಸಬಹುದು. ಇದರ ಜೊತೆಗೆ ಹಾರ್ದಿಕ್ ಪಾಂಡ್ಯ ಅವರ ಆಲ್‌ರೌಂಡ್ ಕೌಶಲಗಳನ್ನು ಸಮಯೋಜಿತವಾಗಿ ಬಳಿಸಿಕೊಳ್ಳಬಹುದು," ಎಂದು ಮಾಜಿ ಸ್ಪಿನ್ನರ್ ಹೇಳಿದ್ದಾರೆ.
IND vs ENG: ಉಸಿರಿರುವ ತನಕ ಭಾರತಕ್ಕೆ ಆಡುತ್ತೇನೆಂದ ಮೊಹಮ್ಮದ್ ಶಮಿ!
ಶುಭಮನ್ ಗಿಲ್-ರೋಹಿತ್ ಶರ್ಮಾ ಓಪನರ್ಸ್
"ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಇಬ್ಬರೂ ಬಲಗೈ ಬ್ಯಾಟ್ಸ್‌ಮನ್‌ಗಳಾಗಿದ್ದು, ಇನಿಂಗ್ಸ್ ಆರಂಭಿಸಬೇಕು. ನಂತರ ವಿರಾಟ್ ಕೊಹ್ಲಿ ಆಡಬೇಕು. ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಆಡಬೇಕು. ನಂತರ ಐದನೇ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಆಡಿದರೆ, ಆರನೇ ಕ್ರಮಾಂಕಕ್ಕೆ ರವೀಂದ್ರ ಜಡೇಜಾ ಅಥವಾ ಅಕ್ಷರ್ ಪಟೇಲ್ ಅವರಲ್ಲಿ ಒಬ್ಬರನ್ನು ಆರಿಸಿಕೊಳ್ಳಬೇಕು. ಏಳನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಆಡಬೇಕು. ಅಂದ ಹಾಗೆ ಅಗ್ರ ಏಳರಲ್ಲಿ ಎಡಗೈ ಬ್ಯಾಟ್ಸ್‌ಮನ್‌ಗಳ ಸಮಸ್ಯೆ ಇದೆ. ಪ್ಲೇಯಿಂಗ್ XIನಿಂದ ಹೊರಗೆ ರಿಷಭ್ ಪಂತ್ ಮತ್ತು ಯಶಸ್ವಿ ಜೈಸ್ವಾಲ್ ಇದ್ದಾರೆ," ಎಂದು ಅಶ್ವಿನ್ ತಿಳಿಸಿದ್ದಾರೆ.
"ಯಾರಾದರೂ ಗಾಯಕ್ಕೆ ತುತ್ತಾದರೆ ಅವರ ಜಾಗದಲ್ಲಿ ಯಶಸ್ವಿ ಜೈಸ್ವಾಲ್ ಆಡಬೇಕಾಗುತ್ತದೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿಯೂ ಅವರಿಗೆ ಅವಕಾಶವಿದೆ. ಅವರು ಸತತ ಶತಕಗಳನ್ನು ಸಿಡಿಸಿದರೆ ಏನು? ಇದರಲ್ಲಿ ಒಂದು ಆಯ್ಕೆ ಆರಂಭಿಕ ಬ್ಯಾಟ್ಸ್‌ಮನ್ ಆಗಿ ರೋಹಿತ್ ಶರ್ಮಾ ಜೊತೆ ಆಡಿಸುವುದು ಹಾಗೂ ಶುಭಮನ್ ಗಿಲ್‌ರನ್ನು ಮೂರನೇ ಕ್ರಮಾಂಕಕ್ಕೆ ಕಳುಹಿಸುವುದು. ನಂತರ 4ನೇ ಕ್ರಮಾಂಕಕ್ಕೆ ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಅಥವಾ ಕೆಎಲ್ ರಾಹುಲ್ ಅವರಲ್ಲಿ ಒಬ್ಬರನ್ನು ಐದನೇ ಕ್ರಮಾಂಕದಲ್ಲಿ ಆಡಿಸಬೇಕು. ಒಂದು ವೇಳೆ ಜೈಸ್ವಾಲ್ ಆಡಿದರೆ, ಶ್ರೇಯಸ್ ಅಯ್ಯರ್ ಅವರನ್ನು ಕೈ ಬಿಡಬೇಕಾಗುತ್ತದೆ. ಅಂದ ಹಾಗೆ ಅದ್ಭುತ ಫಾರ್ಮ್‌ನಲ್ಲಿರುವ ಜೈಸ್ವಾಲ್ ಅವರನ್ನು ಭಾರತ ತಂಡ ಸದುಪಯೋಗಪಡಿಸಿಕೊಳ್ಳಬೇಕು," ಎಂದು ಮಾಜಿ ಸ್ಪಿನ್ನರ್ ಸಲಹೆ ನೀಡಿದ್ದಾರೆ.