Mysuru News: ಹೊಸ ಸಾಫ್ಟ್‌ವೇರ್ ಕಂಪನಿಗಳು ಮೈಸೂರಿನಲ್ಲಿ ಆರಂಭಗೊಳ್ಳಬೇಕು: ಪ್ರತಾಪ್ ಸಿಂಹ
Mysuru News: ಪಿರಿಯಾಪಟ್ಟಣದ ವಿದ್ಯಾವಿಕಾಸ ಕಾಲೇಜು ಆವರಣದಲ್ಲಿ ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ಭಾನುವಾರ ಆಯೋಜಿಸಿದ್ದ ‘ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯುತ್ಸವ ಮತ್ತು ರೈತರ ಮಕ್ಕಳಿಗಾಗಿ ಉಚಿತ ಉದ್ಯೋಗ ಮೇಳʼ ಕಾರ್ಯಕ್ರಮ ಜರುಗಿತು. ಈ ವೇಳೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮಾತನಾಡಿದ್ದಾರೆ.
ಪಿರಿಯಾಪಟ್ಟಣ, ಜ.20, 2025: ಹಿಂದಿನ ರಾಜಕಾರಣಿಗಳು ನಾಡಿನ ಅಭಿವೃದ್ಧಿ ಕೆಲಸಗಳು ಮತ್ತು ತಮ್ಮ ಕಾರ್ಯವೈಖರಿಯಿಂದ ಜನರ ಮನಸ್ಸಿನಲ್ಲಿ ಉಳಿಯುತ್ತಿದ್ದರು, ಆದರೆ ಇತ್ತೀಚಿನ ದಿನಗಳಲ್ಲಿ ಧರ್ಮ ಮತ್ತು ಜಾತಿಯ ಆಧಾರದ ಮೇಲೆ ರಾಜಕಾರಣಿಗಳನ್ನು ಗುರುತಿಸುವಂತಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತಿಳಿಸಿದರು. (Mysuru News) ಪಟ್ಟಣದ ವಿದ್ಯಾವಿಕಾಸ ಕಾಲೇಜು ಆವರಣದಲ್ಲಿ ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ಭಾನುವಾರ ಆಯೋಜಿಸಿದ್ದ ‘ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯುತ್ಸವ ಮತ್ತು ರೈತರ ಮಕ್ಕಳಿಗಾಗಿ ಉಚಿತ ಉದ್ಯೋಗ ಮೇಳʼ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು ಮತ್ತು ಡೆವಲಪರ್ಸ್ ಬಳಿ ಮಾತ್ರ ಹಣ ಹರಿದಾಡುತ್ತಿದೆ ಆದರೆ ಜನಸಾಮಾನ್ಯರ ಬಳಿ ಹಣ ಇಲ್ಲ. ರಾಜಕಾರಣದಲ್ಲಿರುವ ಅನೇಕ ಮಂದಿ ರಿಯಲ್ ಎಸ್ಟೇಟ್ ಉದ್ಯಮಿಗಳಾಗಿದ್ದಾರೆ, ಇದರಿಂದಾಗಿ ರೈತರು ಮತ್ತು ಬಡಬಗ್ಗರು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ 6559 ಸಾಫ್ಟ್‌ವೇರ್ ಕಂಪನಿಗಳು ಇವೆ, ಆದರೆ ಮೈಸೂರಿನಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ಸಾಫ್ಟ್‌ವೇರ್ ಕಂಪನಿಗಳು ಇದ್ದು, ಮೈಸೂರಿನ ಯುವಜನತೆ ಉದ್ಯೋಗಕ್ಕಾಗಿ ಬೆಂಗಳೂರು, ಹೈದರಾಬಾದ್, ಚೆನ್ನೈನಂತಹ ಮಹಾನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿ ಇದೆ. ಹೊಸ ಹೊಸ ಸಾಫ್ಟ್‌ವೇರ್ ಕಂಪನಿಗಳು ಮೈಸೂರಿನಲ್ಲಿ ಆರಂಭಗೊಳ್ಳಬೇಕು, ಮೈಸೂರಿನ ವಿದ್ಯಾವಂತ ನಿರುದ್ಯೋಗಿಗಳಿಗೆ ಇಲ್ಲಿಯೇ ಉದ್ಯೋಗ ದೊರಕುವಂತಾಗಬೇಕು ಎನ್ನುವ ಉದ್ದೇಶದಿಂದ ಮೈಸೂರು ಬೆಂಗಳೂರು ನಡುವೆ ಎಕ್ಸ್‌ಪ್ರೆಸ್ ಹೈವೇ ನಿರ್ಮಿಸಲಾಗಿದೆ ಎಂದರು.
ಬೆಂಗಳೂರು ಕೊಡಗಿನ ಸಂಪರ್ಕವನ್ನು ಉತ್ತಮಪಡಿಸಲು ಶ್ರೀರಂಗಪಟ್ಟಣ - ಗುಡ್ಡೆಹೊಸೂರು ನಡುವೆ 4126 ಕೋಟಿ ರೂ ವೆಚ್ಚದಲ್ಲಿ ಹೆದ್ದಾರಿ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು 20 ತಿಂಗಳಿನಲ್ಲಿ ಮುಗಿಯುವ ವಿಶ್ವಾಸವಿದೆ ಎಂದರು.
ಇಸ್ಕಾನ್ ಸಂಸ್ಥೆಯ ಉಪಾಧ್ಯಕ್ಷ ಶ್ರೀ ಕಾರುಣ್ಯ ಸಾಗರ್ ಪ್ರಭು ಮಾತನಾಡಿ, ಸಜ್ಜನರ ಸಹವಾಸದಿಂದ ಉತ್ತಮ ಆಲೋಚನೆಗಳು ಬರುವುದು ಸಮಾಜಕ್ಕೆ ಅನುಕೂಲಕರವಾಗಲಿದೆ. ನಿರ್ದಿಷ್ಟವಾದ ಗುರಿಯೊಂದಿಗೆ ಭಗವಂತ ಸಂತುಷ್ಟನಾಗುವ ಕೆಲಸ ಮಾಡಬೇಕಿದೆ, ವ್ಯವಸಾಯವೆಂಬುದು ರಾಷ್ಟ್ರದ ಬೆನ್ನೆಲುಬಾಗಿದ್ದು ಆಹಾರ ಪದಾರ್ಥಗಳು ಯಥೇಚ್ಛವಾಗಿ ಉತ್ಪಾದನೆಯಾದಲ್ಲಿ ಮಾತ್ರ ನಾಡು ಅಭಿವೃದ್ಧಿ ಹೊಂದಲಿದೆ ಎಂದರು.
ಚಲನಚಿತ್ರ ನಿರ್ದೇಶಕಿ ಡಿ.ಸುಮನ್ ಕಿತ್ತೂರು ಮಾತನಾಡಿ, ಪ್ರತಿಯೊಬ್ಬರಲ್ಲೂ ಕನಸುಗಳು ಅಪಾರವಾಗಿವೆ ಆದರೆ ಕನಸನ್ನು ನನಸು ಮಾಡಿಕೊಳ್ಳುವ ಅವಕಾಶಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ದೊರಕಬೇಕಿದೆ ಎಂದು ತಿಳಿಸಿದ ಅವರು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಿದ್ದಾರೆ ಅವರಿಗೆ ಉತ್ತಮ ಉದ್ಯೋಗದ ಅವಕಾಶಗಳು ಲಭ್ಯವಾದಲ್ಲಿ ಖಂಡಿತವಾಗಿ ಯಶಸ್ಸು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರಿನ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಉತ್ತರಾಧಿಕಾರಿ ಶ್ರೀ. ಡಾ. ನಿಶ್ಚಲಾನಂದನಾಥ ಮಹಾಸ್ವಾಮೀಜಿ ಮಾತನಾಡಿ, ರಾಷ್ಟ್ರದಲ್ಲಿ ಆರ್ಥಿಕ ಸ್ಥಿತಿವಂತರ ಸಂಖ್ಯೆ ಕೇವಲ ಶೇ.10 ರಿಂದ 15 ರಷ್ಟಿದ್ದರೆ, ಕಷ್ಟಗಳು ಮತ್ತು ಬಡತನವನ್ನು ಹೊಂದಿರುವವರ ಸಂಖ್ಯೆ ಶೇ. 85 ರಷ್ಟಿದೆ. ರೈತರು ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಆರ್ಥಿಕವಾಗಿ ಸದೃಢತೆ ಬಂದಾಗ ಮಾತ್ರ ಈ ರಾಷ್ಟ್ರ ಉದ್ಧಾರವಾಗಲು ಸಾಧ್ಯ ಎಂದರು.
ಅನ್ನದಾತರ ಕೈ ಹಿಡಿಯಬೇಕು ಎನ್ನುವ ಉದ್ದೇಶದಿಂದ ರೈತರ ಮಕ್ಕಳಿಗಾಗಿ ಉಚಿತ ಉದ್ಯೋಗ ಮೇಳ ಏರ್ಪಡಿಸಿರುವುದು ಸ್ವಾಗತಾರ್ಹ ವಿಷಯವಾಗಿದ್ದು ಇಲ್ಲಿ ಭಾಗವಹಿಸಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಉದ್ಯೋಗ ದೊರಕಿಸಿ ಕೊಡುವ ಭರವಸೆಯನ್ನು ಆಯೋಜಕರು ನೀಡಬೇಕು ಎಂದು ಮನವಿ ಮಾಡಿದರು.
ಒಕ್ಕಲಿಗ ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ನಂಜುಂಡ ನಂಜೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ರಾಜ್ಯದಲ್ಲಿ ಆಯೋಜನೆ ಮಾಡಿರುವ ನಾಲ್ಕನೇ ಉದ್ಯೋಗ ಮೇಳ ಇದಾಗಿದ್ದು ಈ ಹಿಂದೆ ಬೆಂಗಳೂರು, ಮೈಸೂರು ಮತ್ತು ತುಮಕೂರಿನಲ್ಲಿ ಏರ್ಪಡಿಸಿದ್ದ ಉದ್ಯೋಗ ಮೇಳಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ಈವರೆಗೆ ಸುಮಾರು 2500 ಮಂದಿಗೆ ಉದ್ಯೋಗ ಅವಕಾಶ ಕಲ್ಪಿಸಿ ಕೊಡಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾ ವಿಕಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಚ್.ಸಿ.ಬಸವರಾಜ್, ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನ ಕುಮಾರ್, ಬಿ.ಆರ್.ಸತ್ಯನಾರಾಯಣ್, ತಂಬಾಕು ಮಂಡಳಿಯ ಸದಸ್ಯ ಜಿ.ಸಿ.ವಿಕ್ರಂ ರಾಜ್ ಮಾತನಾಡಿದರು.
ಈ ಸುದ್ದಿಯನ್ನೂ ಓದಿ | BOB Recruitment 2025: ಬ್ಯಾಂಕ್ ಆಫ್ ಬರೋಡಾದ 1,267 ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ; ಇಲ್ಲಿದೆ ಹೊಸ ಟೈಮ್ ಟೇಬಲ್
ಈ ಸಂದರ್ಭದಲ್ಲಿ ಪೊಲೀಸ್ ವೃತ ನಿರೀಕ್ಷಕ ಎಂ.ಕೆ.ದೀಪಕ್, ಮುಖಂಡರಾದ ನಾಗಣ್ಣಗೌಡ, ಬಿ.ಎಸ್. ಕುಮಾರ್, ಎಂ.ಎಂ.ರಾಜೇಗೌಡ, ಲೋಕಪಾಲಯ್ಯ ಮತ್ತಿತರರು ಹಾಜರಿದ್ದರು.