Police Alert: ಎಚ್ಚರಿಕೆ, ಮಕ್ಕಳ ಕೈಗೆ ವಾಹನ ಕೊಟ್ಟರೆ ಪೋಷಕರು ಜೈಲಿಗೆ!
ಯಲಬುರ್ಗಾ ಪಟ್ಟಣದಲ್ಲಿ ಅಪ್ರಾಪ್ತ ವಯಸ್ಸಿನವನೊಬ್ಬ (Juvenile driving) ಅತಿ ವೇಗವಾಗಿ ಹಾಗೂ ಅಲಕ್ಷ್ಯದಿಂದ ಪ್ಯಾಸೆಂಜರ್ ಆಟೋವನ್ನು ಚಲಾಯಿಸಿಕೊಂಡು ಬಂದು ಡಿಕ್ಕಿ (Accident) ಹೊಡೆದ ಪರಿಣಾಮ ವ್ಯಕ್ತಿ ಮೃತಪಟ್ಟಿದ್ದಾನೆ. ಇದೀಗ ಬಾಲಕನ ತಂದೆಗೆ ದಂಡ ವಿಧಿಸಲಾಗಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಅಪ್ರಾಪ್ತ ವಯಸ್ಸಿನವರ ಕೈಗೆ ವಾಹನ (kids driving) ನೀಡುವ ಪೋಷಕರ ಮೇಲೆ ಕಠಿಣ ಕ್ರಮಕ್ಕೆ ಪೊಲೀಸರು (police alert) ಮುಂದಾಗಿದ್ದಾರೆ. ಮಕ್ಕಳು ಅಪಘಾತ (Road Accident) ಎಸಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಮೋಟಾರು ವಾಹನಗಳ ಕಾಯ್ದೆ-1988 ರನ್ವಯ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಾಲನೆಗೆ ಅವಕಾಶ ನೀಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಪೋಷಕರು ಹಾಗೂ ವಾಹನ ಮಾಲೀಕರು ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಾಲನೆಗೆ ಅವಕಾಶ ಅಥವಾ ಅನುಮತಿ ನೀಡದಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಮನವಿ ಮಾಡಿದ್ದಾರೆ.
ಮೋಟಾರು ವಾಹನಗಳ ಕಾಯ್ದೆ-1988 ರನ್ವಯ ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಚಲಾಯಿಸಿದಲ್ಲಿ ಕಲಂ 188(5) ರಡಿ ವಾಹನ ಮಾಲೀಕರಿಗೆ ರೂ.1000/- ದಂಡ ಮತ್ತು 03 ತಿಂಗಳು ಜೈಲು ಶಿಕ್ಷೆ, ಪರವಾನಗಿ ಇಲ್ಲದೇ ವಾಹನ ಚಲಾಯಿಸಿದ್ದಕ್ಕಾಗಿ ಚಲಾಯಿಸಿದ ವ್ಯಕ್ತಿಗೆ ಕಲಂ 181(4) ರಡಿ ರೂ.500/- ದಂಡ ಮತ್ತು 03 ತಿಂಗಳು ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಒಂದು ವೇಳೆ ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಚಲಾಯಿಸಿ ಅಪಘಾತ ಎಸಗಿದಲ್ಲಿ ಈ ಅಪಘಾತದಿಂದಾಗುವ ನಷ್ಟವನ್ನು ವಾಹನ ಮಾಲೀಕರಿಂದ ಭರಿಸಬಹುದಾಗಿದೆ.
2021 ರಲ್ಲಿ ಜಿಲ್ಲೆಯಲ್ಲಿ ದಾಖಲಾದ ಪ್ರಕರಣ ಸಂಖ್ಯೆ: 275/2021(ಎಂ.ವಿ.ಸಿ.)ರಲ್ಲಿ ಯಲಬುರ್ಗಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜಶೇಖರ ತಂ. ಅಯ್ಯನಗೌಡ ಪಾಟೀಲ್ ಎಂಬುವವರು ದಿನಾಂಕ:10.03.2021 ರಂದು ಯಲಬುರ್ಗಾ ಪಟ್ಟಣದ ರಸ್ತೆಯೊಂದರ ಎಡಬದಿಯಲ್ಲಿ ನಿಂತು ಮಾತನಾಡುತ್ತಿರುವಾಗ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬ ಅತಿ ವೇಗವಾಗಿ ಹಾಗೂ ಅಲಕ್ಷ್ಯದಿಂದ ಪ್ಯಾಸೆಂಜರ್ ಆಟೋವನ್ನು ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಮೃತಪಟ್ಟಿದ್ದು, ಈ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗಂಗಾವತಿಯ ಜೆ.ಎಮ್.ಎಫ್.ಸಿ. ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರು ಅಪ್ರಾಪ್ತ ವಯಸ್ಸಿನ ಬಾಲಕನಿಗೆ ವಾಹನವನ್ನು ಚಲಾಯಿಸಲು ನೀಡಿದ ಆಟೋ ರಿಕ್ಷಾದ ಮಾಲೀಕರಿಗೆ ರೂ.1,41,61,580/- ಗಳ ಪರಿಹಾರ ಧನವನ್ನು ಮೃತರ ಕುಟುಂಬಕ್ಕೆ ನೀಡುವಂತೆ ಆದೇಶಿಸಿದ್ದಾರೆ.
ಆದ್ದರಿಂದ ಪೋಷಕರು ಹಾಗೂ ವಾಹನ ಮಾಲೀಕರು ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಾಲನೆಗೆ ಅವಕಾಶ ಅಥವಾ ಅನುಮತಿ ನೀಡಬಾರದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆ ಮೂಲಕ ಕೋರಿದ್ದಾರೆ.
ಇದನ್ನೂ ಓದಿ: DISHA Meeting: ನರೇಗಾದಲ್ಲಿ ಅಕ್ರಮ ಎಸಗಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸೂಚನೆ