ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bike Taxi service: ಜೂ.15ರವರೆಗೆ ಬೈಕ್ ಟ್ಯಾಕ್ಸಿ ಸೇವೆ ವಿಸ್ತರಿಸಿ ಹೈಕೋರ್ಟ್‌ ಆದೇಶ

Bike Taxi service: ಬೈಕ್ ಟ್ಯಾಕ್ಸಿ ಸೇವೆಗೆ ನಿರ್ಬಂಧ ವಿಧಿಸಲು ಹೈಕೋರ್ಟ್‌ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ರ‍್ಯಾಪಿಡೋ, ಓಲಾ, ಉಬರ್ ಬೈಕ್‌ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಲು ಇತ್ತೀಚೆಗೆ ರಾಜ್ಯ ಸಾರಿಗೆ ಇಲಾಖೆ ಆದೇಶ ಹೊರಡಿಸಿತ್ತು. ಆದರೆ, ಇದೀಗ ಇನ್ನೂ ಒಂದೂವರೆ ತಿಂಗಳ ಕಾಲ ಬೈಕ್‌ ಟ್ಯಾಕ್ಸಿ ಸೇವೆ ನೀಡಲು ಹೈಕೋರ್ಟ್‌ ಅನುಮತಿ ನೀಡಿದೆ.

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಸಲು ಹೈಕೋರ್ಟ್‌ ಆದೇಶ

Profile Prabhakara R Apr 30, 2025 10:57 AM

ಬೆಂಗಳೂರು: ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು (Bike Taxi service) ಜೂನ್‌ 15ರವರೆಗೆ ವಿಸ್ತರಿಸಿ ಹೈಕೋರ್ಟ್‌ ಆದೇಶ ನೀಡಿದೆ. ಈ ಮೂಲಕ ಬೈಕ್ ಟ್ಯಾಕ್ಸಿ ಸೇವೆಗಳನ್ನು ಒದಗಿಸಲು‌ ರ‍್ಯಾಪಿಡೋ, ಓಲಾ, ಉಬರ್ ಕಂಪನಿಗಳಿಗೆ ಇನ್ನೂ ಒಂದೂವರೆ ತಿಂಗಳು ಕಾಲಾವಕಾಶ ಸಿಕ್ಕಂತಾಗಿದೆ. ರಾಜ್ಯದಲ್ಲಿ ಬೈಕ್‌ ಟ್ಯಾಕ್ಸಿ ಸೇವೆಯನ್ನು ಮುಂದುವರಿಸಲು ನಿರ್ದೇಶನ ಕೋರಿ ರ‍್ಯಾಪಿಡೋ ಸೇರಿ ಇತರೆ ಕಂಪನಿಗಳು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಪರಿಗಣಿಸಿ ನ್ಯಾಯಮೂರ್ತಿ ಬಿ ಎಂ ಶ್ಯಾಮ್ ಪ್ರಸಾದ್​ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ರ‍್ಯಾಪಿಡೋ ಸಂಸ್ಥೆ ಪ್ರಕಾರ ಕರ್ನಾಟಕದಲ್ಲಿ ಆರು ಲಕ್ಷಕ್ಕೂ ಹೆಚ್ಚು ನೋಂದಾಯಿತ ಬೈಕ್ ಟ್ಯಾಕ್ಸಿಗಳಿದ್ದು, ಆ ಮೂಲಕ ಸವಾರರು ಜೀವನ ನಡೆಸುತ್ತಿದ್ದಾರೆ. ಒಂದು ವೇಳೆ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ಸ್ಥಗಿತಗೊಳಿಸಿದರೇ ಅವರು ತೀವ್ರ ಸಂಕಷ್ಟಕ್ಕೆ ಸಿಲುಕಬಹುದು ಎಂದು ಹೇಳಿದ್ದಾರೆ. ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್​, ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ಜೂನ್ 15ರ ವರೆಗೆ ನಡೆಸಲು ವಿಸ್ತರಣೆ ಮಾಡಿ, ವಿಚಾರಣೆ ಮುಂದೂಡಿದೆ.

ಬೈಕ್ ಟ್ಯಾಕ್ಸಿ ಸೇವೆಗೆ ನಿರ್ಬಂಧ ವಿಧಿಸಲು ಹೈಕೋರ್ಟ್‌ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ರ‍್ಯಾಪಿಡೋ, ಓಲಾ, ಉಬರ್ ಬೈಕ್‌ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಲು ಇತ್ತೀಚೆಗೆ ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಆದೇಶ ಹೊರಡಿಸಿದ್ದರು. ಕರ್ನಾಟಕ ರಾಜ್ಯ ಸಾರಿಗೆ ಸಂಘಗಳ ಒಕ್ಕೂಟ ಸಲ್ಲಿಸಿದ್ದ ಅರ್ಜಿಯನ್ನು ಏ.2ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಬೈಕ್ ಟ್ಯಾಕ್ಸಿಗಳ ಸೇವೆಗೆ ತಾತ್ಕಾಲಿಕ ನಿರ್ಬಂಧ ವಿಧಿಸಿ, 3 ತಿಂಗಳ ಒಳಗಾಗಿ ಮಾರ್ಗಸೂಚಿ ಹೊರಡಿಸಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಿತ್ತು. ಹೀಗಾಗಿ ಹೈಕೋರ್ಟ್‌ ಆದೇಶ ಕಾರ್ಯಗತಗೊಳಿಸಲು ಇದೀಗ ಬೈಕ್ ಟ್ಯಾಕ್ಸಿ ಸೇವೆ (Bike Taxi Service) ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ಆದೇಶ ನೀಡಿದ್ದರು.

ಸರ್ಕಾರ ಮೋಟಾರು ವಾಹನ ಕಾಯ್ದೆ, 1988ರ ಸೆಕ್ಷನ್ 3ರಡಿ ಮಾರ್ಗಸೂಚಿಗಳನ್ನು ರೂಪಿಸುವವರೆಗೆ ಬೈಕ್‌ ಟ್ಯಾಕ್ಸಿಗಳು ಕಾರ್ಯನಿರ್ವಹಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಈ ಹಿಂದೆ ಸೂಚನೆ ನೀಡಿತ್ತು. ಮುಂದಿನ 6 ವಾರಗಳ ಒಳಗಾಗಿ ರಾಜ್ಯದಲ್ಲಿರುವ ಎಲ್ಲಾ ಬೈಕ್ ಟ್ಯಾಕ್ಸಿ ಸೇವೆಗಳನ್ನು ನಿರ್ಬಂಧಿಸುವಂತೆ ಸರ್ಕಾರಕ್ಕೆ ಆದೇಶ ನೀಡಿತ್ತು. ಅಲ್ಲದೇ ರ‍್ಯಾಪಿಡೋ, ಓಲಾ, ಉಬರ್ ಸೇರಿ ಇತರೆ ಎಲ್ಲಾ ಬೈಕ್ ಟ್ಯಾಕ್ಸಿಗಳ ಸೇವೆಗೆ ತಾತ್ಕಾಲಿಕ ನಿರ್ಬಂಧ ವಿಧಿಸಿ, ಇದಕ್ಕೆ ಸಂಬಂಧಿಸಿ 3 ತಿಂಗಳ ಒಳಗಾಗಿ ಮಾರ್ಗಸೂಚಿ ಹೊರಡಿಸಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಿತ್ತು.

ಸರ್ಕಾರ ಸೂಕ್ತ ನಿಯಮಗಳನ್ನು ಜಾರಿ ಮಾಡುವವರೆಗೆ ದ್ವಿಚಕ್ರ ವಾಹನಗಳನ್ನು ವಾಣಿಜ್ಯ ಸಾರಿಗೆ ವಾಹನಗಳಾಗಿ ನೋಂದಾಯಿಸಲು ಅಥವಾ ಅಂತಹ ಸೇವೆಗಳಿಗೆ ಪರವಾನಗಿ ನೀಡಲು ಸಾರಿಗೆ ಇಲಾಖೆ ಅನುಮತಿ ನೀಡಬಾರದು ಎಂದು ಕೋರ್ಟ್‌ ಸೂಚಿಸಿತ್ತು.

ಈ ಸುದ್ದಿಯನ್ನೂ ಓದಿ | New Rules: ಅಲರ್ಟ್‌...ಅಲರ್ಟ್‌! ರೈಲು ಪ್ರಯಾಣ, ಎಟಿಎಂ ಬಳಕೆ.. ನಾಳೆಯಿಂದ ಹೊಸ ನಿಯಮಗಳು ಅನ್ವಯ

ರ‍್ಯಾಪಿಡೋ ಸೇರಿ ಹಲವು ಕಂಪನಿಗಳು ಯೆಲ್ಲೋ ಬೋರ್ಡ್‌ ಇಲ್ಲದೇ ಅಕ್ರಮವಾಗಿ ಬೈಕ್‌ ಟ್ಯಾಕ್ಸಿ ಸೇವೆ ನೀಡುತ್ತಿವೆ. ನಿಯಮಬಾಹಿರವಾಗಿ ಕಾರ್ಯಾಚರಣೆ ನಡೆಸುತ್ತಿರುವ ಬೈಕ್‌ ಟ್ಯಾಕ್ಸಿ ಕಂಪನಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಟೋ ಹಾಗೂ ಕ್ಯಾಬ್‌ ಚಾಲಕರು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದರು. ಹೀಗಾಗಿ ಬೈಕ್ ಟ್ಯಾಕ್ಸಿ ಸೇವೆಗೆ ಹೈಕೋರ್ಟ್‌ ತಾತ್ಕಾಲಿಕ ನಿರ್ಬಂಧ ವಿಧಿಸಿತ್ತು. ಆದರೆ, ಇದೀಗ ಬೈಕ್ ಟ್ಯಾಕ್ಸಿ ಸೇವೆಯನ್ನು ಜೂನ್‌ 15ರವರೆಗೆ ವಿಸ್ತರಿಸಿ ಹೈಕೋರ್ಟ್‌ ಆದೇಶ ನೀಡಿದೆ.