ʻನಿಮ್ಮ ಭಾವನೆಗಳಿಗೆ ಯಾರೂ ಬೆಲೆ ಕೊಡಲ್ಲʼ: ನಿವೃತ್ತಿ ಬಗ್ಗೆ ಅಳಲು ತೋಡಿಕೊಂಡ ಆರ್ ಅಶ್ವಿನ್!
R Ashwin on his Retirement:ಭಾರತದ ಮಾಜಿ ಸ್ಪಿನ್ನರ್ ಆರ್ ಅಶ್ವಿನ್ ತಮ್ಮ 100ನೇ ಟೆಸ್ಟ್ ನಂತರ ನಿವೃತ್ತಿ ಹೊಂದಲು ಬಯಸಿದ್ದರು. ಆದರೆ, ಆಸ್ಟ್ರೇಲಿಯಾ ಪ್ರವಾಸದ ಮಧ್ಯದಲ್ಲಿ ಅವರು ಹಠಾತ್ ವಿದಾಯ ಹೇಳಬೇಕಾಯಿತು. ಈ ಬಗ್ಗೆ ಆರ್ ಅಶ್ವಿನ್ ಪ್ರತಿಕ್ರಿಯಿಸಿದ್ದು, ಪರ್ತ್ ಟೆಸ್ಟ್ ಸಂದರ್ಭದಲ್ಲಿ ಉಂಟಾದ ಭಾವನೆಗಳನ್ನು ಬಹಿರಂಗಪಡಿಸಿದ್ದಾರೆ.

ಟೆಸ್ಟ್ ನಿವೃತ್ತಿ ಬಗ್ಗೆ ಆರ್ ಅಶ್ವಿನ್ ಹೇಳಿಕೆ.

ನವದೆಹಲಿ: ಭಾರತ ತಂಡದ (Indian Cricket Team) ಮಾಜಿ ಆಫ್ ಸ್ಪಿನ್ನರ್ ಆರ್ ಅಶ್ವಿನ್ (R Ashwin) ತಮ್ಮ 100ನೇ ಟೆಸ್ಟ್ ಬಳಿಕ ನಿವೃತ್ತಿ ಹೊಂದುವ ಬಗ್ಗೆ ಯೋಚಿಸಿದ್ದರು. ಆದರೆ ಆಸ್ಟ್ರೇಲಿಯಾ ಪ್ರವಾಸದ ಮಧ್ಯದಲ್ಲಿ ತಂಡದ ಪ್ಲೇಯಿಂಗ್ XIನಲ್ಲಿ ತಮಗೆ ಸ್ಥಾನ ಸಿಗದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್ ವಿದಾಯ ಹೇಳಿದ್ದರು. ಈ ಪಂದ್ಯದಲ್ಲಿ ಆರ್ ಅಶ್ವಿನ್ ಬದಲು ಮತ್ತೊರ್ವ ಸ್ಪಿನ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ (Washington Sundar) ಅವರನ್ನು ಆಡಿಸಲಾಗಿತ್ತು. ನಂತರ ಅಡಿಲೇಡ್ ಟೆಸ್ಟ್‌ನಲ್ಲಿ ಆಡಿದ ಬಳಿಕ ಅವರನ್ನು ಗಬ್ಬಾದಲ್ಲಿ ಕೂರಿಸಲಾಗಿತ್ತು. ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ ಬಗ್ಗೆ ಆರ್ ಅಶ್ವಿನ್ ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್‌ನ ಹೊಸ ಪಾಡ್‌ಕ್ಯಾಸ್ಟ್‌ನಲ್ಲಿ ಕೋಚ್ ಮೈಕಲ್ ಹಸ್ಸಿ ಅವರೊಂದಿಗೆ ಮಾತನಾಡಿದ ಅಶ್ವಿನ್, "ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನ್ನ 100ನೇ ಟೆಸ್ಟ್ ನಂತರ (ಮಾರ್ಚ್ 2024 ರಲ್ಲಿ ಧರ್ಮಶಾಲಾದಲ್ಲಿ) ನಿವೃತ್ತಿ ಹೊಂದಲು ಬಯಸಿದ್ದೆ. ನಂತರ ನಾನು ದೇಶಿ ಋತುವಿನಲ್ಲಿ ಇನ್ನೊಂದು ಅವಕಾಶವನ್ನು ತೆಗೆದುಕೊಳ್ಳೋಣ ಎಂದು ಭಾವಿಸಿದ್ದೆ. ಏಕೆಂದರೆ ನಾನು ಚೆನ್ನಾಗಿ ಆಡುತ್ತಿದ್ದೆ, ವಿಕೆಟ್ ಪಡೆಯುತ್ತಿದ್ದೆ, ರನ್ ಗಳಿಸುತ್ತಿದ್ದೆ," ಎಂದರು.
ʻನಿಜವಾದ ಫ್ಯಾನ್ಸ್ ಸಿಎಸ್‌ಕೆ ಪರ ನಿಲ್ಲುತ್ತಾರೆʼ: ಟೀಕೆಗಳಿಗೆ ತಿರುಗೇಟು ನೀಡಿದ ಆರ್ ಅಶ್ವಿನ್!
"ಚೆನ್ನೈ ಟೆಸ್ಟ್ (ಬಾಂಗ್ಲಾದೇಶ ವಿರುದ್ಧ) ನಂತರ ನಿವೃತ್ತಿ ಹೊಂದುತ್ತೇನೆ ಎಂದು ಭಾವಿಸಿದ್ದೆ ಆದರೆ, ನಂತರ ನಾನು ಆರು ವಿಕೆಟ್‌ಗಳನ್ನು ಪಡೆದು ಶತಕ ಗಳಿಸಿದೆ. ಉತ್ತಮ ಪ್ರದರ್ಶನ ನೀಡುತ್ತಿರುವಾಗ ವಿದಾಯ ಹೇಳುವುದು ತುಂಬಾ ಕಷ್ಟ," ಎಂದು ತಿಳಿಸಿದ್ದಾರೆ.
"ನಾನು ಆಟ ಮುಂದುವರಿಸಿದೆ ಮತ್ತು ನಂತರ ನಾವು ನ್ಯೂಜಿಲೆಂಡ್ ವಿರುದ್ಧ ಸೋತೆವು. ಬಳಿಕ ಆಸ್ಟ್ರೇಲಿಯಾ ಪ್ರವಾಸದಲ್ಲಿ ಪ್ರದರ್ಶನ ಹೇಗಿದೆ ಎಂದು ನೋಡೋಣ ಎಂದುಕೊಂಡೆ. ಕಳೆದ ಬಾರಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ನನ್ನ ಪ್ರದರ್ಶನ ಚೆನ್ನಾಗಿತ್ತು. ನಾನು ಆಟವನ್ನು ಆನಂದಿಸುತ್ತಿದ್ದೆ ಆದರೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಅದಕ್ಕಾಗಿ ಶ್ರಮಿಸುತ್ತಿದ್ದೆ, ಎಂದು ಹೇಳಿದರು.
Celebration Level - Max Ft. Ashwin!🤩
— Chennai Super Kings (@ChennaiIPL) April 30, 2025
Watch the full video of the first episode of #MikeTesting123 for more such throwbacks!🤩🥳
LINK - https://t.co/yBVkoQi9am #WhistlePodu #Yellove🦁💛 pic.twitter.com/dBjPcYWb3C
ನಿಮ್ಮ ಭಾವನೆಗಳಿಗೆ ಕಡಿಮೆ ಬೆಲೆ ಇದೆ
"ನಂತರ ನನಗೆ ಪರ್ತ್ ಟೆಸ್ಟ್‌ನಲ್ಲಿ ಸ್ಥಾನ ಸಿಗದಿದ್ದಾಗ, ಇಡೀ ವೃತ್ತ ಮತ್ತೆ ಪುನರಾವರ್ತಿಸಬಾರದು ಎಂದು ನಾನು ಭಾವಿಸಿದೆ. ನಿಮ್ಮ ಭಾವನೆಗಳಿಗೆ ಜನರ ದೃಷ್ಟಿಯಲ್ಲಿ ಬಹಳ ಕಡಿಮೆ ಬೆಲೆ ಇದೆ. ನೀವು ಅನುಭವಿಸುತ್ತಿರುವ ಭಾವನೆಗಳನ್ನು ಅವರು ಅರ್ಥಮಾಡಿಕೊಳ್ಳುವುದಿಲ್ಲ. ನಾನು ನಿವೃತ್ತಿಯ ಬಗ್ಗೆ ಯೋಚಿಸುತ್ತಿದ್ದೆ ಮತ್ತು ನಂತರ ಇದು ಸರಿಯಾದ ಸಮಯ ಎಂದು ನನಗೆ ಅನಿಸಿತು," ಎಂದು ಆರ್ ಅಶ್ವಿನ್ ತಿಳಿಸಿದ್ದಾರೆ.
IPL 2025: ಎಂಎಸ್ ಧೋನಿಯ ನಿವೃತ್ತಿ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಆಡಂ ಗಿಲ್‌ಕ್ರಿಸ್ಟ್!
537 ಟೆಸ್ಟ್ ವಿಕೆಟ್ ಕಿತ್ತಿರುವ ಆರ್ ಅಶ್ವಿನ್
ಆರ್ ಅಶ್ವಿನ್ ಅವರು ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ ಆಡಿದ 106 ಟೆಸ್ಟ್ ಪಂದ್ಯಗಳಿಂದ 537 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರ ಜೊತೆಗೆ ಬ್ಯಾಟಿಂಗ್‌ನಲ್ಲಿ 25.75ರ ಸರಾಸರಿಯಲ್ಲಿ 3503 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಅವರು ಆರು ಶತಕಗಳು ಹಾಗೂ 14 ಅರ್ಧಶತಕಗಳನ್ನು ಬಾರಿಸಿದ್ದರು. ಸದ್ಯ ಇದೀಗ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.