ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pralhad Joshi: ಕರ್ನಾಟಕದ ಮೂವರಿಗೆ ಪದ್ಮಶ್ರೀ ಪುರಸ್ಕಾರ; ಸನ್ಮಾನ ಮಾಡಿದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

Pralhad Joshi: ಕನ್ನಡ ನಾಡಿನ ಪದ್ಮಶ್ರೀ ಪುರಸ್ಕೃತರಾದ ಕನ್ನಡ ಚಿತ್ರರಂಗದ ಸಾಹಸ ನಿರ್ದೇಶಕರೆಂದೇ ಖ್ಯಾತಿ ಪಡೆದ ಡಾ.ಹಾಸನ ರಘು, ಗೊಂಬೆಯಾಟ ಕಲಾವಿದೆ, ಶತಾಯುಷಿ ಕೊಪ್ಪಳ ತಾಲೂಕಿನ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ ಹಾಗೂ ಕ್ಯಾನ್ಸರ್ ರೋಗಿಗಳ ಪಾಲಿಗೆ ʼವೈದ್ಯೋ ನಾರಾಯಣ ಹರಿʼ ಎನ್ನುವಂತೆ ಸೇವೆ ಸಲ್ಲಿಸುತ್ತಿರುವ ತಜ್ಞ ವೈದ್ಯ ಡಾ.ದೇಶಮಾನೆ ವಿಜಯಲಕ್ಷ್ಮಿ ಅವರನ್ನು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ನವದೆಹಲಿಯ ತಮ್ಮ ಗೃಹ ಕಚೇರಿಯಲ್ಲಿ ಸನ್ಮಾನಿಸಿ, ಅಭಿನಂದಿಸಿದರು.

ಕನ್ನಡ ನಾಡಿನ ಮೂವರು ಪದ್ಮಶ್ರೀ ಪುರಸ್ಕೃತರಿಗೆ ಸನ್ಮಾನ

Profile Siddalinga Swamy Apr 30, 2025 4:17 PM

ನವದೆಹಲಿ: ಕನ್ನಡ ನಾಡಿನ ಮೂವರು ಪದ್ಮಶ್ರೀ ಪುರಸ್ಕೃತರನ್ನು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi)‌ ಅವರು ನವದೆಹಲಿಯ ತಮ್ಮ ಗೃಹ ಕಚೇರಿಯಲ್ಲಿ ಸನ್ಮಾನಿಸಿ, ಅಭಿನಂದಿಸಿದರು. ಪದ್ಮಶ್ರೀ ಪುರಸ್ಕೃತರಾದ ಕನ್ನಡ ಚಿತ್ರರಂಗದ ಸಾಹಸ ನಿರ್ದೇಶಕರೆಂದೇ ಖ್ಯಾತಿ ಪಡೆದ ಡಾ.ಹಾಸನ ರಘು, ಗೊಂಬೆಯಾಟ ಕಲಾವಿದೆ, ಶತಾಯುಷಿ ಕೊಪ್ಪಳ ತಾಲೂಕಿನ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ ಹಾಗೂ ಕ್ಯಾನ್ಸರ್ ರೋಗಿಗಳ ಪಾಲಿಗೆ ʼವೈದ್ಯೋ ನಾರಾಯಣ ಹರಿʼ ಎನ್ನುವಂತೆ ಸೇವೆ ಸಲ್ಲಿಸುತ್ತಿರುವ ತಜ್ಞ ವೈದ್ಯ ಡಾ.ದೇಶಮಾನೆ ವಿಜಯಲಕ್ಷ್ಮಿ ಅವರನ್ನು ಸಚಿವ ಪ್ರಲ್ಹಾದ್ ಜೋಶಿ ಸನ್ಮಾನಿಸಿ, ಪದ್ಮಶ್ರೀ ಪುರಸ್ಕೃತರ ಸೇವಾ ಸಾಧನೆಗೆ ಅಭಿಮಾನ ವ್ಯಕ್ತಪಡಿಸಿದರು.

ಮೂವರೂ ಪದ್ಮಶ್ರೀ ಪುರಸ್ಕೃತರೊಂದಿಗೆ ಕುಶಲೋಪರಿ ಮಾತನಾಡುತ್ತ, ಅವರ ಸೇವೆ, ಪರಿಶ್ರಮ, ಸಾಧನೆ, ತ್ಯಾಗವನ್ನೆಲ್ಲಾ ಆಲಿಸಿದ ಸಚಿವರು ಹೆಮ್ಮೆ ವ್ಯಕ್ತಪಡಿಸುತ್ತ, ಇಂಥ ಮಹನೀಯರನ್ನು ಸನ್ಮಾನಿಸುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ ಎಂದು ಹೇಳಿದರು.

ಡಾ. ಹಾಸನ ರಘು

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಡಾ. ಹಾಸನ ರಘು ಅವರು, 1971ರ ಪಾಕಿಸ್ತಾನ ಯುದ್ಧದಲ್ಲಿ ಹೋರಾಡಿದವರು. ಇದಕ್ಕಾಗಿ ಭಾರತ ಸರ್ಕಾರದಿಂದ ಶ್ರೇಷ್ಠ ಪದಕ ಪಡೆದವರು. ಬಳಿಕ ಸೇನಾ ನಿವೃತ್ತರಾಗಿ, ಪುಟ್ಟಣ್ಣ ಕಣಗಾಲ್‌ ಅವರ ಮಾರ್ಗದರ್ಶನದಲ್ಲಿ ಕನ್ನಡ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪ್ರಸಿದ್ಧ ʼರಂಗನಾಯಕಿʼ ಚಿತ್ರದ ಮೂಲಕ ಕನ್ನಡ ಚಲನಚಿತ್ರಗಳಿಗೆ ಸಾಹಸ ನಿರ್ದೇಶಕರಾಗಿ ದುಡಿದಿದ್ದಾರೆ. ದೇಶದ ಸೇನಾ ಸೇವೆಯಿಂದ ಕನ್ನಡ ನಾಡಿನ ಕಲಾ ಸೇವೆಗೆ ಇಳಿದ ರಘು ಅವರು 150ಕ್ಕು ಹೆಚ್ಚು ಚಿತ್ರಗಳಲ್ಲಿ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ ಕೀರ್ತಿಗೆ ಪಾತ್ರರು. ಇದೀಗ ಕರ್ನಾಟಕದ ಜಾನಪದ ಸಾಹಸ ಮತ್ತು ಸಮರ ಕಲೆಗಳ ಕಲಾವಿದರಾಗಿ, ಶಿಕ್ಷಕರಾಗಿ ಸಹ ಸೇವೆ ಮುಂದುವರಿದ್ದಾರೆ. ಇವರ ಸಾಹಸಗಾಥೆ ಕೇಳಿ ಸ್ವತಃ ಸಚಿವರೇ ಒಂದು ಸಲಾಂ ಹೇಳಿ ಗೌರವ ಸಲ್ಲಿಸಿದರು.

ಗೊಂಬೆಯಾಟದ ಭೀಮವ್ವ

ಕೊಪ್ಪಳ ತಾಲೂಕಿನವರಾದ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ ಅವರು ಇಡೀ ಜಗತ್ತಿಗೇ ತೊಗಲುಗೊಂಬೆಯಾಟ ಪರಿಚಯಿಸಿದ ಕಲಾವಿದೆ. ಗ್ರಾಮೀಣ, ಪುರಾತನ ಕಲೆಯನ್ನು ಪೋಷಿಸುವಲ್ಲಿ ಇವರ ಪಾತ್ರ ಅನನ್ಯ. ಶತಾಯುಷ್ಯದಲ್ಲೂ ಮುಂದಿನ ಪೀಳಿಗೆಗೆ ಈ ಕಲೆಯನ್ನು ರೂಢಿಸುತ್ತಿರುವ ಭೀಮಜ್ಜಿ ಸಹ ಸಾಹಸಿ ಕಲಾವಿದೆ. ಸಚಿವರು ಭೀಮಜ್ಜಿ ಪಕ್ಕದಲ್ಲೇ ಕುಳಿತು ಮಾತೃಸಲುಗೆಯಂತೆ ಅತ್ಯಾಪ್ತವಾಗಿ ಅವರ ಜೀವನಾನುಭವ, ಜೀವನಪಾಠ, ಕಲಾಸೇವೆಯ ಪರಿಯನ್ನು ಕೇಳಿ ಪಡೆದರು.

ಕ್ಯಾನ್ಸರ್ ತಜ್ಞೆ ಡಾ.ದೇಶಮಾನೆ ವಿಜಯಲಕ್ಷ್ಮಿ

ನಾಡಿನ ಕ್ಯಾನ್ಸರ್ ರೋಗಿಗಳ ಪಾಲಿಗೆ ಅಕ್ಷರಶಃ ’ವೈದ್ಯೋ ನಾರಾಯಣ ಹರಿಃ’ಯೇ ಆಗಿದ್ದಾರೆ ಇವರು. ತಮ್ಮಿಡೀ ಜೀವನವನ್ನು ಕ್ಯಾನ್ಸರ್ ರೋಗಿಗಳ ಸೇವೆಗೆ ಮುಡಿಪಾಗಿಟ್ಟವರು. ಮಾತೃದೇವೋಭವ ಎನ್ನುವ ನಮ್ಮ ಸಮಾಜದಲ್ಲಿ ಅಷ್ಟೇ ತ್ಯಾಗ, ಕಾಳಜಿ, ನಿಷ್ಠೆ ಮತ್ತು ಸಾಮಾಜಿಕ ಕಳಕಳಿಯಿಂದ ವೈದ್ಯಸೇವೆಯಲ್ಲಿ ನಿರತರಾದವರು. ಕ್ಯಾನ್ಸರ್ ರೋಗಿಗಳ ಪಾಲಿಗೆ ಇವರು ಸಂಜೀವಿನಿ, ಪುನರ್ಜನನಿ ಎನ್ನುವಂತೆ ಸಲ್ಲಿಸುತ್ತಿರುವ ಡಾ.ದೇಶಮಾನೆ ವಿಜಯಲಕ್ಷ್ಮಿ ಅವರ ಸೇವೆಯನ್ನು ಕೇಳಿ ಸಚಿವರು ಪ್ರಶಂಸೆ ವ್ಯಕ್ತಪಡಿಸಿದರು.

ಈ ಸುದ್ದಿಯನ್ನೂ ಓದಿ | BPNL Recruitment 2025: 10ನೇ ತರಗತಿ ಪಾಸಾದವರಿಗೆ ಬಂಪರ್‌ ಚಾನ್ಸ್‌; ಭಾರತೀಯ ಪಶುಪಾಲನ್‌ ನಿಗಮ್‌ ಲಿಮಿಟೆಡ್‌ನಲ್ಲಿದೆ ಬರೋಬ್ಬರಿ 12,981 ಹುದ್ದೆ

ನಾಡಿನಾದ್ಯಂತ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆಗೈಯುತ್ತಿರುವ ನಿಜ ಸಾಧಕರನ್ನು ಗುರುತಿಸಿ 'ಪದ್ಮಶ್ರೀ', ಉನ್ನತ ಪ್ರಶಸ್ತಿ - ಪುರಸ್ಕಾರ ನೀಡಿ ಗೌರವಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಸಾಧಕರಿಗೆ, ನಿಸ್ವಾರ್ಥ ಸೇವಕರಿಗೆ ಉತ್ಸಾಹ, ಪ್ರೇರಣೆ ನೀಡುತ್ತಿದ್ದಾರೆ ಎಂದು ಪ್ರಶಸ್ತಿ ಪುರಸ್ಕೃತರು ಇದೇ ವೇಳೆ ಸಂತಸ ವ್ಯಕ್ತಪಡಿಸಿದರು.