Ambedkar Residential school: ಪಾವಗಡದ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಅವ್ಯವಸ್ಥೆ; ಶೌಚಗೃಹ ಇದ್ರೂ ಮಕ್ಕಳಿಗೆ ಬಯಲೇ ಗತಿ!
Ambedkar Residential school: ಮೂಲ ಸೌಕರ್ಯಗಳಿಲ್ಲದೇ ಪಾವಗಡದ ಅಂಬೇಡ್ಕರ್ ವಸತಿ ಶಾಲೆ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಸ್ವಚ್ಛತೆಯಿಲ್ಲದೆ ಗಬ್ಬು ನಾರುವ ಕೊಠಡಿಗಳು, ಹರಿದ ಹಾಸಿಗೆ-ದಿಂಬು ಹಾಗೂ ಶೌಚಗೃಹಗಳಿದ್ದರೂ ಬಯಲು ಶೌಚಕ್ಕೆ ಹೋಗುವ ದುಸ್ಥಿತಿ ಇಲ್ಲಿರುವುದರಿಂದ ಮಕ್ಕಳು ಪರದಾಡುವಂತಾಗಿದೆ.


ಪಾವಗಡ: ಪಟ್ಟಣದ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ (Ambedkar Residential school) ಅವ್ಯವಸ್ಥೆಯ ಆಗರವಾಗಿದ್ದು, ಮೂಲ ಸೌಕರ್ಯಗಳಿಲ್ಲದೇ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಸ್ವಚ್ಛತೆಯಿಲ್ಲದೆ ಗಬ್ಬು ನಾರುವ ಕೊಠಡಿಗಳು, ಹರಿದ ಹಾಸಿಗೆ-ದಿಂಬು ಹಾಗೂ ಶೌಚಗೃಹಗಳಿದ್ದರೂ ಬಯಲು ಶೌಚಕ್ಕೆ ಹೋಗುವ ದುಸ್ಥಿತಿ ಇಲ್ಲಿರುವುದರಿಂದ ಮಕ್ಕಳು ಸಮಸ್ಯೆ ಎದುರಿಸುವಂತಾಗಿದೆ. ಈ ವಸತಿ ಶಾಲೆಯಲ್ಲಿ 1 ರಿಂದ 5ನೇ ತರಗತಿವರೆಗೆ ಸೇರಿ ಸುಮಾರು 125 ಬಾಲಕ, ಬಾಲಕಿಯರು ವ್ಯಾಸಂಗ ಮಾಡುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳೇ ಆಗಿದ್ದಾರೆ. ಹೊರಗಡೆಗೆ ಸುಸಜ್ಜಿತ ಕಟ್ಟಡದ ರೀತಿ ಕಂಡರೂ ಒಳಗೆ ಮಾತ್ರ ಸೂಕ್ತ ನಿರ್ವಹಣೆ, ಸೌಲಭ್ಯಗಳಿಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.

ಸ್ವಚ್ಛತೆ ಇಲ್ಲದೆ ಮಕ್ಕಳು ಮಲಗುವ ಕೋಣೆಗಳು ಗಬ್ಬು ನಾರುತ್ತಿದ್ದು, ಹರಿದ ಹಾಸಿಗೆ ಮತ್ತು ದಿಂಬುಗಳನ್ನು ಬಳಸುವ ಸ್ಥಿತಿ ಇದೆ. ಇನ್ನು ಶೌಚಗೃಹಗಳು ಚೆನ್ನಾಗಿದ್ದರೂ ಮಕ್ಕಳನ್ನು ಸಿಬ್ಬಂದಿ ಹೊರಗೆ ಕಳುಹಿಸುತ್ತಾರೆ. ಇದರಿಂದ ಪುಟಾಣಿ ಹೆಣ್ಣು ಮಕ್ಕಳು ಕೈಯಲ್ಲಿ ಚೆಂಬು ಹಿಡಿದು ಬಹಿರ್ದೆಸೆಗೆ ಹೋಗುವ ಪರಿಸ್ಥಿತಿ ಇದೆ. ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದರೆ, ನಮ್ಮಲ್ಲಿ ಶೌಚಗೃಹಗಳು ಇವೆ, ಮಕ್ಕಳು ಹೊರಗೆ ಯಾಕೆ ಹೋಗುತ್ತಿದ್ದಾರೆ ತಿಳಿಯದು ಎಂದು ವಾರ್ಡನ್ ಹೇಳುತ್ತಾರೆ.
ಇದಷ್ಟೇ ಅಲ್ಲದೇ ಮದ್ಯಪಾನ ಮಾಡಿದ ಸಿಬ್ಬಂದಿಯೊಬ್ಬರು ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಕಂಡುಬಂದಿದೆ. ಇದರ ಬಗ್ಗೆ ಪ್ರಶ್ನಿಸಿದ್ದಕ್ಕೆ ಆ ಸಿಬ್ಬಂದಿ, ಹೊರಗುತ್ತಿಗೆಯವರಾಗಿದ್ದು ಅವರನ್ನು ಕೆಲಸದಿಂದ ತೆಗೆಯುತ್ತೇವೆ ಎಂದು ವಾರ್ಡನ್ ಹೇಳಿದ್ದಾರೆ.
ಹೈಟೆಕ್ ವಸತಿ ನಿಲಯ ಎಂಬಂತೆ ಈ ಶಾಲೆಗೆ ಅನುದಾನ ಖರ್ಚು ಮಾಡುತ್ತಾರೆ. ಆದರೆ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಸರ್ಕಾರದ ಅನುದಾನವನ್ನು ಮಕ್ಕಳ ಹೆಸರಿನಲ್ಲಿ ಪಡೆದು ಅಧಿಕಾರಿಗಳು ಲೂಟಿ ಮಾಡುತ್ತಿದ್ದಾರೆ. ಮಕ್ಕಳಿಗೆ ಮಾತ್ರ ಯಾವುದೇ ಸೌಲಭ್ಯ ಕಲ್ಪಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

(ವರದಿ: ಇಮ್ರಾನ್ ಉಲ್ಲಾ. ಪಾವಗಡ)
ಪಾವಗಡ ಬಾಲಕಿಯರ ಹಾಸ್ಟೆಲ್‌ಗೆ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ದಿಢೀರ್ ಭೇಟಿ

ಪಾವಗಡ: ಪಟ್ಟಣದ ವ್ಯಾಪ್ತಿಯ ದೇವರಾಜ ಅರಸು ಬಾಲಕಿಯರ ವಸತಿ ನಿಲಯಕ್ಕೆ (Pavagada Hostel) ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಅವರು ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹಾಸ್ಟೆಲ್‌ನ ಅವ್ಯವಸ್ಥೆ ಕಂಡು ಗರಂ ಆಗಿದ್ದು, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ವಸತಿ ನಿಲಯದಲ್ಲಿ ಕುಡಿಯುವ ನೀರಿನ ಸಮಸ್ಯೆ, ಶೌಚಾಲಯ ಅವ್ಯವಸ್ಥೆ, ಶುಚಿತ್ವ ಕೊರತೆಯಿಂದ ಮಕ್ಕಳು ಪದೇ ಪದೇ ಅನಾರೋಗ್ಯಕ್ಕೆ ಈಡಾಗುತ್ತಿದ್ದು, ತಿಂಗಳುಗಟ್ಟಲೇ ವಸತಿ ನಿಲಯಕ್ಕೆ ಗೈರಾಗಿರೋದು ಬೆಳಕಿಗೆ ಬಂದಿದೆ. ಇನ್ನು ಪರಿಶೀಲನೆ ವೇಳೆ ಹಾಸ್ಟೆಲ್‌ನ ವಾರ್ಡನ್ ಕೂಡ ಗೈರಾಗಿರುವುದು ಕಂಡು ಬಂದಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ತಿಪ್ಪೇಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಇನ್ನು ಹಾಸ್ಟೆಲ್‌ನಲ್ಲಿ ಹಾಜರಾತಿ ಪುಸ್ತಕವನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ, ಜತೆಗೆ ಸಿಸಿ ಕ್ಯಾಮೆರಾ ಕೂಡ ಸರಿಯಾಗಿ ವರ್ಕ್ ಆಗುತ್ತಿಲ್ಲ. ಇದಿಷ್ಟು ಅಲ್ಲದೇ ನಾನಾ ಸಮಸ್ಯೆಗಳು ಹಾಸ್ಟೆಲ್‌ನಲ್ಲಿ ಇದ್ದು ವಾರ್ಡನ್ ಗಮನಕ್ಕೆ ಬಂದರೂ, ಸರಿ ಪಡಿಸುವ ಕೆಲಸಕ್ಕೆ ಮಾತ್ರ ಕೈ ಹಾಕಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದ ಮಕ್ಕಳ ರಕ್ಷಣಾ ಆಯೋಗದ ಸದಸ್ಯರಾದ ತಿಪ್ಪೇಸ್ವಾಮಿ ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.