SBI Manager: ಕನ್ನಡ ಮಾತಾಡಲ್ಲ ಏನಿವಾಗ; ಬೆಂಗಳೂರಿನ ಎಸ್‌ಬಿಐ ಮ್ಯಾನೇಜರ್ ಉಡಾಫೆ!
SBI Manager: ಬೆಂಗಳೂರಿನ ಹೊರವಲಯದ ಚಂದಾಪುರದ ಸೂರ್ಯಸಿಟಿ ಎಸ್‌ಬಿಐ ಬ್ಯಾಂಕ್‌ನಲ್ಲಿ ಘಟನೆ ನಡೆದಿದೆ. ಹಿಂದಿಯಲ್ಲಿ ಮಾತನಾಡಿದ ಲೇಡಿ ಬ್ಯಾಂಕ್ ಮ್ಯಾನೇಜರ್‌ಗೆ ಗ್ರಾಹಕರೊಬ್ಬರು, ಕನ್ನಡ ಮಾತಾಡಿ ಎಂದು ಕೇಳಿದ್ದಾರೆ. ಆದರೆ, ಇದಕ್ಕೆ ಕೆರಳಿರುವ ಮಹಿಳಾ ಅಧಿಕಾರಿ, ಇದು ಇಂಡಿಯಾ, ಹಿಂದಿ ಮಾತಾಡ್ತೇನೆ, ಕನ್ನಡ ಮಾತಾಡಲ್ಲ ಎಂದು ಧಿಮಾಕು ತೋರಿಸಿದ್ದಾರೆ.


ಬೆಂಗಳೂರು: ಕೋರಮಂಗಲದ ಹೋಟೆಲ್ ಒಂದರಲ್ಲಿ ಕನ್ನಡಿಗರ ವಿರುದ್ಧ ಅವಹೇಳನಕಾರಿ ಬರಹವನ್ನು ಪ್ರದರ್ಶನ ಮಾಡಿದ್ದ ಪ್ರಕರಣ ನಡೆದ ಬೆನ್ನಲ್ಲೇ ನಗರದ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ (SBI Manager), ನಾನು ಕನ್ನಡ ಮಾತಾಡಲ್ಲ, ಹಿಂದಿ ಮಾತ್ರ ಮಾತನಾಡೋದು ಎಂದು ಉಡಾಫೆ ತೋರಿರುವುದು ಕಂಡುಬಂದಿದೆ. ಸದ್ಯ ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕನ್ನಡಿಗರು ವ್ಯಾಪಕ ಆಕ್ರೋಶ ಹೊರಹಾಕುತ್ತಿದ್ದಾರೆ.
ನಗರದ ಹೊರವಲಯದ ಚಂದಾಪುರದ ಸೂರ್ಯಸಿಟಿ ಎಸ್‌ಬಿಐ ಬ್ಯಾಂಕ್‌ನಲ್ಲಿ ಘಟನೆ ನಡೆದಿದೆ. ಹಿಂದಿಯಲ್ಲಿ ಮಾತನಾಡಿದ ಲೇಡಿ ಬ್ಯಾಂಕ್ ಮ್ಯಾನೇಜರ್‌ಗೆ ಗ್ರಾಹಕರೊಬ್ಬರು, ಕನ್ನಡ ಮಾತಾಡಿ ಎಂದು ಕೇಳಿದ್ದಾರೆ. ಆದರೆ, ಇದಕ್ಕೆ ಕೆರಳುವ ಹಾಗೆ ವರ್ತಿಸಿದ ಮಹಿಳಾ ಅಧಿಕಾರಿ, ಇದು ಇಂಡಿಯಾ, ಹಿಂದಿ ಮಾತಾಡ್ತೇನೆ, ಕನ್ನಡ ಮಾತಾಡಲ್ಲ ಎಂದು ಧಿಮಾಕು ತೋರಿಸಿದ್ದಾರೆ.
ವಿಡಿಯೊದಲ್ಲಿ ಗ್ರಾಹಕ, ಇದು ಕರ್ನಾಟಕ, ಬೆಂಗಳೂರು ಇಲ್ಲಿ ನೀವು ಕನ್ನಡದಲ್ಲಿ ಮಾತನಾಡಬೇಕು ಎಂದು ಹೇಳಿದ್ದಾರೆ. ಆದರೆ ಅಹಂನಿಂದಲೇ ಉತ್ತರಿಸಿದ ಮ್ಯಾನೇಜರ್ ಹಿಂದಿ ಮಾತನಾಡು ಎಂದು ಎದುರು ಉತ್ತರ ನೀಡಿದ್ದಾರೆ. ಅಲ್ಲದೇ ಬೆಂಗಳೂರು ಆದ್ರೇನು ಇದು ಭಾರತ ಇಲ್ಲಿ ಹಿಂದಿ ಮಾತನಾಡು ಎಂದು ಆವಾಜ್ ಹಾಕಿದ್ದಾರೆ.
ಇಲ್ಲಿನ ಮಹಿಳಾ ಅಧಿಕಾರಿ ಹಲವು ವರ್ಷಗಳಿಂದ ಬೆಂಗಳೂರಿನಲ್ಲೇ ಇದ್ದರೂ ಗ್ರಾಹಕರೊಟ್ಟಿಗೆ ಕನ್ನಡದಲ್ಲಿ ಮಾತನಾಡಲು ನಿರಾಕರಿಸಿದ್ದಾರೆ. ಹೀಗಾಗಿ ಕನ್ನಡಪರ ಹೋರಾಟಗಾರರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ಬ್ಯಾಂಕ್ ಮ್ಯಾನೇಜರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.