Friday, 22nd November 2024

Ajit Pawar: ಮಹಾರಾಷ್ಟ್ರದ ಮುಂದಿನ ಸಿಎಂ ಅಜಿತ್‌ ಪವಾರ್‌? ರಿಸಲ್ಟ್‌ಗೂ ಮುನ್ನ ರಾರಾಜಿಸಿದ ಪೋಸ್ಟರ್‌

Ajit Pawar

ಪುಣೆ: ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ(Maharashtra Election) ಕೊನೆಯ ಹಂತಕ್ಕೆ ಬಂದು ತಲುಪಿದ್ದು, ಇನ್ನು ನಾಳೆ ಪ್ರಕಟವಾಗುವ ಫಲಿತಾಂಶದತ್ತ ಎಲ್ಲರ ಕಣ್ಣು ಹೊರಳಿದೆ. ಇನ್ನು ಫಲಿತಾಂಶಕ್ಕೆ ಮುನ್ನವೇ ಮುಂದಿನ ಸಿಎಂ ಅಜಿತ್‌ ಪವಾರ್‌(Ajit Pawar) ಎಂಬ ಪೋಸ್ಟರ್‌, ಬ್ಯಾನರ್‌ಗಳು ಕೆಲವೊಂದು ಕಡೆಗಳನ್ನು ಕಂಡು ಬಂದಿರುವುದು ಚರ್ಚೆಗೆ ಗ್ರಾಸವಾಗಿದೆ. ಪುಣೆಯಲ್ಲಿ ಕಂಡು ಬಂದಿರುವ ಈ ಬ್ಯಾನರ್‌ ಅನ್ನು ಪಕ್ಷದ ಮುಖಂಡ ಸಂತೋಷ್‌ ನಂಗರೆ ಹಾಕಿದ್ದಾರೆ ಎನ್ನಲಾಗಿದೆ.

ಫಲಿತಾಂಶದ ಕುರಿತ ಹಸಿಬಿಸಿ ಚರ್ಚೆಗಳ ನಡುವೆಯೇ “ಅಜಿತ್‌ ಪವಾರ್‌ ಮುಂದಿನ ಮುಖ್ಯಮಂತ್ರಿ” ಎಂದು ಬರೆದಿರುವ ಬ್ಯಾನರ್‌ ಸುದ್ದಿ ಈಗ ಸಂಚಲನ ಸೃಷ್ಟಿಸಿದೆ. ಪಕ್ಷದೊಳಗೂ ಗುಸುಗುಸು ಮಾತುಗಳು ಕೇಳಿ ಬರುತ್ತಿವೆ ಎನ್ನಲಾಗಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತು ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ನಡುವೆ ನೆಕ್‌ ಟು ನೆಕ್‌ ಫೈಟ್‌ ಇದೆ. ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಯಲ್ಲಿ ಬಿಜೆಪಿ, ಶಿವಸೇನೆ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಅಜಿತ್ ಪವಾರ್ ಬಣ) ಇದ್ದರೆ, ಕಾಂಗ್ರೆಸ್ ಬಣದಲ್ಲಿ ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ (ಶರದ್ ಪವಾರ್ ಬಣ) ಇವೆ.

ಆಡಳಿತಾರೂಢ ಮಹಾಯುತಿಯು ಮಹಾರಾಷ್ಟ್ರದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಸಜ್ಜಾಗಿದೆ. ಜಾರ್ಖಂಡ್‌ನಲ್ಲೂ ಎನ್‌ಡಿಎ ನೇತೃತ್ವದ ಸರ್ಕಾರ ರಚಿಸುವ ಯೋಜನೆ ರೂಪಿಸಿದೆ. ಎರಡು ರಾಜ್ಯಗಳಲ್ಲಿ ಮತದಾನ ಮುಕ್ತಾಯಗೊಳ್ಳುತ್ತಿದ್ದಂತೆ ಬುಧವಾರದಿಂದಲೇ ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿವೆ.
ಹೆಚ್ಚಿನ ಎಕ್ಸಿಟ್ ಪೋಲ್‌ ಗಳು ಮಹಾ ವಿಕಾಸ್ ಅಘಾಡಿ (MVA) ಹೆಚ್ಚಿನ ಬಲ ಪ್ರದರ್ಶನ ನೀಡುತ್ತವೆ ಎಂದು ಭವಿಷ್ಯ ನುಡಿದಿವೆ. ಆದರೆ 288 ಸದಸ್ಯರ ವಿಧಾನಸಭೆಯಲ್ಲಿ ಬಹುಮತದ ಅಂಕವನ್ನು ದಾಟುವ ಸಾಧ್ಯತೆಯಿಲ್ಲ ಎಂದಿವೆ. ಈ ನಡುವೆ ಅಜಿತ್‌ ಪವಾರ್‌ ಅವರ ಈ ಪೋಸ್ಟರ್‌ ಎಲ್ಲರ ಹುಬ್ಬೇರುವಂತೆ ಮಾಡಿದೆ. ಇನ್ನು ಈ ಪೋಸ್ಟರ್‌ ವೈರಲ್‌ ಆಗ್ತಿದ್ದಂತೆ ಅದನ್ನು ತೆರವುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

P-MARQ ಎಕ್ಸಿಟ್ ಪೋಲ್ ಪ್ರಕಾರ, ಮಹಾಯುತಿ ಮೈತ್ರಿಕೂಟವು 137-157 ಸ್ಥಾನಗಳನ್ನು ಗೆಲ್ಲಲ್ಲಿದ್ದು, ಮಹಾ ವಿಕಾಸ್ ಅಘಾಡಿ 126-147 ಸ್ಥಾನಗಳನ್ನು ಮತ್ತು ಇತರರು 2-8 ಸ್ಥಾನಗಳನ್ನು ಪಡೆಯುತ್ತಾರೆ.
ಮಹಾಯುತಿ 152-150 ಸ್ಥಾನಗಳನ್ನು, MVA 130-138 ಸ್ಥಾನಗಳನ್ನು ಮತ್ತು ಇತರರು 6-8 ಸ್ಥಾನಗಳನ್ನು ಗೆಲ್ಲುತ್ತಾರೆ ಎಂದು ಚಾಣಕ್ಯ ಸ್ಟ್ರಾಟಜೀಸ್ ಅಂದಾಜಿಸಿದೆ.

ಫಲಿತಾಂಶದ ನಂತರ ಮುಖ್ಯಮಂತ್ರಿ ಕುರಿತು ನಿರ್ಧಾರ

ಶಿವಸೇನಾ ಸಂಸದ ಶ್ರೀಕಾಂತ್ ಶಿಂಧೆ ಅವರು ಮಾತನಾಡಿ, ವಿಧಾನಸಭೆ ಫಲಿತಾಂಶದ ನಂತರ ಮಹಾಯುತಿಯ ನಾಯಕರು ಒಟ್ಟಾಗಿ ಕುಳಿತು ಮಹಾರಾಷ್ಟ್ರದ ಮುಖ್ಯಮಂತ್ರಿ ಯಾರಾಗಬೇಕು ಎಂದು ನಿರ್ಧರಿಸಲಾಗುವುದು ಎಂದು ಹೇಳಿದರು. ಮಾಧ್ಯಮದ ಜತೆ ಮಾತನಾಡಿದ ಅವರು, ಸಿಎಂ ಆಗಲು ಮೈತ್ರಿ ಕೂಟದಲ್ಲಿ ನಾಯಕರ ನಡುವೆ ಯಾವುದೇ ಪೈಪೋಟಿ ಇಲ್ಲ ಎಂದು ಹೇಳಿದರು. ಎಲ್ಲಾ ನಾಯಕರು (ಮಹಾಯುತಿಯ) ಒಟ್ಟಿಗೆ ಕುಳಿತು ನಿರ್ಧರಿಸುತ್ತಾರೆ. ಇಲ್ಲಿ ಮುಖ್ಯಮಂತ್ರಿಯಾಗಲು ನಾಯಕರ ನಡುವೆ ಎಂದಿಗೂ ಪೈಪೋಟಿ ಇರಲಿಲ್ಲ. ಮುಂದಿನ ಐದು ವರ್ಷಗಳಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಾಗಲಿವೆ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ:Maharashtra Election: ಮಹಾರಾಷ್ಟ್ರ ಚುನಾವಣೆ; ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ