ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯದ(AUS vs IND 3rd Test) ಮೂರನೇ ದಿನದಾಟವೂ ಹಲವು ಬಾರಿ ಮಳೆಯಿಂದ ಅಡಚಣೆಯಾಗಿ ಅರ್ಧಕ್ಕೆ ದಿನದಾಟವನ್ನು ರದ್ದುಗೊಳಿಸಲಾಯಿತು. ಸದ್ಯ ಭಾರತ 51 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇನ್ನೂ 394 ಬಾರಿಸಬೇಕಿದೆ. ರೋಹಿತ್(0) ಮತ್ತು ರಾಹುಲ್(33) ಕ್ರೀಸ್‌ನಲ್ಲಿದ್ದಾರೆ.
7 ವಿಕೆಟ್‌ಗೆ 405 ರನ್ ಗಳಿಸಿದ್ದಲ್ಲಿಂದ ಸೋಮವಾರ ಆಟ ಮುಂದುವರಿಸಿದ ಆಸ್ಟ್ರೇಲಿಯಾ 445 ರನ್‌ಗೆ ಆಲೌಟ್ ಆಯಿತು. 45 ರನ್ ಬಾರಿಸಿದ್ದ ಅಲೆಕ್ಸ್ ಕ್ಯಾರಿ 70 ರನ್ ಬಾರಿಸಿದರು. ಮಿಚೆಲ್ ಸ್ಟಾರ್ಕ್ 18 ರನ್ ಗಳಿಸಿದರು. ಭಾನುವಾರ 5 ವಿಕೆಟ್ ಕಿತ್ತಿದ್ದ ಜಸ್‌ಪ್ರೀತ್ ಬುಮ್ರಾ ಸೋಮವಾರ ಒಂದು ವಿಕೆಟ್ ಉರುಳಿಸಿದರು. ಒಟ್ಟು 76 ರನ್‌ಗೆ 6 ವಿಕೆಟ್ ಕಿತ್ತರು. ಮೊಹಮ್ಮದ್ ಸಿರಾಜ್ 2 ವಿಕೆಟ್ ಕಿತ್ತರು.
ಜೈಸ್ವಾಲ್ ಈ ಪಂದ್ಯದಲ್ಲಿಯೂ ಮಿಚೆಲ್ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಸ್ಟಾರ್ಕ್ ಅವರ ಮೊದಲ ಎಸೆತವನ್ನು ಬೌಂಡರಿ ಬಾರಿಸಿದ ಜೈಸ್ವಾಲ್ ಮುಂದಿನ ಎಸೆತದಲ್ಲಿ ಮಿಚೆಲ್ ಮಾರ್ಷ್‌ಗೆ ಕ್ಯಾಚ್ ನೀಡಿ ವಿಕೆಟ್ ಕಳೆದುಕೊಂಡರು. ಬಳಿಕ ಬಂದ ಶುಭಮನ್ ಗಿಲ್ ಕೂಡ ಒಂದು ರನ್‌ಗೆ ಔಟಾದರು. ಸ್ಪಿಪ್‌ನಲ್ಲಿ ನಿಂತಿದ್ದ ಮಾರ್ಷ್ ಹಕ್ಕಿಯಂತೆ ಹಾರಿ ಅದ್ಭುತ ಕ್ಯಾಚ್ ಹಿಡಿದು ಪೆವಿಲಿಯನ್‌ಗೆ ಅಟ್ಟಿದರು.
ಇದನ್ನೂ ಓದಿ Isa Guha: ಜಸ್‌ಪ್ರೀತ್ ಬುಮ್ರಾ ಕ್ಷಮೆ ಕೇಳಿದ ಇಶಾ ಗುಹಾ
ಅನುಭವಿ ಆಟಗಾರ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿಯೂ ಆಪ್ ಸ್ಟಂಪ್ ಹೊಡೆತವನ್ನು ಕ್ರಮವಾಗಿ ಎದುರಿಸುವಲ್ಲಿ ವಿಫಲವಾದರು. ಕೇವಲ 3 ರನ್ ಗಳಿಸಿ ಜೋಶ್ ಹ್ಯಾಜಲ್‌ವುಡ್ ಎಸೆತದಲ್ಲಿ ಕೀಪರ್ ಅಲೆಕ್ಸ್ ಕ್ಯಾರಿಗೆ ಕ್ಯಾಚ್ ನೀಡಿ ವಿಕೆಟ್ ಕಳೆದುಕೊಂಡರು. ಕಳೆದ ಬಾರಿಯ ಆಸೀಸ್ ಪ್ರವಾಸದಲ್ಲಿ ಇದೇ ಮೈದಾನದಲ್ಲಿ ಆಸೀಸ್ ಗರ್ವಭಂಗ ಮಾಡಿದ್ದ ರಿಷಭ್ ಪಂತ್ ಈ ಬಾರಿ ವಿಫಲರಾದರು. ಕೇವಲ 9 ರನ್‌ಗೆ ಔಟಾಗಿ ಅವರ ಮೇಲಿಟ್ಟ ಎಲ್ಲ ನಿರೀಕ್ಷೆಯನ್ನು ಹುಸಿಯಾಗಿಸಿದರು.
ಮೂರನೇ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮ ಮತ್ತೆ ಆರಂಭಿಕನಾಗಿ ಬ್ಯಾಟ್ ಬೀಸಲಿದ್ದಾರೆ ಎನ್ನಲಾಗಿತ್ತು. ಆದರೆ ಅವರು ಈ ಪಂದ್ಯದಲ್ಲಿಯೂ ಮಧ್ಯಮ ಕ್ರಮಾಂಕದಲ್ಲೇ ಬ್ಯಾಟಿಂಗ್ ನಡೆಸಿದರು. ಆಸೀಸ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ ನಿಂತದ್ದು ಆರಂಭಕಾರ ಕೆ.ಎಲ್ ರಾಹುಲ್ ಮಾತ್ರ. ತಾಳ್ಮೆಯುತ ಬ್ಯಾಟಿಂಗ್ ಮೂಲಕ ರನ್ ಕಲೆಹಾಕುತ್ತಿದ್ದಾರೆ. ರೋಹಿತ್ ಮತ್ತು ರಾಹುಲ್ ನಾಲ್ಕನೇ ದಿನದಾಟದ ವೇಳೆ ದೊಡ್ಡ ಜತೆಯಾಟ ನಡೆಸಿ ತಂಡಕ್ಕೆ ಆಸರೆಯಾದರೆ ಭಾರತ ಸೋಲಿನ ಭೀತಿಯಿಂದ ಪಾರಾಗಬಹುದು.