Tuesday, 19th November 2024

AUS vs IND: ಪರ್ತ್‌ ಪಿಚ್‌ನ ಮೊದಲ ಫೋಟೊ ಬಿಡುಗಡೆ; ಬ್ಯಾಟರ್‌ಗಳಿಗೆ ನಡುಕ

ಪರ್ತ್‌: ಭಾರತ ಮತ್ತು ಆಸ್ಟ್ರೇಲಿಯಾ(AUS vs IND) ನಡುವಣ ಮೊದಲ ಟೆಸ್ಟ್‌ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಪಂದ್ಯ ನಡೆಯುವ ಪರ್ತ್‌ನ ಆಪ್ಟಸ್​ ಸ್ಟೇಡಿಯಂನ ಪಿಚ್​ನ(Perth pitch) ಮೊದಲ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಪಿಚ್ ಸಂಪೂರ್ಣ ಬೌನ್ಸಿಯಾಗಿರಲಿದೆ ಎಂದು ಈಗಾಗಲೇ ಪಿಚ್‌ ಕ್ಯುರೇಟರ್ ಹೇಳಿದ್ದಾರೆ.

ಡ್ರಾಪ್​ ಇನ್​ ಪಿಚ್​ ಭಾರತೀಯ ಬ್ಯಾಟರ್​ಗಳಿಗೆ ಮತ್ತಷ್ಟು ಕಠಿಣ ಸವಾಲೊಡ್ಡುವ ಭೀತಿ ಮೂಡಿಸಿದೆ. ಈಗಾಗಲೇ ಅಭ್ಯಾಸದ ವೇಳೆ ಶುಭಮನ್‌ ಗಿಲ್‌, ಕೆ.ಎಲ್‌ ರಾಹುಲ್‌ ಮತ್ತು ವಿರಾಟ್‌ ಕೊಹ್ಲಿ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಪಂದ್ಯದ ವೇಳೆ ಆಸೀಸ್‌ ಬೌಲರ್‌ಗಳ ಬೌನ್ಸಿ ಎಸೆತಗಳು ಭಾರತೀಯ ಬ್ಯಾಟರ್‌ಗಳಿಗೆ ಕಬ್ಬಿಣದ ಕಡಲೆಯಾಗುವ ಸಾಧ್ಯತೆಯೂ ಗೋಚರಿಸಿದೆ. ಪಿಚ್‌ನಲ್ಲಿ ಬಿರುಕುಗಳು ಕಾಣಿಸಿಕೊಂಡರೆ ಬ್ಯಾಟರ್‌ಗಳು ಏಟು ತಿನ್ನುವುದು ಖಚಿತ. ಹೀಗಾಗಿ ಉಭಯ ತಂಡದ ಆಟಗಾರರು ಕೂಡ ಬಹಳ ಎಚ್ಚರಿಕೆಯಿಂದ ಆಡಬೇಕಿದೆ.

ಇದನ್ನೂ ಓದಿ IND vs AUS: ಪರ್ತ್​ನಲ್ಲಿ ನಿತೀಶ್​​ ರೆಡ್ಡಿ ಪದಾರ್ಪಣೆ ನಿರೀಕ್ಷೆ

2018ರಲ್ಲಿ ಈ ಪಿಚ್‌ ಸಿದ್ಧಮಾಡಲಾಗಿತ್ತು. ಇಲ್ಲಿ ಇದುವರೆಗೆ ಕೇವಲ 4 ಟೆಸ್ಟ್​ ಪಂದ್ಯ ಮಾತ್ರ ನಡೆದಿದೆ. ಎಲ್ಲ ನಾಲ್ಕು ಪಂದ್ಯಗಳಲ್ಲಿಯೂ ಆಸ್ಟ್ರೇಲಿಯಾವೇ ಗೆದ್ದು ಬೀಗಿದೆ. ಭಾರತ ಕೂಡ ಒಂದು ಪಂದ್ಯ ಆಡಿ ಸೋಲು ಕಂಡಿತ್ತು. ಅದು 2018ರಲ್ಲಿ ಇಲ್ಲಿ ಆಡಿದ್ದ ಮೊದಲ ಪಂದ್ಯವಾಗಿತ್ತು. ಕಳೆದ ವರ್ಷ ಇಲ್ಲಿ ಆಡಿದ ಟೆಸ್ಟ್​ನಲ್ಲಿ ಆಸೀಸ್​ ವೇಗದ ದಾಳಿ ಎದುರಿಸಲಾಗದೆ ಪಾಕಿಸ್ತಾನ ಕೇವಲ 89 ರನ್​ಗಳಿಗೆ ಆಲೌಟ್​ ಆಗಿತ್ತು.

ಆಸ್ಟ್ರೇಲಿಯಾದ ವೇಗಿಗಳು ​ಅರ್ಧ ಕೆಂಪು ಮತ್ತು ಅರ್ಧ ಬಿಳಿ ಬಣ್ಣದಿಂದ ಕೂಡಿದ ವಿಶಿಷ್ಟ ಚೆಂಡಿನಲ್ಲಿ ಅಭ್ಯಾಸ ನಡೆಸಿರುವುದು ಕುತೂಹಲ ಕೆರಳಿಸಿದೆ. ರಿವರ್ಸ್​ ಮತ್ತು ಇತರ ಸ್ವಿಂಗ್​ ಎಸೆತಗಳನ್ನು ಎದುರಿಸಲು ನೆರವಾಗುವಂಥ ಚೆಂಡು ಇದಾಗಿದೆ ಎನ್ನಲಾಗಿದೆ.

ಯುವ ವೇಗದ ಬೌಲಿಂಗ್​ ಆಲ್ರೌಂಡರ್​ ನಿತೀಶ್​ ಕುಮಾರ್​ ರೆಡ್ಡಿ(Nitish Kumar Reddy) ಪರ್ತ್​ನಲ್ಲಿ(Perth Test) ನಡೆಯಲಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ(IND vs AUS) ಭಾರತ ಪರ ಟೆಸ್ಟ್‌ ಪದಾರ್ಪಣೆ ಮಾಡುವ ಸಾಧ್ಯತೆಗಳಿವೆ.‌ ವೇಗದ ಬೌಲಿಂಗ್‌ ಆಲ್‌ರೌಂಡರ್‌ ತಂಡದಲ್ಲಿ ಇಲ್ಲದ ಕಾರಣ 21 ವರ್ಷದ ನಿತೀಶ್​ ಭಾರತಕ್ಕೆ ನೆರವಾಗುವ ನಿರೀಕ್ಷೆ ಇದೆ.

ನಿತೀಶ್ ಇದುವರೆಗೆ ಆಂಧ್ರ ಪರ 23 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 1 ಶತಕ, 2 ಅರ್ಧಶತಕ ಬಾರಿಸಿದ್ದಾರೆ. ಜತೆಗೆ 56 ವಿಕೆಟ್​ ಕಬಳಿಸಿದ್ದಾರೆ. ಅಕ್ಟೋಬರ್‌ನಲ್ಲಿ ನಡೆದಿದ್ದ ತವರಿನ ಬಾಂಗ್ಲಾದೇಶ ವಿರುದ್ಧದ ಟಿ20 ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಮೂರು ಪಂದ್ಯಗಳನ್ನಾಡಿ 90 ರನ್‌ ಮತ್ತು 3 ವಿಕೆಟ್‌ ಕಿತ್ತಿದ್ದರು. 1 ಅರ್ಧಶತಕ ಕೂಡ ಬಾರಿಸಿದ್ದರು.