Sunday, 15th December 2024

Baagina: ಅಮಾನಿಕೆರೆ ಕೋಡಿ: ಬಾಗಿನ ಅರ್ಪಣೆ

ತುಮಕೂರು: ನಗರದ ಮರಳೂರು ಅಮಾನಿಕೆರೆ ಸತತವಾಗಿ ಬಿದ್ದ ಮಳೆಯಿಂದ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು.

ಕಳೆದ ೨ ವರ್ಷಗಳ ಹಿಂದೆ ಅತಿವೃಷ್ಠಿಯಿಂದಾಗಿ ಮರಳೂರು ಅಮಾನಿಕೆರೆ ತುಂಬಿತ್ತು. ಇದನ್ನು ಹೊರತುಪಡಿಸಿದರೆ ಸುಮಾರು ೩೦ ವರ್ಷಗಳಿಂದ ಈ ಕೆರೆ ಭರ್ತಿಯಾಗಿರಲಿಲ್ಲ. ಈಗ ಮತ್ತೊಮ್ಮೆ ಭರ್ತಿಯಾಗಿ ಕೋಡಿ ಬಿದ್ದಿರುವುದು ಈ ಭಾಗದ ಜನರು ಹಾಗೂ ರೈತರಲ್ಲಿ ಹರ್ಷ ಮೂಡಿಸಿದೆ.

ಕೋಡಿ ಬಿದ್ದಿರುವ ಮರಳೂರು ಕೆರೆಗೆ , ಗ್ರಾಮದ ಪ್ರಧಾನರಾದ ಅಶೋಕಕುಮಾರ್, ಮಹಾನಗರ ಪಾಲಿಕೆಯ ೨೮ನೇ ವಾರ್ಡ್ ಮಾಜಿ ಸದಸ್ಯ ಧರಣೇಂದ್ರಕುಮಾರ್ ಸೇರಿದಂತೆ ಈ ಭಾಗದ ಗ್ರಾಮಸ್ಥರ ಸಮ್ಮುಖದಲ್ಲಿ ಗಂಗಾಪೂಜೆ ನೆರವೇರಿಸಿದ ಶಾಸಕ ಜ್ಯೋತಿಗಣೇಶ್ , ಕೆರೆಗೆ ಬಾಗಿನ ಅರ್ಪಿಸಿದರು.

ನಂತರ ಮಾತನಾಡಿದ ಶಾಸಕ ಜ್ಯೋತಿಗಣೇಶ್ , ಮರಳೂರು ಅಮಾನಿಕೆರೆ ಕಳೆದ 25-30 ವರ್ಷಗಳಲ್ಲಿ ಇದು ೨ನೇ ಬಾರಿಗೆ ಭರ್ತಿಯಾಗಿದೆ. ಕಳೆದ ೨ ವರ್ಷದ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ಕೆರೆ ತುಂಬಿತ್ತು. ಆ ಸಂದರ್ಭ ದಲ್ಲೂ ಸಹ ಕೆರೆಗೆ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಲಾಗಿತ್ತು. ಅದೇ ರೀತಿ ಇಂದು ಸಹ ಗ್ರಾಮಸ್ಥರ ಸಮ್ಮುಖದಲ್ಲಿ ಕೆರೆಗೆ ಬಾಗಿನ ಅರ್ಪಿಸಲಾಗಿದೆ ಎಂದರು.

ಮರಳೂರು ಅಮಾನಿಕೆರೆ ತುಂಬಿರುವುದು ಗಂಗಸ0ದ್ರ, ಮರಳೂರು, ಕುಮ್ಮಂಜಿಪಾಳ್ಯ ಸೇರಿದಂತೆ ಈ ಭಾಗದ ಹಳ್ಳಿಗಳ ರೈತರಿಗೆ ತುಂಬಾ ಅನುಕೂಲವಾಗಲಿದೆ. ಕೆರೆಯಿಂದ ಭರ್ತಿಯಾಗಿರುವುದರಿಂದ ಅಂತರ್ಜಲವೂ ವೃದ್ಧಿಯಾಗಿ ಕೊಳವೆ ಬಾವಿಗಳಲ್ಲಿ ನೀರು ಬರುತ್ತದೆ. ಹಾಗಾಗಿ ಈ ಭಾಗದ ರೈತರು ಸಹ ಸಂತಸಗೊ0ಡಿದ್ದಾರೆ ಎಂದರು.

ಮರಳೂರು ಅಮಾನಿಕೆರೆಯನ್ನು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಸಲುವಾಗಿ ಮುಂದಿನ ದಿನಗಳಲ್ಲಿ ಬಳಕೆ ಮಾಡಿಕೊಳ್ಳಲಾಗುವುದು. ಹಾಗಾಗಿ ಕೆರೆಯನ್ನು ಸಂಪೂರ್ಣವಾಗಿ ಅಚ್ಚುಕಟ್ಟುಗೊಳಿಸಿ ಹೇಮಾವತಿ ನೀರನ್ನು ಹರಿಸಿ, ಕುಡಿಯುವ ನೀರು ಪೂರೈಕೆಗೆ ಬಳಸಿಕೊಳ್ಳಲಾಗುವುದು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಪಾಲಿಕೆ ಮಾಜಿ ಸದಸ್ಯ ಧರಣೇಂದ್ರಕುಮಾರ್ ಮಾತನಾಡಿ, ಮರಳೂರು ಅಮಾನಿಕೆರೆ ಈ ಭಾಗದ ರೈತರಿಗೆ ಜೀನವಾಡಿ. ಕಳೆದ ೨೫-೩೦ ವರ್ಷಗಳಲ್ಲಿ ೨ನೇ ಬಾರಿಗೆ ಕೆರೆ ತುಂಬಿರುವುದು ನಮ್ಮೆಲ್ಲರಿಗೂ ಹರ್ಷ ತಂದಿದೆ. ಈ ಕೆರೆಯಲ್ಲಿ ನೀರು ತುಂಬಿದ್ದರೆ ಅಂತರ್ಜಲ ಮಟ್ಟವೂ ವೃದ್ಧಿಯಾಗಿ ರೈತರ ತೋಟ, ಜಮೀನುಗಳಿಗೆ ಬೋರ್‌ವೆಲ್‌ ಗಳಿಂದ ನೀರು ಹರಿಸಲು ಅನುಕೂಲವಾಗುತ್ತದೆ ಎಂದರು.

ಮರಳೂರು ಅಮಾನಿಕೆರೆ ನಮ್ಮೆಲ್ಲರಿಗೂ ತಾಯಿ ಸಮಾನ. ನಮ್ಮ ಪೂರ್ವಜರ ಕಾಲದಿಂದಲೂ ಸಂಪ್ರದಾಯ ಬದ್ಧವಾಗಿ ಪೂಜೆ ನೆರವೇರಿಸಿಕೊಂಡು ಬರಲಾಗುತ್ತಿದೆ. ಹಾಗೆಯೇ ಇಂದು ಸಹ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಲಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಮೂಡ್ಲಗಿರಿಯಪ್ಪ, ಸಹಾಯಕ ಇಂಜಿನಿಯರ್‌ಗಳಾದ ತಿಪ್ಪೇಸ್ವಾಮಿ, ಸಂತೋಷ್, ಗ್ರಾಮಸ್ಥರಾದ ಕೃಷ್ಣಮೂರ್ತಿ, ಪೃಥ್ವಿ, ರವಿಗೌಡ, ಮದ್ರಾಸ್ ಕೃಷ್ಣಪ್ಪ, ಮರಳೂರು ನಾಗರಾಜು, ಕೃಷ್ಣಪ್ಪ, ಛೇರ್ಮನ್ ಭೀಮಯ್ಯ, ರವೀಶಯ್ಯ, ಮೂರ್ತಿ, ಸುರೇಶ್, ಧರ್ಮಸ್ಥಳ ಬೇಕರಿ ಮಂಜಣ್ಣ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಇದನ್ನೂ ಓದಿ: Tumkur News: ಧರ್ಮಸ್ಥಳ ಯೋಜನೆಯಿಂದ ಆರ್ಥಿಕ ಸದೃಢತೆ: ನಿರ್ದೇಶಕ ಸತೀಶ್