Spark Movie: ʼಸ್ಪಾರ್ಕ್ʼ ಪೋಸ್ಟರ್ ವಿವಾದಕ್ಕೆ ತೆರೆ; ರಮೇಶ್ ಇಂದಿರಾ ಬಳಿ ಕ್ಷಮೆ ಕೋರಿದ ನಿರ್ದೇಶಕ
Ramesh Indira: ಇತ್ತೀಚೆಗೆ ಭಾರಿ ಸದ್ದು ಮಾಡಿರುವ ʼಸ್ಪಾರ್ಕ್ʼ ಸಿನಿಮಾ ಪೋಸ್ಟರ್ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ʼನೆನಪಿರಲಿʼ ಪ್ರೇಮ್ ಹುಟ್ಟುಹಬ್ಬದ ಪ್ರಯುಕ್ತ ʼಸ್ಪಾರ್ಕ್ʼ ಚಿತ್ರತಂಡ ಶುಕ್ರವಾರ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ರಮೇಶ್ ಇಂದಿರಾ ಅವರ ಫೋಟೊವನ್ನು ಅನುಮತಿ ಪಡೆಯದೆ ಬಳಸಲಾಗಿತ್ತು ಎನ್ನುವ ಆರೋಪ ಕೇಳಿ ಬಂದಿತ್ತು. ಇದೀಗ ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಕ್ಷಮೆ ಕೋರುವ ಮೂಲಕ ವಿವಾದ ತಣ್ಣಗಾಗಿದೆ.


ಬೆಂಗಳೂರು: ಇತ್ತೀಚೆಗೆ ಭಾರಿ ಸದ್ದು ಮಾಡಿರುವ ʼಸ್ಪಾರ್ಕ್ʼ ಸಿನಿಮಾ (Spark Movie) ಪೋಸ್ಟರ್ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ʼನೆನಪಿರಲಿʼ ಪ್ರೇಮ್ (Nenapirali Prem) ಹುಟ್ಟುಹಬ್ಬದ ಪ್ರಯುಕ್ತ ʼಸ್ಪಾರ್ಕ್ʼ ಚಿತ್ರತಂಡ ಶುಕ್ರವಾರ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿತ್ತು. ಈ ಚಿತ್ರದಲ್ಲಿ ನಿರಂಜನ್ ಸುಧೀಂದ್ರ ನಾಯಕನಾಗಿ ನಟಿಸುತ್ತಿದ್ದು, ಪ್ರೇಮ್ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಪೋಸ್ಟರ್ ವಿರುದ್ಧ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು (Shruthi Naidu) ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದರು. ಅನುಮತಿ ಪಡೆಯದೆ ನಟ ರಮೇಶ್ ಇಂದಿರಾ (Ramesh Indira) ಅವರ ಫೋಟೊವನ್ನು ಪೋಸ್ಟರ್‌ನಲ್ಲಿ ಬಳಸಲಾಗಿದೆ ಎಂದು ಗುಡುಗಿದ್ದರು. ಆ ವಿವಾದವೀಗ ತಣ್ಣಗಾಗಿದ್ದು, ಚಿತ್ರದ ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಅವರು ರಮೇಶ್ ಇಂದಿರಾ ಬಳಿ ಕ್ಷಮೆಯಾಚಿಸಿದ್ದಾರೆ.
'ಸ್ಪಾರ್ಕ್' ಸಿನಿಮಾಕ್ಕೆ ಯುವ ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶಕರಾಗಿ ಇದು ಮೊದಲ ಅನುಭವವಾಗಿದ್ದರಿಂದ ಸಣ್ಣದೊಂದು ತಪ್ಪು ನಡೆದು ಹೋಗಿದೆ ಎಂದಿದ್ದಾರೆ. ಆ ತಪ್ಪನ್ನು ಈಗ ತಿದ್ದಿಕೊಳ್ಳುವುದಾಗಿಯೂ ತಿಳಿಸಿದ್ದಾರೆ. ರಮೇಶ್ ಇಂದಿರಾ ಅವರ ಬಳಿ ಕ್ಷಮೆ ಕೇಳಿದ್ದಾರೆ. ʼʼನಿಮ್ಮಿಂದ ಪರ್ಮಿಷನ್ ತೆಗೆದುಕೊಂಡು ಮಾಡಬೇಕಿತ್ತು. ಮ್ಯಾನೇಜರ್ ಹೇಳಿದ್ದಾರೆಂದು ಫೋಟೊ ಬಳಸಲಾಗಿದೆ. ಆದರೆ ಅದು ಮಿಸ್ ಕಮ್ಯುನಿಕೇಷನ್ ಆಗಿದೆ ಕ್ಷಮಿಸಿ” ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್ ಇಂದಿರಾ, ʼʼಹೊಸ ನಿರ್ದೇಶಕರಿಗೆ ಒಳ್ಳೆದಾಗಲಿ. ತೊಂದರೆ ಇಲ್ಲ ಮಾಡಿ. ಮೊದಲು ನೀವು ಒಮ್ಮೆ ತಿಳಿಸಬೇಕಿತ್ತು. ಆದರೆ ಅದು ನಡೆದು ಹೋಗಿದೆ. ಮುಂದೆ ಈ ರೀತಿ ತಪ್ಪು ಆಗದಂತೆ ನೋಡಿಕೊಳ್ಳಿʼʼ ಎಂದು ಸಮಾಧಾನ ಮಾಡಿದ್ದಾರೆ. ಅಲ್ಲಿಗೆ ವಿವಾದವೊಂದು ಬಗೆಹರಿದಿದೆ.
ನಿರಂಜನ್ ಸುಧೀಂದ್ರ ಹಂಚಿಕೊಂಡ ಚಿತ್ರದ ಪೋಸ್ಟರ್ ಇಲ್ಲಿದೆ:
ಈ ಸುದ್ದಿಯನ್ನೂ ಓದಿ: Mithya Movie: ಅಮೆಜಾನ್ ಪ್ರೈಮ್‌ನಲ್ಲಿ ರಕ್ಷಿತ್ ಶೆಟ್ಟಿ ನಿರ್ಮಾಣದ ʼಮಿಥ್ಯʼ
ಏನಿದು ವಿವಾದ?
ಪ್ರೇಮ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾದ ಪೋಸ್ಟರ್‌ನಲ್ಲಿ, ಅವರು ಒಬ್ಬ ರಾಜಕಾರಣಿಯ ಚಿತ್ರವನ್ನು ಹಿಡಿದುಕೊಂಡು ಅದಕ್ಕೆ ಸಿಗಾರಿನಿಂದ ಬೆಂಕಿ ನೀಡುವ ಚಿತ್ರವಿತ್ತು. ಅದು ರಮೇಶ್ ಇಂದಿರಾ ಅವರ ಫೋಟೊವಾಗಿತ್ತು. ಇದು ರಮೇಶ್ ಇಂದಿರಾ ಅವರ ‘ಭೀಮಾ’ ಸಿನಿಮಾದ ಫೋಟೊ. ಹೀಗಾಗಿ ಪೋಸ್ಟರ್ ನೋಡಿದ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು ಚಿತ್ರತಂಡ ಹಾಗೂ ಪ್ರೇಮ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. ಅನುಮತಿ ಪಡೆಯದೆ ರಮೇಶ್ ಇಂದಿರಾ ಅವರ ಫೋಟೊ ಬಳಸಿದ್ದಕ್ಕಾಗಿ ಚಿತ್ರತಂಡದ ವಿರುದ್ಧ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದರು. ಇದೀಗ ಕ್ಷಮೆಕೋರಿದ್ದರಿಂದ ಈ ವಿವಾದವು ತಿಳಿಯಾಗಿದೆ.
ಉಪೇಂದ್ರ ಅಣ್ಣನ ಮಗ ನಾಯಕ
ʼಸ್ಪಾರ್ಕ್ʼ ಸಿನಿಮಾದಲ್ಲಿ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ಪತ್ರಕರ್ತನ ಪಾತ್ರ ಮಾಡುತ್ತಿದ್ದು, ರಚನಾ ಇಂದರ್ ನಾಯಕಿಯಾಗಿ ಸಾಥ್ ಕೊಡುತ್ತಿದ್ದಾರೆ. ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಡಾ.ಗರಿಮಾ ಅವಿನಾಶ್ ವಸಿಷ್ಠ ನಿರ್ಮಾಣ ಮಾಡುತ್ತಿದ್ದಾರೆ. ಅಶ್ವಿನ್ ಕೆನಡಿ ಛಾಯಾಗ್ರಹಣ, ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ, ಮಧು ಸಂಕಲನ ಈ ಚಿತ್ರಕ್ಕಿದೆ. ಸದ್ಯ ʼಸ್ಪಾರ್ಕ್ʼ ಶೂಟಿಂಗ್ ಭರದಿಂದ ಸಾಗುತ್ತಿದೆ.