ಕೋಲ್ಕತ್ತಾ: ಪಶ್ಚಿಮ ಬಂಬಾಳದ ಕೋಲ್ಕತ್ತಾದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ (ಅಕ್ಟೋಬರ್ 18) ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಓರ್ವ ರೋಗಿ ಮೃತಪಟ್ಟಿದ್ದಾರೆ. ಮಧ್ಯ ಕೋಲ್ಕತ್ತಾದ ಸೀಲ್ದಾಹ್ನಲ್ಲಿರುವ ಇಎಸ್ಐ ಆಸ್ಪತ್ರೆ (ESI hospital)ಯಲ್ಲಿ ಈ ದುರಂತ ಸಂಭವಿಸಿದೆ. ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳದ 10 ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿವೆ (Fire Accident).
ʼʼಬೆಂಕಿ ದುರಂತದಿಂದ ಆಸ್ಪತ್ರೆಯ ಐಸಿಯುನಲ್ಲಿದ್ದ ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ. ಸುಮಾರು 80 ಮಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆʼʼ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರೋಗಿಯ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ವಾರ್ಡ್ ಒಂದರಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಅದು ಆಸ್ಪತ್ರೆಯ ಇತರ ಭಾಗಗಳಿಗೆ ಹರಡಿತು. ಕೂಡಲೇ ಅದನ್ನು ನಿಯಂತ್ರಣಕ್ಕೆ ತಂದ ಹಿನ್ನಲೆಯಲ್ಲಿ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಬೆಂಕಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
#WATCH | Kolkata, West Bengal: DFO, TK Dutta says, "It was a very serious fire. Nearly 80 patients were trapped inside, but we successfully rescued them all. One patient who was admitted to the ICU has died, but there is no other casualty…" https://t.co/O3kzTCWvw0 pic.twitter.com/m6UJJJiD59
— ANI (@ANI) October 18, 2024
ತುರ್ತು ಮತ್ತು ಅಗ್ನಿಶಾಮಕ ಸೇವೆಗಳ ಸಚಿವ ಸುಜಿತ್ ಬೋಸ್ ಅವರು ಈ ಬಗ್ಗೆ ಮಾತನಾಡಿ, ʼʼಬೆಳಗಿನ ಜಾವ 5.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಅನೇಕ ರೋಗಿಗಳು ಮನೆಗೆ ತೆರಳಿದ್ದಾರೆʼʼ ಎಂದು ತಿಳಿಸಿದ್ದಾರೆ.
ಕೆಲವು ರೋಗಿಗಳು ಆಸ್ಪತ್ರೆಯ ಹೊರಗೆ ಕುಳಿತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ರೋಗಿಗಳನ್ನು ಚಿಕಿತ್ಸೆಗಾಗಿ ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಘಟನೆ ವೇಳೆ ಭೀಕರ ಹೊಗೆ ಕಾಣಿಸಿಕೊಂಡ ಕಾರಣ ರೋಗಿಗಗಳ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಟಿ.ಕೆ.ದತ್ತಾ ಈ ಘಟನೆಯನ್ನು ಭಯಾನಕ ಎಂದು ಬಣ್ಣಿಸಿದ್ದಾರೆ.
“ಸುಮಾರು 80 ರೋಗಿಗಳು ಆಸ್ಪತ್ರಯ ಒಳಗೆ ಸಿಕ್ಕಿಬಿದ್ದಿದ್ದರು. 20 ನಿಮಿಷಗಳಲ್ಲಿ ಅವರೆಲ್ಲರನ್ನೂ ರಕ್ಷಿಸಿದ್ದೇವೆ. ದುರದೃಷ್ಟವಶಾತ್ ಐಸಿಯುಗೆ ದಾಖಲಾದ ಒಬ್ಬ ರೋಗಿ ಸಾವನ್ನಪ್ಪಿದ್ದಾರೆ” ಎಂದು ಟಿ.ಕೆ.ದತ್ತಾ ತಿಳಿಸಿದ್ದಾರೆ. ʼʼನಾವು ತೆರಳುವ ವೇಳೆ ವಾರ್ಡ್ನಲ್ಲಿ ಹೊಗೆ ತುಂಬಿಕೊಂಡಿತ್ತು. ರೋಗಿಗಳು ಕಿಟಕಿ ಬಳಿ ಬಂದು ಕಾಪಾಡುವಂತೆ ಕೂಗುತ್ತಿದ್ದರು” ಎಂದು ಅವರು ವಿವರಿಸಿದ್ದಾರೆ.
ಭಾರೀ ಅಗ್ನಿ ದುರಂತ; ಮೂವರು ಸಜೀವ ದಹನ
ಎರಡು ದಿನಗಳ ಹಿಂದೆ ಮಹಾರಾಷ್ಟ್ರದಲ್ಲಿ ಅಗ್ನಿ ಅವಘಡ ಸಂಭವಿಸಿ ಮೂವರು ಮೃತಪಟ್ಟಿದ್ದರು. ಲೋಖಂಡವಾಲಾ ಕಾಂಪ್ಲೆಕ್ಸ್ನಲ್ಲಿರುವ ಕಟ್ಟಡವೊಂದರಲ್ಲಿ ಈ ಅಗ್ನಿ ಅವಘಡ ಸಂಭವಿಸಿತ್ತು. ಅಂಧೇರಿ ಪ್ರದೇಶದ ಲೋಖಂಡವಾಲಾ ಕಾಂಪ್ಲೆಕ್ಸ್ನ 4ನೇ ಅಡ್ಡ ರಸ್ತೆಯಲ್ಲಿರುವ ರಿಯಾ ಪ್ಯಾಲೇಸ್ ಕಟ್ಟಡದ 10ನೇ ಮಹಡಿಯಲ್ಲಿ ಬೆಳಿಗ್ಗೆ 8 ಗಂಟೆಗೆ ಬೆಂಕಿ ಕಾಣಿಸಿಕೊಂಡಿತ್ತು. ಘಟನೆಯಲ್ಲಿ ಮೂವರಿಗೆ ಗಾಯಗಳಾಗಿದ್ದು, ಕೂಪರ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಅಲ್ಲಿ ಮೃತಪಟ್ಟಿದ್ದರು ಎಂದು ವರದಿ ತಿಳಿಸಿದೆ. ಇನ್ನು ಮಹಾರಾಷ್ಟ್ರದ ಚೆಂಬೂರ್ (Chembur)ನ 2 ಅಂತಸ್ತಿನ ಕಟ್ಟಡದಲ್ಲಿ ಅಕ್ಟೋಬರ್ 6ರ ಬೆಳ್ಳಂಬೆಳಗ್ಗೆ ಭಾರಿ ಅಗ್ನಿ ಅವಘಡ ಸಂಭವಿಸಿ, ಕನಿಷ್ಠ 7 ಮಂದಿ ಮೃತಪಟ್ಟಿದ್ದರು. ಚೆಂಬೂರಿನ ಸಿದ್ಧಾರ್ಥ್ ಕಾಲೋನಿಯಲ್ಲಿರುವ ಅಂಗಡಿಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಭಾರಿ ಬೆಂಕಿ ಕಾಣಿಸಿಕೊಂಡು, ಅದು ಇಡೀ ಕಟ್ಟಡಕ್ಕೆ ಆವರಿಸಿ ಅದರ ಮೇಲಿನ ಮಹಡಿಯಲ್ಲಿ ವಾಸಿಸುತ್ತಿದ್ದ ಕುಟುಂಬದ 7 ಮಂದಿ ಸಜೀವ ದಹನವಾಗಿದ್ದರು.
ಈ ಸುದ್ದಿಯನ್ನೂ ಓದಿ: Fire Accident: ಬೆಳ್ಳಂಬೆಳಗ್ಗೆ ಅಗ್ನಿ ಅವಘಡ; ಬೆಂಕಿ ತಗುಲಿ 7 ಮಂದಿಯ ಸಜೀವ ದಹನ