Wednesday, 6th November 2024

Gruha Lakshmi Scheme: ಗೃಹ ಲಕ್ಷ್ಮಿ ಹಣದಿಂದ ಗ್ರಂಥಾಲಯ ನಿರ್ಮಿಸಿದ ಮಹಿಳೆ

Gruha Lakshmi Scheme

ಬೆಳಗಾವಿ: ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಡ ಕುಟುಂಬಗಳಿಗೆ ವಿವಿಧ ರೀತಿಯಲ್ಲಿ ಪ್ರಯೋಜನವಾಗುತ್ತಿದೆ. ಈ ಹಿಂದೆ ಗೃಹ ಲಕ್ಷ್ಮಿ ಯೋಜನೆ (Gruha Lakshmi Scheme) ಹಣದಿಂದ ಮಹಿಳೆಯೊಬ್ಬರು ಫ್ರಿಡ್ಜ್‌ ಖರೀದಿಸಿದ್ದರು. ಅಜ್ಜಿಯೊಬ್ಬರು ಊರಿಗೆಲ್ಲಾ ಹೋಳಿಗೆ ಊಟ ಹಾಕಿ ಗಮನ ಸೆಳೆದಿದ್ದರು. ಮತ್ತೊಬ್ಬರು ಮಗನಿಗೆ ಬೈಕ್‌ ಕೊಡಿಸಲು ಮುಂಗಡ ಹಣ ಪಾವತಿಸಿದ್ದರು. ಅದೇ ರೀತಿ ಇದೀಗ ಗೃಹ ಲಕ್ಷ್ಮಿ ಯೋಜನೆಯ ಹಣದಿಂದ ಬಡ ವಿದ್ಯಾರ್ಥಿಗಳಿಗೆ ನೆರವಾಗಲೆಂದು ಮಹಿಳೆಯೊಬ್ಬರು, ಗ್ರಂಥಾಲಯ ನಿರ್ಮಾಣ ಮಾಡಿರುವುದು ಕಂಡುಬಂದಿದೆ.

ಹೌದು, ಬೆಳಗಾವಿಯ ರಾಯಭಾಗ ತಾಲೂಕಿನ ಮಂಟೂರ ಗ್ರಾಮ ಪಂಚಾಯಿತಿಯ ಮಹಿಳೆ ಮಲ್ಲವ್ವ ಭೀಮಪ್ಪ ಮೇಟಿ ಎಂಬುವವರು ಗೃಹ ಲಕ್ಷ್ಮಿ ಯೋಜನೆಯಿಂದ ಬಂದ ಹಣದಿಂದ ಗ್ರಾಮದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಗ್ರಂಥಾಲಯ ನಿರ್ಮಾಣ ಮಾಡಿದ್ದಾರೆ.

ಈ ಬಗ್ಗೆ ಎಕ್ಸ್‌ ವೇದಿಕೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಮಲ್ಲವ್ವ ಮೇಟಿ ಅವರು, ನನ್ನಗೆ ಬಂದ ಗೃಹಲಕ್ಷ್ಮಿ ಹಣದಿಂದ ಗ್ರಾಮದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗ್ರಂಥಾಲಯ ನಿರ್ಮಿಸಿದ್ದು, ಇದರ ಸದುಪಯೋಗ ಪಡೆಯಬೇಕು ಎಂದು ಸ್ಪರ್ಧಾರ್ಥಿಗಳಿಗೆ ಮನವಿ ಮಾಡಿದ್ದಾರೆ. ಅಲ್ಲದೇ ಗ್ರಂಥಾಲಯದ ಫೋಟೊ ಹಂಚಿಕೊಂಡು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌, ಸಿಎಂ ಸಿದ್ದರಾಮಯ್ಯ ಅವರಿಗೆ ಟ್ಯಾಗ್‌ ಮಾಡಿದ್ದಾರೆ.

13 ತಿಂಗಳಿನಿಂದ ಗೃಹಲಕ್ಷ್ಮಿ ಹಣದಿಂದ 26 ಸಾವಿರ ರೂಪಾಯಿ ಬಂದಿತ್ತು. ಅದರೊಂದಿಗೆ ಗ್ರಾಮ ಪಂಚಾಯಿತಿ ಮೆಂಬರ್‌ ಆಗಿರುವ ಕಾರಣಕ್ಕೆ ಗೌರವ ಧನ ಕೂಡ ಸಿಗುತ್ತದೆ. ಈ ಎಲ್ಲಾ ಹಣವನ್ನು ಒಟ್ಟು ಮಾಡಿ ನಾನು ಒಂದು ಸಣ್ಣ ಗ್ರಂಥಾಲಯ ಕಟ್ಟಿದ್ದೇನೆ. ಇದಕ್ಕೆ ಒಂದೂವರೆ ಲಕ್ಷ ರೂಪಾಯಿ ಖರ್ಚಾಗಿದೆ ಎಂದು ಮಲ್ಲವ್ವ ಭೀಮಪ್ಪ ಮೇಟಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Money Tips: ಆಧಾರ್‌ನಲ್ಲಿ ಆನ್‌ಲೈನ್‌ ಮೂಲಕ ಮೊಬೈಲ್ ನಂಬರ್‌ ಅಪ್‌ಡೇಟ್‌ ಮಾಡಬಹುದೆ? ಇಲ್ಲಿದೆ ಅನುಮಾನಕ್ಕೆ ಉತ್ತರ

ಮಂಟೂರ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯರಾಗಿರುವ ಮಲ್ಲವ್ವ ಭೀಮಪ್ಪ ಮೇಟಿ ಅವರ ಕಾರ್ಯಕಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಬಡ, ಹಿಂದುಳಿದ ಹಾಗೂ ಗ್ರಾಮಾಂತರ ಮಕ್ಕಳ ಪರವಾಗಿರುವ ಈ ನಿಮ್ಮ ಕಾಳಜಿ, ನಿಮ್ಮ ಸೇವೆ ಖಂಡಿತವಾಗಲೂ ಮೆಚ್ಚುವಂತಹದು ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.